ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಫಲ್ಯ ಮುಚ್ಚಿಕೊಳ್ಳಲು ಸುಳ್ಳು ಹೇಳುತ್ತಿದ್ದಾರೆ: ಮಹಾಬಲ ಮಾರ್ಲ ಆರೋಪ

Last Updated 3 ಏಪ್ರಿಲ್ 2019, 11:36 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿಯ ಹೆಮ್ಮೆಯಾಗಿದ್ದ ವಿಜಯ ಬ್ಯಾಂಕ್‌ ಉಳಿಸಿಕೊಳ್ಳುವ ವಿಚಾರದಲ್ಲೇ ಹೋರಾಟರೂಪಿಸುವಲ್ಲಿ ವಿಫಲವಾಗಿರುವ ಸಂಸದ ನಳಿನ್‌ಕುಮಾರ್‌ ಕಟೀಲ್‌ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್‌ ಸಂಸದ ಎಂ.ವೀರಪ್ಪ ಮೊಯಿಲಿ ಅವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಮಹಾಬಲ ಮಾರ್ಲ ಆರೋಪಿಸಿದರು.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ದುರುದ್ದೇಶದಿಂದ ಕರಾವಳಿಯ ವಿಜಯ ಬ್ಯಾಂಕ್‌ ಅನ್ನು ನಷ್ಟದಲ್ಲಿರುವ ದೇನಾ ಬ್ಯಾಂಕ್‌ ಮತ್ತು ಅತಿ ಹೆಚ್ಚು ಅನುತ್ಪಾದಕ ಆಸ್ತಿ ಹೊಂದಿರುವ ಬರೋಡಾ ಬ್ಯಾಂಕ್‌ ಜೊತೆ ವಿಲೀನ ಮಾಡಿದೆ. ಈ ಪ್ರಕ್ರಿಯೆ ನಡೆಯುವಾಗ ಬಿಜೆಪಿ ವರಿಷ್ಠರಿಗೆ ಹೆದರಿಕೊಂಡು ನಳಿನ್‌ ಸುಮ್ಮನೆ ಕುಳಿತಿದ್ದರು’ ಎಂದರು.

ವಿಜಯ ಬ್ಯಾಂಕ್‌ ವಿಲೀನದ ವಿರುದ್ಧ ಸಂಸತ್ತಿನ ಒಳಗೆ ಅಥವಾ ಹೊರಗೆ ನಳಿನ್‌ಕುಮಾರ್‌ ಹೋರಾಟ ನಡೆಸಿಲ್ಲ. ಒಬ್ಬನಿಂದಲೇ ಏನೂ ಮಾಡಲು ಆಗದು ಅನಿಸಿದ ಬಳಿಕವೂ ಜಿಲ್ಲೆಯ ಜನರ ಜೊತೆ ಚರ್ಚಿಸಲಿಲ್ಲ. ಹೋರಾಟ ರೂಪಿಸುವ ಪ್ರಯತ್ನ ಮಾಡಿಲ್ಲ. ಲೋಕಸಭಾ ಚುನಾವಣೆಯ ಟಿಕೆಟ್‌ ಕೈ ತಪ್ಪಬಹುದು ಎಂಬ ಅನುಮಾನದಿಂದ ಹೈಕಮಾಂಡ್‌ ಜೊತೆ ಸಂಘರ್ಷ ಮಾಡಲಿಲ್ಲ. ಸ್ವಾರ್ಥಕ್ಕಾಗಿ ವಿಜಯ ಬ್ಯಾಂಕ್‌ ಅನ್ನು ಬಲಿಕೊಟ್ಟರು. ವಿಜಯ ಬ್ಯಾಂಕ್‌ ಅಸ್ತಿತ್ವ ಕಳೆದುಕೊಳ್ಳಲು ನಳಿನ್‌ಕುಮಾರ್‌ ಕಟೀಲ್‌ ಅವರೇ ಕಾರಣ. ಆದರೆ, ಇದಕ್ಕೆಲ್ಲ ವೀರಪ್ಪ ಮೊಯಿಲಿ ಕಾರಣ ಎಂಬುದಾಗಿ ಎರಡು ದಿನಗಳ ಹಿಂದೆ ಸುಳ್ಳು ಹೇಳಿದ್ದಾರೆ ಎಂದು

ಬ್ಯಾಂಕ್‌ಗಳ ವಿಲೀನಕ್ಕೆ ಸಂಬಂಧಿಸಿದಂತೆ ನರಸಿಂಹನ್‌ ಸಮಿತಿ 1991ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಸ್ಪಷ್ಟವಾದ ಮಾರ್ಗಸೂಚಿಗಳನ್ನು ನೀಡಿತ್ತು. ಅದಕ್ಕೆ ವಿರುದ್ಧವಾಗಿ ವಿಜಯ ಬ್ಯಾಂಕ್‌ ವಿಲೀನ ನಡೆದಿದೆ. ದೇನಾ ಬ್ಯಾಂಕ್‌ ಮೂರು ವರ್ಷಗಳಿಂದ ನಷ್ಟದಲ್ಲಿದೆ. 2018ರಿಂದ ಹೊಸ ಠೇವಣಿ ಸ್ವೀಕರಿಸದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಆದೇಶಿಸಿತ್ತು. ದೇನಾ ಬ್ಯಾಂಕ್‌ ಮುಚ್ಚಿಹೋಗುವುದನ್ನು ತಪ್ಪಿಸಲು ವಿಜಯ ಬ್ಯಾಂಕ್‌ ಅನ್ನು ಬಲಿಪಶು ಮಾಡಲಾಗಿದೆ ಎಂದು ಹೇಳಿದರು.

ರಕ್ಷಣಾ ಸಚಿವರು, ರೈಲ್ವೆ ಸಚಿವರು ಮತ್ತು ಹಣಕಾಸು ಸಚಿವರನ್ನು ಒಳಗೊಂಡ ಸಮಿತಿ ದೇನಾ, ವಿಜಯ ಮತ್ತು ಬರೋಡಾ ಬ್ಯಾಂಕ್‌ಗಳ ವಿಲೀನಕ್ಕೆ ಶಿಫಾರಸು ಮಾಡಿತ್ತು. 2019ರ ಜನವರಿ 2ರ ಮಧ್ಯಾಹ್ನ 3 ಗಂಟೆಗೆ ಈ ಬ್ಯಾಂಕ್‌ಗಳ ನಿರ್ದೇಶಕ ಮಂಡಳಿ ಸಭೆ ನಡೆದಿತ್ತು. ಸಂಜೆ 4ರಿಂದ 5 ಗಂಟೆಯ ನಡುವೆ ಕೇಂದ್ರ ಸಂಪುಟ ಸಭೆಯಲ್ಲಿ ಈ ಬ್ಯಾಂಕ್‌ಗಳ ವಿಲೀನಕ್ಕೆ ಒಪ್ಪಿಗೆ ನೀಡಲಾಯಿತು. 6.15ರ ವೇಳೆ ಅಧಿಸೂಚನೆಯನ್ನೂ ಹೊರಡಿಸಲಾಯಿತು. ಇದು ಕೇಂದ್ರ ಸರ್ಕಾರ ತರಾತುರಿಯಲ್ಲಿ ತಪ್ಪು ಮಾಡಿರುವುದಕ್ಕೆ ಸಾಕ್ಷ್ಯ ಒದಗಿಸುತ್ತದೆ ಎಂದರು.

ಒಂದೇ ದಿನದಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿರುವುದರ ಹಿಂದೆ ದುರುದ್ದೇಶ ಇತ್ತು. ಕಪ್ಪುಪಟ್ಟಿಗೆ ಸೇರಿರುವ ಕೆಲವು ಉದ್ಯಮಿಗಳ ರಕ್ಷಣೆಗಾಗಿಯೇ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಯಾವುದೇ ಬ್ಯಾಂಕ್‌ಗಳಿಗೆ ಕೇಂದ್ರವು ಮೂರು ವರ್ಷಗಳಿಂದ ಅಧಿಕಾರಿಗಳು ಮತ್ತು ನೌಕರರ ಪ್ರತಿನಿಧಿಗಳನ್ನು ಆಡಳಿತ ಮಂಡಳಿ ನಿರ್ದೇಶಕರನ್ನಾಗಿ ನೇಮಕ ಮಾಡಿಲ್ಲ. ತನ್ನ ಅಗತ್ಯಕ್ಕೆ ತಕ್ಕಂತೆ ಬ್ಯಾಂಕ್‌ಗಳಲ್ಲಿ ನಿರ್ಧಾರ ಕೈಗೊಳ್ಳುವುದಕ್ಕಾಗಿ ಕೇಂದ್ರ ಸರ್ಕಾರ ಈ ರೀತಿ ಮಾಡಿದೆ ಎಂದು ದೂರಿದರು.

ಕಾಂಗ್ರೆಸ್‌ ಮುಖಂಡರಾದ ಸುರೇಶ್‌ ಬಲ್ಲಾಳ್, ಟಿ.ಕೆ.ಸುಧೀರ್‌, ಜೆ.ಅಬ್ದುಲ್‌ ಸಲೀಂ, ಸ್ಟ್ಯಾನಿ ಆಳ್ವಾರೀಸ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT