ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಂಗಬಾದ್‌ ಉದ್ಯಮಿ ಜೊತೆ ಕಾಜಲ್‌ ಅಗರ್‌ವಾಲ್‌ ಮದುವೆ?

Last Updated 23 ಜೂನ್ 2020, 9:30 IST
ಅಕ್ಷರ ಗಾತ್ರ

ನಟಿ ಕಾಜಲ್‌ ಅಗರ್‌ವಾಲ್ ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿ. ಆಕೆ ಬಾಲಿವುಡ್‌ ಮೂಲಕ ಬೆಳ್ಳಿತೆರೆಗೆ ಅಡಿ ಇಟ್ಟರೂ ಯಶಸ್ಸಿನ ಉತ್ತುಂಗಕ್ಕೇರಿದ್ದು ಟಾಲಿವುಡ್‌ನಲ್ಲಿ. ಮೊದಲ ಚಿತ್ರ ಹಿಂದಿಯ ‘ಕ್ಯುನ್! ಹೋ ಗಯಾ ನಾ’ ಆಕೆಗೆ ಅಷ್ಟೊಂದು ಹೆಸರು ತಂದುಕೊಡಲಿಲ್ಲ. ಹಾಗೆಂದು ಸುಮ್ಮನೆ ಕೂರುವ ಜಾಯಮಾನ ಆಕೆಯದ್ದಲ್ಲ. ಟಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ ಆಕೆಗೆ ‘ಲಕ್ಷ್ಮಿ ಕಲ್ಯಾಣಂ’ ಚಿತ್ರ ಭದ್ರನೆಲೆ ಒದಗಿಸಿತು. ಆ ಸಿನಿಮಾದ ಬಳಿಕ ಆಕೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದು ಉಂಟು. ತಮಿಳಿನಲ್ಲಿಯೂ ಹಲವು ಸೂಪರ್‌ ಹಿಟ್‌ ಚಿತ್ರಗಳಲ್ಲಿ ನಟಿಸಿ ಅಲ್ಲಿನ ಪ್ರೇಕ್ಷಕರಿಂದಲೂ ಸೈ ಎನಿಸಿಕೊಂಡಿದ್ದಾರೆ.

ಈಗ ಕಾಜಲ್ 35 ವರ್ಷಕ್ಕೆ ಕಾಲಿಟ್ಟಿದ್ದಾರೆ. ಮತ್ತೊಂದೆಡೆ ಆಕೆಯ ಮದುವೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಗಾಸಿಪ್‌ ಹಬ್ಬುವುದು ಸರ್ವೇ ಸಾಮಾನ್ಯ. ಕಳೆದ ವರ್ಷ ಆಕೆ ತಾನು ಶೀಘ್ರವೇ ಮದುವೆಯಾಗುತ್ತಿದ್ದೇನೆ ಎಂದು ಘೋಷಿಸಿದ್ದು ದೊಡ್ಡ ಸುದ್ದಿಯಾಗಿತ್ತು. ತನ್ನನ್ನು ಚೆನ್ನಾಗಿ ನೋಡಿಕೊಳ್ಳುವ ಹಾಗೂ ಅಧ್ಯಾತ್ಮದ ಒಲವಿರುವ ಹುಡುಗನ ಕೈಹಿಡಿಯಲು ನಾನು ಸಿದ್ಧ ಎಂದಿದ್ದರು.

ಪ್ರಸ್ತುತ ಆಕೆ ಔರಂಗಬಾದ್‌ ಮೂಲದ ಪ್ರಸಿದ್ಧ ಉದ್ಯಮಿಯೊಬ್ಬರ ಜೊತೆಗೆ ಸಪ್ತಪದಿ ತುಳಿಯಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಟಾಲಿವುಡ್‌ ಪಡಸಾಲೆಯಿಂದಲೇ ಹೊರಬಿದ್ದಿದೆ. ಶೀಘ್ರವೇ, ಆಕೆ ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂಬ ಸುದ್ದಿಯಿದೆ. ಆದರೆ, ಈ ಸುದ್ದಿಯ ಬಗ್ಗೆ ಕಾಜಲ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕಾಜಲ್‌ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಕೊರಟಾಲ ಶಿವ ನಿರ್ದೇಶನದ ಚಿರಂಜೀವಿ ನಟನೆಯ ತೆಲುಗಿನ ಬಹುನಿರೀಕ್ಷಿತ ‘ಆಚಾರ್ಯ’ ಚಿತ್ರದಲ್ಲೂ ಆಕೆ ನಟಿಸುತ್ತಿದ್ದಾರೆ. ತೆಲುಗು ಮತ್ತು ಇಂಗ್ಲಿಷ್‌ನಲ್ಲಿ ನಿರ್ಮಾಣವಾಗುತ್ತಿರುವ ಬೃಹತ್‌ ಐಟಿ ಹಗರಣದ ಸುತ್ತ ಕಥೆ ಹೆಣೆದ ‘ಮೊಸಗಾಳ್ಳು’ ಚಿತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಕಮಲಹಾಸನ್‌ ನಟನೆಯ ತಮಿಳಿನ ‘ಇಂಡಿಯನ್ 2’ ಚಿತ್ರಕ್ಕೂ ಅವರೇ ನಾಯಕಿ. ರಮೇಶ್ ಅರವಿಂದ್‌ ನಿರ್ದೇಶಿಸಿರುವ ತಮಿಳಿನ ‘ಪ್ಯಾರಿಸ್‌ ಪ್ಯಾರಿಸ್’ ಚಿತ್ರದಲ್ಲೂ ನಟಿಸಿದ್ದಾರೆ. ಈ ಸಿನಿಮಾಗಳನ್ನು ಪೂರ್ಣಗೊಳಿಸುವ ಮೊದಲೇ ಆಕೆ ಹಸೆಮಣೆ ಏರಲಿದ್ದಾರೆಯೇ ಎಂಬ ಅನುಮಾನ ಅಭಿಮಾನಿಗಳಿಗೆ ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT