ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್‌ ಶೆಟ್ಟಿ ಕಂಡಂತೆ ‘ಅಮ್ಮಚ್ಚಿಯೆಂಬ ನೆನಪು’

Last Updated 31 ಅಕ್ಟೋಬರ್ 2018, 14:47 IST
ಅಕ್ಷರ ಗಾತ್ರ

ಒಂದು ಮೊಟ್ಟೆಯ ಕಥೆ, ಒಂದು ಸೀಮಿತ ವರ್ಗದವರ ‘ತಲೆಬೇನೆ’ಯ ಎಳೆಯನ್ನು ಇಟ್ಟುಕೊಂಡು ಹೆಣೆದಿದ್ದ ಚಿತ್ರ. ಹೊಸಬರ ತಂಡವೇ ತೆರೆಗೆ ತಂದ ಈ ಚಿತ್ರವು ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿತ್ತು. ಆ ಸಿನಿಮಾದಲ್ಲಿ ಹೆಚ್ಚು ಗಮನ ಸೆಳೆದಿದ್ದು ರಾಜ್ ಬಿ. ಶೆಟ್ಟಿ.

ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರ ಮನದಲ್ಲಿ ಉಳಿಯುವಂತೆ ಅಭಿನಯಿಸಿದ್ದ ರಾಜ್, ಮತ್ತೊಮ್ಮೆ ಜನರ ಮೆಚ್ಚುಗೆ ಪಡೆಯಲು ‘ಅಮ್ಮಚ್ಚಿಯೆಂಬ ನೆನಪು’ ಸಿನಿಮಾದ ಮೂಲಕ ಇದೇ ನವೆಂಬರ್ 1ಕ್ಕೆ ರಾಜ್ಯದಾದ್ಯಂತ ತೆರೆಗೆ ಬರಲು ಸಿದ್ಧರಾಗಿದ್ದಾರೆ.

ಅಂದಹಾಗೆ ಅವರುಈ ಬಾರಿ, ಧ್ವನಿ ಎತ್ತಿರುವುದು ಸ್ತ್ರೀ ಸ್ವಾತಂತ್ರ್ಯದ ಕುರಿತು. ಕಾದಂಬರಿಗಾರ್ತಿ ವೈದೇಹಿ ಅವರ ಕಥೆಗಳ ಆಧಾರಿತ ಸಿನಿಮಾ ಇದಾಗಿದ್ದು, ಇದರಲ್ಲಿ ರಾಜ್‌ ಬಿ. ಶೆಟ್ಟಿ ಅವರದ್ದು ವೆಂಕಪ್ಪಯ್ಯ ಪಾತ್ರ. ಅವರ ಮಾತುಗಳಲ್ಲಿ ಹೇಳುವುದಾದರೆ, ಮಹಿಳಾ ಸ್ವಾತಂತ್ರ್ಯಹರಣ ಮಾಡುವವರ ಪ್ರತಿನಿಧಿಯಂತೆ.

‘70–80 ಕಾಲದ ಗಂಡ–ಹೆಂಡತಿಯ ಕಥೆ ಇದಾಗಿದ್ದು, ಎಲ್ಲರಿಗೂ ಇಷ್ಟವಾಗುತ್ತದೆ. ವೈದೇಹಿ ಅವರ ಕಥೆಗಳು ಹಾಗೂ ಕಾದಂಬರಿಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಅದರಲ್ಲೂ ಮಹಿಳಾ ಸ್ವಾತಂತ್ರ್ಯದ ವಿಚಾರಗಳಂತೂ ಇಂದಿಗೂ ಪ್ರಸ್ತುತ. ಸದ್ಯ ಎಲ್ಲೆಡೆ ಮಹಿಳಾ ಸ್ವಾತಂತ್ರ್ಯ ಕುರಿತವಾಗಿಯೇ ಹೆಚ್ಚು ಚರ್ಚೆಯಾಗುತ್ತಿದೆ. ನಮ್ಮ ಸಿನಿಮಾವೂ ಅದೇ ಸಾಲಿಗೆ ಸೇರಿದ್ದು, ಪ್ರಸ್ತುತ ಸನ್ನಿವೇಶಕ್ಕೆ ಹೇಳಿಮಾಡಿಸಿದಂತಿದೆ’ ಎನ್ನುತ್ತಾರೆ ರಾಜ್.

ಸಮಸ್ಯೆಯೊಂದರ ಬಗ್ಗೆ ಪ್ರಸ್ತಾಪ ಮಾಡಿರುವುದು, ರಾಜ್ ಅವರ ಮೊದಲ ಸಿನಿಮಾ ‘ಒಂದು ಮೊಟ್ಟೆಯ ಕಥೆ’ ಹಾಗೂ ಈ ಸಿನಿಮಾಗೂ ಇರುವ ಸಾಮ್ಯತೆ. ಮೊದಲ ಸಿನಿಮಾವನ್ನು ಸೌಂದರ್ಯದ ಪರಿಕಲ್ಪನೆ ಇಟ್ಟುಕೊಂಡು ಮಾಡಲಾಗಿದೆ. ‘ಅಮ್ಮಚ್ಚಿಯೆಂಬ ನೆನಪು’ನಲ್ಲಿಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ಹಾಗೂ ಹಳೆ ಕಾಲದಿಂದಲೂ ನಡೆಯುತ್ತಿರುವ ಶೋಷಣೆ ಬಗ್ಗೆ ಪ್ರಸ್ತಾಪಿಸಲಾಗಿದೆಯಂತೆ.

ಕುಂದಾಪುರದ ಬ್ರಾಹ್ಮಣದ ಮನೆತನದ ಕೃಷಿಕ ಬಡವ ವೆಂಕಪ್ಪಯ್ಯ. ಪಿತೃಪ್ರಧಾನ ಸಮಾಜದಲ್ಲಿ ಗಂಡೇ ದೊಡ್ಡವ, ಹೆಣ್ಣು ಕೀಳು ಎನ್ನುವ ನಂಬಿಕೆ ಉಳಿಸಿಕೊಂಡು ಅದನ್ನು ಬೆಳೆಸಿಕೊಂಡವನ ಪಾತ್ರವದು. ಸಾಮಾನ್ಯನ ಪಾತ್ರವಾದರೂ ಅವನ ನಂಬಿಕೆಯಿಂದಲೇ ಪಾತ್ರ ನೆಗಟಿವ್ ಆಗಿರುತ್ತದೆ. ನಾಯಕಿಯದ್ದು, ಸ್ವಾತಂತ್ರ್ಯ ಬಯಸುವ, ತುಂಬಾ ಕನಸು ಕಟ್ಟಿಕೊಂಡಿರುವ ಮಹಿಳೆಯ ಪಾತ್ರ.

ಅಮ್ಮಚ್ಚಿ (ನಾಯಕಿ) ಪಾತ್ರದಲ್ಲಿ ರಂಗಭೂಮಿಯ ಹಿನ್ನೆಲೆಯುಳ್ಳ ವೈಜಯಂತಿ ಅಭಿನಯಿಸಿದ್ದರೆ, ಅಕ್ಕು ಎಂಬ ಮತ್ತೊಂದು ಮಹತ್ವದ ಪಾತ್ರಕ್ಕೆ ದೀಪಿಕಾ ಜೀವ ತುಂಬಿದ್ದಾರೆ. ರಂಗಾಸಕ್ತರಾದ ಪ್ರಕಾಶ್ ಶೆಟ್ಟಿ, ಗೀತಾ ಸುರತ್ಕಲ್, ರಾಧಾಕೃಷ್ಣ ಹಾಗೂ ಸಂಗಡಿಗರು ಸ್ಥಾಪಿಸಿಕೊಂಡ ಎಪ್ರಾನ್ ಪ್ರೊಡಕ್ಷನ್ ಅಡಿಯಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಚಂಪಾ ಶೆಟ್ಟಿ ಇದನ್ನು ನಿರ್ದೇಶಿಸಿದ್ದಾರೆ. ಕುಂದಾಪುರದ ಸುತ್ತಮುತ್ತ ಈ ಸಿನಿಮಾದ ಚಿತ್ರೀಕರಣ ನಡೆದಿದೆ.

ರಂಗಭೂಮಿಯ ನಿರ್ದೇಶಕರಾಗಿದ್ದ ಚಂಪಾ ಶೆಟ್ಟಿ, ಈ ಸಿನಿಮಾದ ಮೂಲಕ ಮೊದಲ ಬಾರಿಗೆಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ. ಸಿನಿಮಾದ ಅನುಭವದ ಕೊರತೆಗಿಂತ ಅವರಲ್ಲಿ ರಂಗಭೂಮಿಯ ಅನುಭವದ ಶ್ರೇಷ್ಠತೆ ಎದ್ದು ಕಾಣುತ್ತದೆ. ರಂಗಭೂಮಿಯ ಒಳಿತುಗಳೆಲ್ಲವನ್ನೂ ಈ ಸಿನಿಮಾದಲ್ಲಿ ಅಳವಡಿಸಿದ್ದಾರೆ. ಮಫ್ತಿ ನಂತರ ಈ ಸಿನಿಮಾಗೆ ಸಿನಿಮಾಟೋಗ್ರಫಿ ನೀಡಿದ್ದಾರೆ ನವೀನ್.

‘ಒಂದು ಮೊಟ್ಟೆಯ ಕಥೆ ನಂತರ ಅಷ್ಟೇ ಪ್ರಾಮಾಣಿಕವಾಗಿ ಇನ್ನೊಂದು ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ನಾಡು ಕಂಡಂತಹ ಶ್ರೇಷ್ಠ ಬರಹಗಾರ್ತಿ ವೈದೇಹಿ. ಅವರ ಕಥೆಗಳಿಂದ ಸ್ಫೂರ್ತಿ ಪಡೆದು ನಿರ್ಮಾಣ ಮಾಡಿರುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆ ಎಂಬುದು ಹೆಮ್ಮೆಯ ವಿಚಾರ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT