ನಿನ್ನಂಥ ಅ‍ಪ್ಪ ಇಲ್ಲ!

ಭಾನುವಾರ, ಏಪ್ರಿಲ್ 21, 2019
32 °C

ನಿನ್ನಂಥ ಅ‍ಪ್ಪ ಇಲ್ಲ!

Published:
Updated:
Prajavani

ಅವಳು ಅಪ್ಪನ ಮುದ್ದಿನ ಮಗಳು. ಅವಳಿಗೆ ಆಫೀಸ್‌ಗೆ ಹೋಗುವ ಗಡಿಬಿಡಿ. ಅಪ್ಪನ ಒಪ್ಪಿಗೆ ಪಡೆದು ಹೊರಡಬೇಕು. ಮಗಳಿಗೆ ಶುಭ ಕೋರಲು ಅವರೂ ಸಜ್ಜಾಗಿ ನಿಂತಿದ್ದಾರೆ. ಆದರೆ, ಮಗಳಿಗೆ ಮಾತ್ರ ಭಯ.

ಅದು ‘ತ್ರಯಂಬಕಂ’ ಚಿತ್ರದ ಶೂಟಿಂಗ್‌ ಸಂದರ್ಭ. ಆ ದೃಶ್ಯದ ಡೈಲಾಗ್‌ ಒಪ್ಪಿಸುವ ವೇಳೆಗೆ ಮಗಳು ಬೆದರಿದ ಜಿಂಕೆಯಂತಾಗಿದ್ದಳು. ಎದುರಿಗೆ ಅಪ್ಪನ ಪಾತ್ರಧಾರಿಯಾಗಿ ನಿಂತಿದ್ದು ನಟ ರಾಘವೇಂದ್ರ ರಾಜ್‌ಕುಮಾರ್. ನಾಲ್ಕೈದು ಟೇಕ್‌ ಮುಗಿದರೂ ದೃಶ್ಯ ಸರಿಯಾಗಿ ಬರಲಿಲ್ಲ. ಮಗಳ ಆತಂಕ ಅರಿಯಲು ಅಪ್ಪನಿಗೆ ಬಹುಹೊತ್ತು ಹಿಡಿಯಲಿಲ್ಲ. ಮೆಲ್ಲನೆ ಪುತ್ರಿಯತ್ತ ಹೆಜ್ಜೆ ಇಟ್ಟರು.

‘ನೀನು ಭಯಪಡುವ ಅಗತ್ಯವಿಲ್ಲ. ಅಂಜಿಕೆ ಬೇಡ. ನನಗೆ ದೃಶ್ಯಗಳು ಚೆನ್ನಾಗಿ ಬರಬೇಕು ಎಂದು ಧೈರ್ಯ ತುಂಬಿದರು. ಅವರ ಅಕ್ಕರೆಯ ಮಾತುಗಳು ಮಗಳಿಗೆ ಚೈತನ್ಯ ತುಂಬಿದವು. ಅಂದಹಾಗೆ ಪುತ್ರಿಯಾಗಿ ರಾಘಣ್ಣ ಅವರ ಮುಂದೆ ನಟಿಸಲು ಭಯಪಟ್ಟಿದ್ದ ನಟಿ ಅನುಪಮಾ ಗೌಡ. 

ಅನುಪಮಾ ಅವರ ನಟನಾ ಪಯಣದ ದಿಕ್ಕು ಬದಲಿಸಿದ ಚಿತ್ರ ‘ಆ ಕರಾಳ ರಾತ್ರಿ’. ಆ ಚಿತ್ರದಲ್ಲಿ ಅವಿವಾಹಿತ ಹೆಣ್ಣಿನ ಪಾತ್ರಕ್ಕೆ ಜೀವ ತುಂಬಿದ್ದರು. ದಯಾಳ್ ಪದ್ಮನಾಭನ್‌ ನಿರ್ದೇಶನದ ‘ತ್ರಯಂಬಕಂ’ದಲ್ಲೂ ಅವರೇ ನಾಯಕಿ. ಇಲ್ಲಿ ಅವರು ಪತ್ರಕರ್ತೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರದು ಅರಳು ಹುರಿದಂತೆ ಪಟಪಟನೆ ಮಾತನಾಡುವ ಹುಡುಗಿಯ ಪಾತ್ರವಂತೆ. ‘ಫ್ಯಾಂಟಸಿ ಮತ್ತು ರಿಯಾಲಿಟಿ ಮಧ್ಯೆ ನಡೆಯುವ ಕಥನ ಇದು. ಅಪ್ಪ ಮತ್ತು ಮಗಳ ಬಾಂಧವ್ಯದ ಕಥೆ ಇಲ್ಲಿದೆ’ ಎನ್ನುತ್ತಾರೆ ಅವರು. 

‘ನನ್ನ ತಂದೆ ಪಾತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್‌ ಸರ್‌ ನಟಿಸುತ್ತಾರೆ ಎಂದಾಗಲೇ ಭಯಪಟ್ಟಿದ್ದೆ. ಅಂತಹ ಶ್ರೇಷ್ಠ ನಟರೊಟ್ಟಿಗೆ ನಟಿಸುವುದು ಹೇಗೆ? ಎಂಬ ಆತಂಕ ಕಾಡುತ್ತಲೇ ಇತ್ತು. ಮೊದಲ ಬಾರಿಗೆ ಅವರೊಟ್ಟಿಗೆ ಕ್ಯಾಮೆರಾ ಎದುರಿಸಿದಾಗ ಆತಂಕ ಹೆಚ್ಚಿತ್ತು. ನನ್ನಲ್ಲಿನ ಭಯ ಅವರಿಗೆ ಬಹುಬೇಗ ಅರ್ಥವಾಯಿತು. ಯಾವುದೇ, ಭಯಪಡದೆ ಸಹಜವಾಗಿ ನಟಿಸುವಂತೆ ಸಲಹೆ ನೀಡಿದರು’ ಎಂದು ನೆನಪಿಸಿಕೊಳ್ಳುತ್ತಾರೆ.

ಅನುಪಮಾ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿಯೇ. ಫ್ಯಾಷನ್‌ ಡಿಸೈನಿಂಗ್‌ನಲ್ಲಿ ಪದವಿ ಪೂರೈಸಿದ್ದಾರೆ. ‘ನಗಾರಿ’ ಅವರು ನಟಿಸಿದ ಮೊದಲ ಚಿತ್ರ. ಆ ಸಿನಿಮಾ ಅವರಿಗೆ ಅಷ್ಟೇನೂ ಹೆಸರು ತಂದುಕೊಡಲಿಲ್ಲ. ಬೆಳ್ಳಿತೆರೆಯಲ್ಲಿನ ಅನಿರೀಕ್ಷಿತ ಸೋಲಿಗೆ ಅವರೂ ಧೃತಿಗೆಡಲಿಲ್ಲ. ಮತ್ತೆ ಕಿರುತೆರೆಗೆ ತೆರಳಿದರು. ‘ಅಕ್ಕ’ ಧಾರಾವಾಹಿಯಲ್ಲಿನ ನಟನೆ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಆ ಯಶಸ್ಸಿನ ಪಯಣ ಬಿಗ್‌ಬಾಸ್‌ ಮನೆ ಬಾಗಿಲಿಗೂ ಕರೆದೊಯ್ದಿತು. ಮತ್ತೆ ಅವರು ಹಿರಿತೆರೆಗೆ ಮರಳಿದ್ದು ‘ಆ ಕರಾಳ ರಾತ್ರಿ’ ಸಿನಿಮಾದ ಮೂಲಕ.   

ಬೆಳ್ಳಿತೆರೆಯಲ್ಲಿ ಅವಕಾಶ ದೊರೆತರೂ ಕಿರುತೆರೆ ಮೇಲೆ ಅವರಿಗೆ ಅಪರಿಮಿತ ಮೋಹ. ಹಾಗೆಂದು ಅವರು ಮತ್ತೆ ಧಾರಾವಾಹಿಯಲ್ಲಿ ನಟಿಸಲು ಸಿದ್ಧರಿಲ್ಲವಂತೆ. ‘ಧಾರಾವಾಹಿಯಲ್ಲಿನ ನಟನೆ ನನಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದು ದಿಟ. ಸಿನಿಮಾದಲ್ಲಿಯೇ ಬದುಕು ಕಟ್ಟಿಕೊಳ್ಳುವ ಆಸೆಯಿದೆ. ಸವಾಲಿನ ಪಾತ್ರಗಳು ಬಂದರಷ್ಟೇ ಧಾರಾವಾಹಿಯಲ್ಲಿ ನಟಿಸಲು ಯೋಚಿಸುತ್ತೇನೆ. ಸದ್ಯಕ್ಕಂತೂ ಆ ನಿಟ್ಟಿನಲ್ಲಿ ಆಲೋಚಿಸುತ್ತಿಲ್ಲ’ ಎಂದು ಸ್ಪಷ್ಟನೆ ನೀಡುತ್ತಾರೆ. ಕಿರುತೆರೆಯ ರಿಯಾಲಿಟಿ ಶೋ ಕಾರ್ಯಕ್ರಮಗಳ ನಿರೂಪಣೆಯಲ್ಲಿಯೂ ಅವರು ಬ್ಯುಸಿ. ಹಿರಿತೆರೆಯಲ್ಲಿನ ನಟನೆ ನಿರೂಪಕಿ ಕೆಲಸಕ್ಕೆ ತೊಡಕಾಗುವುದಿಲ್ಲವೇ? ಎಂದು ಪ್ರಶ್ನಿಸಿದರೆ ಅವರು ಉತ್ತರಿಸುವುದು ಹೀಗೆ. ‘ದಯಾಳ್‌ ಸರ್ ಒಂದೇ ಹಂತದಲ್ಲಿ ಸಿನಿಮಾ ಶೂಟಿಂಗ್‌ ಮುಗಿಸುತ್ತಾರೆ. ರಿಯಾಲಿಟಿ ಶೋ ಕಾರ್ಯಕ್ರಮದ ಶೂಟಿಂಗ್‌ ಇರುವುದು ಒಂದು ದಿನ ಮಾತ್ರ. ಆ ದಿನದ ಮಟ್ಟಿಗೆ ನನಗೆ ರಜೆ ಸಿಗುತ್ತಿತ್ತು. ಹಾಗಾಗಿ, ತ್ರಯಂಬಕಂ ಚಿತ್ರದಲ್ಲಿ ನಟಿಸಲು ಸಾಧ್ಯವಾಯಿತು’ ಎಂದು ವಿವರಿಸುತ್ತಾರೆ. ಅನುಪಮಾ ನಟಿಸಿರುವ ‘ರಂಗಮಂದಿರ’, ‘ಬೆಂಕಿಯಲ್ಲಿ ಅರಳಿದ ಹೂ’ ಚಿತ್ರ ಬಿಡುಗಡೆಯ ಹಂತದಲ್ಲಿವೆ. ಈ ಎರಡೂ ಚಿತ್ರದಲ್ಲಿ ಅವರು ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !