ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಯೋಗ್ಯ’ನ ಗ್ರಾಮಾಯಣ!

Last Updated 17 ಆಗಸ್ಟ್ 2018, 10:42 IST
ಅಕ್ಷರ ಗಾತ್ರ

ಬಲಾಢ್ಯರ ಅಧಿಕಾರಲಾಲಸೆಯಿಂದ ಅಧಿಕಾರ ವಿಕೇಂದ್ರೀಕರಣದ ತಾಯಿಬೇರು ಸಡಿಲಗೊಳ್ಳುತ್ತಿದೆ. ಗ್ರಾಮ ಪಂಚಾಯಿತಿಗಳ ಮೂಲ ಆಶಯವೂ ಮರೆಯಾಗುತ್ತಿದೆ. ಹಳ್ಳಿಗಳಲ್ಲಿ ಮಾನವೀಯ ಮೌಲ್ಯಗಳಿಗೆ ಪೆಟ್ಟುಬಿದ್ದಿದೆ. ಕನಿಷ್ಠ ನೈರ್ಮಲ್ಯ ಸೌಲಭ್ಯ ಇಲ್ಲದೆ ಹೆಂಗಳೆಯರ ಸಂಕಷ್ಟ ಹೇಳತೀರದು. ಸ್ಥಳೀಯ ಸರ್ಕಾರಗಳಲ್ಲಿ ಅಧಿಕಾರದ ದುರುಪಯೋಗದಿಂದ ಆಗುವ ಅನಾಹುತಗಳನ್ನು ‘ಅಯೋಗ್ಯ’ ಚಿತ್ರದ ಮೂಲಕ ಹಾಸ್ಯಮಯವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಎಸ್‌. ಮಹೇಶ್‌ಕುಮಾರ್.

ಪ್ರಸ್ತುತ ಗ್ರಾಮಗಳಲ್ಲಿ ಪಂಚಾಯಿತಿ ರಾಜಕೀಯ ಘರ್ಷಣೆಗೆ ಕಾರಣವಾಗುತ್ತಿದೆ. ಹಳ್ಳಿ ರಾಜಕಾರಣವನ್ನು ಬಚ್ಚೇಗೌಡ (ರವಿಶಂಕರ್) ಮತ್ತು ಸಿದ್ದೇಗೌಡರ ಮೂಲಕ ನಿರ್ದೇಶಕರು ಸೊಗಸಾಗಿ ಹೇಳಿದ್ದಾರೆ.

ಈ ಚಿತ್ರದಲ್ಲೊಂದು ದೃಶ್ಯವಿದೆ. ಬಚ್ಚೇಗೌಡನ ಬಲಗೈ ಭಂಟನ ಪತ್ನಿಯು ರಾತ್ರಿವೇಳೆ ಬಹಿರ್ದೆಸೆಗೆ ಹೋಗುತ್ತಾಳೆ. ಆಗ ಬಚ್ಚೇಗೌಡನ ಬೆಂಬಲಿಗರು ಆಕೆಯ ಮಾನಭಂಗಕ್ಕೆ ಯತ್ನಿಸುತ್ತಾರೆ. ಇದು ಗೌಡನಿಗೆ ತಿಳಿದರೂ ಉಡಾಫೆಯಿಂದ ವರ್ತಿಸುತ್ತಾನೆ. ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯಗಳಿಲ್ಲದೆ ಮೊದಲು ತೊಂದರೆಗೆ ಸಿಲುಕುವುದು ಮಹಿಳೆಯರು ಎಂಬುದನ್ನು ನಿರ್ದೇಶಕರು ಸೂಚ್ಯವಾಗಿ ಹೇಳಿದ್ದಾರೆ.

ಬಚ್ಚೇಗೌಡ ಗ್ರಾಮ ಪಂಚಾಯಿತಿ ಅಧ್ಯಕ್ಷ. ಅವನ ಮಾತು ಮೀರಿದರೆ ಗ್ರಾಮಸ್ಥರಿಗೆ ಕಾಟ ತಪ್ಪಿದ್ದಲ್ಲ. ಸಿದ್ದೇಗೌಡ (ನೀನಾಸಂ ಸತೀಶ್‌) ಉಡಾಳ. ಅಮ್ಮನಿಂದ ಹಿಡಿದು ಊರಿನ ಎಲ್ಲರಿಂದಲೂ ‘ಅಯೋಗ್ಯ’ನೆಂದು ಕರೆಯಿಸಿಕೊಳ್ಳುತ್ತಾನೆ. ತಾನು ‘ಯೋಗ್ಯ’ ಎಂದು ಸಾಬೀತುಪಡಿಸಲು ಆತನದು ನಿತ್ಯ ಹರಸಾಹಸ. ಈ ನಡುವೆಯೇ ನಂದಿನಿ ಮೇಲೆ ಅವನಿಗೆ ಪ್ರೀತಿ ಅಂಕುರವಾಗುತ್ತದೆ.

ತಾನು ಬಾಲ್ಯದಲ್ಲಿ ತೊಟ್ಟಿದ್ದ ಪ್ರತಿಜ್ಞೆಯಂತೆ ಸಿದ್ದೇಗೌಡ ಪಂಚಾಯಿತಿ ಚುನಾವಣೆಯ ಕಣಕ್ಕೆ ಇಳಿಯುತ್ತಾನೆ. ಗೆಲ್ಲಲು ನಾನಾ ಕಸರತ್ತು ನಡೆಸುತ್ತಾನೆ. ಇದಕ್ಕೆ ಬಚ್ಚೇಗೌಡನಿಂದ ತೀವ್ರ ವಿರೋಧ. ಕೊನೆಗೆ, ಸಾಕಜ್ಜಿ ಚಲಾಯಿಸಿದ ಒಂದು ವೋಟು ಪಂಚಾಯಿತಿಯ ಅಧಿಕಾರದ ಚಿತ್ರಣವನ್ನೇ ಬದಲಾಯಿಸುತ್ತದೆ. ಅಜ್ಜಿ ವೋಟು ಚಲಾಯಿಸಿದ್ದು, ಯಾರಿಗೆ ಎಂಬುದನ್ನು ಚಿತ್ರದಲ್ಲಿಯೇ ನೋಡಬೇಕಿದೆ.

ಜನತಂತ್ರ ವ್ಯವಸ್ಥೆಯಲ್ಲಿ ಗು‍ಪ್ತ ಮತದಾನ ಪದ್ಧತಿಯಿದೆ. ಯಾವುದೇ, ಮತದಾರ ತಾನು ಚಲಾಯಿಸಿದ ವೋಟನ್ನು ಬಹಿರಂಗಪಡಿಸಿದರೆ ಅದು ಅಸಿಂಧುವಾಗುತ್ತದೆ. ಆದರೆ, ಚಿತ್ರದಲ್ಲಿ ಬಹಿರಂಗವಾಗಿಯೇ ಮತದಾನ ಮಾಡುವ ದೃಶ್ಯಗಳಿವೆ. ನಿರ್ದೇಶಕರಿಗೆ ಮತದಾನದ ನಿಯಮಾವಳಿಗಳ ಕನಿಷ್ಠ ತಿಳಿವಳಿಕೆ ಇಲ್ಲದಿರುವುದು ಸೋಜಿಗ ಮೂಡಿಸುತ್ತದೆ.

ನೀನಾಸಂ ಸತೀಶ್‌ ಮತ್ತು ರಚಿತಾ ರಾಮ್‌ ಅಭಿನಯ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ರವಿಶಂಕರ್‌ ಅವರದು ಅಚ್ಚುಕಟ್ಟಾದ ನಟನೆ. ತಬಲಾ ನಾಣಿ, ಶಿವರಾಜ್‌ ಕೆ.ಆರ್‌. ಪೇಟೆ, ಗಿರಿ ನಗೆಯುಕ್ಕಿಸುತ್ತಾರೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯ ‘ಏನಮ್ಮಿ...’ ಹಾಡು ಕೇಳಲು ಇಂಪಾಗಿದೆ. ಹಳ್ಳಿಯ ಸೊಬಗು ಪ್ರೀತಮ್‌ ತೆಗ್ಗಿನಮನೆ ಅವರ ಕ್ಯಾಮೆರಾದಲ್ಲಿ ಸೊಗಸಾಗಿ ಸೆರೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT