ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯುಸಿಯಾಗಿದ್ರೇನೇ ಖುಷಿ: ನಟ ಅಚ್ಯುತ್‌ ಕುಮಾರ್‌ ಸಂದರ್ಶನ

Last Updated 15 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಒಂದಕ್ಕಿಂತ ಒಂದು ಸವಾಲಿನ ಪಾತ್ರಗಳನ್ನು ಮಾಡುತ್ತಲೇ ಗಮನ ಸೆಳೆದು ಬೆಳ್ಳಿತೆರೆಯಲ್ಲಿ ಮಿಂಚಿರುವ ಅಚ್ಯುತ್‌ ಕುಮಾರ್‌ ಹೊಸ ಗೆಟಪ್‌ನಲ್ಲಿ ‘ಮಾನ್ಸೂನ್‌ ರಾಗ’ ನುಡಿಸಲು ಹೊರಟಿದ್ದಾರೆ. ಹೊಸಬರ ತಂಡದ ಜೊತೆ ಹೊಸತನಕ್ಕೆ ಒಡ್ಡಿಕೊಂಡಿರುವ ಅಚ್ಯುತಣ್ಣ ಇಲ್ಲಿ ಯಾವ ‘ರಾಗ’ ಹಾಡಿದ್ದಾರೆ ಎಂದು ತಿಳಿಯುವ ಪ್ರಯತ್ನ ಇಲ್ಲಿದೆ.

‘ಮಾನ್ಸೂನ್‌ ರಾಗ’ದಲ್ಲಿ ನಿಮ್ಮ ‘ರಾಗ’ ಯಾವುದು?

ಈಗಾಗಲೇ ದೃಶ್ಯಗಳಲ್ಲಿ ನೋಡಿದ್ದೀರಲ್ಲಾ. ಅದೇ ರಾಗ. ಒಳ್ಳೇ ಲವ್ವರ್‌ ಬಾಯ್‌ ತರಹ ಕಾಣಿಸಿದ್ದೇನೆ. ಒಳ್ಳೆಯ ತಂಡದ ಜೊತೆ ಅವಕಾಶ ಸಿಕ್ಕಿದೆ. ಸಿನಿಮಾ ಕಂಟೆಂಟ್‌ ಕೂಡಾ ಇಷ್ಟವಾಯಿತು. ಹಾಗಾಗಿ ತೊಡಗಿಸಿಕೊಂಡಿದ್ದೆ. ಒಳ್ಳೆಯ ಅನುಭವಿ ನಿರ್ದೇಶಕರೂ ಸಿಕ್ಕಿದ್ದಾರೆ. ಇಡೀ ತಂಡದ ಶ್ರಮ ಇದೆ. ಹಾಗಾಗಿ ಚಿತ್ರವೂ ಚೆನ್ನಾಗಿ ಮೂಡಿಬಂದಿದೆ. ನನ್ನ ‘ರಾಗ’ ವನ್ನು ಸಿನಿಮಾದಲ್ಲಿ ನೋಡಿ.

ಹೊಸಬರ ಜೊತೆಗಿನ ಕಾಂಬಿನೇಷನ್‌ ಹೇಗಿದೆ?

ಹಾಗೆ ನೋಡಿದರೆ ನಾನು ಹೆಚ್ಚು ತೊಡಗಿಕೊಂಡಿರುವುದು ಹೊಸಬರ ಜೊತೆಗೇ. ಪ್ರತಿ ತಂಡವೂ ಹೊಸತನದಿಂದ ಕೂಡಿರುತ್ತದೆ. ಅದರಲ್ಲೂ ಕನ್ನಡದಲ್ಲಿ ಸಾಲು ಸಾಲಾಗಿ ಹೊಸಬರು ಬಂದಿದ್ದಾರೆ. ಅವರು ಕತೆ ಹೇಳುವ ರೀತಿ, ನಿರೂಪಣೆಯೇ ಭಿನ್ನವಾದದ್ದು. ಹೊಸ ಆಲೋಚನೆಗಳಿಂದ ಕೂಡಿರುತ್ತಾರೆ. ಹಾಗಾಗಿ ಅವರು ಹೇಳುವ ಪ್ರತಿ ಪಾತ್ರವೂ ಹೊಸದೇ ಆದ ಸವಾಲಿನಿಂದ ಕೂಡಿರುತ್ತದೆ. ಈ ಸವಾಲನ್ನು ನಾನು ಖುಷಿಯಿಂದ ಅನುಭವಿಸುತ್ತಾ ಎದುರಿಸುತ್ತೇನೆ. ನಮಗೂ ಒಂದು ಪರೀಕ್ಷೆಯಂತೆಯೇ ಇರುತ್ತದೆ. ಹಾಗೆಯೇ ಇರಬೇಕು ಅಲ್ವಾ.

‘ಮಾನ್ಸೂನ್‌ ರಾಗ’ದ ಅನುಭವ? ನಿಮಗಾಗಿಯೇ ಪಾತ್ರ ಸೃಷ್ಟಿ ಮಾಡಿದರೇ?

ಅನುಭವ ಹೊಸದೇ ಆಗಿದೆ. ಗೋಕರ್ಣದಲ್ಲಿ ಚಿತ್ರೀಕರಣ ನಡೆದಿತ್ತು. ಗೋಕರ್ಣದ ಕಡಲ ತೀರ, ಆ ಊರು, ಓಣಿಗಳು, ಅಷ್ಟೇ ಏಕೆ ಜಯಂತ ಕಾಯ್ಕಿಣಿಯವರ ಮನೆಯಿರುವ ಓಣಿಯಲ್ಲೂ ಚಿತ್ರೀಕರಣ ನಡೆಸಿದ್ದೇವೆ. ತುಂಬಾ ಖುಷಿ ಕೊಟ್ಟಿದೆ. ಕಥೆಗೆ ಬೇಕಾದಂತೆ ಪಾತ್ರ ಸೃಷ್ಟಿ ಮಾಡಿದ್ದಾರೆ. ಅದಕ್ಕೆ ನಾನು ಹೊಂದುತ್ತೇನೆ ಎಂಬ ಕಾರಣಕ್ಕೆ ತೆಗೆದುಕೊಂಡಿದ್ದಾರೆ.

‘ಫೋರ್‌ ವಾಲ್ಸ್‌’ನಿಂದಾಚೆ ಬಂದ ಅಚ್ಯುತಣ್ಣ ಹೇಗಿದ್ದಾರೆ?

ಹೊಸ ಸವಾಲು, ಹೊಸ ನಿರೂಪಣೆಯ ಕಥೆಗಳು, ಪಾತ್ರಗಳು ಸಿಗುತ್ತಿವೆ. ಇವೇ ನಮ್ಮನ್ನು ಲವಲವಿಕೆಯಿಂದ ಇರಿಸುತ್ತವೆ. ಹಾಗಾಗಿ ಸಿದ್ಧ ಸೂತ್ರಗಳು ಅನಿಸಿಕೊಂಡಿರುವ ಪಾತ್ರಗಳು, ಟಿಪಿಕಲ್‌ ಲುಕ್‌ ಅಂತೀರಲ್ಲಾ, ಅಂಥ ಪಾತ್ರಗಳಿಂದ ಸ್ವಲ್ಪ ಹೊರಬಂದು ಹೊಸ ಬಗೆಯ ಪಾತ್ರಗಳನ್ನು ಮಾಡುತ್ತಿದ್ದೇನೆ.

ತುಂಬಾ ಬ್ಯುಸಿ ಆಗಿಬಿಟ್ಟಿರಾ ಹೇಗೆ?

ಬ್ಯುಸಿ ಆಗೋದು ಅಂದ್ರೇನು? ಒಂದು ಕೆಲಸದ ನಂತರ ಇನ್ನೊಂದಕ್ಕೆ ಬದಲಾಗುತ್ತಲೇ ಇರಬೇಕು. ಹೀಗೆ ಅವಿರತವಾಗಿ ಇಟ್ಟಿರುವುದಕ್ಕೆ ಬರಹಗಾರರು, ಕಥೆಗಾರರು, ನಿರ್ದೇಶಕರಿಗೆ ಧನ್ಯವಾದ ಹೇಳಬೇಕು. ಈ ಕಥೆಗೆ ಈ ವ್ಯಕ್ತಿ ಸೂಕ್ತ ಎಂದು ಆರಿಸುತ್ತಾರಲ್ಲಾ ಅವರಿಗೆ ಥ್ಯಾಂಕ್ಸ್‌ ಹೇಳಬೇಕು. ನನಗೆ ಕೈತುಂಬಾ ಕೆಲಸ ಮಾಡಿಯೂ ಗೊತ್ತು. ಖಾಲಿ ಕುಳಿತೂ ಗೊತ್ತು. ಎರಡನ್ನೂ ಅನುಭವಿಸಿದ್ದೇನೆ. ಹಾಗಾಗಿ ಬ್ಯುಸಿ ಎಂದರೆ ಹೇಗೆ? ಖಾಲಿ ಕುಳಿತುಕೊಳ್ಳಬೇಕೇ? ಕೆಲಸವೇ ನನ್ನನ್ನು ಲವಲವಿಕೆಯಿಂದ ಇಡುವಂತೆ ಮಾಡಿದೆ. ಬ್ಯುಸಿ ಜೊತೆಗೆ ತುಂಬಾ ಖುಷಿಯಾಗಿಯೂ ಇದ್ದೇನೆ. ಬದುಕನ್ನು ಅನುಭವಿಸಿದ್ದೇನೆ.

ನಿರ್ದೇಶನದ ಸಾಧ್ಯತೆ ಇದೆಯೇ?

ನನಗೆ ನಟನೆಯತ್ತ ಮಾತ್ರ ಗಮನ ಮತ್ತು ತಾಳ್ಮೆ. ನಿರ್ದೇಶಕನ ತಾಳ್ಮೆ ಇಲ್ಲ. ನಟನಿಗಿಂತ ನಿರ್ದೇಶಕನಿಗೆ ಹತ್ತು ಪಟ್ಟು ತಾಳ್ಮೆ ಬೇಕಾಗುತ್ತದೆ. ಹಾಗಾಗಿ ಸದ್ಯ ಆ ಆಸೆ ಇಟ್ಟುಕೊಂಡಿಲ್ಲ. ನಟನೆಯಲ್ಲೇ ಖುಷಿ ಇದೆ. ನಾಟಕಗಳನ್ನೇನೋ ನಿರ್ದೇಶನ ಮಾಡಿದ್ದೆ. ಆದರೆ, ಆ ಅನುಭವ ಇಲ್ಲಿಗೆ ಸಾಲದು. ಇಲ್ಲಿಗೆ ಬೇರೆಯೇ ಕಲಿಕೆ ಬೇಕಾಗುತ್ತದೆ. ಹಾಗಾಗಿ ನಿರ್ದೇಶನದತ್ತ ತಲೆ ಹಾಕಿಲ್ಲ.

ಹೊಸ ಯೋಜನೆಗಳು...

ನೀವೇ ನೋಡುತ್ತಿದ್ದೀರಲ್ಲಾ. ‘ಕಾಂತಾರ’, ‘ಕ್ರಾಂತಿ’ ಸಿದ್ಧವಾಗಿವೆ. ಅಲ್ಲೂ ಒಂದು ಹೊಸ ಲುಕ್‌ ಇದೆ. ‘ರಾಘವೇಂದ್ರ ಸ್ಟೋರ್ಸ್‌’ನಲ್ಲೂ ಇದ್ದೇನೆ. ಇನ್ನೊಂದಿಷ್ಟು ಚಿತ್ರಗಳು ಕೈಯಲ್ಲಿವೆ. ಇದುವರೆಗೆ ಸಿಕ್ಕಿದ್ದು ಎಲ್ಲವೂ ಒಳ್ಳೆಯ ಪಾತ್ರಗಳೇ. ಇನ್ನು ಹೊಸ ಚಿತ್ರಗಳ ಪಾತ್ರಗಳನ್ನು ಸಿನಿಮಾದಲ್ಲೇ ನೋಡಿ ಹೇಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT