ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಷ್ಮಾನ್‌ಭವ ಎಂದ ಶಿವಣ್ಣ

Last Updated 10 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ನಟ ಶಿವರಾಜ್‌ಕುಮಾರ್‌ ಮತ್ತು ಪಿ. ವಾಸು ಅವರ ಕಾಂಬಿನೇಷನ್‌ನಡಿ ಮೂರು ವರ್ಷದ ಹಿಂದೆ ‘ಶಿವಲಿಂಗ’ ಚಿತ್ರ ತೆರೆಕಂಡಿತ್ತು. ಹಾರರ್‌ ಮಿಸ್ಟರಿ, ಕಾಮಿಡಿ, ಥ್ರಿಲ್ಲರ್‌ ಕಥನ ಇದಾಗಿತ್ತು. ನಿಗೂಢವಾಗಿ ಕೊಲೆಯಾಗುವ ರಹೀಂನ ಸುತ್ತ ತೆರೆದುಕೊಳ್ಳುವ ಈ ಕಥೆ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ‘ಆಯುಷ್ಮಾನ್‌ಭವ’ ಸಿನಿಮಾದ ಮೂಲಕ ಮತ್ತೆ ಈ ಜೋಡಿ ಒಂದಾಗಿದೆ. ಇದಕ್ಕೆ ‘ಆನಂದ್‌’ ಎಂದು ಹೆಸರಿಡಲಾಗಿತ್ತು. ಆದರೆ, ಚಿತ್ರಕಥೆಗೆ ಶೀರ್ಷಿಕೆ ಹೊಂದಾಣಿಕೆಯಾಗಲಿಲ್ಲವಂತೆ. ಹಾಗಾಗಿ, ‘ಆಯುಷ್ಮಾನ್‌ಭವ’ ಎಂದು ಹೆಸರಿಡಲಾಗಿದೆ. ನವೆಂಬರ್‌ 1ರಂದು ಚಿತ್ರ ತೆರೆ ಕಾಣುತ್ತಿದೆ.

ಸೈಕಲಾಜಿಕಲ್‌ ಎಳೆಯ ಕಥೆ ಹೊಸೆಯುವುದಲ್ಲಿ ವಾಸು ಸಿದ್ಧಹಸ್ತರು. ಈ ಚಿತ್ರದ ಕಥೆಯೂ ಅದೇ ದಾಟಿಯದ್ದಾಗಿದೆ. ಮ್ಯೂಸಿಕಲ್ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ ಇದು. ಮನುಷ್ಯನ ಬದುಕಿನ ಪ್ರಯಾಣದಲ್ಲಿ ಭಾವನೆಗಳ ಏರಿಳಿತ ಸಹಜ. ಅದರಲ್ಲಿ ಒಳ್ಳೆಯದು, ಕೆಟ್ಟದ್ದು ಇರುತ್ತದೆ. ಆ ಬಲೆಯೊಳಗೆ ವ್ಯಕ್ತಿಯೊಬ್ಬ ಹೇಗೆ ಸಿಲುಕಿಕೊಳ್ಳುತ್ತಾನೆ; ಅದರಿಂದ ಹೇಗೆ ಹೊರಬರುತ್ತಾನೆ ಎನ್ನುವುದೇ ಈ ಚಿತ್ರದ ತಿರುಳು.

ಅಂದಹಾಗೆ ದ್ವಾರಕೀಶ್‌ ಚಿತ್ರಾಲಯ ಸಂಸ್ಥೆಯಡಿ ಈ ಸಿನಿಮಾ ನಿರ್ಮಿಸಲಾಗಿದೆ. ಸಂಸ್ಥೆಯು 50ನೇ ವರ್ಷ ಪೂರ್ಣಗೊಳಿಸಿರುವ ಬೆನ್ನಲ್ಲೇ ಶಿವರಾಜ್‌ಕುಮಾರ್‌ ನಟನೆಯ ಸಿನಿಮಾವುಸಂಸ್ಥೆ ಮೂಲಕ ನಿರ್ಮಾಣವಾಗುತ್ತಿರುವುದಕ್ಕೆ ಹಿರಿಯ ನಟ ದ್ವಾರಕೀಶ್‌ ಅವರಿಗೆ ಖುಷಿಯಾಗಿದೆಯಂತೆ.

ರಚಿತಾ ರಾಮ್‌ ಅವರು ಶಿವಣ್ಣಗೆ ಜೋಡಿಯಾಗಿದ್ದಾರೆ. ಮದುವೆ ಬಳಿಕ ಬಣ್ಣದಲೋಕದಿಂದ ದೂರವೇ ಉಳಿದಿದ್ದ ‘ಪಂಚರಂಗಿ’ ಬೆಡಗಿ ನಿಧಿ ಸುಬ್ಬಯ್ಯ ಈ ಸಿನಿಮಾ ಮೂಲಕ ವೃತ್ತಿಬದುಕಿನ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದಾರೆ.

ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ಗ್ರಾಫಿಕ್ಸ್ ತಂತ್ರಗಾರಿಕೆ ಹೆಣೆಯಲಾಗಿದೆಯಂತೆ. ಚೆನ್ನೈ, ಹೈದರಾಬಾದ್ ಮತ್ತು ಮುಂಬೈನಲ್ಲಿ ವಿಷುವಲ್ ಎಫೆಕ್ಟ್ ಮಾಡಿಸಲಾಗಿದೆ. ಒಂದು ಕಾಲು ಗಂಟೆಗೂ ಹೆಚ್ಚು ಸಮಯದ ವಿಷುವಲ್ ಎಫೆಕ್ಟ್ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಗೌರಿಬಿದನೂರು, ಬೆಂಗಳೂರು, ಕೇರಳ, ಅಲಪ್ಪಿ, ಚಾಲಕುಡಿ, ಮಡಿಕೇರಿ, ಮಂಗಳೂರು ಸುತ್ತಮುತ್ತ ಶೂಟಿಂಗ್‌ ನಡೆಸಲಾಗಿದೆ. ಪಿ.ಕೆ.ಎಚ್‌. ದಾಸ್ ಅವರ ಛಾಯಾಗ್ರಹಣವಿದೆ. ಚಿತ್ರದ ಐದು ಹಾಡುಗಳಿಗೆ ಗುರುಕಿರಣ್‌ ಸಂಗೀತ ಸಂಯೋಜಿಸಿದ್ದಾರೆ. ಇದು ಅವರ ನೂರನೇ ಚಿತ್ರವೂ ಹೌದು. ಯೋಗೀಶ್ ದ್ವಾರಕೀಶ್‌ ಆರ್ಥಿಕ ಇಂಧನ ಒದಗಿಸಿದ್ದಾರೆ. ಅನಂತನಾಗ್, ಸುಹಾಸಿನಿ ಮಣಿರತ್ನಂ, ಸುಧಾರಾಣಿ, ಶಿವಾಜಿ ಪ್ರಭು, ಜೈಜಗದೀಶ್, ಸುಧಾ ಬೆಳವಾಡಿ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT