ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತ್‌ ಕವಲುದಾರಿ!

Last Updated 25 ಮಾರ್ಚ್ 2019, 6:50 IST
ಅಕ್ಷರ ಗಾತ್ರ

ಮೊದಲು ಹಿಗ್ಗಾಮುಗ್ಗಾ ಹೊಗಳುವುದು, ಸಿನಿಮಾ ಸೋತರೆ ಅದರ ಜವಾಬ್ದಾರಿಯನ್ನೆಲ್ಲ ನಿರ್ದೇಶಕನ ಮೇಲೆ ಹೊರಿಸಿ ‘ತಾನು ಮೋಸ ಹೋದೆ’ ಎಂದು ಅಲವತ್ತುಕೊಳ್ಳುವುದು ಗಾಂಧಿನಗರದ ಹಲವು ನಟರ ಚಾಳಿ. ಸಜ್ಜನ ನಟ ಎಂದು ಹೆಸರು ಪಡೆದ ಅನಂತ್‌ನಾಗ್‌ ಅವರಿಗೂ ಈ ಚಾಳಿ ಅಂಟಿಕೊಂಡಿದೆಯೇ?

**

ಹಿರಿಯ ನಟ ಅನಂತ್‌ನಾಗ್‌ ಈ ಇಳಿವಯಸ್ಸಿನಲ್ಲಿಯೂ ತಮ್ಮ ಮಾಗಿದ ನಟನೆಯಿಂದ ವರ್ಚಸ್ಸನ್ನು ಉಳಿಸಿಕೊಂಡವರು. ವಯಸ್ಸಿಗೆ ತಕ್ಕ ಪಾತ್ರಗಳನ್ನು ಒಪ್ಪಿಕೊಳ್ಳುತ್ತ, ಅದರಲ್ಲಿಯೂ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತ ಬಂದಿರುವ ಕಾರಣದಿಂದಲೇ ಇಂದಿಗೂ ಅವರು ಗಾಂಧಿನಗರದಲ್ಲಿ ಬಹುಬೇಡಿಕೆಯ ನಟ.

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಪ್ಲಸ್‌’, ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಇತ್ತೀಚೆಗಿನ ದಿನಗಳಲ್ಲಿ ಅವರೇ ಪ್ರಧಾನಭೂಮಿಕೆಯಲ್ಲಿದ್ದ ಸಿನಿಮಾಗಳಲ್ಲಿ ಇವು ಪ್ರಮುಖವಾದವು. ‘ಕವಲುದಾರಿ’ ಬಿಡುಗಡೆಗೆ ಸಜ್ಜಾಗಿದೆ. ಇವೆಲ್ಲವೂ ಹೊಸ ನಿರ್ದೇಶಕರ ಸಿನಿಮಾಗಳು. ಹೀಗೆ ಹೊಸಬರ ಪ್ರಯೋಗಗಳಿಗೆ ಮುಕ್ತವಾಗಿ ತೆರೆದುಕೊಳ್ಳುವ ಹಿರಿಯನಟನ ಕುರಿತು ಮೆಚ್ಚುಗೆ ಹುಟ್ಟುವಾಗಲೇ ಅವರ ವ್ಯಕ್ತಿತ್ವದ ಇನ್ನೊಂದು ಆಯಾಮವೂ ನೆನಪಾಗುವುದು ಕಾಕತಾಳೀಯವಲ್ಲ. ಆ ಆಯಾಮಕ್ಕೆ ಹೊರಗಿನ ಮೃದುತನ, ಸಜ್ಜನಿಕೆಗಿಂತ ತುಂಬ ಭಿನ್ನವಾದ, ಅಪ್ರಾಮಾಣಿಕ ಚಹರೆಗಳಿವೆ ಎನ್ನುವುದನ್ನು ವಿಷಾದದಿಂದಲಾದರೂ ಗುರ್ತಿಸಲೇಬೇಕಾಗಿದೆ. ಎರಡು ಉದಾಹರಣೆಗಳನ್ನು ನೆನಪಿಸಿಕೊಳ್ಳಬಹುದು:

ಗಡ್ಡ ವಿಜಿ ನಿರ್ದೇಶನದ ‘ಪ್ಲಸ್‌’ ಸಿನಿಮಾದಲ್ಲಿ ಅನಂತ್‌ನಾಗ್‌ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಆ ಚಿತ್ರದ ಬಿಡುಗಡೆಗೂ ಮುನ್ನ ಚಿತ್ರದ ಕಥೆ, ತಮ್ಮ ಪಾತ್ರ, ಗಡ್ಡ ವಿಜಿಯ ನಿರ್ದೇಶನ ಕೌಶಲಗಳನ್ನೂ ಮನಸಾರೆ ಹಾಡಿ ಹೊಗಳಿದ್ದ ಈ ನಟ, ಬಿಡುಗಡೆಯ ನಂತರ ತಮ್ಮ ರಾಗ ಬದಲಿಸಿದ್ದರು. ಸಿನಿಮಾ ಹೀನಾಯವಾಗಿ ಸೋತಿದ್ದೇ ಬದಲಾವಣೆಗೆ ಕಾರಣ. ‘ನಾನು ಆ ಸಿನಿಮಾವನ್ನು ಒಪ್ಪಿಕೊಂಡು ತಪ್ಪು ಮಾಡಿದೆ. ಇನ್ನು ಮುಂದೆ ಎಚ್ಚರಿಕೆಯ ಹೆಜ್ಜೆ ಇಡುತ್ತೇನೆ’ ಎಂದು ಮೋಸಹೋದ ಮುಗ್ಧನಂತೆ ಮಾತನಾಡಿದ್ದರು.

ಅವರು ಮುಖ್ಯಭೂಮಿಕೆಯಲ್ಲಿದ್ದ ಇನ್ನೊಂದು ಸಿನಿಮಾ ಇತ್ತೀಚೆಗೆ ಬಿಡುಗಡೆಯಾಯಿತು. ‘ಸಂತೆಯಲ್ಲಿ ನಿಂತ ಕಬೀರ’, ‘ಕಬಡ್ಡಿ’ಗಳಂಥ ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿದ್ದ ನರೇಂದ್ರ ಬಾಬು ನಿರ್ದೇಶಿಸಿದ ಆ ಚಿತ್ರದ ಹೆಸರು ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’. ಯಥಾಪ್ರಕಾರ ಈ ಚಿತ್ರದ ಆರಂಭಿಕ ಸುದ್ದಿಗೋಷ್ಠಿಯಲ್ಲಿ ಅನಂತ್‌ನಾಗ್‌, ನಿರ್ದೇಶಕರನ್ನು, ಸಿನಿಮಾವನ್ನು, ಚಿತ್ರಕಥೆಯನ್ನು ಉತ್ಸಾಹದಿಂದ ಹಾಡಿ ಹೊಗಳಿ ಅಟ್ಟಕ್ಕೇರಿಸಿದ್ದರು. ‘ಇದು ನನ್ನ ವೃತ್ತಿಜೀವನದ ಬಹುಮುಖ್ಯ ಸಿನಿಮಾ’ ಎಂಬರ್ಥದ ಮಾತುಗಳನ್ನಾಡಿದ್ದರು. ಚಿತ್ರಕಥೆಯನ್ನು ಸ್ವತಃ ಅನಂತ್‌ನಾಗ್‌ ಅವರೇ ಸಾಕಷ್ಟು ತಿದ್ದಿ ಒಪ್ಪಗೊಳಿಸಿದ್ದಾರೆ ಎಂಬ ಚಿತ್ರತಂಡದ ಮಾತಿಗೂ ಸಹಮತವೊತ್ತಿ ತಲೆಯಾಡಿಸಿದ್ದರು.

ಆದರೆ ಯಾವಾಗ ‘ಹೊಟ್ಟೆಗಾಗಿ...’ ಸಿನಿಮಾ ಬಿಡುಗಡೆಯಾಗಿ ಟೀಕೆಗಳು ವ್ಯಕ್ತವಾಗಲು ಶುರುವಾಯಿತೋ ಅನಂತ್‌ ಗಪ್‌ಚುಪ್‌ ಆಗಿಬಿಟ್ಟರು. ಅದು ಇಂಗ್ಲಿಷಿನ ‘ದ ಇಂಟರ್ನ್‌’ ಚಿತ್ರವನ್ನು ಯಥಾವತ್‌ ನಕಲು ಮಾಡಿದ ಚಿತ್ರ ಎಂಬುದು ಬಹಿರಂಗವಾದಾಗಲೂ ತುಟಿ ಪಿಟಿಕ್‌ ಅನ್ನಲಿಲ್ಲ. ಅದಾಗಿ ಎಷ್ಟೋದಿನಗಳ ನಂತರ ಮತ್ತೊಂದು ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗೆ ಎದುರಾದ ಅನಂತ್‌ನಾಗ್‌ ಪರಮಖೇದದ ಧ್ವನಿಯಲ್ಲಿ, ‘ನನಗೆ ಆ ಚಿತ್ರ ಇಂಗ್ಲಿಷ್‌ ಸಿನಿಮಾ ಆಧರಿಸಿದ್ದು ಎಂಬುದು ಗೊತ್ತಿತ್ತು. ಆದರೆ ಯಥಾವತ್‌ ನಕಲು ಮಾಡಿದ್ದಾರೆ ಎಂಬ ಕಲ್ಪನೆಯೂ ಇರಲಿಲ್ಲ. ನಾನು ಮೂಲ ಸಿನಿಮಾ ನೋಡಿರಲೇ ಇಲ್ಲ. ಮೋಸಹೋದೆ’ ಎಂದು ತಮ್ಮ ಎಂದಿನ ಸಹಜನಟನೆಯ ಧಾಟಿಯಲ್ಲಿಯೇ ಹೇಳಿದ್ದರು.

ಯಥಾವತ್‌ ನಕಲು ಎಂದಾದರೆ ಅನಂತ್‌ನಾಗ್‌ ಆ ಚಿತ್ರದ ಚಿತ್ರಕಥೆಯನ್ನು ತಿದ್ದಿರುವುದು ಹೇಗೆ ಸಾಧ್ಯ? ಅದೊಂದು ರೀಮೇಕ್‌ ಸಿನಿಮಾ ಎಂಬುದನ್ನಾದರೂ ಮೊದಲೇ ಒಪ್ಪಿಕೊಳ್ಳಬಹುದಿತ್ತಲ್ಲವೇ? ತಾನು ಚಿತ್ರಕಥೆಯನ್ನು ಸಾಕಷ್ಟು ತಿದ್ದಿರುವುದಾಗಿ ಒಪ್ಪಿಕೊಂಡ ಅವರೇ ಅದು ಇಂಗ್ಲಿಷ್‌ ಚಿತ್ರದ ದೃಶ್ಯವತ್ ನಕಲು ಮಾಡಿದ್ದಾರೆ ಎಂದು ಗೊತ್ತಾಗಲಿಲ್ಲ ಎಂದು ಹೇಳಿದರೆ ಹೇಗೆ ನಂಬುವುದು? ಈ ಪ್ರಶ್ನೆಗಳನ್ನು ಅಲ್ಲಿನ ಪತ್ರಕರ್ತರು ಕೇಳಲಿಲ್ಲ. ಕೇಳಿದರೆ ಅವರ ಬಳಿ ಉತ್ತರವೂ ಇರಲಿಲ್ಲವೇನೋ.

ಒಂದು ಮೂಲದ ಪ್ರಕಾರ ನಿರ್ದೇಶಕ ನರೇಂದ್ರ ಬಾಬು ಅವರು ಮೂರು ಕಥೆಗಳನ್ನು ಇಟ್ಟುಕೊಂಡು ಅನಂತ್‌ನಾಗ್‌ ಅವರ ಬಳಿ ಹೋಗಿದ್ದರು. ‘ದ ಇಂಟರ್ನ್‌’, ನಿರ್ಮಾಪಕರು ಅವರಿಗೆ ಕೊಟ್ಟ ಡಿವಿಡಿಯಾಗಿತ್ತು. ಆ ಮೂರರಲ್ಲಿ ಅನಂತ್‌ನಾಗ್‌ ‘ನಿರ್ಮಾಪಕರು ಹೇಳಿದ್ದಾರೆ ಎಂದರೆ ಅದನ್ನೇ ಮಾಡೋಣ ಬಿಡಿ’ ಎಂದು ಇಂಟರ್ನ್‌ ಸಿನಿಮಾ ಡಿವಿಡಿಯನ್ನೇ ಆಯ್ದುಕೊಂಡಿದ್ದರು. ಅದನ್ನು ಬಿಟ್ಟು ಉಳಿದೆರಡು ಕಥೆಗಳು ಸ್ವಮೇಕ್‌ ಆಗಿದ್ದವು ಮತ್ತು ಅದು ಅನಂತ್‌ನಾಗ್‌ ಅವರಿಗೂ ಗೊತ್ತಿತ್ತು! ಅವರೇ ಆಯ್ದುಕೊಂಡ ರೀಮೇಕ್‌ ಸಿನಿಮಾ ಮಾಡಿ ಅವರೇ ಮೋಸಹೋಗಿದ್ದಾರೆ ಎನ್ನುವುದನ್ನು ನಟನಾವಿನೋದ ಎನ್ನಬಹುದೇ?

ಇದೀಗ ಅನಂತ್‌ನಾಗ್‌, ಹೇಮಂತ್‌ ರಾವ್‌ ನಿರ್ದೇಶನದ ‘ಕವಲು ದಾರಿ’ ಸಿನಿಮಾದ ಕುರಿತು ಉತ್ಸಾಹದ ಮಾತುಗಳನ್ನಾಡುತ್ತಿದ್ದಾರೆ. ಸಿನಿಮಾ ಯಶಸ್ವಿಯಾದರೆ ಅವರು ತಮ್ಮ ಆ ಮಾತುಗಳಿಗೆ ಬದ್ಧರಾಗಿರುತ್ತಾರೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಸೋತರೆ ಏನು ಮಾತಾಡಬಹುದು ಎಂಬುದನ್ನು ಊಹಿಸಿಕೊಳ್ಳುವುದೂ ಕಷ್ಟವಲ್ಲ. ಇದನ್ನು ವಯಸ್ಸಿಗನುಗುಣವಾಗಿ ಹಿರಿಯ ಕಲಾವಿದರು ಹಿಡಿದ ‘ಕವಲುದಾರಿ’ ಎಂದುಕೊಂಡು ಸುಮ್ಮನಿರಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT