ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ನಿಂತ ನೀರಲ್ಲ: ಕೋಮಲ್‌ ಮನದಾಳದ ಮಾತು

Last Updated 6 ಜೂನ್ 2019, 19:30 IST
ಅಕ್ಷರ ಗಾತ್ರ

ನಾನು ಬಣ್ಣದ ಲೋಕ ಪ್ರವೇಶಿಸಿ 25 ವರ್ಷ ಸರಿಯಿತು. ಇದು ಸವಾಲಿನ ಹಾದಿಯ ಪಯಣ. ನನ್ನದು ಪ್ರಯೋಗಾತ್ಮಕ ಮನೋಭಾವ. ಹಾಗಾಗಿಯೇ, ಮುಖ್ಯವಾಹಿನಿಯಲ್ಲಿ ಇಷ್ಟು ವರ್ಷಗಳ ಕಾಲ ಉಳಿಯಲು ಸಾಧ್ಯವಾಗಿದೆ. ನನ್ನ ಪ್ರತಿಭೆಯೂ ಇದಕ್ಕೆ ಸೇತುವೆಯಾಗಿದೆ.

ಕಲಾವಿದರು ಎಂದಾಕ್ಷಣ ಕೇವಲ ನಟನೆಯ ಹಾದಿಯಲ್ಲಷ್ಟೇ ಸಾಗುತ್ತಾರೆ. ನನ್ನದು ಭಿನ್ನ ದಾರಿ. ನಾನು ಬರೀ ನಟನೆ ಮಾಡಿಲ್ಲ. ಚಿತ್ರ ವಿತರಕ ಆಗಿದ್ದೇನೆ. ಥಿಯೇಟರ್‌ಗಳನ್ನು ಗುತ್ತಿಗೆ ಪಡೆದು ಪ್ರದರ್ಶಕನಾಗಿರುವೆ. ನಾನು ಕಥೆಗಾರನೂ ಹೌದು. ಹಲವು ಚಿತ್ರಗಳಿಗೆ ಆರ್ಥಿಕ ಇಂಧನ ಒದಗಿಸಿ ನಿರ್ಮಾಪಕ ಕೂಡ ಆಗಿರುವೆ. ಅಲ್ಲಿನ ಲಾಭ– ನಷ್ಟದ ಅರಿವು ನನಗಿದೆ. ವೃತ್ತಿಬದುಕಿನಲ್ಲಿ ನಾನು ಅಂದುಕೊಂಡ ಮಟ್ಟಕ್ಕೆ ಬೆಳೆದಿಲ್ಲ. ಆದರೆ, ನಿಂತ ನೀರಾಗಿಲ್ಲ ಎನ್ನುವುದೇ ಸಮಾಧಾನ. ಇಂದಿಗೂ ನೀರಾಗಿ ಹರಿಯುತ್ತಿದ್ದೇನೆ. ರಭಸ ದಿಂದ ಹರಿಯುವ ನದಿಯಾಗಿಲ್ಲ. ‘ಕೆಂಪೇಗೌಡ 2’ ಸಿನಿಮಾ ಬಿಡುಗಡೆಯಾದ ಬಳಿಕ ಆ ರಭಸ ಬರಬಹುದು ಅನಿಸುತ್ತದೆ.

ನಾನು ಇಲ್ಲಿಯವರೆಗೂ ಕಾಮಿಡಿ ನಾಯಕನಾಗಿಯೇ ಕಾಣಿಸಿಕೊಂಡಿರುವೆ. ಕಾಮಿಡಿ ಹೀರೊ ಇಷ್ಟು ಸೀರಿಯಸ್‌ ಆದ ಪಾತ್ರದಲ್ಲಿ ನಟಿಸುವುದು ಸವಾಲು. ಈ ಚಿತ್ರದಲ್ಲಿ ನನ್ನ ಇಮೇಜ್‌ ಸಂಪೂರ್ಣ ಬದಲಾಗಿರುವುದು ದಿಟ. ಪ್ರೇಕ್ಷಕರ ತಲೆಯಲ್ಲಿ ಹಳೆಯ ಕೋಮಲ್‌ ಇದ್ದಾನೆ. ಈಗ ನಾನು ಆ ಕೋಮಲ್‌ ಅಲ್ಲ. ನನ್ನ ಹೊಸ ಇಮೇಜ್‌ ಪ್ರೇಕ್ಷಕರ ಮೇಲೆ ಪರಿಣಾಮ ಬೀರುವುದು ನಿಶ್ಚಿತ. ಚಿತ್ರದ ಪಾತ್ರಕ್ಕಾಗಿ 24 ಕೆಜಿ ತೂಕ ಇಳಿಸಿಕೊಂಡೆ. ನನ್ನ ಈ ಹೊಸ ಗೆಟಪ್‌ ನೋಡುಗರಿಗೆ ಇಷ್ಟವಾಗುತ್ತದೆಯೋ, ಇಲ್ಲವೋ ಎನ್ನುವ ಗೊಂದಲ ಕಾಡುತ್ತಿತ್ತು. ಆದರೆ, ಚಿತ್ರದ ಟ್ರೇಲರ್‌ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದು ನನಗೆ ಸಿಕ್ಕಿರುವ ದೊಡ್ಡಮಟ್ಟದ ಪ್ರಶಂಸೆ. ಶೀಘ್ರವೇ, ಆಡಿಯೊ ಮೂಲಕ ಜನರ ಮುಂದೆ ಬರುತ್ತೇನೆ.

ಇಲ್ಲಿಯವರೆಗೆ ಪೊಲೀಸರ ಕುರಿತು ಸಾವಿರಾರು ಚಿತ್ರಗಳು ಬಂದಿವೆ. ಪೊಲೀಸರದು ಅನುಪಮ ಸೇವೆ. ‘ಕೆಂಪೇಗೌಡ 2’ ಚಿತ್ರದ ಹೀರೊ ಪಾತ್ರ ಒಂದೇ ಕಲ್ಪನೆ ಅಷ್ಟೇ. ಕಾನೂನು ಮಾಡಿರುವುದು ಸಂವಿಧಾನ. ಪೊಲೀಸರು ಕಾನೂನು ರೂಪಿಸಿಲ್ಲ ಎನ್ನುವುದು ಸರಳ ಸತ್ಯ. ಪ್ರತಿಯೊಬ್ಬರು ಕಾನೂನಿನ ಚೌಕಟ್ಟಿನಲ್ಲಿಯೇ ಇರಬೇಕು. ಆ ಚೌಕಟ್ಟು ದಾಟಿ ಯಾರೇ ಆಚೆ ಹೋದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಹಕ್ಕು ಪೊಲೀಸ್‌ ಅಧಿಕಾರಿಗೆ ಇರುತ್ತದೆ ಎನ್ನುವುದೇ ಇದರ ತಿರುಳು.

ಅಂದಹಾಗೆ ‘ಕೆಂಪೇಗೌಡ’ ಮೊದಲ ಭಾಗ ರಿಮೇಕ್. ‘ಕೆಂಪೇಗೌಡ 2’ ಸ್ವಮೇಕ್. ಹೊಸ ಕಥೆ ಇದು. ಹೊಸ ಪ್ರಯತ್ನವೂ ಹೌದು. ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಪ್ರಮಾಣ ಪತ್ರ ಸಿಕ್ಕಿದ ಬಳಿಕ ಚಿತ್ರದ ಬಗ್ಗೆ ಮತ್ತಷ್ಟು ಮಾತನಾಡುತ್ತೇನೆ.

ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಚರ್ಚೆ ಮತ್ತು ವಿವಾದ ಹುಟ್ಟುಹಾಕಿರುವ ವಿಷಯವೊಂದು ಚಿತ್ರದಲ್ಲಿದೆ. ಇದರ ಬಗ್ಗೆ ಈಗ ಏನನ್ನೂ ಹೇಳಲಾರೆ. ಪೊಲೀಸ್‌ ಅಧಿಕಾರಿಯೊಬ್ಬ ಗಣ್ಯ ವ್ಯಕ್ತಿಯ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಮುಂದಾದಾಗ ಆತನಿಗೆ ಎಷ್ಟು ಒತ್ತಡ ಇರುತ್ತದೆ ಎನ್ನುವ ಸುತ್ತವೇ ಕಥೆ ಸಾಗುತ್ತದೆ. ಐಪಿಎಸ್‌ ಮಟ್ಟದಲ್ಲಿ ಪೊಲೀಸ್‌ ಅಧಿಕಾರಿಗಳಿಗೆ ಒತ್ತಡ ಇರುವುದು ಸಹಜ. ಇನ್ನು ಠಾಣಾಮಟ್ಟದಲ್ಲಿ ಇನ್‌ಸ್ಪೆಕ್ಟರ್‌ಗೂ ಒತ್ತಡ ಇರುವುದಿಲ್ಲವೇ? ಅದನ್ನು ಆತ ಹೇಗೆ ನಿಭಾಯಿಸುತ್ತಾನೆ ಎನ್ನುವುದೇ ಈ ಚಿತ್ರದ ಕಥೆ.

ಶ್ರೀಶಾಂತ್‌ ಆಕರ್ಷಣೆ

ಮಾಜಿ ಕ್ರಿಕೆಟಿಗ ಶ್ರೀಶಾಂತ್ ಇದರಲ್ಲಿ ನಟಿಸಿದ್ದಾರೆ. ಅವರು ಇಲ್ಲಿಯವರೆಗೆ ಐದಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಅವರದು ವಿಭಿನ್ನವಾದ ಪಾತ್ರ. ಮಾಮೂಲಿ ವಿಲನ್‌ ಆಗಿ ನಟಿಸಿಲ್ಲ. ಅವರು ಏಕೆ ವಿಲನ್‌ ಆಗುತ್ತಾರೆ ಎನ್ನುವುದೇ ಚಿತ್ರದ ಹೈಲೈಟ್‌.

ರಾಜ್ಯದ ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಸ್ಫೂರ್ತಿದಾಯಕವಾದ ಚಿತ್ರ ಇದು. ನಟ ಯೋಗಿ ಕೂಡ ನಟಿಸಿದ್ದಾರೆ. ಮುಂಬೈ, ಆಂಧ್ರಪ್ರದೇಶ, ತಮಿಳುನಾಡಿನ ಕಲಾವಿದರೂ ನಟಿಸಿದ್ದಾರೆ. ಕನ್ನಡ ಚಿತ್ರಗಳು ಕರ್ನಾಟಕದ ಬೌಂಡರಿ ದಾಟಿ ಹೋಗುತ್ತಿವೆ. ಪರಭಾಷೆಯ ಪ್ರೇಕ್ಷಕರಿಗೆ ನಾನು ಹೊಸಬ. ಅಲ್ಲಿನ ತಾರೆಯರು ಇದ್ದರೆ ಸಿನಿಮಾಕ್ಕೆ ಅನುಕೂಲ. ಹಾಗಾಗಿಯೇ, ಎಲ್ಲಾ ಭಾಷೆಯ ಕಲಾವಿದರನ್ನು ಹಾಕಿಕೊಂಡು ಚಿತ್ರ ಮಾಡಿದ್ದೇವೆ.

ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ, ಕೊಚ್ಚಿನ್, ಚೆನ್ನೈ, ಸಿಕ್ಕಿಂ, ಶ್ರೀಲಂಕಾ, ರಷ್ಯಾದಲ್ಲಿ ಶೂಟಿಂಗ್ ಮಾಡಿರುವುದೇ ಇದರ ವಿಶೇಷ. ಆಲ್‌ಟೆರೇನ್‌ ವೆಹಿಕಲ್‌ಗಳ ಬಗ್ಗೆ ಎಲ್ಲರಿಗೂ ಗೊತ್ತು. ಇವು ಮರಳುಗಾಡು ಅಥವಾ ಬೀಚಿನ ಮರಳಿನಲ್ಲಿ ಚಲಿಸುವ ವಾಹನಗಳು. ಒಂದು ವಾಹನದ ಬೆಲೆ ₹40 ಲಕ್ಷ. ಅಂತಹ 40 ವಾಹನಗಳನ್ನು ಬಳಸಿಕೊಂಡು ಚೇಜಿಂಗ್‌ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಈ ವೇಳೆ ನನಗೆ ಸಣ್ಣದೊಂದು ಅಪಘಾತವಾಗಿತ್ತು. ಅದರಿಂದ ಮೂರ್ನಾಲ್ಕು ತಿಂಗಳು ಶೂಟಿಂಗ್‌ ವಿಳಂಬವಾಯಿತು.

ನಿರ್ದೇಶನದ ಕನಸು

ನಾನು ಪರೋಕ್ಷನಾಗಿ ನಿರ್ದೇಶಕನಾಗಿಯೂ ಹಲವು ಚಿತ್ರಗಳಿಗೆ ಕೆಲಸ ಮಾಡಿರುವೆ. ಆದರೆ, ನನ್ನ ಹೆಸರು ಹಾಕಿಕೊಂಡು ಸಿನಿಮಾ ಮಾಡುವಾಗ ಸಾಕಷ್ಟು ಶ್ರಮ ಅಗತ್ಯ. ವಿಶ್ವದ ಶ್ರೇಷ್ಠ ನಿರ್ದೇಶಕರಾದ ಜೇಮ್ಸ್ ಕ್ಯಾಮರನ್‌, ಸ್ಟೀಫನ್‌ ಸ್ಟೀಲ್‌ಬರ್ಗ್‌, ರಾಜಮೌಳಿ ಅವರಂತೆ ಸಿನಿಮಾ ನಿರ್ದೇಶಿಸಬೇಕು ಎಂಬ ಆಸೆ ಇದೆ. ಇದಕ್ಕೆ ಹಣ ಹೂಡುವ ನಿರ್ಮಾಪಕರು ಸಿಗಬೇಕು.

ವಿಮರ್ಶಾತ್ಮಕವಾಗಿ ಹಾಗೂ ಕಮರ್ಷಿಯಲ್‌ ಆಗಿಯೂ ಯಶಸ್ಸು ಸಿಗುವಂತಹ ಸಿನಿಮಾ ಮಾಡುವ ಆಸೆ. ಕಮರ್ಷಿಯಲ್‌ ಸಿನಿಮಾ ಮಾಡುವಾಗ ಪ್ರತಿಯೊಬ್ಬರಿಗೂ ಹಕ್ಕಿರುತ್ತದೆ. ಆ ಚಿತ್ರದಲ್ಲಿ ಕ್ಯಾಮೆರಾಮನ್, ಸಾಹಸ ನಿರ್ದೇಶಕ, ಸಂಕಲನಕಾರ, ಸಂಭಾಷಣೆಕಾರನಿಗೂ ಹಕ್ಕಿರುತ್ತದೆ. ಆದರೆ, ವಿಮರ್ಶಾತ್ಮಕವಾಗಿ ಮೆಚ್ಚುಗೆ ‍ಪಡೆಯುವ ಸಿನಿಮಾ ಕಂಟೆಂಟ್‌ ಆಧಾರಿತವಾದುದು. ಇದರಲ್ಲಿ ನಿರ್ದೇಶಕ ಮತ್ತು ಅದರಲ್ಲಿ ನಟಿಸಿದ ಕಲಾವಿದರಿಗಷ್ಟೇ ಹಕ್ಕಿರುತ್ತದೆ. ನನ್ನ ಬಳಿ ಮೂರು ಕಥೆಗಳಿವೆ. ತ್ರೀಡಿ ಸಿನಿಮಾ ಮಾಡುವ ಆಸೆ ನನ್ನದು. ಆಸೆ ಇದ್ದರೆ ಸಾಲದು. ಈ ನನ್ನ ಆಸೆಗೆ ಗೊಬ್ಬರ ಹಾಕಿ ಬೆಳೆಸುವ ನಿರ್ಮಾಪಕರು ಇರಬೇಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT