ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ಕ್ಷೇತ್ರ: ಗೋವಿಂದರಾಜನಗರ, ವಿಜಯನಗರ, ಶಿವಾಜಿನಗರ

Last Updated 12 ಏಪ್ರಿಲ್ 2023, 5:54 IST
ಅಕ್ಷರ ಗಾತ್ರ

ಗೋವಿಂದರಾಜ ನಗರ ವಿಧಾನಸಭೆ ಕ್ಷೇತ್ರದಲ್ಲಿ ವ್ಯವಸ್ಥೆ, ಸೌಲಭ್ಯಗಳು ಹೆಚ್ಚಾಗಿದ್ದರೂ, ಮಹಿಳೆಯರು ಸೇರಿದಂತೆ ಜನರ ಸುರಕ್ಷತೆಗೆ ಹೆಚ್ಚು ಒತ್ತು ನೀಡಬೇಕಿದೆ. ಪುಂಡರ ಹಾವಳಿ ಹೆಚ್ಚಾಗಿದ್ದು, ಮಹಿಳೆಯರಿಗೆ ರಕ್ಷಣೆ ನೀಡುವ ಕ್ರಮಗಳಾಗಬೇಕು ಎಂಬುದು ಜನರ ನಿರೀಕ್ಷೆ.

ಮಹಿಳೆಯರಿಗೆ ತರಬೇತಿ ಕೇಂದ್ರ ಬೇಕು

ಮಹಿಳೆಯರಿಗೆ ಹೆಚ್ಚು ರಕ್ಷಣೆ ಸಿಗಬೇಕು. ನಿರ್ಭಯವಾಗಿ ಎಲ್ಲ ಕಡೆ ಸಂಚರಿಸುವ ವಾತಾವರಣ ನಿರ್ಮಾಣವಾಗಬೇಕು. ಸ್ತ್ರೀ ಶಕ್ತಿ ಸಂಘ ಸ್ಥಾಪಿಸಬೇಕು. ಅದರಲ್ಲಿ ಸಾಲ ಸೌಲಭ್ಯಗಳು ಸಿಗಬೇಕು ಮಹಿಳಾ ಭವನ ನಿರ್ಮಿಸಬೇಕು. ಹಲವು ಪುರುಷರು ದುಡಿದ ಹಣವನ್ನು ದುಶ್ಚಟಕ್ಕೆ ಹಾಳು ಮಾಡುತ್ತಾರೆ. ಅಂತಹ ಸಮಯದಲ್ಲಿ ಮಹಿಳೆಯರು ಸ್ವಂತ ಉದ್ಯೋಗ ಮಾಡಿಕೊಂಡು ಸಂಸಾರ ಮುನ್ನಡೆಸಬೇಕಿದೆ. ಆದ್ದರಿಂದ ಟೈಲರಿಂಗ್, ಕ್ಯಾಂಡಲ್ ತಯಾರಿಕೆ ಇನ್ನೂ ಇತರೆ ಸ್ವಯಂ ಉದ್ಯೋಗ ನಡೆಸಲು ಮಹಿಳೆಯರಿಗೆ ತರಬೇತಿ ಕೇಂದ್ರ ಆರಂಭಿಸಬೇಕು.

ವಿಜಯಲಕ್ಷ್ಮಿ, ಮೂಡಲಪಾಳ್ಯ

ಶಿಕ್ಷಣ ಎಲ್ಲರಿಗೂ ಸಿಗುವಂತಾಗಲಿ

ಇಂದಿನ ದಿನಗಳಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಅತ್ಯಂತ ಪ್ರಮುಖ. ಬಡ ಕುಟುಂಬ ಮತ್ತು ಮಧ್ಯಮ ಕುಟುಂಬ ಖಾಸಗಿ ಶಾಲೆಗಳಲ್ಲಿ ಹೆಚ್ಚು ಶುಲ್ಕ ಪಾವತಿಸಲು ಬಹಳ ಕಷ್ವವಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಹೆಚ್ಚು ಆದ್ಯತೆ ನೀಡಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾದ್ಯಮ ಶಿಕ್ಷಣ ಆರಂಭಿಸಬೇಕು ಮತ್ತು ಗ್ರಂಥಾಲಯ ಮಾಡಬೇಕು. ಕ್ಷೇತ್ರದಲ್ಲಿ ಸಾರ್ವಜನಿಕ ಶೌಚಾಲಯದ ಕೊರತೆ ಇದೆ. ಕ್ಷೇತ್ರದ ಬಹುತೇಕ ಪ್ರದೇಶದಲ್ಲಿ ಶೌಚಾಲಯವೇ ಇಲ್ಲ. ಪ್ರತಿ ಬಸ್ ನಿಲ್ದಾಣದಲ್ಲಿ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿ, ಸ್ವಚ್ಛತೆ ಕಾ‍ಪಾಡಬೇಕು.

ಮರಿಸ್ವಾಮಿ ಗೌಡ, ಗೋವಿಂದರಾಜನಗರ

ಪುಂಡರ ಹಾವಳಿ ನಿಯಂತ್ರಿಸಬೇಕು

ನಾಯಂಡಹಳ್ಳಿ ವ್ಯಾಪ್ತಿಯಲ್ಲಿ ಪುಂಡರ ಹಾವಳಿ ಹೆಚ್ಚಿದೆ. ಮಹಿಳೆಯರು ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಓಡಾಡಲು ಬಹಳಷ್ಟು ಕಷ್ಟವಾಗುತ್ತಿದೆ. ನಾಯಂಡಹಳ್ಳಿ ರೈಲ್ವೆ ನಿಲ್ದಾಣದಿಂದ ಇಳಿದು ಬರುವ ಪ್ರಯಾಣಿಕರ ಮೊಬೈಲ್ ಕಳ್ಳತನ ಹೆಚ್ಚಾಗುತ್ತಿದೆ. ಹೆಚ್ಚು ಪೊಲೀಸರನ್ನು ನೇಮಿಸಬೇಕು. ವಿನಾಯಕ ಬಡಾವಣೆಯಲ್ಲಿ ಪೊಲೀಸ್ ಚೌಕಿ ನಿರ್ಮಿಸಬೇಕು. ನಾಯಂಡಹಳ್ಳಿ ಸರ್ಕಾರಿ ಶಾಲೆಯನ್ನು ಅಭಿವೃದ್ದಿ ಮಾಡಬೇಕು. ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಬಸ್ ನಿಲ್ದಾಣದಲ್ಲಿ ಉಚಿತವಾಗಿ ಶುದ್ಧ ಕುಡಿಯುವ ನೀರು ಪೂರೈಸಬೇಕು.

ಶ್ವೇತ, ನಾಯಂಡಹಳ್ಳಿ

==

ವಿಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಮಗಾರಿಗಳು ನಡೆದಿದ್ದರೂ ಗುಣಮಟ್ಟದ ಕೊರತೆ ಇದೆ. ಉತ್ತಮ ರಸ್ತೆಯಾದರೆ ಅದನ್ನೇ ಅಗೆಯಲಾಗುತ್ತದೆ. ಶಿಕ್ಷಣ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಅತ್ಯಾಧುನಿಕ ಸೌಲಭ್ಯಗಳು ಬೇಕಿದೆ ಎಂಬುದು ಜನರ ನಿರೀಕ್ಷೆ

ಕಾಮಗಾರಿ ಗುಣಮಟ್ಟಕ್ಕಿರಲಿ ಆದ್ಯತೆ

ಕ್ಷೇತ್ರ ಅಭಿವೃದ್ಧಿ ಹೊಂದಿದ್ದರೂ ಬಡಾವಣೆ ಒಳಗಿನ ರಸ್ತೆಗಳ ಗುಣಮಟ್ಟ ಸುಧಾರಿಸಬೇಕಿದೆ. ಉದ್ಯಾನಗಳ ಒಳಗೆ ಸ್ವಚ್ಛತೆ ಹಾಗೂ ಗುಣಮಟ್ಟದ ವ್ಯಾಯಾಮ ಪರಿಕರಗಳನ್ನು ಅಳವಡಿಸಬೇಕಿದೆ. ಪಾದಚಾರಿ ಮಾರ್ಗಗಳು ಕ್ಷೇತ್ರದಾದ್ಯಂತ ಇದ್ದರೂ ಉಪಯೋಗಕ್ಕೆ ಇಲ್ಲದಂತಾಗಿವೆ. ಮನೆ ಮುಂದೆ ಹಾಗೂ ಉದ್ಯಾನಗಳ ಸುತ್ತಮುತ್ತ ವಾಹನ ನಿಲುಗಡೆ ಅತಿಯಾಗಿ ಕಿರಿ ಕಿರಿ ಹೆಚ್ಚಾಗಿದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡಬೇಕಿದೆ. ಯಾವುದೇ ಕಾಮಗಾರಿ ನಡೆಸಿದರೂ ಅದರ ಗುಣಮಟ್ಟದ ಖಾತರಿ ಇರುವಂತೆ ನೋಡಿಕೊಳ್ಳಬೇಕು.

ಬಿ.ಎಸ್. ಪಾಟೀಲ್, ಹಂಪಿನಗರ

=

ಯೋಜನೆ: ನಾಗರಿಕರೊಂದಿಗೆ ಚರ್ಚಿಸಲಿ

ವಾರಕ್ಕೊಮ್ಮೆ ವಾರ್ಡ್ ಮಟ್ಟದ ಅಧಿಕಾರಿಗಳೊಂದಿಗೆ, ನಾಗರಿಕರ ಕುಂದುಕೊರತೆಗಳ ಸಭೆ ನಡೆಸಬೆಕು. ಶಾಸಕರ ಅನುದಾನ ಸರಿಯಾದ ರೀತಿಯಲ್ಲಿ ಉಪಯೋಗವಾಗಬೇಕು. ಅದರಡಿ ಕೈಗೊಳ್ಳುವ ಕಾಮಗಾರಿಗಳ ಬಗ್ಗೆ ಜನರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿ ಗುಣ್ಣಮಟ್ಟವನ್ನು ಪರಿಶೀಲಿಸಿ, ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಚಿರಶಾಂತಿಯ ವಾಹನ, ಅಂಬುಲೆನ್ಸ್ ಸೇವೆ ಸುರಕ್ಷತೆಗೆ ಆದ್ಯತೆ ನೀಡಬೇಕು. ಉದ್ಯಾನಗಳಲ್ಲಿ ಶೌಚಾಲಯ ನಿರ್ಮಾಣ ಮಾಡಿ, ಅವುಗಳನ್ನು ಸ್ವಚ್ಛವಾಗಿಡಬೇಕು.

ಎಂ.ಮಂಜುನಾಥ್‌, ಹಂಪಿನಗರ

=

ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬೇಕಿದೆ

ವಿಜಯನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವಿದೆ. ಎಲ್ಲ ರೀತಿಯ ಚಿಕಿತ್ಸೆಗಳನ್ನು ನೀಡುವ ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಬೇಕಿದೆ. ಇದರೊಂದಿಗೆ ತಾಯಿ–ಮಕ್ಕಳ ಆಸ್ಪತ್ರೆಯ ಅಗತ್ಯವೂ ಇದೆ. ಬಾಪೂಜಿ ನಗರ ಮತ್ತು ಆರ್‌ಪಿಸಿ ಬಡಾವಣೆ ಕೆಳಸೇತುವೆ ಬಳಿ ಸುರಕ್ಷತೆಗೆ ಪೊಲೀಸ್ ಚೌಕಿ ನಿರ್ಮಿಸಬೇಕು. ಕ್ಷೇತ್ರದ ಹೆಣ್ಣುಮಕ್ಕಳಿಗೆ ಬ್ಯೂಟಿ ಪಾರ್ಲರ್, ಫ್ಯಾಷನ್ ಡಿಸೈನ್ ತರಬೇತಿ ಕೇಂದ್ರ ನಿರ್ಮಿಸಿದರೆ ಸ್ವಂತ ಮಹಿಳೆಯರಿಗೆ ಸರಿಯಾದ ಉದ್ಯೋಗ ಸಿಗುತ್ತದೆ.

ಭಾಗ್ಯಲಕ್ಷ್ಮಿ, ವಿಜಯನಗರ

=

’ಕ್ರೀಡಾಂಗಣದ ಅಗತ್ಯ ಇದೆ’

ಚುನಾವಣಾ ಸಮಯಕ್ಕೆ ಬಹಳಷ್ಟು ರಸ್ತೆಗೆ ಡಾಂಬರಿಕರಣ ಮಾಡುತ್ತಿದ್ದಾರೆ. ಬಹಳಷ್ಟು ಕಡೆ ಡಾಂಬರೀಕರಣ ಆದ ನಂತರ ಮತ್ತೆ ರಸ್ತೆ ಅಗೆದು ಕೇಬಲ್ ಅಳವಡಿಕೆ, ಪೈಪ್ ಅಳವಡಿಕೆ ರೀತಿಯ ಕೆಲಸಗಳನ್ನು ಪದೇಪದೇ ಮಾಡುತ್ತಿದ್ದು, ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಈ ರೀತಿಯ ಡಾಂಬರೀಕರಣ ಮೊದಲು ಕೈಗೊಂಡರೆ ಸಮಯ ಮತ್ತು ಹಣ ಎರಡು ಸರ್ಕಾರಕ್ಕೆ ಮತ್ತು ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿಕೊಳ್ಳಬೇಕು. ಬೀದಿ ದೀಪಗಳನ್ನು ಹಾಕಬೇಕು. ಯುವಕರಿಗೆ ಕ್ರೀಡಾ ಚಟುವಟಿಕೆಗಳಿಗೆ ಕ್ರೀಡಾಂಗಣ ನಿರ್ಮಿಸಬೇಕು.

ವಸಂತ್ ಕುಮಾರ್, ವಿಜಯನಗರ

=–––––

ಶಿವಾಜಿನಗರ ವಿಧಾನಸಭೆ ಕ್ಷೇತ್ರದ ಬಹುತೇಕ ಪ್ರದೇಶಗಳಲ್ಲಿ ಸ್ವಚ್ಛತೆಯದ್ದೇ ಕೊರತೆ. ಇದಕ್ಕೆ ಶಾಶ್ವತ ಪರಿಹಾರ ನೀಡಬೇಕಿದೆ. ಅಲ್ಲದೆ, ಅಕ್ರಮ ಚಟುವಟಿಕೆಗಳಿಗೆ ಭವಿಷ್ಯದ ಶಾಸಕರು ಬೆಂಬಲ ನೀಡದೆ, ಜನರ ರಕ್ಷಣೆಗೆ ಆದ್ಯತೆ ನೀಡಬೇಕು ಎಂಬುದು ನಾಗರಿಕರ ಆಶಯ.

ಅಕ್ರಮ ಚಟುವಟಿಕೆಗಳಿಂದ ದೂರವಿರಲಿ

ಶಿವಾಜಿನಗರ ವಿಧಾನಸಭೆ ಕ್ಷೇತ್ರದಲ್ಲಿ ರಿಯಲ್ ಎಸ್ಟೇಟ್‌, ಮಟ್ಕಾ, ಜೂಜಾಟ ಹಿನ್ನೆಲೆಯುಳ್ಳವರು ಹಾಗೂ ಗುತ್ತಿಗೆದಾರರು ರಾಜಕೀಯ ಪಕ್ಷಗಳು ದೂರವಿಡಬೇಕು. ಅಂತವರನ್ನು ಜನಪ್ರತಿನಿಧಿಗಳು ಜತೆಯಲ್ಲಿಟ್ಟುಕೊಳ್ಳಬಾರದು. ಶಾಸಕರಾದವರು ಗುತ್ತಿಗೆದಾರರು, ಅಕ್ರಮ ಚಟುವಟಿಕೆ ನಡೆಸುವವರಿಗೆ ಬೆಂಬಲ ನೀಡದೆ, ಆಯ್ಕೆ ಮಾಡಿದ ಪ್ರಜೆಗಳ ರಕ್ಷಣೆಯತ್ತ ಕೆಲಸ ಮಾಡಬೇಕು. ಜನರಿಗೆ ಉಡುಗೊರೆ ನೀಡಿದರೆ ಕೆಲಸ ಮುಗಿಯಿತು ಎಂದು ಭಾವಿಸಬಾರದು. ಕಾನೂನನ್ನು ಎಲ್ಲರಿಗೂ ಅನ್ವಯವಾಗುವಂತೆ ಜಾರಿಗೊಳಿಸುವ ಕೆಲಸ ಮಾಡಬೇಕು.

ಹಾರಿಸ್ ಸಿದ್ದೀಖಿ, ಶಿವಾಜಿನಗರ

ಸ್ವಚ್ಛತೆ ನಿರ್ವಹಣೆ ಪ್ರಥಮವಾಗಲಿ

ಶಿವಾಜಿನಗರ ಬಸ್ ನಿಲ್ದಾಣ ಸರ್ಕಲ್‌ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಅಷ್ಟೇ ಅಲ್ಲದೆ, ಇಲ್ಲಿ ಬೌರಿಂಗ್‌ ಆಸ್ಪತ್ರೆ ಇದ್ದು, ಅಲ್ಲೂ ಸ್ವಚ್ಛತೆ ಇಲ್ಲ. ಎಲ್ಲಿ ನೋಡಿದರೂ ಕಸವೇ ಕಾಣುತ್ತದೆ. ಪಾದಚಾರಿಗಳು ಓಡಾಡಲು ಸಮಸ್ಯೆಯಾಗಿದೆ. ಸಾರ್ವಜನಿಕ ಶೌಚಾಲಯಗಳ ಅಗತ್ಯವಿದೆ.

ಕಲೀಂ ಉಲ್ಲಾ, ಶಿವಾಜಿನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT