ಗುರುವಾರ , ಫೆಬ್ರವರಿ 25, 2021
29 °C

ಆರರ ಕೂಟದ ಥ್ರಿಲ್ಲರ್ ಆಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಶಿಶಿರ, ಶ್ರೀಕಂಠದಂಥ ಸಿನಿಮಾಗಳನ್ನು ಕೊಟ್ಟಿದ್ದ ಮಂಜು ಸ್ವರಾಜ್‌ ಇದೀಗ ಮತ್ತೊಂದು ಪ್ರಯೋಗಾತ್ಮಕ ಸಿನಿಮಾಗೆ ತಮ್ಮನ್ನು ಒಡ್ಡಿಕೊಳ್ಳಲು ಸಜ್ಜಾಗಿದ್ದಾರೆ. 

ಇದು ಅವರ ಆರನೇ ಸಿನಿಮಾ. ಈ ಸಿನಿಮಾದಲ್ಲಿ ಆರು ಜನ ನಾಯಕರು. ಈ ಆರರ ನಂಟನ್ನು ಶೀರ್ಷಿಕೆಯಲ್ಲಿಯೂ ಉಳಿಸಿಕೊಳ್ಳುತ್ತಿರುವ ಮಂಜು, ‘6 ದಿ ಕೂಟ’ ಎಂಬ ವಿಚಿತ್ರ ಹೆಸರನ್ನು ಇಟ್ಟಿದ್ದಾರೆ. ಆರು ಎಂಬ ಸಂಖ್ಯೆ ಚಿತ್ರದ ಸ್ಕ್ರಿಪ್ಟ್‌ನಲ್ಲಿಯೂ ವಿಶೇಷ ಪಾತ್ರ ವಹಿಸುತ್ತದೆಂತೆ. 

ಇತ್ತೀಚೆಗೆ ಚಿತ್ರದ ಮುಹೂರ್ತವನ್ನು ಮುಗಿಸಿದ್ದಾರೆ ಮಂಜು. 

‘ಈ ಹಿಂದೆ ನಾನು ನಿರ್ದೇಶಿಸಿದ ಶಿಶಿರ ಸಿನಿಮಾ ನಾಲ್ಕು ಭಾಷೆಯಲ್ಲಿ ರಿಮೇಕ್ ಆಯ್ತು. ಆ ನಾಲ್ಕು ಭಾಷೆಗಳಲ್ಲಿಯೂ ಗೆದ್ದಿತು. ಆದರೆ ದುರದೃಷ್ಟಕ್ಕೆ ಕನ್ನಡಲ್ಲಿಯೇ ಪ್ಲಾಪ್‌ ಆಗಿಹೋಯ್ತು. ಹಾಗಾಗಿ ನಾನು ಕಮರ್ಷಿಯಲ್ ಸಿನಿಮಾಗಳತ್ತ ಹೊರಳಿಕೊಂಡೆ. ಹಾಗಿದ್ದೂ ಶಿವರಾಜ್‌ಕುಮಾರ್ ಅವರನ್ನು ಇಟ್ಟುಕೊಂಡು ‘ಶ್ರೀಕಂಠ’ದಂಥ ಸಿನಿಮಾ ಮಾಡಿದೆ. ಈಗ ಮತ್ತೊಮ್ಮೆ ಪ್ರಯೋಗಾತ್ಮಕ ಸಿನಿಮಾ ಮಾಡಲು ಹೊರಟಿದ್ದೇನೆ’ ಎಂದು ಹೇಳಿಕೊಂಡರು ಮಂಜು ಸ್ವರಾಜ್‌.

ಈ ಚಿತ್ರದ ಮೂಲಕ ಅನುರಾಗ್ ಎಂಬ ಹೊಸ ಹುಡುಗನನ್ನು ನಾಯಕನಟನಾಗಿ ಪರಿಚಿತರಾಗುತ್ತಿದ್ದಾರೆ. ಆರು ಪಾತ್ರಗಳ ಸುತ್ತಲೇ ಇಡೀ ಕಥೆ ಸುತ್ತುತ್ತದಂತೆ. ಸಿನಿಮಾದ ಬಹುತೇಕ ಪಾತ್ರಗಳಿಗೆ ನಟರನ್ನು ಅವರು ನಾಗತಿಹಳ್ಳಿ ಚಂದ್ರಶೇಖರ್  ಅವರ ಟೆಂಟ್‌ ಸಿನಿಮಾದಿಂದ ಆಯ್ದುಕೊಂಡಿದ್ದಾರೆ. ರವಿತೇಜ್, ಪ್ರಜ್ವಲ್‌, ನೌಷಾದ್‌  ಈ ಮೂವರು ಅನುರಾಗ್‌ ಜತೆ ಹಿರಿತೆರೆಗೆ ಅಡಿಯಿಡುವ ಪುಲಕದಲ್ಲಿದ್ದಾರೆ. ಇನ್ನೂ ಎರಡು ಪಾತ್ರಗಳಿಗೆ ನಟರು ಇನ್ನೂ ಅಂತಿಮಗೊಂಡಿಲ್ಲ. ಹಾಗೆಯೇ ನಾಯಕಿಯ ಆಯ್ಕೆಯೂ ನಡೆಯಬೇಕಿದೆ.

‘ಸ್ಕ್ರಿಪ್ಟ್‌ ಅಂತಿಮ ಹಂತದಲ್ಲಿದೆ. ಇದಾದ ಮೇಲೆ ಇಪ್ಪತ್ತೈದು ದಿನಗಳ ಕಾಲ ತಾಲೀಮು ಮಾಡುತ್ತೇವೆ. ನಂತರ ಕ್ಯಾಮೆರಾ ಎದುರು ಮತ್ತೆ ತಾಲೀಮು ಮಾಡುತ್ತೇವೆ. ಅಲ್ಲಿ ಎಲ್ಲ ತಿದ್ದುಪಡಿಗಳನ್ನು ಮಾಡಿಕೊಂಡು ಜನವರಿ ಆರಂಭದಲ್ಲಿ ಚಿತ್ರೀಕರಣ ಆರಂಭಿಸುತ್ತೇವೆ’ ಎಂದು ಮಾಹಿತಿ ನೀಡಿದರು ಮಂಜು. 

‘ಕಮರ್ಷಿಯಲ್ ಸಿನಿಮಾ ಆಗಿದ್ದರೆ ಕಥೆ ಯಾವ ಬಗೆಯದು ಎಂದು ಹೇಳಬಹುದಿತ್ತು. ಆದರೆ ಇದು ಪ್ರಯೋಗಾತ್ಮಕ ಸಿನಿಮಾ. ಒಂದು ಸಣ್ಣ ಇಟ್ಟಿಗೆ ತೆಗೆದರು ಇಡೀ ಮನೆಯೇ ಬಿದ್ದೋಗುತ್ತದೆ. ಹಾಗಾಗಿ ಕಥೆಯ ಎಳೆ ಬಿಟ್ಟುಕೊಡಲಾರೆ’ ಎಂದೂ ಅವರು ಹೇಳಿದರು. 

 ಅವರ ನಂತರ ಮಾತನಾಡಿದ ಅನುರಾಗ್‌ ‘ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್ ಕಥೆ’ ಎಂಬ ಗುಟ್ಟನ್ನು ಬಿಟ್ಟುಕೊಟ್ಟರು. ‘ನಾನು ಫ್ಯಾಷನ್ ಷೋ, ಡಾನ್ಸ್‌ ಎಂದು ತಿರುಗಾಡಿಕೊಂಡಿದ್ದೆ. ಸಿನಿಮಾದಲ್ಲಿ ನಟಿಸುವ ಆಸೆಯೂ ಇರಲಿಲ್ಲ. ಒಮ್ಮೆ ಟೆಂಟ್‌ ಸಿನಿಮಾಗೆ ಹೋಗಿದ್ದೆ. ಅಲ್ಲಿಂದ ಸಿನಿಮಾ ನಟನೆ ಕುರಿತು ಆಸಕ್ತಿ ಮೊಳೆಯಿತು. ನನ್ನ ಅದೃಷ್ಟ, ಇಲ್ಲಿವರೆಗೆ ಸಿಕ್ಕ ಗುರುಗಳು, ಸ್ನೇಹಿತರು ಎಲ್ಲರೂ ತುಂಬ ಒಳ್ಳೆಯವರು. ಅವರಿಂದ ಸಾಕಷ್ಟು ಕಲಿತುಕೊಂಡಿದ್ದೇನೆ’ ಎಂದು ಕೃತಜ್ಞತೆ ಅರ್ಪಿಸಿದರು. ಅನುರಾಜ್‌ ತಂದೆ ರಾಜೇಶ್ ಅವರೇ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. 

ಚಿತ್ರದಲ್ಲಿರುವ ಎರಡು ಹಾಡುಗಳಿಗೆ ಅಭಿಮಾನ್ ರಾಯ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ. ‘ಮಂಜು ಸ್ವರಾಜ್ ಅವರ ಸ್ಕ್ರಿಪ್ಟ್‌ನಲ್ಲಿ ಸತ್ವ ಇದೆ. ಅವರ ಜತೆ ಕೆಲಸ ಮಾಡ್ತಾ ಇರೋದು ಖುಷಿ ಕೊಟ್ಟಿದೆ. ನಾನು ಇದುವರೆಗೆ ಮೂವತ್ತು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದೇನೆ. ಆದರೆ ಈ ಸಿನಿಮಾ ನನ್ನ ಪಾಲಿಗೆ ಹೊಸ ಪ್ರಯತ್ನ. ಇಂಥ ಪ್ರಯತ್ನ ಯಾರೂ ಮಾಡಿಲ್ಲ. ಸಂಗೀತಕ್ಕೆ ತುಂಬ ಸ್ಕೋಪ್ ಇದೆ’ ಎಂದರು ಅಭಿಮಾನ್. ಲವಿತ್‌ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು