ಕೊಳೆಗೇರಿ ಹುಡುಗರ ಕಚ್ಚಾ ಹಾಡಿಗೆ ದನಿಯಾದ ಜೋಯಾ

ಶುಕ್ರವಾರ, ಮಾರ್ಚ್ 22, 2019
27 °C

ಕೊಳೆಗೇರಿ ಹುಡುಗರ ಕಚ್ಚಾ ಹಾಡಿಗೆ ದನಿಯಾದ ಜೋಯಾ

Published:
Updated:
Prajavani

ಜೋಯಾ ಅಖ್ತರ್ ಅವರದ್ದು ಮೊದಲಿನಿಂದಲೂ ದೊಡ್ಡ ಮಟ್ಟದ ಹೋಂವರ್ಕ್ ಮಾಡುವುದರಲ್ಲಿ ಎತ್ತಿದ ಕೈ. ಶಾಲಾ ದಿನಗಳಲ್ಲೇ ಅವರಿಗೆ ಅದು ಸಿದ್ಧಿಸಿದೆ. ನ್ಯೂಯಾರ್ಕ್ ಯೂನಿವರ್ಸಿಟಿ ಫಿಲ್ಮ್‌ನಲ್ಲಿ ಚಲನಚಿತ್ರ ತಯಾರಿಕೆಯ ಪಟ್ಟುಗಳನ್ನು ಕಲಿಯಲು ಹೋದಾಗಲೂ ಅವರಿಗೆ ತಮ್ಮ ಹೋಂವರ್ಕ್ ಮಾಡುವ ಜಾಯಮಾನ ನೆರವಿಗೆ ಬಂತು.

ಮೀರಾ ನಾಯರ್, ಟೋನಿ ಗರ್ಬರ್, ದೇವ್ ಬೆನೆಗಲ್ ತರಹದ ಬಗೆ ಬಗೆಯ ಸಂವೇದನೆಗಳ ನಿರ್ದೇಶಕರಿಗೆ ಸಹಾಯಕಿಯಾಗಿ ಕೆಲಸ ಮಾಡಿದ ಜೋಯಾ ರಕ್ತದಲ್ಲಿಯೇ ಸೃಜನಶೀಲತೆ ಬೆರೆತಿದೆ. ಅಪ್ಪ ಜಾವೇದ್ ಅಖ್ತರ್ ಕವಿಸಮಯ, ಅಮ್ಮ ಹನಿ ಇರಾನಿ ಚಿತ್ರಕಥಾ ಕೌಶಲಗಳನ್ನು ಕಂಡೇ ಬೆಳೆದ ಮನೆಯ ದೊಡ್ಡ ಮಗಳು ಅವರು. ತಮ್ಮ ಫರ್ಹಾನ್ ಸಿನಿ‌ಮಾ ಮಾಡಲು ಮುಂದಾದಾಗಲೂ ಅವರು ಈ ಹೋಂವರ್ಕ್ ಮಾಡುವ ರೀತಿಯನ್ನು ಅವರಿಗೂ ಹಂಚಿದರು.

ಹತ್ತು ವರ್ಷಗಳಾದವು; ‘ಲಕ್ ಬೈ ಚಾನ್ಸ್’ ಹಿಂದಿ ಸಿನಿಮಾವನ್ನು ಅವರು ನಿರ್ದೇಶಿಸಿ. ಈಗ ಅವರದ್ದೇ ನಿರ್ದೇಶನದ 'ಗಲ್ಲಿ ಬಾಯ್' ನೋಡಿದವರು ಮುಕ್ತಕಂಠದಿಂದ ಮೆಚ್ಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಅವರು ಮಾಡಿರುವ ಹೋಂವರ್ಕ್ ಬಗೆಗೆ ಜೋಯಾ ಆಪ್ತೇಷ್ಟರೇ ಹುಬ್ಬೇರಿಸುತ್ತಿದ್ದಾರೆ.

ನಗರ ಸಂವೇದನೆಯ, ಶ್ರೀಮಂತರ ಕಥಾವಸ್ತುವಿನ ಸಿನಿಮಾವನ್ನೇ ಯಾಕೆ ಮಾಡುವಿರಿ ಎಂಬ ಪ್ರಶ್ನೆಯೂ ಅವರಿಗೆ ಪದೇ ಪದೇ ಎದುರಾದದ್ದಿದೆ. 'ನನಗೆ ಗೊತ್ತಿಲ್ಲದ ವಿಷಯವಸ್ತುವನ್ನು ನಿಮಗೆ ಹೇಗೆ ಕೊಡಲಿ' ಎಂದು ಅದಕ್ಕೆ ಅವರು ಮರುಪ್ರಶ್ನೆ ಹಾಕಿದ್ದರು.

2015ರಲ್ಲಿ ‘ದಿಲ್ ಧಡಕ್ನೆ ದೋ’ ಹಿಂದಿ ಸಿನಿಮಾ ನಿರ್ದೇಶಿಸುವಾಗ ಸಂಕಲನ ಮಾಡಿಸುವ ಹೊತ್ತಿನಲ್ಲಿ ಅವರಿಗೆ ‘ಆಫತ್’ ಎಂಬ ದೇಸಿ ಹಾಡು ಕೇಳಲು ಸಿಕ್ಕಿತು. ಸಂಕಲನಕಾರ ಆನಂದ್ ಸುಬ್ಬಯ ಸಂಗೀತಗಾರರೂ ಆಗಿದ್ದು, ಅವರೇ ಆ ಹಾಡನ್ನು ಕೇಳಿಸಿದ್ದು.

ಚಿಕ್ಕಂದಿನಿಂದ ವಿದೇಶಿ ರ‍್ಯಾಪ್‌ ಹಾಡುಗಳ ಕೇಳಿ ಬೆಳೆದಿದ್ದ ಜೋಯಾ ಅವರಿಗೆ ಅದರಲ್ಲಿ ಹೊಸತೇ ಧ್ವನಿ, ಕಾವ್ಯ ಇದೆ ಎನ್ನಿಸಿತು. ಆ ಹಾಡು ಕಟ್ಟಿದ್ದ ದೇಸಿ ರ‍್ಯಾಪರ್ ನೇಜಿ ಕುರಿತು ಕುತೂಹಲ ಹುಟ್ಟಿತು. ನೇಜಿ ಅವರನ್ನು ಭೇಟಿ ಮಾಡಿದರು. ಅವರ ಬದುಕಿನ ಹಿನ್ನೆಲೆ, ಹಾಡು ಅದರಲ್ಲೂ ಅಂಥ ಬಗೆಯ ಗೀತೆ ಕಟ್ಟಲು ಕಾರಣವಾದ ಕವಿಸಮಯಗಳನ್ನು ಕೆದಕಿದರು. ಅಲ್ಲಿಂದ ಅವರಿಗೆ ಇಂಥ ಕಥಾವಸ್ತುವಿನ ಸಿನಿಮಾ ಮಾಡಬೇಕು ಎಂಬ ಬಯಕೆ ಮೊಳೆಯಿತು.

ಚಿತ್ರಕಥೆ ಸಿದ್ಧಪಡಿಸುವ ಮೊದಲೇ ಅವರು ರ‍್ಯಾಪರ್‌ಗಳ ಬಗೆಗೆ ಅದಾಗಲೇ ತೆರೆಕಂಡಿದ್ದ ಬೇರೆ ಬೇರೆ ಭಾಷೆಗಳ ಅನೇಕ ಸಿನಿಮಾಗಳನ್ನು ನೋಡಿದರು. ಅಲ್ಲಿಯೂ ಅವರು ಹೆಚ್ಚು ಹೋಂವರ್ಕ್ ಮಾಡಿದರೆನ್ನುವುದಕ್ಕೆ ಇದೇ ಉದಾಹರಣೆ.

ಮುಂಬೈ ಕೊಳೆಗೇರಿಯ ಹೊಸಕಾಲದ ಹುಡುಗರ ಹಿಪ್-ಹಾಪ್ ಸಂಸ್ಕೃತಿ ಅವರ ಕಣ್ಣಿಗೆ ಅಪರಿಚಿತ ಉಪ ಸಂಸ್ಕೃತಿಯಾಗಿ ಕಂಡಿತು. ಇನ್ನಷ್ಟು ಮತ್ತಷ್ಟು ದೇಸಿ ರ‍್ಯಾಪರ್‌ಗಳನ್ನು ಮಾತಿಗೆಳೆದರು. ಸಮಾನ ಮನಸ್ಕರ ಜತೆ ಕೂತು ಚಿತ್ರಕಥೆ ಕಟ್ಟಲಾರಂಭಿಸಿದರು. ಆ ಪ್ರಕ್ರಿಯೆಯಲ್ಲಿ ಅವರಿಗೆ ಹೆಚ್ಚು ಸಾಥ್ ನೀಡಿದ್ದು ರೀಮಾ ಕಾಗ್ಟಿ. ಕೊಳೆಗೇರಿ ಹುಡುಗರ ಕಚ್ಚಾ ಕಾವ್ಯದ ಅಪರೂಪದ ಭಾಷೆಯನ್ನೇ ಸಿನಿಮಾಗೆ ಒಗ್ಗಿಸಲು ಸಹ ಅವರು ಅಧ್ಯಯನ ಮಾಡಿದರು.

ಇಷ್ಟೆಲ್ಲ ಸಂವಾದ, ಸಿದ್ಧತೆಗಳ ನಂತರ ರೂಪುತಳೆದ ‘ಗಲ್ಲಿ ಬಾಯ್’ ಬರ್ಲಿನ್‌ನ ಅತಿ ದೊಡ್ಡ ತೆರೆಯ ಮೇಲೂ ಪ್ರದರ್ಶನಗೊಂಡಿತು‌. ಭಿನ್ನ ಸಂಸ್ಕೃತಿಗಳ 1800 ಜನ ಅದನ್ನು ಕಣ್ತುಂಬಿಕೊಂಡರು. ತಮ್ಮ ನಗರದ್ದೇ ಆದ, ತಮಗೂ ಅಪರಿಚಿತ ಎನಿಸಿದ್ದ ಭಾಷೆ ಅಲ್ಲಿದ್ದ ಬಹುತೇಕರಿಗೆ ಹೊಸತು. ಅದು ಅರ್ಥವಾಗದೇ ಇದ್ದರೂ ದೃಶ್ಯಭಾಷೆ ಎಲ್ಲರಿಗೂ ಗಿಟ್ಟಿತು. ಪ್ರದರ್ಶನ ಮುಗಿದ ಮೇಲೆ ಕೆಲವರು ತಮ್ಮ ಬದುಕಿನಲ್ಲೂ ಅಂತಹದೇ ಕಥೆಗಳಿವೆ ಎಂದು ಹಂಚಿಕೊಂಡರು. ಜೋಯಾ ಹೇಳಿಕೊಳ್ಳುವಂತೆ ಅದು ಅವರಿಗೆ ಸಿಕ್ಕ ಮರೆಯಲಾಗದ ಶಹಬ್ಬಾಸ್‌ಗಿರಿ.

ಕೊಳೆಗೇರಿ ಕವಿಗಳನ್ನು ಹಾಗೂ ಶಿಷ್ಟ ಕವಿಯೂ ಆದ ತಮ್ಮ ತಂದೆಯನ್ನು ಒಂದೇ ಕೋಣೆಯಲ್ಲಿ ಕೂರಿಸಿ ಸಾಲುಗಳನ್ನು ಬರೆಸಿದವರು ಜೋಯಾ. ಅದೀಗ ಕೊಡುತ್ತಿರುವ ಫಲವೂ ಚೆನ್ನಾಗಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !