ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾಮೂಲಿ ನಾಯಕಿಯಾಗಿ ನಟಿಸಲಾರೆ’

‘ಕೆಜಿಎಫ್‌’ ಅಮ್ಮ ಅರ್ಚನಾಗೆ ಪ್ರಯೋಗಮುಖಿಯಾಗುವ ಆಸೆ
Last Updated 27 ಮಾರ್ಚ್ 2019, 10:22 IST
ಅಕ್ಷರ ಗಾತ್ರ

ಗರ್ಭದಿ ನನ್ನಿರಿಸಿ ಊರಲಿ ನಡೆಯುತಿರೆ

ತೇರಲಿ ಕುಳಿತಂತೆ ಅಮ್ಮಾ...

ಗುಮ್ಮ ಬಂತೆನಿಸಿ ಹೆದರಿ ನಿಂತಾಗ

ನಿನ ಸೆರಗೇ ಕಾವಲು ಅಮ್ಮಾ...

ಐದು ಭಾಷೆಗಳಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ದೂಳೆಬ್ಬಿಸಿದ ‘ಕೆಜಿಎಫ್‌’ ಸಿನಿಮಾದ ಈ ಹಾಡು ಕಿವಿಗೆ ಬೀಳುತ್ತಿದ್ದಂತೆಯೇ ಎಳೆ ವಯಸ್ಸಿನ ತಾಯಿಯೊಬ್ಬಳ ಚಿತ್ರ ಕಣ್ಮುಂದೆ ಬರುತ್ತದೆ. ತೆರೆಯ ಮೇಲೆ ಆ ತಾಯಿ ಮಗುವನ್ನೆತ್ತಿಕೊಂಡು ಕಷ್ಟಪಟ್ಟು ನಡೆಯುತ್ತಿದ್ದರೆ ಅವಳಲ್ಲಿ ಅಕ್ಕನನ್ನೋ, ತಂಗಿಯನ್ನೋ, ಮಗಳನ್ನೋ ಕಂಡುಕೊಂಡು ಗದ್ಗದಿತರಾದವರ ಸಂಖ್ಯೆ ಕಮ್ಮಿಯಲ್ಲ. ಆ ಪಾತ್ರದ ಮೂಲಕವೇ ಜನಪ್ರಿಯತೆಯ ಮುಗಿಲು ತಲುಪಿರುವ ಆ ಹೆಣ್ಣುಮಗಳ ಹೆಸರು ಅರ್ಚನಾ.

ಕಿರುತೆರೆ ಧಾರಾವಾಹಿ ವೀಕ್ಷಕರಿಗೆ ಅರ್ಚನಾ ಅಪರಿಚಿತರೇನಲ್ಲ. ನಾಲ್ಕು ವರ್ಷಗಳ ಹಿಂದೆ ‘ಮಹಾದೇವಿ’ ಧಾರಾವಾಹಿ ಮೂಲಕ ಕಿರುತೆರೆಗೆ ಅಡಿಯಿಟ್ಟ ಅವರು ‘ದುರ್ಗಾ’ ಮತ್ತು ‘ನೀಲಿ’ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ‘ದುರ್ಗಾ’ದಲ್ಲಿ ಇವರನ್ನು ನೋಡಿಯೇ ‘ಕೆಜಿಎಫ್‌’ ಚಿತ್ರದಲ್ಲಿ ನಟಿಸುವ ಅವಕಾಶ ಬಂದಿದ್ದು.

ಕೋಲಾರದ ಚಿನ್ನದಗಣಿಯ ಸುತ್ತ ನಡೆಯುವ ಕಥೆ ‘ಕೆಜಿಎಫ್‌’ ಸಿನಿಮಾದ್ದು. ಈ ಸಿನಿಮಾದ ಮೂಲಕ ಹಿರಿತೆರೆಗೆ ಅಡಿಯಿಟ್ಟ ಅರ್ಚನಾ ಕೂಡ ಕೋಲಾರ ಮೂಲದವರೇ. ಅವರ ತಂದೆ ಬೇಕರಿ ಉದ್ಯಮದಲ್ಲಿದ್ದವರು. ಬೆಂಗಳೂರು, ಚೆನ್ನೈ, ಆಂಧ್ರಪ್ರದೇಶ ಹೀಗೆ ಹಲವು ಕಡೆಗಳಲ್ಲಿ ತಂದೆಯ ಕೆಲಸದ ನಿಮಿತ್ತ ಅಲೆದಾಡಿರುವ ಅರ್ಚನಾ ವಿದ್ಯಾಭ್ಯಾಸ ಪಡೆದಿದ್ದೆಲ್ಲ ಬೆಂಗಳೂರಿನಲ್ಲಿಯೇ.

ನಟಿಯಾಗುವ ಕನಸು ಇಲ್ಲದಿದ್ದರೂ ಕಲೆಯ ಸೆಲೆ ಬಾಲ್ಯದಲ್ಲಿಯೇ ಮನಸಲ್ಲಿ ಮೊಳಕೆಯೊಡೆದಿತ್ತು. ಐದನೇ ತರಗತಿಯಲ್ಲಿದ್ದಾಗ ಭರತನಾಟ್ಯ ಕಲಿಯಲು ಶುರುಮಾಡಿದ್ದರು. ನಂತರ ಅವರು ಭರತನಾಟ್ಯದಲ್ಲಿಯೇ ಸ್ನಾತಕೋತ್ತರ ಪದವಿಯನ್ನೂ ಪಡೆದರು. ಹಾಗೆಯೇ ಕೊರಿಯೋಗ್ರಫಿಯಲ್ಲಿಯೂ ಪದವಿ ಕೂಡ ಪಡೆದಿದ್ದಾರೆ.

‘ಮಹಾದೇವಿ’ ಧಾರಾವಾಹಿಯಲ್ಲಿ ಅವಕಾಶ ಗಿಟ್ಟಿಸಿಕೊಂಡಾಗ ಕ್ಯಾಮೆರಾ ಎದುರು ನಟಿಸುವ ಕಲೆ ಅವರಿಗಿನ್ನೂ ಹೊಸದು. ‘ರಂಗಮಂದಿರದ ಮೇಲೆ ನೇರವಾಗಿ ಕಾರ್ಯಕ್ರಮ ಕೊಡುವ ಅನುಭವ ಬೇರೆಯೇ ರೀತಿಯದ್ದು. ಅಲ್ಲಿ ಕೊನೇ ಸಾಲಿನಲ್ಲಿ ಕೂತವರಿಗೂ ಕಾಣಬೇಕು ಎಂಬ ಕಾರಣಕ್ಕೆ ಅತಿಶಯವಾಗಿಯೇ ಮೇಕಪ್‌ ಮಾಡಿಕೊಳ್ಳುತ್ತೇವೆ. ಎಕ್ಸ್‌ಪ್ರೆಶನ್ ಕೂಡ ಅತಿಶಯವಾಗಿಯೇ ಇರುತ್ತದೆ. ಆದರೆ ಕ್ಯಾಮೆರಾ ಎದುರಿನ ನಟನೆ ಹಾಗಲ್ಲ. ನಮ್ಮ ಹುಬ್ಬಿನ ಸಣ್ಣ ಕದಲಿಕೆಯನ್ನೂ ಕ್ಯಾಮೆರಾ ಸೂಕ್ಷ್ಮವಾಗಿ ಸೆರೆಹಿಡಿಯುತ್ತದೆ. ಅದನ್ನು ಅರಿತು ಅಗತ್ಯವಿದ್ದಷ್ಟೇ ಭಾವಾಭಿನಯ ತೋರಬೇಕು. ಇದು ಮೊದಲಿಗೆ ಕಷ್ಟವೆನಿಸಿತ್ತು. ಆದರೆ ನಿರ್ದೇಶಕ ರಮೇಶ್‌ ಇಂದಿರಾ ಅವರ ಮಾರ್ಗದರ್ಶನದಲ್ಲಿ ಕಲಿತುಕೊಂಡೆ’ ಎಂದು ತೆರೆಮೇಲಿನ ನಟನೆಗೆ ಹೊಂದಿಕೊಂಡ ಬಗೆಯನ್ನು ಅವರು ವಿವರಿಸುತ್ತಾರೆ.

ಕೆಜಿಎಫ್‌ ಸಿನಿಮಾದ ನಂತರ ನಿಮ್ಮ ಬದುಕು ಯಾವ ಬಗೆಯಲ್ಲಿ ಬದಲಾಗಿದೆ ಎಂದು ಹೇಳಿದರೆ ‘ಏನೂ ಬದಲಾಗಿಲ್ಲ. ಮೊದಲಿನಂತೆಯೇ ಇದ್ದೇನೆ’ ಎಂದು ನಗುತ್ತಾರೆ ಅರ್ಚನಾ. ಅದರರ್ಥ ಅವಕಾಶಗಳು ಬಂದಿಲ್ಲ ಎಂದಲ್ಲ. ನಾಯಕಿಯಾಗುವ ಹಲವು ಅವಕಾಶಗಳು ಬಂದಿವೆ. ಆದರೆ ಅವೆಲ್ಲವೂ ಮಾಮೂಲಿ ಜಾಡಿನವಾಗಿದ್ದರಿಂದ ತಿರಸ್ಕರಿಸಿದ್ದಾರೆ.

‘ನಾನು ಹೇಗಿದ್ದೇನೋ ಹಾಗೆ ಇನ್ನೊಂದಿಷ್ಟು ಮೇಕಪ್‌, ಕಾಸ್ಟ್ಯೂಮ್‌ ಹಾಕಿಕೊಂಡು ತೆರೆಯ ಮೇಲೆ ಕಾಣಿಸಿಕೊಳ್ಳುವ ಪಾತ್ರ ನನಗೆ ಇಷ್ಟವಿಲ್ಲ. ನನ್ನ ಪ್ರತಿಭೆಗೆ ಸವಾಲು ನೀಡುವ ಪಾತ್ರ ಬೇಕು’ ಎನ್ನುವ ಅವರು ‘ದಂಗಲ್‌’ ಸಿನಿಮಾ ಪಾತ್ರಕ್ಕಾಗಿ ಅಮೀರ್‌ ಖಾನ್‌ ದೇಹತೂಕವನ್ನು ಹೆಚ್ಚಿಸಿ, ಇಳಿಸಿಕೊಂಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಪ್ರಯೋಗಶೀಲ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಅತೀವ ಹಂಬಲ ಇರುವ ಅರ್ಚನಾ, ‘ಕ್ಯಾನ್ಸರ್‌ ರೋಗಿ ಕಥೆ ಹೇಳುವ ಸಿನಿಮಾ ಸಿಕ್ಕರೆ ತಲೆಬೋಳಿಸಿಕೊಳ್ಳಲಿಕ್ಕೂ ಸಿದ್ಧ’ ಎನ್ನುತ್ತಾರೆ.

‘ನಾನು ನಟಿಸುತ್ತಿದ್ದೇನೆ ಅನಿಸಿದರೆ ಅದು ಫೇಕ್‌ ಆಗುತ್ತದೆ. ಪಾತ್ರದಲ್ಲಿ ತನ್ಮಯರಾಗಬೇಕು. ಆಗ ಮಾತ್ರ ಆ ಪಾತ್ರಕ್ಕೆ ಜೀವತುಂಬಲು ಸಾಧ್ಯ’ ಎಂದು ತಾಧ್ಯಾತ್ಮದ ವ್ಯಾಖ್ಯಾನವನ್ನು ಮುಂದಿಡುವ ಅರ್ಚನಾ ಸದ್ಯಕ್ಕೆ ‘ತಕಧಿಮಿತ’ ರಿಯಾಲಿಟಿ ಷೋದಲ್ಲಿ ಭಾಗವಹಿಸುತ್ತಿದ್ದಾರೆ.

‘ನನಗೆ ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್‌ ಆಗಬೇಕು ಎಂಬ ಕನಸಿಲ್ಲ. ಕಾಯುತ್ತೇನೆ. ತಡವಾದರೂ ಪರವಾಗಿಲ್ಲ. ಇಷ್ಟವಾದ ಪಾತ್ರಗಳಲ್ಲಿ ಮಾತ್ರ ನಟಿಸುತ್ತೇನೆ’ ಎನ್ನುವ ಅವರ ತಾಳ್ಮೆಯೇ ಅವರನ್ನು ಬಣ್ಣದ ಲೋಕದಲ್ಲಿ ಇನ್ನಷ್ಟು ದೂರ ನಡೆಸುವ ಇಂಧನವಾಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT