ಭಾನುವಾರ, ಮೇ 16, 2021
22 °C

ಐಶಾನಿ ಶೆಟ್ಟಿ ಕಟ್ಟಿದ್ದಾರೆ ಗೆಜ್ಜೆಪಟ್ಟಿ!

ಅಭಿಲಾಷ್‌ ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

‘ವಾಸ್ತು ಪ್ರಕಾರ’ ಚಂದನವನಕ್ಕೆ ಕಾಲಿಟ್ಟ ಐಶಾನಿ ಶೆಟ್ಟಿ, ಇದೀಗ ‘ಹೊಂದಿಸಿ ಬರೆಯಿರಿ’ ಎನ್ನುತ್ತಿದ್ದಾರೆ. ಜೊತೆಗೆ ‘ಧರಣಿ ಮಂಡಲ ಮಧ್ಯದೊಳಗೆ’ ಐಶಾನಿ ಪ್ರವೇಶಿಸಿದ್ದು, ಹಿಂದೆ ಕಾಣಿಸಿಕೊಳ್ಳದಂತಹ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದೆಲ್ಲದರ ಕುರಿತು ‘ಸಿನಿಮಾ ಪುರವಣಿ’ ಜೊತೆ ಅವರು ಮಾತಿಗಿಳಿದರು...

‘ಗಣಿ B.Com ಪಾಸ್‌’ ಆದ ಮೇಲೆ ಬ್ರೇಕ್‌ ತೆಗೆದುಕೊಂಡ್ರಾ?

ಹಾಗೇನಿಲ್ಲ! ಈ ಚಿತ್ರದ ಬಳಿಕ ‘ಹೊಂದಿಸಿ ಬರೆಯಿರಿ’ ಹಾಗೂ ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರದ ಚಿತ್ರೀಕರಣದಲ್ಲಿ ನಾನು ತೊಡಗಿಸಿಕೊಂಡಿದ್ದೆ. ಕೋವಿಡ್‌ ಬಂದ ಕಾರಣ, ಎಲ್ಲ ಚಿತ್ರಗಳ ಶೂಟಿಂಗ್‌ ನಿಂತಿತ್ತು. 2020 ಸೆಪ್ಟೆಂಬರ್‌ನಿಂದ ಮತ್ತೆ ಈ ಚಿತ್ರಗಳ ಚಿತ್ರೀಕರಣ ಆರಂಭವಾಯಿತು. ‘ಹೊಂದಿಸಿ ಬರೆಯಿರಿ’ ಶೂಟಿಂಗ್‌ ಮುಗಿದಿದ್ದು, ಇದರ ಡಬ್ಬಿಂಗ್‌ ನಡೆಯುತ್ತಿದೆ. ಇನ್ನೊಂದು ವಾರದಲ್ಲಿ ಇದು ಪೂರ್ಣಗೊಳ್ಳಲಿದೆ. ಮತ್ತೊಂದು ಚಿತ್ರದ ಚಿತ್ರೀಕರಣ ಸದ್ಯ ನಡೆಯುತ್ತಿದೆ.

ಮತ್ತೆ ಮಿನಿ ಲಾಕ್‌ಡೌನ್‌ ಬಂದಿದೆ? ಕಳೆದ ಲಾಕ್‌ಡೌನ್‌ ಏನ್ಮಾಡಿದ್ರಿ?

ಮೊದಲ ಲಾಕ್‌ಡೌನ್‌ ಹೊಸದಾಗಿತ್ತು. ಎಲ್ಲ ಚಿತ್ರದ ಚಿತ್ರೀಕರಣ ನಿಂತಿತ್ತು. ಬಹುತೇಕ ಜನರು ಇಂಟರ್‌ನೆಟ್‌ನಲ್ಲಿ ಟ್ರೆಂಡ್‌ ಆಗಿರುವುದನ್ನು ತಾವೂ ಮಾಡಿದರು. ಈ ಬಾರಿ ನಾವೆಲ್ಲರೂ ಕೆಲಸದಲ್ಲೇ ತಲ್ಲೀನರಾಗಿದ್ದೇವೆ. ಪರಿಸ್ಥಿತಿಗೆ ಹೇಗೆ ಹೊಂದಿಕೊಂಡು ಹೋಗಬೇಕು ಎನ್ನುವುದನ್ನು ಕಲಿತಿದ್ದೇವೆ. ಇದೀಗ ನಾನು ಭರತನಾಟ್ಯ ಹಾಗೂ Jazz ಹೀಗೆ ಎರಡು ಮಾದರಿಯ ನೃತ್ಯ ಕಲಿಯುತ್ತಿದ್ದೇನೆ. ಈ ಕಲಿಕೆ ಸಿನಿಮಾಗಾಗಿಯೂ ಹೌದು ಮತ್ತು ನನ್ನ ವೈಯಕ್ತಿಕ ಆಸಕ್ತಿಯಿಂದಲೂ ಹೌದು.   

‘ಧರಣಿ ಮಂಡಲ ಮಧ್ಯದೊಳಗೆ’ ಐಶಾನಿ ಹೇಗೆ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ?  

ಚಿತ್ರದಲ್ಲಿ ನನ್ನದು ‘ಶ್ರೇಯ’ ಎನ್ನುವ ಅಸಾಂಪ್ರದಾಯಿಕ ಹುಡುಗಿಯ ಪಾತ್ರ. ಚಿತ್ರದ ಕ್ಯಾರೆಕ್ಟರ್‌ ಲುಕ್‌ ಪೋಸ್ಟರ್‌ನಲ್ಲಿ ಉಲ್ಲೇಖಿಸಿರುವಂತೆ ‘She's a wild one... Just let her be’, ಆಕೆ ತುಂಬಾ ಬೋಲ್ಡ್‌ ಹುಡುಗಿ. ಯಾರನ್ನೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಧೈರ್ಯ ಹೆಚ್ಚು. ತನಗೆ ಹೇಗೆ ಬೇಕೋ ಹಾಗೆ ಇರುತ್ತಾಳೆ. ಸಣ್ಣ ವಯಸ್ಸಿನಲ್ಲಿ ನಡೆದ ಘಟನೆ ಕಾರಣ ಅವಳು ಕೆಟ್ಟ ಚಟಗಳ ವ್ಯಸನಿಯಾಗಿರುತ್ತಾಳೆ. ಈ ಚಿತ್ರ ಕ್ರೈಂ ಡ್ರಾಮಾ. ನವೀನ್‌ ಶಂಕರ್‌ ಅವರು ಈ ಚಿತ್ರದ ನಾಯಕ. ಪ್ರೇಮಕಥೆ ಜೊತೆ, ನಡೆಯುವ ಘಟನೆಯೊಂದರೊಳಗೆ ಆಕೆ ಹೇಗೆ ಸಿಲುಕಿಕೊಳ್ಳುತ್ತಾಳೆ ಎನ್ನುವುದು ಚಿತ್ರದ ಸಾರಾಂಶ. ಈ ಹಿಂದಿನ ಎಲ್ಲ ಸಿನಿಮಾಗಳನ್ನೂ ನಟನೆಗೆ ಪ್ರಾಮುಖ್ಯತೆ ಇತ್ತು. ಈ ಸಿನಿಮಾದಲ್ಲಿ ತುಂಬಾ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತೇನೆ. ಈ ಹಿಂದೆ ಐಶಾನಿಯನ್ನು ಜನರು ಹೀಗೆ ನೋಡಿಲ್ಲ. ನಿರ್ದೇಶಕರಾದ ಶ್ರೀಧರ್‌ ಶಿಕಾರಿಪುರ ಅವರು ನನಗೇ ಎಂದು ಕಥೆ ಬರೆದಿದ್ದಾರೆ. ನಾನು ಈ ಪಾತ್ರವನ್ನು ಮಾಡಬಲ್ಲೆ ಎನ್ನುವ ನಂಬಿಕೆ ಅವರಲ್ಲಿ ಇತ್ತು. ಈ ಚಿತ್ರವು ನನಗೆ ಬೇರೆ ರೀತಿ ಸವಾಲಾಗಿತ್ತು.      

‘ಹೊಂದಿಸಿ ಬರೆಯಿರಿ’ ಯಾವಾಗ ತೆರೆಗೆ?

ಇದು ಪ್ರೇಮಕಥೆ ಮತ್ತು ನಾಲ್ಕೈದು ಸ್ನೇಹಿತರ ನಡುವೆ ನಡೆಯುವ ಕಥೆ. ಎಲ್ಲರೂ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು. ಓದುವುದರಲ್ಲಿ ತುಂಬಾ ಆಸಕ್ತಿ ಇರುವ, ವಿಜ್ಞಾನಿಯಾಗುವ ಕನಸು ಕಾಣುತ್ತಿರುವ ಹುಡುಗಿಯ ಪಾತ್ರ ನನ್ನದು. ಶಿಕ್ಷಣದ ಮುಂದಿನ ಜೀವನ ಸಿನಿಮಾದಲ್ಲಿದೆ. ಎಲ್ಲರೂ ಮೂರು ಲುಕ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದೇವೆ. ಮೇ–ಜೂನ್‌ಗೆ ಸಿನಿಮಾ ಬಿಡುಗಡೆ ಮಾಡುವ ಚಿಂತನೆ ಇತ್ತು. ಇದೀಗ ಮತ್ತೆ ಚಿತ್ರಮಂದಿರಗಳು →ಮುಚ್ಚಿರುವುದರಿಂದ →ಏನಾಗುತ್ತದೆಯೋ ತಿಳಿದಿಲ್ಲ. ಎಲ್ಲರೂ ಕಷ್ಟಪಟ್ಟು ಸಿನಿಮಾ ಮಾಡಿರುತ್ತಾರೆ. ಇದಕ್ಕೆ ಸೂಕ್ತ ಪ್ರತಿಫಲ ದೊರೆಯಬೇಕು.  

ಕರಾವಳಿ ನಿಮ್ಮ ಮೂಲ. ತುಳು ಭಾಷೆಯ ಸಿನಿಮಾಗಳಲ್ಲಿ ಇನ್ನೂ ಕಾಣಿಸಿಕೊಂಡಿಲ್ಲವಲ್ಲ ಏಕೆ?

ನಾನು ಬೆಳೆದಿದ್ದು ಬೆಂಗಳೂರಿನಲ್ಲಿ. ಅಜ್ಜಿ ಮನೆ ಮಂಗಳೂರು ಕಡೆ. ನನಗೆ ತುಳು ಭಾಷೆ ಚೆನ್ನಾಗಿ ಬರುತ್ತದೆ. ಊರಿನ ಕಡೆ ರಜೆ ಇದ್ದಾಗ ಹೋಗುತ್ತೇನೆ. ತುಳು ಭಾಷೆ ಸಿನಿಮಾ ಕಡೆ ನಾನು ಗಮನಹರಿಸಿಲ್ಲ. ಚಂದನವನದಲ್ಲೇ ನನಗೆ ಒಂದು ಸ್ಥಾನವಿದೆ ಹಾಗೂ ಹೆಚ್ಚಿನ ಅವಕಾಶಗಳು ದೊರೆಯುತ್ತಿವೆ. 

ಮುಂದಿನ ಪ್ರೊಜೆಕ್ಟ್‌ಗಳು ಯಾವುದು?

ಒಂದೆರಡು ಸಿನಿಮಾಗಳ ಮಾತುಕತೆ ನಡೆಯುತ್ತಿದೆ. ಒಂದು ಸ್ಕ್ರಿಪ್ಟ್‌ ಬರೆಯುತ್ತಿದ್ದೇನೆ. ಇದು ಪೂರ್ಣಗೊಳ್ಳಲು ಒಂದು ವರ್ಷ, ಎರಡು ವರ್ಷ ಹಿಡಿಯಬಹುದು. ಆದರೆ, ನನ್ನ ಮೊದಲ ಆಯ್ಕೆ ನಟನೆ. ಸಮಯವಿದ್ದರಷ್ಟೇ ನಿರ್ದೇಶನ ಮಾಡುತ್ತೇನೆ. ಬೇರೆ ಭಾಷೆಗಳಿಂದಲೂ ಆಫರ್‌ ಬಂದಿದೆ. ಆದರೆ ನನಗೆ ಕಥೆ, ತಂಡ ಇಷ್ಟವಾದರೆ ಮಾತ್ರ ಬೇರೆ ಭಾಷೆಗಳಲ್ಲೂ ನಟಿಸುತ್ತೇನೆ.   

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು