ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಾಲ್ ಸಿಂಗ್ ಚಡ್ಡಾ’ ನಿರ್ಮಾಣಕ್ಕೆ 14 ವರ್ಷ: ಅಮೀರ್ ಖಾನ್ ಹೇಳಿದ್ದಿಷ್ಟು.. 

Last Updated 6 ಆಗಸ್ಟ್ 2022, 11:53 IST
ಅಕ್ಷರ ಗಾತ್ರ

ಮುಂಬೈ: ತಮ್ಮ ಮುಂಬರುವ ಚಲನಚಿತ್ರ ‘ಲಾಲ್ ಸಿಂಗ್ ಚಡ್ಡಾ’ನಿರ್ಮಾಣಕ್ಕೆ 14 ವರ್ಷ ತೆಗೆದುಕೊಂಡ ವೃತ್ತಾಂತವನ್ನು ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಹಂಚಿಕೊಂಡಿದ್ದಾರೆ.

1994ರ ಹಾಲಿವುಡ್‌ನ ಟಾಮ್ ಹಾಂಕ್ಸ್‌ ಅವರ ಜನಪ್ರಿಯ ಚಲನಚಿತ್ರ ‘ಫಾರೆಸ್ಟ್ ಗಂಪ್’ನ ರಿಮೇಕ್ ಇದಾಗಿದೆ.

ಹೌದು, ಈ ಸಿನಿಮಾ ನಿರ್ಮಾಣಕ್ಕೆ ಬಹಳ ದೀರ್ಘ ಸಮಯ ತೆಗೆದುಕೊಂಡಿದ್ದೇವೆ. ಖಚಿತವಾಗಿ 14 ವರ್ಷಗಳಾಗಿವೆ. ಆದರೆ, ಚಿತ್ರದ ನಿರ್ಮಾಣ ಹಕ್ಕು ಪಡೆಯಲು ಸುಮಾರು 8 ರಿಂದ 9 ವರ್ಷ ಹಿಡಿದಿದೆ. ಹಾಗಾಗಿ, ನಾನು ಸ್ವಲ್ಪ ಕಾತರ ಮತ್ತು ಕೊಂಚ ಆತಂಕವನ್ನು ಹೊಂದಿದ್ದೇನೆ. ನಾವು ಒಂದೊಳ್ಳೆ ಸಿನಿಮಾ ಮಾಡಿದ್ದೇವೆ ಎಂಬುದು ನನಗೆ ಗೊತ್ತಿದೆ. ಆದರೆ, ಅದನ್ನು ಜನ ಇಷ್ಟಪಡುತ್ತಾರೊ, ಇಲ್ಲವೋ ಎಂಬ ಬಗ್ಗೆ ಆತಂಕವಿದೆ ಎಂದು ಹೇಳಿದ್ದಾರೆ.

ಚಿತ್ರಕ್ಕಾಗಿ ಅಮೀರ್ ಖಾನ್ ಬಹಳಷ್ಟು ಸ್ಥಳಗಳನ್ನು ಸುತ್ತಿದ್ದಾರೆ. ಒಂದು ಅದ್ಬುತ ಸಿನಿಮಾದ ಅನುಭವ ನೀಡಲು ಭಾರತದ ಸುಂದರ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಚಿತ್ರದಲ್ಲಿ ನಾಯಕ ಲಾಲ್ ಸಿಂಗ್ ಚಡ್ಡಾ ಅವರ 18ರಿಂದ 50 ವರ್ಷದವರೆಗಿನ ಪಯಣವನ್ನು ಚಿತ್ರಿಸಲಾಗಿದೆ.

ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಅಮೀರ್ ಖಾನ್ ಪ್ರೊಡಕ್ಷನ್ಸ್, ಕಿರಣ್ ರಾವ್ ಮತ್ತು ವಯಕಾಂ18 ಸ್ಟುಡಿಯೋಸ್ ನಿರ್ಮಾಣ ಮಾಡಿವೆ. ಅಮೀರ್ ಜೊತೆಗೆ ಕರೀನಾ ಕಪೂರ್, ಮೋನಾ ಸಿಂಗ್ ಮತ್ತು ನಾಗ ಚೈತನ್ಯ ಮುಖ್ಯ ಭೂಮಿಕೆಯಲ್ಲಿದ್ದಾರೆ.

ವಿವಾದ

ಇತ್ತೀಚೆಗೆ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಬಹಿಷ್ಕರಿಸುವಂತೆ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿತ್ತು. ಭಾರತದಲ್ಲಿ ‘ಅಸಹಿಷ್ಣುತೆ’ ಹೆಚ್ಚಾಗುತ್ತಿರುವ ಹಲವಾರು ಘಟನೆಗಳಿಂದ ನಾನು ಗಾಬರಿಗೊಂಡಿದ್ದೇನೆ ಮತ್ತು ನನ್ನ ಪತ್ನಿ ಕಿರಣ್ ರಾವ್(ಈಗ ವಿಚ್ಚೇದನ ಪಡೆದಿದ್ದಾರೆ) ಸಹ ಬಹುಶಃ ನಾವು ದೇಶ ತೊರೆಯಬೇಕಾಗಬಹುದು ಎಂದು ಸಲಹೆ ನೀಡಿರುವುದಾಗಿ 2015 ರಲ್ಲಿ ಅಮೀರ್ ಖಾನ್ ನೀಡಿದ್ದ ಹೇಳಿಕೆ ಉಲ್ಲೇಖಿಸಿ ಚಿತ್ರ ಬಹಿಷ್ಕಾರಕ್ಕೆ ಟ್ವಿಟರ್‌ನ ಹಲವು ಬಳಕೆದಾರರು ಕರೆ ನೀಡಿದ್ದರು. ಟ್ವಿಟರ್‌ನಲ್ಲಿ ಸಾವಿರಾರು ಪೋಸ್ಟ್‌ಗಳಿಗೆ #boycottlaalsinghchaddha ಮತ್ತು #boycottbollywood ಎಂಬ ಹ್ಯಾಷ್‌ಟ್ಯಾಗ್‌ಗಳನ್ನು ನೀಡಲಾಗಿತ್ತು.

ಬಳಿಕ, ತಮ್ಮ ಚಿತ್ರವನ್ನು ಬಹಿಷ್ಕರಿಸಬೇಡಿ ಎಂದು ಅಮೀರ್ ಖಾನ್ ಸಂದರ್ಶನವೊಂದರಲ್ಲಿ ಮನವಿ ಮಾಡಿದ್ದರು. ನಾನು ಭಾರತವನ್ನು ಪ್ರೀತಿಸುತ್ತೇನೆ ಮತ್ತು ಬೇರೆ ರೀತಿಯಲ್ಲಿ ಯೋಚಿಸಬೇಡಿ ಎಂದು ವಿನಂತಿಸಿದ್ದರು.

‘ಸೀಕ್ರೆಟ್ ಸೂಪರ್‌ಸ್ಟಾರ್’ಖ್ಯಾತಿಯ ಅದ್ವೈತ್ ಚಂದನ್ ನಿರ್ದೇಶಿಸಿರುವ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಲ್ಲಿ ಲಾಲ್ (ಅಮೀರ್ ನಿರ್ವಹಿಸಿರುವ ಪಾತ್ರ) ಎಂಬ ಸರಳ ವ್ಯಕ್ತಿಯು ಕನಸುಗಳು ಮತ್ತು ಪ್ರೀತಿಗಾಗಿ ನಡೆಸುವ ಅಸಾಧಾರಣ ಪ್ರಯಾಣವನ್ನು ತೆರೆ ಮೇಲೆ ತರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT