ಭಾನುವಾರ, ಸೆಪ್ಟೆಂಬರ್ 19, 2021
29 °C
Bala film

ಆಯುಷ್ಮಾನ್, ಭೂಮಿ ಮತ್ತೆ ಜೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ದಂ ಲಗಾ ಕೆ ಐಸಾ’, ‘ಶುಭ್ ಮಂಗಳ್ ಸಾವಧಾನ್’ ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿದ್ದ ಆಯುಷ್ಮಾನ್ ಖುರಾನಾ ಮತ್ತು ಭೂಮಿ ಫೆಡ್ನೇಕರ್ ಬಾಲಿವುಡ್‌ನಲ್ಲಿ ಹೊಸ ಜೋಡಿಯೆಂದೇ ಖ್ಯಾತಿಯಾಗಿದೆ. ಈ ಜೋಡಿ ಮತ್ತೊಮ್ಮೆ ಜತೆಯಾಗಿ ‘ಬಾಲಾ’ ಸಿನಿಮಾದಲ್ಲಿ ನಟಿಸುತ್ತಿರುವುದು ವಿಶೇಷ.

ಮೊದಲೆರಡು ಸಿನಿಮಾಗಳಲ್ಲಿ ಈ ಜೋಡಿಯ ನಟನೆ ವಿಮರ್ಶಕರಿಗಷ್ಟೇ ಅಲ್ಲ ಪ್ರೇಕ್ಷಕರಿಂದಲೂ ಮೆಚ್ಚುಗೆ ‍ಪಡೆದಿತ್ತು. ಬಾಕ್ಸ್ ಆಫೀಸಿನಲ್ಲೂ ಈ ಸಿನಿಮಾಗಳು ನಿರ್ಮಾಪರಿಗೆ ಲಾಭ ತಂದುಕೊಟ್ಟಿದ್ದವು. ‘ಸ್ತ್ರೀ’ ಸಿನಿಮಾ ಖ್ಯಾತಿಯ ನಿರ್ದೇಶಕ ಅಮರ್ ಕೌಶಿಕ್ ಅವರ ಹೊಸ ಚಿತ್ರ ‘ಬಾಲಾ’ದಲ್ಲಿ ಆಯುಷ್ಮಾನ್ ಮತ್ತು ಭೂಮಿ ಮತ್ತೆ ತೆರೆ ಹಂಚಿಕೊಳ್ಳುತ್ತಿರುವುದು ಪ್ರೇಕ್ಷಕರಲ್ಲಿ ಸದ್ಯಕ್ಕೆ ಕುತೂಹಲ ಮೂಡಿಸಿದೆ. 

ತೆರೆಯ ಹಿಂದೆ ಒಳ್ಳೆಯ ಸ್ನೇಹಿತರಾಗಿರುವ ಭೂಮಿ ಮತ್ತು ಆಯುಷ್ಮಾನ್ ‘ಬಾಲಾ’ದ ಬಗ್ಗೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಭೂಮಿ ಮತ್ತು ನಾನು ಒಟ್ಟಿಗೆ ನಟಿಸಿದ್ದ ಹಿಂದಿನ ಎರಡೂ ಚಿತ್ರಗಳು ಹಿಟ್‌ ಆಗಿವೆ. ನಮ್ಮ ಜೋಡಿ ಪ್ರೇಕ್ಷಕರಿಗೂ ಇಷ್ಟವಾಗಿದ್ದು ಮುಂಬರಲಿರುವ ಹೊಸ ಚಿತ್ರದಲ್ಲಿ ಇಬ್ಬರ ಕೆಮಿಸ್ಟ್ರಿ ಚೆನ್ನಾಗಿ ಕೆಲಸ ಮಾಡಲಿದೆ ಅನ್ನುವ ಆತ್ಮವಿಶ್ವಾಸವಂತೂ ಇದ್ದೇ ಇದೆ. ಭೂಮಿ ಪ್ರತಿಭಾವಂತ ನಟಿ. ಅವಳೊಂದಿಗೆ ಕೆಲಸ ಮಾಡುವುದು ಖುಷಿಯ ಸಂಗತಿ. ಸೆಟ್‌ನಲ್ಲಿ ಒಬ್ಬರಿಗೊಬ್ಬರು ತಮಾಷೆ ಮಾಡಿಕೊಳ್ಳುತ್ತಾ ಇರುವುದು ನನಗೆ ಸಂತಸ ತರುತ್ತದೆ. ಈ ಹಿಂದಿನ ಸಿನಿಮಾಗಳಲ್ಲಿ ನಾವಿಬ್ಬರೂ ವಿಭಿನ್ನ ಮತ್ತು ಹೊಸ ರೀತಿಯ ಕಥೆಗಳಲ್ಲಿ ಕಾಣಿಸಿಕೊಂಡಿದ್ದೆವು. ‘ಬಾಲಾ’ ಕೂಡಾ ವಿಭಿನ್ನ ಕಥೆ ಹೊಂದಿದ್ದು, ಈ ಚಿತ್ರದಲ್ಲಿ ನಮ್ಮ ಜೋಡಿಗೆ ಪ್ರೇಕ್ಷಕರು ಹರಸುವ ವಿಶ್ವಾಸವಂತೂ ಇದೆ. ಯೂನಿವರ್ಸಲ್ ಥೀಮ್ ಆಗುವಂಥ ವಿಷಯ ಹೊಂದಿರುವ ಈ ಚಿತ್ರ ಖಂಡಿತಾ ಪ್ರೇಕ್ಷಕರನ್ನು ಸೆಳೆಯಬಲ್ಲದು ಎಂಬ ನಂಬಿಕೆ ನನಗಿದೆ’ ಎಂದು ಆಯುಷ್ಮಾನ್ ಹೇಳಿದ್ದಾರೆ.

‘ಆಯುಷ್ಮಾನ್ ಜತೆಗೆ ಮೂರನೇ ಬಾರಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಕಾತರಳಾಗಿದ್ದೇನೆ. ನಾವಿಬ್ಬರೂ ಜೀವನದ ಸ್ವಾದ ಹೆಚ್ಚಿಸುವಂಥ ಸಿನಿಮಾಗಳಲ್ಲೇ ನಟಿಸಲು ಬಯಸುವವರು. ‘ಬಾಲಾ’  ಇತರ ಸ್ಟಿರಿಯೊಟೈಪ್ ಸಿನಿಮಾಗಳಂತಲ್ಲ’ ಎಂದು ಭೂಮಿ ಅಭಿಪ್ರಾಯ ಪಟ್ಟಿದ್ದಾರೆ. ಮೇ ಮೊದಲ ವಾರದಿಂದ ‘ಬಾಲಾ’ ಚಿತ್ರೀಕರಣ ಆರಂಭವಾಗಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.