ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಎಕ್ರೆ’ ರಿಯಲಿಸ್ಟಿಕ್‌ ಸಿನಿಮಾ

Last Updated 14 ಜೂನ್ 2019, 7:32 IST
ಅಕ್ಷರ ಗಾತ್ರ

ನಟನೆ ಮತ್ತು ನಿರ್ದೇಶನ ಎರಡರಲ್ಲೂ ಸಮಾನ ಆಸಕ್ತಿ ಬೆಳೆಸಿಕೊಂಡವರು ವಿಸ್ಮಯ್‌ ವಿನಾಯಕ್‌. ಈ ಹಿಂದೆ ವಿಸ್ಮಯ್‌ ಅವರು ಸುಹಾನ್‌ ಜತೆಗೂಡಿ ‘ರಂಗ್‌’ ಎಂಬ ಹಿಟ್‌ ತುಳುಚಿತ್ರವನ್ನು ನೀಡಿದ್ದರು. ಆದಾದ ನಂತರ, ನಟನೆಯಲ್ಲಿ ತೊಡಗಿಸಿಕೊಂಡಿದ್ದ ವಿಸ್ಮಯ್‌ ಈಗ ‘2 ಎಕ್ರೆ’ ಎಂಬ ತುಳುಚಿತ್ರವನ್ನು ಸ್ವತಂತ್ರವಾಗಿ ನಿರ್ದೇಶಿಸಿದ್ದಾರೆ. ಚಿತ್ರದ ಚಿತ್ರೀಕರಣ ಹಾಗೂ ಎಡಿಟಿಂಗ್‌ ಕೆಲಸ ಪೂರ್ಣಗೊಂಡಿದ್ದು, ರೀ–ರೆಕಾರ್ಡಿಂಗ್‌ ಮತ್ತುಡಿಐ ಕೆಲಸ ಬಾಕಿ ಉಳಿದಿದೆ. ಕೋಸ್ಟಲ್‌ವುಡ್‌ನಲ್ಲಿರುವ ಸದ್ಯದ ‘ಬಿಗು’ವಿನ ವಾತಾವರಣದ ಬಗ್ಗೆ ಅಂಜಿಕೆ ಇರಿಸಿಕೊಂಡೇ ಮಾತಿಗಿಳಿದ ನಿರ್ದೇಶಕ ವಿಸ್ಮಯ್‌ ತಮ್ಮ ಹೊಸ ಚಿತ್ರದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

l ನಮಸ್ತೆ ವಿಸ್ಮಯ್‌, ನಿಮ್ಮ ಮೊದಲ ತುಳುಚಿತ್ರ ‘ರಂಗ್‌’ಗಿಂತ ‘2 ಎಕ್ರೆ’ ಹೇಗೆ ಭಿನ್ನ? ಈ ಸಿನಿಮಾದಲ್ಲಿರುವ ವಿಶೇಷಗಳೇನು?

ನಮಸ್ಕಾರ. ‘ರಂಗ್‌’ ಫ್ಯಾಮಿಲಿ ಡ್ರಾಮಾ. ಆದರೆ, ‘2 ಎಕ್ರೆ’ ರಿಯಲಿಸ್ಟಿಕ್‌ ಸಿನಿಮಾ. ಈ ಸಿನಿಮಾದಲ್ಲಿ ಬರುವ ಪಾತ್ರ, ಸನ್ನಿವೇಶಗಳೆಲ್ಲವೂ ತುಂಬ ಸಹಜವಾಗಿ ಮೂಡಿಬಂದಿವೆ. ಚಿತ್ರದ ಯಾವ ಕಲಾವಿದನೂಓವರ್‌ ಆ್ಯಕ್ಟಿಂಗ್‌ ಮಾಡಿಲ್ಲ. ಪಾತ್ರ ಬೇಡು
ವಷ್ಟು ನಟನೆಯನ್ನು ಮಾತ್ರ ಕಲಾವಿದರಿಂದ ತೆಗೆದಿದ್ದೇನೆ. ಹಾಗಾಗಿ, ಚಿತ್ರ ತುಂಬ ಸಹಜವಾಗಿ ಮೂಡಿಬಂದಿದೆ. ನನಗನ್ನಿಸು
ವಂತೆ ಈ ರೀತಿಯ ಸಿನಿಮಾ ತುಳುವಿನಲ್ಲಿ ಇದೇ ಮೊದಲಬಾರಿಗೆ ಮೂಡಿಬಂದಿದೆ.

l ಚಿತ್ರ ಶೀರ್ಷಿಕೆ ವಿಭಿನ್ನವಾಗಿದೆ. ಚಿತ್ರಕ್ಕೆ ‘2 ಎಕ್ರೆ’ ಎಂಬ ಶೀರ್ಷಿಕೆ ಆಯ್ಕೆ ಮಾಡಲು ಹಿಂದಿರುವ ಕಾರಣವೇನು?

ಕೆಲವರಿಗೆ ಸಾಕಷ್ಟು ಆಸ್ತಿ–ಪಾಸ್ತಿ ಇರುತ್ತದೆ. ಆದರೆ, ಆ ಮನೆಯಲ್ಲಿ ಒಬ್ಬರೋ ಇಬ್ಬರೋ ವಯಸ್ಸಾದವರು ಇರುತ್ತಾರಷ್ಟೆ. ಆ ವೃದ್ಧರ ಮಕ್ಕಳು, ಮೊಮ್ಮಕ್ಕಳೆಲ್ಲಾ ಬೇರೆ ಕಡೆ ಇರುತ್ತಾರೆ. ‘2 ಎಕ್ರೆ’ ಎಂಬುದು ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದ ಕಥಾಹಂದರದ ಸಿನಿಮಾ. ಹಾಗಾಗಿ, ಚಿತ್ರಕ್ಕೆ ಈ ಶೀರ್ಷಿಕೆಯನ್ನೇ ಆಯ್ದುಕೊಂಡೆವು.

l ತುಳು ಚಿತ್ರಗಳೆಂದರೆ ಕಾಮಿಡಿ ಜಾನರ್‌ನ ಸಿನಿಮಾಗಳೆಂದೇ ಜನಜನಿತ. ನಿಮ್ಮ ಸಿನಿಮಾದಲ್ಲಿ ಕತೆಗೆ ಎಷ್ಟು ಪ್ರಾಮುಖ್ಯತೆ ನೀಡಿದ್ದೀರಿ. ಅದರ ಜತೆಗೆ ಹಾಸ್ಯವನ್ನು ಹೇಗೆ ಪೋಣಿಸಿದ್ದೀರಿ?

ತುಳು ಚಿತ್ರವೆಂದರೆ ಬಿಡಿ ಬಿಡಿ ಹಾಸ್ಯ ಸನ್ನಿವೇಶಗಳ ಗುಚ್ಛ ಎಂದು ಮೂಗುಮುರಿಯುವವರಿಗೆ ಈ ಚಿತ್ರದಲ್ಲಿ ಕತೆಯ ಹೂರಣವೂ ಇದೆ ಎಂದು ಹೇಳಲು ಬಯಸುತ್ತೇನೆ. ಕಾಮಿಡಿಗಾಗಿ ಹಾಸ್ಯ ಸನ್ನಿವೇಶಗಳನ್ನು ತುರುಕಿಲ್ಲ. ಕತೆಗೆ ಪೂರಕವಾಗಿಯೇ ಹಾಸ್ಯ ಸನ್ನಿವೇಶಗಳು ಬರುತ್ತವೆ. ಒಂದೇ ಹೆಸರಿನ ಇಬ್ಬರು ಇದ್ದಾಗ, ಆ ಹೆಸರಿನ ಕನ್‌ಪ್ಯೂಶನ್‌ನಿಂದ ಏನೆಲ್ಲಾ ಹಾಸ್ಯ ಸನ್ನಿವೇಶಗಳು ಸೃಷ್ಟಿಯಾಗುತ್ತವೆ ಎಂಬುದನ್ನು ಚಿತ್ರದಲ್ಲಿ ತಾಜಾ ಆಗಿ ತೋರಿಸಲಾಗಿದೆ. ಜತೆಗೆ ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬ ಕಲಾವಿದನದ್ದೂ ಒಂದೊಂದು ಕತೆ. ಒಬ್ಬನ ಕತೆ ಇನ್ನೊಬ್ಬನ ಕತೆಯೊಂದಿಗೆ ಕನೆಕ್ಟ್‌ ಆಗುತ್ತದೆ. ಕೊನೆಯಲ್ಲಿ ಎಲ್ಲ ಕತೆಗಳು ಒಂದೇ ಬಿಂದುವಿನಲ್ಲಿ ಸಂಧಿಸುತ್ತವೆ. ಹಾಗಾಗಿ, ‘2ಎಕ್ರೆ’ ಸಿನಿಮಾ ಹಾಸ್ಯ ಮತ್ತು ಕತೆಯ ಜುಗಲ್‌ಬಂದಿ ಎನ್ನಬಹುದು.

l ಪೃಥ್ವಿ ಅಂಬರ್‌ ಮತ್ತು ನಿರೀಕ್ಷಾ ಶೆಟ್ಟಿ ಕೋಸ್ಟಲ್‌ವುಡ್‌ನ ಪ್ರತಿಭಾವಂತ ಕಲಾವಿದರು. ಚಿತ್ರದಲ್ಲಿ ಅವರನ್ನು ಹೇಗೆ ದುಡಿಸಿಕೊಂಡಿದ್ದೀರಿ?

ನಾನು ಮತ್ತು ನವೀನ್‌ ಡಿ.ಪಡೀಲ್‌ ಅಣ್ಣ ತಮ್ಮಂದಿರ ಪಾತ್ರ ನಿರ್ವಹಿಸಿದ್ದೇವೆ. ನಿರೀಕ್ಷಾ ಶೆಟ್ಟಿ ನನ್ನ ಅಣ್ಣನ ಮಗಳ ಪಾತ್ರ ನಿರ್ವಹಿಸಿದ್ದಾರೆ. ಪೃಥ್ವಿ ಅಂಬರ್‌ ಅವರು ಅರವಿಂದ್‌ ಬೋಳಾರ್‌ ಮಗನ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ಹೀರೊ, ಹೀರೊಯಿನ್‌ ಅಂತ ಯಾರೂ ಇಲ್ಲ. ಆದರೆ, ಪೃಥ್ವಿ ಅಂಬರ್‌ ಮತ್ತು ನಿರೀಕ್ಷಾ ಶೆಟ್ಟಿ ಚಿತ್ರದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ನಾಯಕ ನಾಯಕಿ ಭೇಟಿಯಾಗುವುದು ಕೂಡ ಆಸ್ಪತ್ರೆಯಲ್ಲೇ. ಇವರಿಬ್ಬರ ನಟನೆ ಚಿತ್ರದ ತೂಕವನ್ನು ಹೆಚ್ಚಿಸಿದೆ.

l ಚಿತ್ರದಲ್ಲಿ ನಟಿಸಿರುವ ಕಲಾವಿದರ ಕುರಿತು ಹೇಳಿ?

ನವೀನ್‌ ಡಿ.ಪಡೀಲ್‌, ಅರವಿಂದ ಬೋಳಾರ್‌, ಮೈಮ್‌ ರಾಮ್‌ದಾಸ್‌, ಉಮೇಶ್‌ ಮಿಜಾರ್‌, ಮುಂಜು ರೈ, ದೀಪಕ್‌ ರೈ, ಪ್ರಕಾಶ್‌ ತುಮಿನಾಡು, ರೂಪಾ ವರ್ಕಾಡಿ ಇವರೆಲ್ಲರೂ ಪ್ರೇಕ್ಷಕರನ್ನು ನಗಿಸುವ ಸಲುವಾಗಿ ಕಾಮಿಡಿ ಪಾತ್ರ ನಿಭಾಯಿಸಿದ್ದಾರೆ.

l ನೀವು ಸ್ವತಂತ್ರವಾಗಿ ನಿರ್ದೇಶಿಸಿರುವ ಮೊದಲ ಸಿನಿಮಾ ‘2 ಎಕ್ರೆ’. ಚಿತ್ರದ ಬಗ್ಗೆ ನಿಮಗಿರುವ ನಿರೀಕ್ಷೆಗಳೇನು?

ಕೋಸ್ಟಲ್‌ವುಡ್‌ನ ಸದ್ಯದ ಪರಿಸ್ಥಿತಿಯನ್ನು ನೋಡಿದರೆ ತುಂಬ ಭಯ ಆಗುತ್ತದೆ. 2019ನೇ ವರ್ಷದಲ್ಲಿ ಆಗಲೇ ಆರು ತಿಂಗಳು ಕಳೆದವು. ಆದರೆ, ಈವರೆಗೆ ಬಿಡುಗಡೆಯಾದ ತುಳು ಸಿನಿಮಾಗಳು ದೊಡ್ಡ ಪ್ರಮಾಣದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆದು ತರುವಲ್ಲಿ ವಿಫಲವಾಗಿವೆ. ಪ್ರೇಕ್ಷಕರ ನಿರೀಕ್ಷೆಯನ್ನು ಮುಟ್ಟುವಂತಹ ಯಾವುದೇ ಸಿನಿಮಾಗಳು ಬಿಡುಗಡೆ ಆಗಲಿಲ್ಲ. ಕೋಸ್ಟಲ್‌ವುಡ್‌ ಪ್ರೇಕ್ಷಕರ ಈಗಿನ ನಿರುತ್ಸಾಹ ಹಾಗೆಯೇ ಮುಂದುವರಿದರೆ ನಮ್ಮ ಸಿನಿಮಾದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಭಯವಿದೆ. ಅದೇರೀತಿ, ಒಳ್ಳೆ ಸಿನಿಮಾ ಬಂದರೆ ಪ್ರೇಕ್ಷಕರು ಖಂಡಿತವಾಗಿಯೂ ನಮ್ಮ ಕೈ ಹಿಡಿಯುತ್ತಾರೆ ಎಂಬ ನಂಬಿಕೆ, ಆತ್ಮವಿಶ್ವಾಸವೂ ಇದೆ. ‘2 ಎಕ್ರೆ’ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಆದರೂ, ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೋ ಎಂಬ ಕುತೂಹಲವಂತೂ ಇದ್ದೇ ಇದೆ.

ಬ್ಲರ್ಬ್‌

ಕೋಸ್ಟಲ್‌ವುಡ್‌ಗೆ ಈ ವರ್ಷ ಅಷ್ಟೇನೂ ಆಶಾದಾಯಕವಾಗಿಲ್ಲ. ಹತ್ತಿರತ್ತಿರ ಅರ್ಧ ವರ್ಷ ಕಳೆಯುತ್ತಾ ಬಂದಿದೆ. ಆದರೆ, ಈವರೆಗೆ ಬಿಡುಗಡೆಯಾದ ಬೆರಳೆಣಿಕೆಯಷ್ಟು ಸಿನಿಮಾಗಳು ಕೂಡ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಂಪೂರ್ಣವಾಗಿ ಯಶ ಕಂಡಿಲ್ಲ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲು ಮೀನಾಮೇಷ ಎಣಿಸುತ್ತಿರುವ ಹೊತ್ತಿನಲ್ಲಿ ‘2ಎಕ್ರೆ’ ಸಿನಿಮಾ ತೆರೆಗೆ ಬರುವ ಸಿದ್ಧತೆ ನಡೆಸುತ್ತಿದೆ. ‘ರಂಗ್‌’ ಸಿನಿಮಾದಲ್ಲಿ ನಿರ್ದೇಶಕ ವಿಸ್ಮಯ್‌ ವಿನಾಯಕ್‌ ಮಾಡಿದ ಮೋಡಿ ಇಲ್ಲಿಯೂ ಮುಂದುವರಿಯುತ್ತದೆಯಾ, ಕಾದು ನೋಡಬೇಕಷ್ಟೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT