ಶುಕ್ರವಾರ, ಮೇ 20, 2022
25 °C

ನೆನಪುಗಳಲ್ಲಿ ಇರುತ್ತೇನೆ.. ‘ಸಿನಿಮಾ ಪುರವಣಿ’ಯೊಂದಿಗೆ ನಟಿ ಮಿಲನ ನಾಗರಾಜ್ ಮಾತು

ಅಭಿಲಾಷ್‌ ಪಿ.ಎಸ್‌. Updated:

ಅಕ್ಷರ ಗಾತ್ರ : | |

(‘ಏನೂ ಪಾತ್ರ ಇಲ್ಲದೇ ಇರುವ 10 ಸಿನಿಮಾ ಮಾಡುವುದೂ ಒಂದೇ, ಒಳ್ಳೆಯ ಪಾತ್ರ ಇರುವ ಒಂದು ಸಿನಿಮಾ ಮಾಡುವುದೂ ಒಂದೇ’ ಎನ್ನುತ್ತಾ ಸಿನಿ ಪಯಣದಲ್ಲಾದ ಅನುಭವಗಳನ್ನು ‘ಸಿನಿಮಾ ಪುರವಣಿ’ಯೊಂದಿಗೆ ಹಂಚಿಕೊಂಡಿದ್ದಾರೆ ನಟಿ ಮಿಲನ ನಾಗರಾಜ್‌.)

*****

ಮಿಲನ ಅವರ ಸಿನಿ ಪಯಣದಲ್ಲಿ ಬಹುದೊಡ್ಡ ತಿರುವು ತಂದ ಸಿನಿಮಾ ‘ಲವ್‌ ಮಾಕ್ಟೇಲ್‌’. ಇದರ ನೆನಪು?

ಒಬ್ಬ ಕಲಾವಿದನಿಗೆ ಒಂದು ಸಿನಿಮಾದ ಗೆಲುವು ಬಹಳ ಪ್ರಮುಖ. ಈ ಗೆಲುವು ಸಿಕ್ಕಿದಾಗ ಮುಂದೆ ಕಥೆ, ಪಾತ್ರವನ್ನು ಆಯ್ದುಕೊಳ್ಳಲು ಬಹಳಷ್ಟು ಆಯ್ಕೆಗಳು ದೊರೆಯುತ್ತವೆ. ಗೆಲುವು ಸಿಗುವವರೆಗೂ ಸಿನಿಮಾ ಆಯ್ಕೆ ನಿಮ್ಮ ಕೈಯಲ್ಲಿ ಇರುವುದಿಲ್ಲ. ಹೀಗಾಗಿ ಎಲ್ಲ ರೀತಿಯಲ್ಲೂ ಕಲಾವಿದನಿಗೆ ಒಂದು ಗೆಲುವು ಮುಖ್ಯ. ‘ಲವ್‌ ಮಾಕ್ಟೇಲ್‌’ಗೂ ಮೊದಲೇ ನಾನು ಸಿನಿಮಾ ಮಾಡುತ್ತಿದ್ದೆ. ಆದರೆ ಗೆಲುವು ತಂದುಕೊಟ್ಟಿದ್ದು ‘ಲವ್‌ ಮಾಕ್ಟೇಲ್‌’. 

ಕೆಲವೊಮ್ಮೆ ಸಿನಿಮಾ ಗೆದ್ದರೂ, ಪಾತ್ರ ಗುರುತಿಸಲ್ಪಡುವುದಿಲ್ಲ. ಮಹಿಳಾ ಪಾತ್ರವೊಂದು ಈ ಮಟ್ಟಿನ ಗುರುತು ಪಡೆದುಕೊಳ್ಳುವುದು ದೊಡ್ಡ ವಿಚಾರ. ಹೀರೊಯಿನ್‌ ಆಗಿ ಹಲವು ಸಿನಿಮಾ ಮಾಡಿದರೂ, ಒಂದು ಪಾತ್ರದ ಮುಖಾಂತರ ಜನರು ಗುರುತಿಸುವುದಿಲ್ಲ. ಆದರೆ, ಲವ್‌ ಮಾಕ್ಟೇಲ್‌ ಬಳಿಕ ಸಾಮಾಜಿಕ ಜಾಲತಾಣದಲ್ಲಿರಲಿ ಅಥವಾ ವೈಯಕ್ತಿಕವಾಗಿ ಭೇಟಿಯಾದಾಗಲೂ ನನ್ನನ್ನು ಜನ ‘ನಿಧಿಮಾ’ ಎಂದೇ ಗುರುತಿಸುತ್ತಾರೆ. ಸಿನಿ ಪಯಣ ಆರಂಭಿಸಿದಾಗ ‘ಬೃಂದಾವನ’ ಸಿನಿಮಾದ ನಂತರ ‘ಮಧು’ ಎಂದು ಗುರುತಿಸುತ್ತಿದ್ದರು. ಇದನ್ನು ‘ನಿಧಿ’ ಪಾತ್ರ ಮೀರಿಸಿದೆ. ಇದು ನನಗೆ ಖುಷಿ, ಅದಕ್ಕಿಂತ ಹೆಚ್ಚಾಗಿ ಸಂತೃಪ್ತಿ ತಂದ ವಿಚಾರ. ‘ಲವ್‌ ಮಾಕ್ಟೇಲ್‌’ ಹಲವು ರೀತಿಯಲ್ಲಿ ನನಗೆ ಸ್ಪೆಷಲ್‌. ನಮ್ಮದೇ ಪ್ರೊಡಕ್ಷನ್‌ನ ಮೊದಲ ಸಿನಿಮಾ. ಜೊತೆಗೆ ಈ ಮಟ್ಟಿಗೆ ಹಿಟ್‌ ಆಗುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ.

ಫೆ.11ಕ್ಕೆ ಲವ್‌ ಮಾಕ್ಟೇಲ್‌ ಎರಡನೇ ಭಾಗದ ರಿಲೀಸ್‌ ಆಗುತ್ತಾ? ಅಥವಾ ಬದಲಾವಣೆ ಏನಾದರೂ ಇದೆಯೇ?

2020ರಲ್ಲಿ, ಮೊದಲ ಲಾಕ್‌ಡೌನ್‌ನ ಹಿಂದಿನ ದಿನದವರೆಗೂ ಲವ್‌ ಮಾಕ್ಟೇಲ್ ಮೊದಲ ಭಾಗ ಸಿನಿಮಾ ಹೌಸ್‌ಫುಲ್‌ನಲ್ಲಿ ನಡೆಯುತ್ತಿತ್ತು. ನಂತರ ನಾವು ಸಿನಿಮಾವನ್ನು ಒಟಿಟಿ ವೇದಿಕೆ ಅಮೆಜಾನ್‌ ಪ್ರೈಂಗೆ ನೀಡಿದೆವು. ಚಿತ್ರಮಂದಿರಗಳು ಮತ್ತೆ ತೆರೆದಾಗ ರಿರಿಲೀಸ್‌ ಮಾಡಿದ್ದೆವು. ಒಟಿಟಿಯಲ್ಲಿ ಬಿಡುಗಡೆಯಾದ ಬಳಿಕ ಎರಡ್ಮೂರು ತಿಂಗಳು ಸಾಮಾಜಿಕ ಜಾಲತಾಣದಲ್ಲಿ ಪ್ರೇಕ್ಷಕರು ಚಿತ್ರದ ಕುರಿತು ವಿಮರ್ಶೆ, ಅಭಿಪ್ರಾಯ ಬರೆಯುತ್ತಿದ್ದರು.

ಎರಡನೇ ಭಾಗವನ್ನು ಫೆ.11ಕ್ಕೆ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದೆವು. ಆದರೆ ಅಂದು ಬಿಡುಗಡೆ ಅಸಾಧ್ಯ ಎಂದು ತೋರುತ್ತಿದೆ. ಏಕೆಂದರೆ, ಈಗಿನ ಪರಿಸ್ಥಿತಿಯಲ್ಲಿ ಪ್ರತಿ ಕುಟುಂಬದಲ್ಲೂ ಒಬ್ಬರಲ್ಲ ಒಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮುಂದಿನ 15 ದಿನದಲ್ಲಿ ಪರಿಸ್ಥಿತಿ ಸರಿಹೋಗಬಹುದು ಎಂದುಕೊಂಡಿದ್ದೇವೆ. ಆದರೆ ಫೆ.11ಕ್ಕೆ ಸಿನಿಮಾ ಬಿಡುಗಡೆ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಸದ್ಯದಲ್ಲೇ ಮತ್ತೊಂದು ದಿನಾಂಕ ಘೋಷಿಸುತ್ತೇವೆ. ಎರಡೆರಡು ದಿನಾಂಕ ಘೋಷಿಸಿ ಪ್ರೇಕ್ಷಕರನ್ನು ಗೊಂದಲಕ್ಕೆ ದೂಡುವುದಿಲ್ಲ. ‌ಮೊದಲ ಭಾಗ ಬಿಡುಗಡೆ ಮಾಡುವಾಗಲೂ ಲಾಭ, ಸ್ಪರ್ಧೆಯ ಬಗ್ಗೆ ಯೋಚಿಸಿರಲಿಲ್ಲ. ಗೆಲುವು ನಮಗೆ ಕಾಣಿಸುತ್ತಿತ್ತು. ಇಂದು ಅದೇ ಕಾಣಿಸುತ್ತಿದೆ. ಚಿತ್ರಮಂದಿರದಲ್ಲೇ ಚಿತ್ರ ಬಿಡುಗಡೆಯಾಗಲಿದೆ. ಚಿತ್ರಮಂದಿರಗಳಲ್ಲಿ ಶೇ 100 ಆಸನ ಭರ್ತಿಗೆ ಅವಕಾಶಕ್ಕಾಗಿ ಕಾಯುತ್ತೇವೆ. 

ಕ್ರಿಸ್ಮಿ ಜೋಡಿ ಸಿನಿಮಾ ವಿಚಾರದಲ್ಲಿ ಏನೇನು ಚರ್ಚಿಸುತ್ತೆ?

ಕನ್ನಡ ಚಿತ್ರರಂಗದಲ್ಲಿ ಕೆಲವು ವಿಭಾಗದಲ್ಲಿ ಮಹಿಳೆಯರ ಪ್ರಾತಿನಿಧ್ಯವಿಲ್ಲ. ಬರವಣಿಗೆ, ತಾಂತ್ರಿಕ ವಿಭಾಗ ಎಲ್ಲೆಲ್ಲೂ ಶೇ 99 ಪುರುಷರೇ. ಲವ್‌ ಮಾಕ್ಟೇಲ್‌ ಸಿನಿಮಾವನ್ನು ನಾವಿಬ್ಬರೂ ಸೇರಿ ಬರೆದೆವು. ಕೃಷ್ಣ ನಿರ್ದೇಶನದಲ್ಲಿ ಗುರುತಿಸಿಕೊಂಡಿದ್ದಾರೆ. ಬರವಣಿಗೆ ವಿಚಾರಕ್ಕೆ ಬಂದಾಗ, ಪುರುಷನೊಬ್ಬ ಸಿನಿಮಾ ಬರೆದರೆ ಆತನ ದೃಷ್ಟಿಕೋನದಲ್ಲಿ ಸಾಗುತ್ತದೆ. ಅದೇ ಮಹಿಳೆಯೂ ಬರವಣಿಗೆಯಲ್ಲಿ ಸೇರಿಕೊಂಡಾಗ ಇಡೀ ಸಿನಿಮಾವೇ ಬದಲಾಗುತ್ತದೆ. ಚರ್ಚೆ ಮಾಡಿ ಬರೆದಿರುವುದಕ್ಕೆ ನಮಗೆ ಗೆಲುವು ಸಿಕ್ಕಿತು. ಸಿನಿಮಾ ಚರ್ಚೆಗೇ ಎಂದು ನಾವು ಕುಳಿತುಕೊಂಡಿಲ್ಲ. ಎಲ್ಲಿಗೋ ಪ್ರಯಾಣ ಮಾಡುವಾಗ, ಸುಮ್ಮನೇ ಕುಳಿತಿರುವಾಗ ಸಿನಿಮಾ ಚರ್ಚೆ ಮಾಡುತ್ತೇವೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಎರಡನೇ ಭಾಗದ ಚರ್ಚೆಯನ್ನು ಫೋನ್‌ನಲ್ಲೇ ಮಾಡಿದ್ದೆವು. ಸುಮ್ಮನೇ ಕುಳಿತು ಚರ್ಚೆ ಮಾಡುವಾಗ ಹುಟ್ಟಿಕೊಂಡಿದ್ದು ಎರಡನೇ ಭಾಗದ ಕಥೆ. ನನಗೆ, ಎರಡನೇ ಭಾಗದ ಬದಲು ಹೊಸ ಸಿನಿಮಾ ಮಾಡುವ ಆಸೆ ಇತ್ತು. ಈಗಾಗಲೇ ಹಿಟ್‌ ಆಗಿರುವ ಸಿನಿಮಾದ ಎರಡನೇ ಭಾಗ ಮಾಡುವುದು ಸವಾಲು. ಆದರೆ ಕೃಷ್ಣ ಇದನ್ನು ಸ್ವೀಕರಿಸಲು ಸಜ್ಜಾದರು. ಸಿನಿಮಾಗೆ ಯೋಗ್ಯತೆ ಇದ್ದರೆ ಗೆಲ್ಲುತ್ತದೆ. ಇಲ್ಲದೇ ಹೋದರೆ ಸೋಲುತ್ತದೆ ಎನ್ನುವುದು ಅವರ ನಂಬಿಕೆ. ಬರೆಯುವ ಸಾಮರ್ಥ್ಯವನ್ನು ನಂಬಿ, ಕಥೆ ಬರೆದೆವು. ಕಥೆ ಬರೆದ ಮೇಲೆ ಇಷ್ಟವಾಗದೇ ಹೋದರೆ ಸಿನಿಮಾ ಮಾಡುವುದು ಬೇಡ ಎಂದುಕೊಂಡಿದ್ದೆವು.

ಎರಡನೇ ಭಾಗದಲ್ಲಿ ಮಿಲನ ನಿರ್ಮಾಪಕಿ ಅಷ್ಟೆನಾ?

ಒಂದು ಪಾತ್ರ ಇನ್ನಿಲ್ಲವಾದೂ, ಆ ಪಾತ್ರವನ್ನು ಮೊದಲ ಭಾಗದಲ್ಲಿ ಅಷ್ಟು ಆಳವಾಗಿ ತೋರಿಸಿದ್ದ ಕಾರಣ ಅದು ನೆನಪಿನಲ್ಲಿ ಬಂದೇ ಬರುತ್ತದೆ. ಹೀಗಾಗಿ ನೆನಪಿನಲ್ಲಿ ಇರುತ್ತೇನೆ. ಆದರೆ, ಈ ಬಾರಿ ನಿರ್ಮಾಪಕಿಯಾಗಿ ಜಾಸ್ತಿ ಕೆಲಸ. ಈಗಾಗಲೇ ಒಂದು ಹಿಟ್ ಸಿನಿಮಾವನ್ನು ನೀಡಿರುವುದರಿಂದ ಹಾಗೂ ಜನರೇ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿರುವುದರಿಂದ ಕೆಲಸ ಕೊಂಚ ಸುಲಭವಾಗಿದೆ. ಕೃಷ್ಣ ಜೊತೆಗೆ ಬೆನ್ನೆಲುಬಾಗಿ ಇದ್ದೇ ಇರುತ್ತಾರೆ.

ಸಿನಿಮಾ ರೇಸ್‌ನಲ್ಲಿ ಕೃಷ್ಣ ನಿಮಗಿಂತ ಮುಂದಿದ್ದಾರೆ. ಮಿಲನ ಓಡ್ತಿಲ್ವಾ?

(ನಗುತ್ತಾ...)ನಮ್ಮಿಬ್ಬರಿಗೆ ಗೆಲುವು ತಂದುಕೊಟ್ಟಿದ್ದು ಒಂದೇ ಸಿನಿಮಾ. ಹಾಗೆ ನೋಡಿದರೆ ಕೃಷ್ಣನ ‘ಆದಿ’ ಪಾತ್ರಕ್ಕಿಂತ ನನ್ನ ‘ನಿಧಿಮಾ’ ಪಾತ್ರವೇ ಹೆಚ್ಚು ಜನಪ್ರಿಯವಾಗಿದ್ದು. ನಾನೀಗ ಹೇಳುತ್ತಿರುವುದು ತಪ್ಪೋ ಸರಿಯೋ ಗೊತ್ತಿಲ್ಲ. ಚಿತ್ರರಂಗದಲ್ಲಿ ಹಾಗೆಯೇ. ಹುಡುಗರಿಗೆ ಬರುವಷ್ಟು ಆಯ್ಕೆಗಳು ಹುಡುಗೀರಿಗೆ ಇಲ್ಲ. ಜೊತೆಗೆ ಒಂದು ಪಾತ್ರ ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ನಾನು ಹೆಚ್ಚು ಗಮನಹರಿಸುತ್ತೇನೆ. ನಾನೆಂದೂ ಸಿನಿಮಾ ಸಂಖ್ಯೆಯ ಹಿಂದೆ ಬಿದ್ದಿಲ್ಲ. ಕಥೆಗಳನ್ನು ಕೇಳುತ್ತಿದ್ದೇನೆ. ಒಂದು ಮೌಲ್ಯವಿರುವ ಪಾತ್ರಕ್ಕೆ ಕಾಯುತ್ತಿದ್ದೇನೆ. ಹುಡುಗಿಯ ಪಾತ್ರಕ್ಕೇ ಹೆಚ್ಚು ಪ್ರಾಮುಖ್ಯತೆ ಇರುವ ಸಿನಿಮಾ ಕಥೆಗಳು ಬರುವುದೇ ಕಮ್ಮಿ. ಅವಕಾಶಗಳು ಬರುತ್ತಿವೆ. ಆದರೆ, ಮಾಡಲೇಬೇಕು ಎನ್ನುವಂಥ ಪಾತ್ರ ಬರುತ್ತಿಲ್ಲ. ಏನೂ ಪಾತ್ರ ಇಲ್ಲದೇ ಇರುವ 10 ಸಿನಿಮಾ ಮಾಡುವುದೂ ಒಂದೇ, ಒಳ್ಳೆಯ ಪಾತ್ರ ಇರುವ ಒಂದು ಸಿನಿಮಾ ಮಾಡುವುದೂ ಒಂದೇ ಎನ್ನುವುದು ಇಷ್ಟು ವರ್ಷಗಳಲ್ಲಿ ನನಗೆ ಅರ್ಥವಾಗಿರುವ ವಿಷಯ.

ಪೃಥ್ವಿ ಅವರ ಜೊತೆಗಿನ ‘ಫಾರ್‌ ರಿಜಿಸ್ಟ್ರೇಷನ್‌’ ಎಲ್ಲಿಯವರೆಗೆ ಬಂತು? 

ನನಗೆ ಬಹಳ ಇಷ್ಟವಾದ ಪಾತ್ರ ‘ಫಾರ್‌ ರಿಜಿಸ್ಟ್ರೇಷನ್‌’ ಸಿನಿಮಾದಲ್ಲಿ ಸಿಕ್ಕಿದೆ. ‘ದಿಯಾ’ದ ಪೃಥ್ವಿ ಅಂಬರ್‌ ಹಾಗೂ ನನ್ನ ಜೋಡಿ ತೆರೆ ಮೇಲೆ ಒಂದಾಗಬೇಕು ಎಂದು ಪ್ರೇಕ್ಷಕರೂ ಕೇಳುತ್ತಿದ್ದರು. ಜನಕ್ಕೆ ಈ ಬಗ್ಗೆ ಕುತೂಹಲವೂ ಇದೆ. ಚಿತ್ರದ ಶೇ 50ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. 15–20 ದಿನದ ಚಿತ್ರೀಕರಣವಿದೆ. 2022ರಲ್ಲೇ ಈ ಚಿತ್ರವು ತೆರೆಕಾಣಲಿದೆ. ಇವತ್ತಿನ ಯುವ ಜನತೆಗೆ ಬಹಳ ಹತ್ತಿರವಾಗುವ ಪಾತ್ರ ನನ್ನದು. ಸ್ವತಂತ್ರವಾಗಿರುವ ಇಂದಿನ ಹುಡುಗಿಯರು ತೆಗೆದುಕೊಳ್ಳುವ ದಿಟ್ಟ ನಿರ್ಧಾರಗಳನ್ನು ಕುಟುಂಬದವರು ಹೇಗೆ ಸ್ವೀಕರಿಸುತ್ತಾರೆ ಎನ್ನುವ ದಿಕ್ಕಿನಲ್ಲಿ ಕಥೆ ಸಾಗುತ್ತದೆ. 

ಹೊಸ ಪ್ರಾಜೆಕ್ಟ್ಸ್‌ ಒಪ್ಪಿಕೊಂಡಿದ್ದೀರಾ?

ಕಥೆಗಳನ್ನು ಕೇಳುತ್ತಿದ್ದೇನೆ. ಹಾರರ್‌, ಕಮರ್ಷಿಯಲ್‌ ಸಿನಿಮಾಗಳು ಬಂದವು. ಆದರೆ ಇದನ್ನು ನಾನು ಒಪ್ಪಿಕೊಳ್ಳಲಿಲ್ಲ. ಕೆಲ ಸಿನಿಮಾದ ಮಾತುಕತೆ ನಡೆಯುತ್ತಿದೆ. ಇದರಲ್ಲಿ ಕೆಲವೊಂದನ್ನು ನಾನು ಒಪ್ಪಿಕೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು