‘ಅಜ್ಜ’ನ ಹೆಜ್ಜೆ ಕಾಣೋದಿಲ್ಲ!

7

‘ಅಜ್ಜ’ನ ಹೆಜ್ಜೆ ಕಾಣೋದಿಲ್ಲ!

Published:
Updated:
Deccan Herald

ಹಾರರ್‌ ಸಿನಿಮಾಗಳ ಜಗತ್ತಿನಲ್ಲಿ ವೇಮಗಲ್ ಜಗನ್ನಾಥ್ ರಾವ್ ಪರಿಚಿತ ಹೆಸರು. ಅವರೀಗ ತಮ್ಮ ಹೊಸ ಸಿನಿಮಾ ‘ಅಜ್ಜ’ನ ಮೂಲಕ ಪ್ರೇಕ್ಷಕನನ್ನು ಬೆಚ್ಚಿಬೀಳಿಸಲು ಸಿದ್ಧವಾಗಿದ್ದಾರೆ. ಇತ್ತೀಚೆಗೆ ಈ ಚಿತ್ರದ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮ ನಡೆಯಿತು.

‘ಅಜ್ಜ ಒಂದು ವಿಭಿನ್ನ ಕಥೆ. ಇಲ್ಲಿ ಸಾಮಾಜಿಕ ಕಾಳಜಿ, ಹಾರರ್, ಥ್ರಿಲ್ಲರ್‌, ಮಿಸ್ಟ್ರ್ರಿ ಎಲ್ಲವೂ ಇವೆ. ನಾಲ್ಕು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಅಂಗವಾಗಿ ಸೇವೆ ಸಲ್ಲಿಸಲು ಒಂದು ಹಳ್ಳಿಗೆ ಬರುತ್ತಾರೆ. ಆ ಹಳ್ಳಿಯಲ್ಲೊಂದು ಬಂಗಲೆ ಇದೆ. ಆ ಬಂಗಲೆಯಲ್ಲೊಬ್ಬ ಅಜ್ಜ. ಆ ಅಜ್ಜ ಅಲ್ಲಿ ಯಾಕಿರುತ್ತಾನೆ? ಅವನ ಕಥೆ ಏನು? ಅಲ್ಲಿಗೆ ಹೋದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಏನು ತೊಂದರೆ ಆಗುತ್ತದೆ ಎಂಬುದನ್ನೆಲ್ಲ ತಿಳಿದುಕೊಳ್ಳಲು ಸಿನಿಮಾ ನೋಡಿ’ ಎಂದು ಕಥೆಯ ಜಾಡನ್ನು ಕೊಂಚ ಬಿಟ್ಟುಕೊಡುತ್ತಲೇ ಕುತೂಹಲದ ಬೀಜವನ್ನೂ ಬಿತ್ತಿದರು ಜಗನ್ನಾಥ್‌. ಚಿತ್ರದ ಕಥೆ, ಚಿತ್ರಕಥೆಯ ಜತೆಗೆ ಎರಡು ಹಾಡುಗಳನ್ನೂ ಅವರೇ ಬರೆದಿದ್ದಾರೆ. 

ಚಿದಾನಂದ್‌ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ದತ್ತಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಮೊದಲಿಗೆ ಈ ಚಿತ್ರದ ಕಥಾ ಹಂದರ ಕೇಳಿದಾಗ ನನಗೆ ಅರ್ಥ ಆಗಿರಲಿಲ್ಲ. ಮೂರು ನಾಲ್ಕು ಸಾರಿ ಹೇಳಿದಾಗ ಚಿತ್ರದ ಆಶಯ ಮತ್ತು ನನ್ನ ಪಾತ್ರದ ವೈಶಿಷ್ಟ್ಯ ಅರ್ಥವಾಯಿತು. ಖುಷಯಿಂದಲೇ ನಟಿಸಲು ಒಪ್ಪಿಕೊಂಡೆ. ಒಪ್ಪಿಕೊಳ್ಳುವಾಗ ಕುತೂಹಲ ಮತ್ತು ಹೆದರಿಕೆ ಎರಡೂ ಇತ್ತು. ಇದುವರೆಗೆ ನಾನು ಇಂಥ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಹೇಗೆ ನಿಭಾಯಿಸುತ್ತೇನೊ ಎಂಬ ಹೆದರಿಕೆ ಅದು. ಆದರೆ ಚಿತ್ರ ತುಂಬ ಚೆನ್ನಾಗಿ ಬಂದಿದೆ’ ಎಂದು ಖುಷಿಯಿಂದ ಹೇಳಿಕೊಂಡರು ದತ್ತಣ್ಣ. ‘ನನ್ನ ಜತೆಗೆ ಬೇಬಿ ಪೃಥ್ವಿ ನಟಿಸಿದ್ದಾಳೆ. ಚಿಕ್ಕ ಹುಡುಗಿಯಾದರೂ ನನ್ನ ಸರಿಸಮವಾಗಿ ಲೀಲಾಜಾಲವಾಗಿ ನಟಿಸಿದ್ದಾರೆ. ವಿಮರ್ಶಕರು, ಪ್ರಶಸ್ತಿಗಳನ್ನು ಕೊಡುವವರು ಅವಳ ನಟನೆಯನ್ನು ಹೇಗೆ ಗಮನಿಸುತ್ತಾರೆ ಎಂಬ ಕುತೂಹಲ ನನಗೂ ಇದೆ’ ಎಂದೂ ಅವರು ಹೇಳಿದರು. 

ಸಾಯಿಕಿರಣ್‌ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ‘ನಾನು ವಿ. ಮನೋಹರ್‌ ಅವರ ಬಳಿ ಸಹಾಯಕ ಸಂಗೀತ ನಿರ್ದೇಶಕನಾಗಿ ಕೆಲಸ ಆರಂಭಿಸಿದೆ. ಇದು ನನ್ನ ಐದನೇ ಸಿನಿಮಾ. ಈ ಸಿನಿಮಾದ ಕಥೆ ಇಂದಿನ ಪೀಳಿಗೆಗೆ ಸೂಕ್ತವಾಗಿ ಹೊಂದುವಂತಿದೆ’ ಎಂದರು ಸಾಯಿಕಿರಣ್‌. ರಾಜು ಅವರ ಛಾಯಾಗ್ರಹಣವೂ ಈ ಚಿತ್ರಕ್ಕಿದೆ. ದೀಪಕ್‌, ಪ್ರವೀಣ್‌, ಅಶ್ವಿನ್‌, ಮಾಧುರಿ ನಟಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !