ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬರೀಷ್‌ 70ನೇ ಜನ್ಮದಿನ: ಸಾಮಾಜಿಕ ಜಾಲತಾಣದಲ್ಲಿ ಹರಿದು ಬಂತು ಅಭಿಮಾನದ ಹೊಳೆ

ಅಕ್ಷರ ಗಾತ್ರ

ಬೆಂಗಳೂರು: ಜಲೀಲ, ಕನ್ವರ್‌, ಕರ್ಣ ಹೀಗೆ ಹಲವು ಪಾತ್ರಗಳಿಗೆ ಜೀವ ತುಂಬಿದ ‘ಮಂಡ್ಯದ ಗಂಡು’ ದಿವಂಗತ ನಟ ಅಂಬರೀಷ್‌ ಅವರ 70ನೇ ಜನ್ಮದಿನದಂದು, ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಸೇರಿದಂತೆ ಸಾವಿರಾರು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅವರನ್ನು ನೆನಪಿಸಿಕೊಂಡಿದ್ದಾರೆ.

ಅಂಬರೀಶ್‌ ಅವರ ಜನ್ಮದಿನ ಅವರ ಅಭಿಮಾನಿಗಳ ಪಾಲಿಗೆ ಸಂಭ್ರಮ, ಸಡಗರದ ಹಬ್ಬವೇ ಆಗಿರುತ್ತಿತ್ತು. ಹೀಗಾಗಿ ಒಂದು ದಿನ ಮುಂಚಿತವಾಗಿಯೇ ಅಂಬರೀಶ್‌ ನಿವಾಸದ ಎದುರು ಸೇರುತ್ತಿದ್ದ ಅಭಿಮಾನಿಗಳು ರಾತ್ರಿ 12 ಗಂಟೆ ಆಗುತ್ತಲೇ ಕೇಕ್‌ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಪಡುತ್ತಿದ್ದರು. ಆದರೆ, ಅಂಬರೀಶ್‌ ಅಗಲಿಕೆಯ ನಂತರ ಈ ಪರಿಪಾಠ ನಿಂತಿದೆಯಾದರೂ, ಸಾಮಾಜಿಕ ತಾಣಗಳಲ್ಲಿ ಅವರ ಮೇಲಿನ ಅಭಿಮಾನದ ಅಭಿವ್ಯಕ್ತಿ ಎಂದಿನಂತೇ ಇದೆ.

ಜನ್ಮದಿನದ ಹಿನ್ನೆಲೆಯಲ್ಲಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಅಂಬರೀಶ್‌ ಪತ್ನಿ, ಮಂಡ್ಯ ಸಂಸದೆ ಸುಮಲತಾ, ‘ಅಂಬರೀಶ್ ಅಂದರೆ ಕೇವಲ ವ್ಯಕ್ತಿಯಲ್ಲ ಅವರೊಂದು ಶಕ್ತಿಯ ಪರ್ವತವೇ ಆಗಿದ್ದರು. ನಟನಾಗಿ, ಸಮಾಜದ ಬಗ್ಗೆ ಕಾಳಜಿ ಇರುವ ಧೀಮಂತ ವ್ಯಕ್ತಿಯಾಗಿ, ನಾಡು, ನುಡಿಯ ವಿಚಾರದಲ್ಲಿ ಅಪ್ಪಟ ಹೋರಾಟಗಾರನಾಗಿ ನಾಡಿನ ಜನರ ಜೀವನಾಡಿಯಾಗಿದ್ದರು. ನನ್ನ ಪಾಲಿಗೆ ಅವರ ಹುಟ್ಟು ಹಬ್ಬ ಯಾವತ್ತಿಗೂ ಸ್ಪೆಷಲ್. ಅದೊಂದು ಹಬ್ಬವೇ ಆಗಿರುತ್ತಿತ್ತು. ನನ್ನ ಪ್ರೀತಿಯ, ಅಭಿಮಾನದ ಅಂಬಿಗೆ 70 ವರುಷ. ಎಪ್ಪತ್ತು ಸಾವಿರ ನೆನಪುಗಳೊಂದಿಗೆ ಶುಭಾಶಯ ಕೋರುವೆ. ಅಂಬರೀಶ್ ಅವರ ಹುಟ್ಟು ಹಬ್ಬಕ್ಕಾಗಿ ಹಲವಾರು ಜನಪರ ಕಾರ್ಯಕ್ರಮ ಆಯೋಜಿಸಿದ್ದೇವೆ. ಇದು ಅವರ ಹುಟ್ಟು ಹಬ್ಬಕ್ಕೆ ನಮ್ಮೆಲ್ಲರ ಉಡುಗೊರೆ’ ಎಂದು ಬರೆದುಕೊಂಡಿದ್ದಾರೆ.

‘ಎಂದಿಗೂ ಮಾಸದ ಅಂಬಿ ಅಪ್ಪಾಜಿಯ ಸವಿ ನೆನಪುಗಳು. ಇಂದಿಗೂ ಅವರು ನಮ್ಮನ್ನು ಕಾಯುತ್ತ ಆಶೀರ್ವದಿಸುತ್ತಾ ನಮ್ಮೊಂದಿಗೆ ಇದ್ದಾರೆ. ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಅಪ್ಪಾಜಿ. One and only #RebelStar’ ಎಂದು ನಟ ದರ್ಶನ್ ಟ್ವೀಟ್ ಮಾಡಿದ್ದಾರೆ.

‘ಮಂಡ್ಯದ ಗಂಡು ಎಂದೇ ಖ್ಯಾತರಾದ, ನಮ್ಮ ನಿಮ್ಮೆಲ್ಲರ ಪ್ರೀತಿಯ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮ ಜಯಂತಿಯಂದು ಗೌರವ ನಮನಗಳನ್ನು ಸಲ್ಲಿಸುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಚಿತ್ರರಂಗ ಹಾಗೂ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ರೆಬೆಲ್‌ ಸ್ಟಾರ್‌ ಶ್ರೀ ಅಂಬರೀಷ್‌ ಅವರ ಹುಟ್ಟುಹಬ್ಬದಂದು ಪ್ರೀತಿಯ ನಮನಗಳು. ಕಲಿಯುಗ ಕರ್ಣನ ಹುಟ್ಟುಹಬ್ಬದಂದು ಗೌರವಪೂರ್ವಕವಾಗಿ ನೆನೆದು ಅವರ ಕಲಾಸೇವೆಯನ್ನು ಸ್ಮರಿಸೋಣ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

‘ಕನ್ನಡ ಚಿತ್ರರಂಗದ ಹಿರಿಯ ನಟರು, ಮಾಜಿ ಕೇಂದ್ರ ಸಚಿವರು,ಮಂಡ್ಯದ ಗಂಡು ದಿವಂಗತ ಅಂಬರೀಶ್ ಅವರ ಜನ್ಮದಿನದಂದು ನನ್ನ ಗೌರವ ನಮನಗಳು’ ಎಂದು ಸಂಸದ ಪ್ರತಾಪ ಸಿಂಹ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT