‘ಅನುಷ್ಕ’ಳ ಥ್ರಿಲ್ಲರ್‌ ಫ್ಯಾಂಟಸಿ ಕಥನ

7

‘ಅನುಷ್ಕ’ಳ ಥ್ರಿಲ್ಲರ್‌ ಫ್ಯಾಂಟಸಿ ಕಥನ

Published:
Updated:

‘ಡೇಂಜರ್ ಜೋನ್’ ಮತ್ತು ‘ನಿಶ್ಯಬ್ದ 2’ ಚಿತ್ರ ನಿರ್ದೇಶಿಸಿದ್ದ ದೇವರಾಜ್‌ಕುಮಾರ್ ಸದ್ದಿಲ್ಲದೆ ಥ್ರಿಲ್ಲರ್ ಫ್ಯಾಂಟಸಿ ಕಥೆಯ ಸುತ್ತ ಹೆಣೆದಿರುವ ‘ಅನುಷ್ಕ’ ಸಿನಿಮಾದ ಶೂಟಿಂಗ್‌ ಮುಗಿಸಿದ್ದಾರೆ. ಇದು ರಾಣಿಯೊಬ್ಬಳ ಕಥೆಯಂತೆ. ಇದಕ್ಕೆ ಆಧುನಿಕಯುಗದ ಪ್ರೇಮದ ಸ್ಪರ್ಶವೂ ಇದೆ. ಮೂರು ಭಿನ್ನ ಆಯಾಮಗಳಲ್ಲಿ ಕಥೆ ಸಾಗಲಿದೆಯಂತೆ.

ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಕನ್ನಡ ಸೇರಿದಂತೆ ತೆಲುಗು ಮತ್ತು ತಮಿಳು ಭಾಷೆಯಲ್ಲಿಯೂ ಚಿತ್ರ ಮೂಡಿಬರುತ್ತಿದೆ. ತೆಲುಗಿನಲ್ಲಿ ಈ ಚಿತ್ರಕ್ಕೆ ‘ದೇವಿ ಅನುಷ್ಕ’ ಎಂದು ಹೆಸರಿಡಲಾಗಿದೆ. 

‘ಧರ್ಮದುರ್ಗ ಸಾಮ್ರಾಜ್ಯದ ರಾಣಿ ಅನುಷ್ಕಳ ಸುತ್ತ ಕಥೆ ಹೆಣೆಯಲಾಗಿದೆ. ಮಾಧ್ಯಮದಲ್ಲಿ ಬಂದ ಘಟನೆಯೊಂದನ್ನು ಚಿತ್ರಕಥೆಯಲ್ಲಿ ಸೇರಿಸಿಕೊಂಡಿದ್ದೇನೆ. ಇನ್ನೆರಡು ದಿನಗಳ ಚಿತ್ರೀಕರಣ ಬಾಕಿಯಿದೆ’ ಎಂದರು ನಿರ್ದೇಶಕರು.

ರೂಪೇಶ್‌ ಶೆಟ್ಟಿ ಈ ಚಿತ್ರದ ನಾಯಕ ನಟ. ನಾಯಕನಾಗಿ ಇದು ಅವರಿಗೆ ನಾಲ್ಕನೇ ಚಿತ್ರ. ‘ಬ್ಯಾಂಕಾಕ್‌ನಲ್ಲಿ ಚಿತ್ರದ ಹಾಡೊಂದನ್ನು ಚಿತ್ರೀಕರಿಸಲಾಗಿದೆ. ನಾನು ಚಿತ್ರದ ಹೀರೊ ಆದರೂ ನೆಗೆಟಿವ್‌ ಶೇಡ್‌ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಉಳಿದ ಚಿತ್ರಗಳಿಗಿಂತ ಇದು ಭಿನ್ನವಾದ ಸಿನಿಮಾ’ ಎಂದು ಹೇಳಿಕೊಂಡರು. 

ನಾಯಕಿ ಅಮೃತಾ ಅಯ್ಯಂಗಾರ್‌ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕಾಗಿ ಅವರು ಒಂದೂವರೆ ತಿಂಗಳ ಕಾಲ ಕುದುರೆ ಸವಾರಿ ಕೂಡ ಕಲಿತರಂತೆ. ‘ಚಿತ್ರಕ್ಕಾಗಿ ಸಾಕಷ್ಟು ಸಿದ್ಧತೆ ನಡೆಸಿದ್ದೇನೆ. ದೇವಿ ಅನುಷ್ಕ ಮತ್ತು ಆಧುನಿಕ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ’ ಎಂದು ಹೇಳಿದರು.

‘ರಾಣಿ ಅನುಷ್ಕ ಹೇಗೆ ತನ್ನ ಸಾಮ್ರಾಜ್ಯವನ್ನು ರಕ್ಷಿಸುತ್ತಾಳೆ ಮತ್ತು ಆಧುನಿಕ ಹುಡುಗಿಯಾಗಿ ಹೇಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾಳೆ ಎನ್ನುವ ಎರಡು ಭಿನ್ನ ಜಾಡಿನಲ್ಲಿ ಕಥೆ ಸಾಗುತ್ತದೆ’ ಎಂದರು.

ಎಸ್‌.ಕೆ. ಗಂಗಾಧರ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ‘ನಾವು ನಿರೀಕ್ಷಿಸಿದಂತೆ ಚಿತ್ರ ಮೂಡಿಬಂದಿದೆ’ ಎಂದರು.  

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವಿಕ್ರಂ ಸೆಲ್ವ ಸಂಗೀತ ಸಂಯೋಜಿಸಿದ್ದಾರೆ. ವೀನಸ್‌ ಮೂರ್ತಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ದೀಪಾವಳಿ ಹಬ್ಬದ ವೇಳೆ ಚಿತ್ರಮಂದಿರಗಳಲ್ಲಿ ಅನುಷ್ಕಳ ಪ್ರವೇಶಕ್ಕೆ ಚಿತ್ರತಂಡ ಸಿದ್ಧತೆ ನಡೆಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !