ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ ಉಳಿಸಿಕೊಂಡ ಕುಮಾರಸ್ವಾಮಿ

Last Updated 19 ಮೇ 2018, 19:30 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ಎರಡು ವಿಧಾನ ಸಭಾ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ತಮ್ಮ ಕರ್ಮಭೂಮಿ ರಾಮನಗರ ಕ್ಷೇತ್ರಕ್ಕೆ ಶನಿವಾರ ರಾಜೀನಾಮೆ ನೀಡಿದ್ದು, ಚನ್ನಪಟ್ಟಣವನ್ನು ಉಳಿಸಿಕೊಂಡಿದ್ದಾರೆ. ಇದರೊಂದಿಗೆ ರಾಮನಗರವು ಉಪ ಚುನಾವಣೆಗೆ ಸಿದ್ಧವಾಗಬೇಕಿದೆ.

ಕುಮಾರಸ್ವಾಮಿ ಅವರ ಈ ನಿರ್ಧಾರಕ್ಕೆ ಚನ್ನಪಟ್ಟಣದ ಜನರು ಹೆಚ್ಚು ಸಂಭ್ರಮಿಸಿದ್ದರೆ, ರಾಮನಗರದ ಜನರಿಗೆ ಸಹಜವಾಗಿಯೇ ಬೇಸರವಾಗಿದೆ. ಮತದಾನ ಮುಗಿದ ವಾರದೊಳಗೆ ಮತ್ತೊಂದು ಚುನಾವಣೆಯ ಸುದ್ದಿ ಕೇಳಿಸಿದ್ದಕ್ಕೆ ನಿರಾಸೆಯೂ ಆಗಿದೆ. ಆದರೆ ಅವರು ಮುಖ್ಯಮಂತ್ರಿ ಹುದ್ದೆಯ ಸನಿಹದಲ್ಲಿ ಇರುವುದರಿಂದ ಹೆಚ್ಚೇನೂ ಅಸಮಾಧಾನ ಆಗಿಲ್ಲ.

‘ಕುಮಾರಸ್ವಾಮಿ ಅವರು ಎಂದೆಂದಿಗೂ ಈ ಕ್ಷೇತ್ರದ ಮಗನೇ. ಇದೇ ಅವರ ಕರ್ಮಭೂಮಿ. ಅನಿವಾರ್ಯ ಕಾರಣಕ್ಕೆ ಅವರು ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಂಡಿದ್ದಾರೆ. ಆದರೆ ಮುಖ್ಯಮಂತ್ರಿಯಾಗಿ ಇಡೀ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ’ ಎಂದು ಜೆಡಿಎಸ್ ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್ ಹೇಳಿದರು.

‘ಜನರ ನಿರೀಕ್ಷೆಯಂತೆ ಕುಮಾರಣ್ಣ ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಂಡಿರುವುದು ಇಲ್ಲಿನ ಕಾರ್ಯಕರ್ತರಿಗೆ ಸಂತಸ ನೀಡಿದೆ. ಈ ಕ್ಷೇತ್ರದ ಶಾಸಕರೊಬ್ಬರು ಮೊದಲ ಬಾರಿಗೆ ಮುಖ್ಯಮಂತ್ರಿ ಆಗುತ್ತಿರುವುದಕ್ಕೆ ಖುಷಿ ಇದೆ. ಎರಡೂ ಕ್ಷೇತ್ರಗಳ ಅಭಿವೃದ್ಧಿಗೆ ಅವರು ಆದ್ಯತೆ ನೀಡಲಿದ್ದಾರೆ’ ಎಂದು ಜೆಡಿಎಸ್‌ ಚನ್ನಪಟ್ಟಣ ತಾಲ್ಲೂಕು ಘಟಕದ ಅಧ್ಯಕ್ಷ ಆರ್. ಜಯಮುತ್ತು ಹರ್ಷ ವ್ಯಕ್ತಪಡಿಸಿದರು.

ಪಟಾಕಿ ಸಿಡಿಸಿ ಸಂಭ್ರಮ: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಘೋಷಿಸುತ್ತಿದ್ದಂತೆ ಜಿಲ್ಲೆಯ ವಿವಿಧೆಡೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಮುಂದೆ ಜೆಡಿಎಸ್‌–ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಹಾದಿಯು ಇದರಿಂದ ಸುಗಮವಾಗಿದ್ದು, ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಕಾರಣಕ್ಕೆ ಖುಷಿ ಪಟ್ಟರು. ಯುವ ಕಾರ್ಯಕರ್ತರು ಬೈಕ್‌ ರ‍್ಯಾಲಿ ನಡೆಸಿದರು. ರಾಮನಗರದ ಐಜೂರು ವೃತ್ತ, ಕೆಂಪೇಗೌಡ ವೃತ್ತ ಹಾಗೂ ಚನ್ನಪಟ್ಟಣದಲ್ಲಿ ಕಾರ್ಯಕರ್ತರಿಂದ ಸಂಭ್ರಮಾಚರಣೆ ನಡೆಯಿತು.

ಡಿಕೆಶಿ–ಎಚ್‌ಡಿಕೆ ದೋಸ್ತಿ ತಂದ ಪುಳಕ

ರಾಮನಗರ ಜಿಲ್ಲೆಯ ರಾಜಕಾರಣದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಬದ್ಧ ವೈರಿ ಎಂದೇ ಬಿಂಬಿತರಾದವರು. ಈ ಇಬ್ಬರು ನಾಯಕರು ಪ್ರತಿನಿಧಿಸುವ ಜೆಡಿಎಸ್ ಹಾಗೂ ಕಾಂಗ್ರೆಸ್‌ ಪಕ್ಷಗಳ ಕಾರ್ಯಕರ್ತರ ನಡುವೆ ಜಿಲ್ಲೆಯಲ್ಲಿ ಘರ್ಷಣೆ ನಡೆಯುತ್ತಲೇ ಬಂದಿದೆ.

ಆದರೆ, ಈಗ ಇಬ್ಬರೂ ದೋಸ್ತಿಗಳಾಗಿದ್ದು, ಅಧಿಕಾರ ಹಿಡಿಯುವ ಸಲುವಾಗಿ ಒಬ್ಬರಿಗೊಬ್ಬರು ಬೆನ್ನಿಗೆ ನಿಂತಿರುವುದು, ಶನಿವಾರ ವಿಧಾನಸಭೆಯಲ್ಲಿ ಒಬ್ಬರಿಗೊಬ್ಬರು ಆಲಂಗಿಸಿ ವಿಜಯದ ನಗೆ ಬೀರಿದ್ದು ಇಲ್ಲಿನ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಪುಳಕ ತಂದಿದೆ.

ರಾಮನಗರ ತ್ಯಜಿಸಿದ ಎಚ್‌ಡಿಕೆ

ಬೆಂಗಳೂರು: ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಂಡಿದ್ದು, ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ.

ಚನ್ನಪಟ್ಟಣ ಕ್ಷೇತ್ರದ ಶಾಸಕ ಸ್ಥಾನ ಉಳಿಸಿಕೊಂಡಿರುವುದಾಗಿ, ಶಾಸಕರಾಗಿ ಪ್ರಮಾಣ ಪಡೆದ ಬಳಿಕ ಕುಮಾರಸ್ವಾಮಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‌ ಶಾಸಕ ಡಿ.ಕೆ.ಶಿವಕುಮಾರ್‌, ಅವನನ್ನು (ಯೋಗೇಶ್ವರ್) ಮಟ್ಟ ಹಾಕಲು ಈ ಸ್ಥಾನ ಉಳಿಸಿಕೊಳ್ಳಬೇಕಿದೆ ಎಂದರು.

ರಾಮನಗರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅಥವಾ ನಿಷ್ಠಾವಂತ ಕಾರ್ಯಕರ್ತರೊಬ್ಬರಿಗೆ ಟಿಕೆಟ್‌ ನೀಡುವ ಸಾಧ್ಯತೆ ಇದೆ. ಕುಟುಂಬದಲ್ಲಿ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗದಿದ್ದರೆ ಅನಿತಾ ಅವರಿಗೇ ಟಿಕೆಟ್‌ ನೀಡಬಹುದು. ರೇವಣ್ಣ ಅವರ ಪತ್ನಿ ಭವಾನಿ ಅಥವಾ ಪ್ರಜ್ವಲ್‌ ರೇವಣ್ಣ ಅವರಿಂದ ಪ್ರತಿರೋಧ ವ್ಯಕ್ತವಾದರೆ, ಕಾರ್ಯಕರ್ತರಿಗೆ ಟಿಕೆಟ್‌ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT