ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘27 ಸ್ಟೆಪ್ಸ್‌ ಆಫ್‌ ಮೇ’: ಅತ್ಯಾಚಾರ ಸಂತ್ರಸ್ತೆಯ ಕಥೆ–ವ್ಯಥೆ

Last Updated 25 ಫೆಬ್ರುವರಿ 2019, 9:26 IST
ಅಕ್ಷರ ಗಾತ್ರ

ನಾವು ನೋಡಿದ ಸಿನಿಮಾ

–––

ಸಿನಿಮಾ:27 ಸ್ಟೆಪ್ಸ್‌ ಆಫ್‌ ಮೇ
ಭಾಷೆ:ಇಂಡೋನೇಷಿಯಾ
ನಿರ್ದೇಶನ–ನಿರ್ಮಾಣ: ರವಿ ಎಲ್‌. ಬರ್ವಾನಿ
ಪಾತ್ರವರ್ಗ: ರೈಹಾನುನ್‌,ಲುಕ್ಮನ್‌ ಸರ್ದಿ, ಅರಿಯೊ ಬಾಯು

**

‘ಮೇ’

ಆಕೆ ಹದಿನಾಲ್ಕು ವರ್ಷದ ಹೆಣ್ಣುಮಗಳು.

ಅಮ್ಯೂಸ್‌ಮೆಂಟ್‌ ಪಾರ್ಕ್‌ನಲ್ಲಿ ಗೆಳೆಯರೊಂದಿಗೆ ಆಟವಾಡುತ್ತಾ ಎದೆ ತುಂಬಿ ಸಂಭ್ರಮಿಸುವ ಅವಳು ಸಿನಿಮಾ ನೋಡಲು ಬಂದವರನ್ನು ಕಿವಿಗಡಚಿಕ್ಕುವ ನಗುವಿನೊಂದಿಗೆ ಸ್ವಾಗತಿಸುತ್ತಾಳೆ. ಆದರೆ ಆ ನಗು ಹೆಚ್ಚುಕಾಲ ಉಳಿಯುವುದಿಲ್ಲ. ಮರು ದೃಶ್ಯದಲ್ಲೇ ಸಾಮೂಹಿಕ ಅತ್ಯಾಚಾರಕ್ಕೊಳಗಾಗುವ ಆಕೆಯ ಬದುಕನ್ನು ಕತ್ತಲು ಆವರಿಸುತ್ತದೆ.

ಹಿಂದಿನ ದೃಶ್ಯದಲ್ಲಷ್ಟೆ ಕೇಕೆ ಹಾಕಿ ಸಂಭ್ರಮಿಸಿದ್ದವಳ ಬಾಯಿಗೆ ಬೀಗ ಬಿದ್ದಂತಾಗುತ್ತದೆ. ಮಾತು ಮಾತ್ರವಲ್ಲ ಭಾವವಿಲ್ಲ; ಸಂವೇದನೆಯಿಲ್ಲ.ಖಿನ್ನತೆ ಆವರಿಸುತ್ತದೆ. ಅಪ್ಪ ವೃತ್ತಿಪರ ಬಾಕ್ಸರ್‌ ಆಗಿದ್ದರೂ ತನ್ನನ್ನು ರಕ್ಷಿಸಲಾಗದ್ದಕ್ಕೆ ಸಿಟ್ಟು. ಕ್ರೌರ್ಯದ ಆಘಾತದಿಂದ ಚೇತರಿಸಿಕೊಳ್ಳಲಾಗದೆ ಬರೋಬ್ಬರಿಎಂಟು ವರ್ಷವನ್ನು ಒಂದೇ ಕೋಣೆಯಲ್ಲಿದ್ದುಕೊಂಡು ತಳ್ಳಿಬಿಡುತ್ತಾಳೆ.‌ ಒಂದಿನಿತೂನೆರಿಗೆ ಇಲ್ಲದಂತೆ ಇಸ್ತ್ರಿ ಮಾಡಿಕೊಂಡು ಬಟ್ಟೆ ತೊಡುವ ಮೇ ಮುಖದಲ್ಲಿ ಭಾವರಸ ಸೂಸುವ ಒಂದಾದರೂ ಗೆರೆ ಕಾಣುವುದಿಲ್ಲ.

ನಿತ್ಯ ಮುಂಜಾನೆ ಆಕೆಯ ಮನೆಗೆ ನಗ್ನವಾದ ಪುಟಾಣಿ ಹೆಣ್ಣು ಗೊಂಬೆಗಳು ಬರುತ್ತವೆ.ನಿನ್ನೆ ಬಟ್ಟೆ ತೊಡಿಸಿದ್ದ ಗೊಂಬೆಗಳನ್ನು ಅಪ್ಪನ ಮೂಲಕ ಹೊರಗೆ ಸಾಗಿಸುತ್ತಾಳೆ. ಇಂದು ಮತ್ತೆ ಹೊಸ ಗೊಂಬೆಗಳಿಗೆ ಬಟ್ಟೆ ತೊಡಿಸುವ ಕಾಯಕ.ಮನೆಗೆ ಬೆಂಕಿ ಬಿದ್ದಾಗಲೂ ಅದು ನಿಲ್ಲುವುದಿಲ್ಲ. ಜೀವ ಉಳಿಸಿಕೊಳ್ಳುವುದಕ್ಕಾದರೂ ಹೊರಗೆ ಓಡುವ ಅಳುಕು ತೋರುವುದಿಲ್ಲ. ಅಪ್ಪನೂ ಮಗಳಿಗಾಗಿ ಮೌನಿಯಾಗಿಬಿಡುತ್ತಾನೆ. ಅಮ್ಮನಾಗಿ ಆರೈಕೆ ಮಾಡುತ್ತಾ ಅಗತ್ಯಗಳನ್ನು ಪೂರೈಸುತ್ತಾನೆ. ಆದರೆ ಗಂಡುಸಾದ ಕಾರಣ ಅವಳ ಮೈಮುಟ್ಟುವಂತಿಲ್ಲ. ಮುಟ್ಟಿದರೆ ತನ್ನದೇ ಕೈ ಕೊಯ್ದುಕೊಂಡು ಸೇಡು ತೀರಿಸಿಕೊಳ್ಳುವ ಮನೋಭಾವ ಅವಳದು.

ಒಂದೆಡೆ ಮಗಳ ಚಿಂತೆ, ಇನ್ನೊಂದೆಡೆ ಅವಳಿಗೆ ರಕ್ಷಣೆ ನೀಡಲಾರದ್ದಕ್ಕೆ ಹತಾಶನಾಗಿ ಮತ್ತೆ ಬಾಕ್ಸಿಂಗ್‌ ರಿಂಗ್‌ಗೆ ಇಳಿಯುತ್ತಾನೆ. ಎದುರಾಳಿಯ ಜೀವ ಹೋಗುವಂತೆ ಚಚ್ಚುತ್ತಾನೆ. ಆಕ್ರೋಶ ಇಂಗುವುದಿಲ್ಲ, ಗೆಲುವು ಘೋಷಣೆಯಾಗುವುದೊಳಗೆ ಅಂಕಣದಿಂದಲೇ ಹೊರನಡೆಯುತ್ತಾನೆ.‘ನನಗೆ ಗೆಲುವು ಬೇಕಿಲ್ಲ. ಕುಸ್ತಿ ಆಡ್ಬೇಕು ಅಷ್ಟೇ’ ಎನ್ನುತ್ತಾ ಕಣ್ಣೀರು ತುಂಬಿಕೊಳ್ಳುತ್ತಾನೆ.ಮಗಳ ಚಿಂತೆಯಲ್ಲಿ ಮೈಮರೆತು ಒದೆ ತಿಂದು ನೆಲಕಚ್ಚಿದ ಪಂದ್ಯಗಳೂ ಸಾಕಷ್ಟು. ಮನೆಯಲ್ಲಿದ್ದಷ್ಟು ಹೊತ್ತು ಮೌನ ಮೂರ್ತಿಯಾಗುವ ಆತ ಹೊರಗೆಲ್ಲ ರೆಬೆಲ್‌. ಈ ಕಾರಣಕ್ಕೆ ಅಪ್ಪನಾಗಿ ಮತ್ತಷ್ಟು ಹತ್ತಿರವಾಗುತ್ತಾನೆ ನಟ ಲುಕ್ಮನ್‌ ಸರ್ದಿ.

ಹಿಂದಿನ ಮನೆಯಲ್ಲಿ ಉಳಿದಿದ್ದ ಜಾದೂಗಾರ ಮೇ ಜೀವನಕ್ರಮವನ್ನು ಬದಲಿಸುತ್ತಾನೆ. ಗೋಡೆಯಲ್ಲಿದ್ದ ಕಿಂಡಿಯ ಮೂಲಕ ಆತ ಮಾಡುವ ಜಾದುಗಳನ್ನು ಕುತೂಹಲದಿಂದ ನೋಡುತ್ತಾಳೆ ಮೇ. ಕಲಿಯಲು ಆಸಕ್ತಿ ತೋರುತ್ತಾಳೆ. ಆತನೂ ನೆರವಾಗುತ್ತಾನೆ. ಅವನಲ್ಲಿಗೆ ಹೋಗುತ್ತಾಳೆ. ಒಂದೂ ಮಾತನಾಡದೆ ಒಡನಾಡುತ್ತಾಳೆ. ಅವಳ ಹವ್ಯಾಸ ಬದಲಾಗುತ್ತದೆ. ಅದರ ಫಲವಾಗಿ ಮನೆಗೆ ಬಂದ ಹಲವು ಗೊಂಬೆಗಳು ಬೆತ್ತಲಾಗಿಯೇ ಉಳಿಯುತ್ತವೆ.

ಇನ್ನೇನು ಮೇ ಸರಿಹೋದಳು ಎಂದುಕೊಳ್ಳುವಷ್ಟರಲ್ಲಿ ಜಾದೂಗಾರ ಮೈಮರೆತು ಮೇ ಕೆನ್ನೆಗೊಂದು ಮುತ್ತು ನೀಡುತ್ತಾನೆ. ಒಡಲಿಲ್ಲದ್ದ ಕಹಿ ಗಂಟಲಿಗೇರುತ್ತದೆ. ನೋವು ಮರುಕಳಿಸಿ ಆರ್ಭಟಿಸುತ್ತಾಳೆ. ಸಂಕಟವನ್ನು ಹೇಳಿಕೊಳ್ಳಲಾಗದೆ ರೋದಿಸುವ ಮೇ ಆಂತರ್ಯ, ಜಾದೂಗಾರನಿಗೆ ಅರ್ಥವಾಗುತ್ತದೆ. ಮನವೊಲಿಸುತ್ತಾನೆ. ಮೇ ಬದುಕಲ್ಲಿ ಮತ್ತೆ ಮಂದಹಾಸ ಮೂಡುತ್ತದೆ. ಸಿನಿಮಾ ಆರಂಭದಿಂದ ಒಮ್ಮೆಯೂ ಅಪ್ಪನೊಂದಿಗೆ ಮಾತನಾಡದ ಅವಳು, ’ತಪ್ಪು ನಿಮ್ಮದಲ್ಲ ಅಪ್ಪ’ ಎನ್ನುತ್ತಾಳೆ. ಬಾಗಿಲು ತೆರೆದು ಲೋಕದ ಚೆಂದವನ್ನು ಕಣ್ತುಂಬಿಕೊಳ್ಳಲು ಮೇ ಹೆಜ್ಜೆ ಹಾಕುವುದರೊಂದಿಗೆ ಸಿನಿಮಾ ಮುಗಿಯುತ್ತದೆ.

ಅನಿರಿಕ್ಷಿತ ತಿರುವುಗಳಿಲ್ಲದಿದ್ದರೂ ಯಾವ ಹಂತದಲ್ಲಿಯೂ ಪ್ರೇಕ್ಷಕರಿಗೆ ಬೇಸರ ಉಂಟುಮಾಡದ ಸತ್ವಶಾಲಿ ನಿರೂಪಣೆ ಸಿನಿಮಾದಲ್ಲಿದೆ. ಛಾಯಾಗ್ರಹಣ ಹಾಗೂ ಸಂಗೀತ ಸಿನಿಮಾದ ಗಟ್ಟಿ ಅಂಶಗಳು. ಪ್ರತಿದೃಶ್ಯದಲ್ಲಿನ ಮಾತಿಗೆ ನಿಲುಕದ ಭಾವವನ್ನು ಅರಿತು ಸಂಗೀತ ಸಂಯೋಜಿಸಿರುವ ತೊಯೆರ್ಸಿ ಅರ್ಗೇಸ್ವರ್‌ ಅಭಿನಂದನಾರ್ಹರು. ಸಿನಿಮಾವನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ದಾಟಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT