ಸೋಮವಾರ, ಜನವರಿ 25, 2021
21 °C

ಚಲನಚಿತ್ರ‌ ಕಾರ್ಮಿಕರ ಒಕ್ಕೂಟಕ್ಕೆ ಅಶೋಕ್‌ ರಾಜೀನಾಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಲನಚಿತ್ರ‌ ಕಾರ್ಮಿಕರ ಒಕ್ಕೂಟದ ಸ್ಥಾಪಕ ಅಧ್ಯಕ್ಷ ನಟ ಅಶೋಕ್‌ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸತತ ಮೂರು ದಶಕಗಳಿಂದ ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದ ಅವರು ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

‘ಕನ್ನಡ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಸ್ಥಾಪಕ ಅಧ್ಯಕ್ಷನಾಗಿ, ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹದಿಂದ ದೀರ್ಘ ಸಮಯದಿಂದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಇದೀಗ ವೈಯಕ್ತಿಕ ಕಾರಣಗಳಿಂದ ಅಧ್ಯಕ್ಷನಾಗಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನನ್ನ ರಾಜೀನಾಮೆಯನ್ನು ಸ್ವೀಕರಿಸಬೇಕೆಂದು ಕೋರುತ್ತೇನೆ. ನಿಮ್ಮೆಲ್ಲರ ಸ್ನೇಹ, ಸೌಹಾರ್ದವನ್ನು ಸದಾ ಕಾಲ ನೆನೆಯುತ್ತೇನೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಸದಾ ಕಾರ್ಮಿಕರ ಪರ ನಿಲ್ಲುತ್ತಿದ್ದ ಅಶೋಕ್‌, ಕಾರ್ಮಿಕರ ಮತ್ತು ನಿರ್ಮಾಪಕರ ನಡುವಿನ ನಾನಾ ಬಿಕ್ಕಟ್ಟುಗಳನ್ನು ಬಗೆ ಹರಿಸಿದವರು. ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳಿಗಾಗಿ ನಿರಂತರ ಹೋರಾಟ ಮಾಡಿದವರು. ಕೋವಿಡ್ 19 ಲಾಕ್‌ಡೌನ್‌ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಚಿತ್ರರಂಗದ ಕಾರ್ಮಿಕರಿಗೆ ಸಂಘಸಂಸ್ಥೆ ಹಾಗೂ ಸರ್ಕಾರದಿಂದ ತಕ್ಷಣದ ನೆರವು ಕೊಡಿಸಲು ಅಶೋಕ್‌ ಸಾಕಷ್ಟು ಶ್ರಮ ವಹಿಸಿದ್ದರು.

ಅಶೋಕ್‌ ಅವರು ಎರಡು ವರ್ಷಗಳ ಹಿಂದೆಯೂ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ಸಲ್ಲಿಸಿದ್ದರು. ಆದರೆ, ಕಾರ್ಮಿಕರ ಒತ್ತಡಕ್ಕೆ ಮಣಿದು ರಾಜೀನಾಮೆ ವಾಪಸ್‌ ಪಡೆದಿದ್ದರು.

‘ಕಾನೂನು– ಕಾಯ್ದೆಗಳು ಬದಲಾಗಿರುವ ಈ ಕಾಲಘಟ್ಟದಲ್ಲಿ ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಾರ್ಮಿಕರಿಗೆ ನ್ಯಾಯ ಕೊಡಿಸುವಂತಹ ಯುವ ಮನಸುಗಳು ಒಕ್ಕೂಟದ ನಾಯಕತ್ವ ವಹಿಸಲಿ. ಒಕ್ಕೂಟವನ್ನು 30 ವರ್ಷ ನಡೆಸಿದ್ದೇನೆ. ಈಗ ನನಗೂ ವಯಸ್ಸಾಗಿದೆ, ವಿಶ್ರಾಂತಿಯ ಅಗತ್ಯವಿದೆ’ ಎಂದು ಅಶೋಕ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು