ಸೋಮವಾರ, ಜೂಲೈ 6, 2020
23 °C

ಸಂತ್ರಸ್ತರ ನೋವಿಗೆ ಅಮಿತಾಭ್‌ ಸ್ಪಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಮಹಾಮಾರಿ ಸೃಷ್ಟಿಸಿರುವ ಅವಾಂತರ ಒಂದೆರಡಲ್ಲ. ಬಡವ, ಶ್ರೀಮಂತ ಎನ್ನದೆ ಎಲ್ಲರ ಬದುಕಿನ ಮೇಲೂ ಬರೆ ಎಳೆದಿದೆ. ದೇಶದಾದ್ಯಂತ ಸ್ಟಾರ್‌ ನಟ, ನಟಿಯರು ಕೊರೊನಾ ವಿರುದ್ಧದ ಸರ್ಕಾರಗಳು ನಡೆಸುತ್ತಿರುವ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಈ ಮಹಾಮಾರಿಯ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೊಲೀಸರು, ಅಧಿಕಾರಿಗಳು, ಸಂತ್ರಸ್ತರ ಪರವಾಗಿಯೂ ಧ್ವನಿಗೂಡಿಸಿದ್ದಾರೆ.

ಕೋವಿಡ್‌ 19 ಭೀತಿಯ ಪರಿಣಾಮ ದೇಶದ ಮಹಾನಗರಗಳಲ್ಲಿ ಆಹಾರದ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಕೆಲವು ಸ್ವಯಂಸೇವಾ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ಜನರ ಆಹಾರದ ಸಂಕಷ್ಟ ನೀಗಿಸಲು ಹಗಲಿರುಳು ಶ್ರಮಿಸುತ್ತಿವೆ. ಆ ಸಂಸ್ಥೆಗಳೊಟ್ಟಿಗೆ ಸ್ಟಾರ್‌ ನಟರು ಜೊತೆಗೂಡಿ ಹಸಿದವರ ಹೊಟ್ಟೆ ತುಂಬಿಸುವ ಜೊತೆಗೆ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ.  

ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಅವರು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಹಣ ನೀಡುವ ಜೊತೆಗೆ ಮುಂಬೈನಲ್ಲಿ ಆಹಾರದ ಕೊರತೆ ಎದುರಿಸುತ್ತಿರುವ ಜನರಿಗೆ ಪ್ರತಿದಿನ 2 ಸಾವಿರ ಆಹಾರದ ಕಿಟ್‌ಗಳನ್ನು ವಿತರಿಸುತ್ತಿದ್ದಾರೆ. ಅವರು ಈ ಕೆಲಸಕ್ಕಾಗಿ ಹಾಜಿ ಅಲಿ ದರ್ಗಾ ಟ್ರಸ್ಟ್‌ ಮತ್ತು ಫಿರ್‌ ಮುಕ್ದಮ್‌ ಸಾಹೇಬ್‌ ಚಾರಿಟೇಬಲ್‌ ಟ್ರಸ್ಟ್‌ ಜೊತೆಗೆ ಕೈಜೋಡಿಸಿರುವುದು ವಿಶೇಷ. 

ಹಾಲಿ ಅಲಿ ದರ್ಗಾ ಮತ್ತು ಮಹಿಮ್‌ ದರ್ಗಾಕ್ಕೆ 200 ಆಹಾರದ ಕಿಟ್‌ಗಳನ್ನು ಕಳುಹಿಸುತ್ತಿದ್ದಾರೆ. ವಾರ್ಲಿ ಪ್ರದೇಶದಲ್ಲಿರುವ ಬಬುಲ್‌ನಾಥ್‌ ಮಂದಿರ, ಮೀರಾ ದಾತರ್‌ ದರ್ಗಾ, ಕೋಲ್ಸಾ ಬುಂದೇರ್, ಲೋಟಸ್‌ ಕಾಲೊನಿ ಮತ್ತು ಟಾಟಾ ಮೊಮೊರಿಯಲ್‌ ಆಸ್ಪತ್ರೆ ವ್ಯಾಪ್ತಿಯಲ್ಲಿ ಆಹಾರದ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಕಿಟ್‌ಗಳನ್ನು ಪೂರೈಸುತ್ತಿದ್ದಾರೆ.

‘ನಾವು ಪ್ರತಿದಿನ ಸಂತ್ರಸ್ತರ ಪಡಿತರ ಚೀಟಿ ಮತ್ತು ಆಧಾರ್‌ ಕಾರ್ಡ್‌ಗಳನ್ನು ಪರಿಶೀಲಿಸಿ ಹಲವು ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ಪೂರೈಸುತ್ತಿದ್ದೇವೆ. ಮಾಸ್ಕ್‌, ಕೈಗವಸ ಧರಿಸುವ ಮೂಲಕ ಸ್ವಯಂ ಸೇವಕರು ಕಿಟ್‌ಗಳ ವಿತರಣೆ ವೇಳೆ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿದ್ದಾರೆ. ಕಿಟ್‌ಗಳಿಗಾಗಿ ಪ್ರತಿನಿತ್ಯವೂ ಜನರು ಕಾಯುತ್ತಿರುತ್ತಾರೆ. ನಮ್ಮೊಟ್ಟಿಗೆ ಸಹಕಾರವನ್ನೂ ನೀಡುತ್ತಿದ್ದಾರೆ’ ಎನ್ನುತ್ತಾರೆ ಸ್ವಯಂಸೇವಕ ನೂರ್‌ ಪಾರ್ಕರ್. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು