ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಳೆ ಕೆಂಪ’ನ ವೃತ್ತಾಂತ...

Last Updated 4 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

*‘ತಿಥಿ’ ಸಿನಿಮಾಕ್ಕೆ ಸಂಭಾಷಣೆಕಾರನಾಗಿ ಕೆಲಸ ಮಾಡಿದ ನೀವು ‘ಬಳೆಕೆಂಪ’ದ ಮೂಲಕ ನಿರ್ದಶಕನಾಗಿದ್ದಿರಿ. ಇದ ಹಿಂದಿನ ಸಿದ್ಧತೆಯ ಕುರಿತು ಹೇಳಿ.

ನಿರ್ದೇಶಕನಾಗಬೇಕು ಎಂಬ ಕನಸು ನನಗೆ ಮೊದಲಿನಿಂದಲೂ ಇತ್ತು. ಆದ್ದರಿಂದಲೇ ‘ತಿಥಿ’ ಸಿನಿಮಾಕ್ಕೆ ಕೆಲಸ ಮಾಡಿದೆ. ಬರವಣಿಗೆಯಿಂದ ಹಿಡಿದು ಆ ಸಿನಿಮಾದ ಎಲ್ಲ ವಿಭಾಗಗಳಲ್ಲಿಯೂ ನಾನು ಭಾಗಿಯಾಗಿದ್ದೆ. ಆ ಚಿತ್ರ ಚಿತ್ರೀಕರಣವಾಗಿದ್ದು ನಮ್ಮೂರಿನಲ್ಲಿಯೇ. ಅದರಲ್ಲಿ ನಟಿಸಿದವರೆಲ್ಲ ನನ್ನ ಪರಿಚಯದವರೇ ಆಗಿದ್ದರು. ಹಾಗಾಗಿ ಅವರ ಜತೆಗೆ ನನಗೆ ವೈಯಕ್ತಿಕ ಬಾಂಧವ್ಯ ಇತ್ತು. ‘ತಿಥಿ’ ಸಿನಿಮಾದಲ್ಲಿ ಮಾಡಿದ ಕೆಲಸವೇ ನನಗೆ ನಿರ್ದೇಶಕ ಆಗಬಹುದು ಎಂಬ ಆತ್ಮವಿಶ್ವಾಸವನ್ನು ತಂದುಕೊಟ್ಟಿತು.

ನಿರ್ದೇಶಕಈರೇಗೌಡ
ನಿರ್ದೇಶಕಈರೇಗೌಡ

*‘ಬಳೆ ಕೆಂಪ’ ಹುಟ್ಟಿಕೊಂಡಿದ್ದು ಹೇಗೆ?

‘ತಿಥಿ’ ಸಿನಿಮಾ ಮಾಡುವಾಗ ತುಂಬ ಜನ ಹೊರಗಡೆಯ ಸ್ನೇಹಿತರು ನಮ್ಮೂರಿಗೆ ಬಂದಿದ್ದರು. ಆವಾಗ ನಾವು ಸಂಬಂಧಗಳ ಬಗ್ಗೆ ಚರ್ಚಿಸುತ್ತಿದ್ದೆವು. ಅವು ವಿವಾಹೇತರ ಸಂಬಂಧಗಳ ಕುರಿತೇ ಸುತ್ತುತ್ತಿತ್ತು. ನಗರದಲ್ಲಿ ಸಂಬಂಧಗಳ ವಿಷಯದಲ್ಲಿ ಸ್ವಚ್ಛಂದ ಇರುತ್ತದೆ. ಆದರೆ ಹಳ್ಳಿಗಳಲ್ಲಿ ಅದು ಸಾಧ್ಯವೇ ಇಲ್ಲ ಎಂದು ಹಲವು ಸ್ನೇಹಿತರು ವಾದಿಸುತ್ತಿದ್ದರು. ಆಗ ನನಗೆ ಈ ಸಂಬಂಧಗಳ ಕುರಿತು ಒಂದಿಷ್ಟು ಗೊಂದಲ ಹುಟ್ಟಿಕೊಂಡಿತು. ನನಗೆ ಅವರ ಮಾತು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಆ ಸಂದರ್ಭದಲ್ಲಿಯೇ ನನ್ನ ಮನಸಲ್ಲಿ ಒಂದೆರಡು ಪಾತ್ರಗಳು ಹೊಳೆದವು. ಅವು ನನಗೆ ಗೊತ್ತಿರುವ ನೈಜ ಜೀವನದ ಪಾತ್ರಗಳೇನೂ ಆಗಿರಲಿಲ್ಲ. ನನ್ನ ಮನಸಲ್ಲಿ ಹುಟ್ಟಿಕೊಂಡ ಪಾತ್ರಗಳು. ಮೊದಲು ಕೆಂಪಣ್ಣ ಮತ್ತು ಸೌಭಾಗ್ಯ ಎಂಬ ಆ ಎರಡು ಪಾತ್ರಗಳನ್ನು ಅರ್ಥಮಾಡಿಕೊಳ್ಳಬೇಕಿತ್ತು. ನಾನೂ ಅಂಥದೇ ಪರಿಸರದಲ್ಲಿ ಬೆಳೆದವನು. ಹಲವರ ಕಥೆಗಳನ್ನು ಕೇಳಿಸಿಕೊಂಡಿದ್ದೇನೆ. ಅವೆಲ್ಲವೂ ಸೇರಿ ಕೆಂಪಣ್ಣ ಮತ್ತು ಸೌಭಾಗ್ಯ ಎಂಬ ಪಾತ್ರಗಳಿಗೆ ಸ್ಪಷ್ಟರೂಪ ಸಿಕ್ಕಿತು. ಆ ಎರಡು ಪಾತ್ರಗಳ ಸುತ್ತಲೇ ಸಿನಿಮಾ ಹೆಣೆದುಕೊಂಡಿದೆ.

*‘ತಿಥಿ’ ಮತ್ತು ‘ಬಳೆ ಕೆಂಪ’ ಎರಡೂ ಸಿನಿಮಾಗಳು ನೀವು ಹುಟ್ಟಿಬೆಳೆದ ಪರಿಸರದಲ್ಲಿಯೇ ನಡೆಯುವ ಕಥೆ. ಎರಡೂ ಹೇಗೆ ಭಿನ್ನವಾಗಿವೆ?

‘ಬಳೆ ಕೆಂಪ’ ವರ್ಲ್ಡ್‌ ಪ್ರಿಮಿಯರ್‌ ಆಗಿದೆ. ‘ತಿಥಿ’ ಸಿನಿಮಾ ನೋಡಿದ್ದ ಹಲವು ಸ್ನೇಹಿತರುಅಲ್ಲಿ ಈ ಚಿತ್ರವನ್ನು ನೋಡಿದರು. ಅವರು ‘ತಿಥಿ’ಗಿಂತ ಇಷ್ಟು ಭಿನ್ನವಾಗಿ ನೀವು ಸಿನಿಮಾ ಮಾಡಿರಬಹುದು ಎಂದು ಕಲ್ಪಿಸಿಕೊಂಡಿರಲಿಲ್ಲ’ ಎಂದು ಹೇಳಿದರು. ಈ ಪ್ರತಿಕ್ರಿಯೆ ನನಗೆ ತುಂಬ ಖುಷಿಕೊಟ್ಟಿತು.

ಈ ಚಿತ್ರದಲ್ಲಿ ಬೇರೆ ಐಡಿಯಾ ಇದೆ. ‘ತಿಥಿ’ ಸಿನಿಮಾ ಮಾಡಿದ ಮೇಲೆ ಅಂಥದೇ ಸಿನಿಮಾ ಮಾಡಿಕೊಡಲು ಕನ್ನಡದಲ್ಲಿ ಹಲವು ಆಫರ್‌ಗಳು ಬಂದಿದ್ದವು. ಆದರೆ ಅದು ನನಗೆ ಇಷ್ಟವಿರಲಿಲ್ಲ. ನನ್ನ ಹೊಸ ಐಡಿಯಾ ಹೇಳಿದಾಗ ಯಾರೂ ಒಪ್ಪಲಿಲ್ಲ. ಅದೃಷ್ಟಕ್ಕೆ ಝೂ ಎಂಟರ್‌ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್‌ನವರು ನನ್ನ ಐಡಿಯಾವನ್ನು ನಂಬಿ ನಿರ್ಮಾಣ ಮಾಡಲು ಮುಂದೆ ಬಂದರು.

*ನೀವು ಈ ಚಿತ್ರವನ್ನು ರೂಪಿಸಿದ ಹಂತಗಳು ಹೇಗಿವೆ?

ಮೊದಲು ಒಂದು ಐಡಿಯಾ ಮನಸಲ್ಲಿ ಹುಟ್ಟಿಕೊಂಡಿತು. ಊರಿನಲ್ಲಿಯೇ ಇದ್ದು ಆ ಬಗ್ಗೆ ಯೋಚಿಸುತ್ತಾ ಹೋದಾಗ ಕಥೆ ಬೆಳೆಯುತ್ತ ಹೋಯಿತು. ಮೂರು ತಿಂಗಳು ಕೂತು ಚಿತ್ರಕಥೆ ಸಿದ್ಧಪಡಿಸಿದೆ. ಚಿತ್ರಕಥೆ ಸಿದ್ಧವಾದ ಮೇಲೆ ನನಗೆ ದೊಡ್ಡ ಸವಾಲೊಂದು ಎದುರಾಯ್ತು. ಸಂಬಂಧಗಳ ಬಗ್ಗೆ ಇರುವ ಈ ಸಿನಿಮಾವನ್ನು ಎಲ್ಲರೂ ನೋಡುತ್ತಾರೆ. ಎಲ್ಲ ಪ್ರೇಕ್ಷಕರು ಕಂಫರ್ಟಬಲ್ ಆಗಿ ನೋಡುವ ಹಾಗೆ ಮಾಡಬೇಕಿತ್ತು. ಅಲ್ಲದೆ ಈ ಸಿನಿಮಾವನ್ನು ಇನ್‌ಸೈಡರ್ ಮತ್ತು ಔಟ್‌ಸೈಡರ್ ಎರಡೂ ರೀತಿಯ ಪ್ರೇಕ್ಷಕರು ನೋಡುತ್ತಾರೆ. ಆ ಎರಡೂ ವರ್ಗದವರೂ ಅರ್ಥಮಾಡಿಕೊಳ್ಳುವಂತಿರಬೇಕು ಎಂದು ಮನಸಲ್ಲಿತ್ತು.

ನಮ್ಮೂರಿನಲ್ಲಿ ಚಿತ್ರೀಕರಿಸುವುದು ನನಗೇ ಅಷ್ಟು ಕಂಪರ್ಟ್‌ ಅನಿಸಲಿಲ್ಲ. ಹಾಗಾಗಿ ಮತ್ತೂ ಆರು ತಿಂಗಳು ಸಮಯ ತೆಗೆದುಕೊಂಡು ಕಥೆ ಹೇಳುವ ಬಗೆಯನ್ನು ಇನ್ನೂ ಕೊಂಚ ಬದಲಿಸಿದೆ. ನನ್ನ ಹೆಂಡತಿಯ ಊರಾದ ಬ್ಯಾಡರಹಳ್ಳಿಯಲ್ಲಿ ಚಿತ್ರೀಕರಣ ಮಾಡಿದೆ.

*ಈ ಸಿನಿಮಾದಲ್ಲಿ ವೃತ್ತಿಪರ ಕಲಾವಿದರಿದ್ದಾರೆಯೇ? ಹೊಸಬರೇ?

ನನ್ನ ಆಲೋಚನೆ ತುಂಬ ರಿಯಲಿಸ್ಟಿಕ್ ಆಗಿತ್ತು. ಸಿನಿಮಾ ನೈಜವಾಗಿ ಬರಬೇಕು, ಆಗ ನೋಡಿದವರ ಮನಸಲ್ಲಿ ಸಿನಿಮಾ ಹೆಚ್ಚು ಕಾಲ ಉಳಿದುಕೊಳ್ಳುತ್ತದೆ ಎಂಬ ಭಾವನೆ ಇತ್ತು. ಮೊದಲಿಗೆ ವೃತ್ತಿಪರ ಕಲಾವಿದರೇ ಹಾಕಿಕೊಳ್ಳಬೇಕು ಎಂದುಕೊಂಡಿದ್ದೆ. ವೃತ್ತಿಪರ ಕಲಾವಿದರನ್ನು ಹಾಕಿಕೊಂಡರೇ ನನಗೆ ಹೆಚ್ಚು ಸುಲಭವಾಗುತ್ತಿತ್ತು. ಆದರೆ ಬಜೆಟ್, ನಾವು ಸಿನಿಮಾ ಮಾಡುವ ಬಗೆ ಎಲ್ಲವನ್ನೂ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದಲ್ಲ. ಹಾಗಾಗಿ ವೃತ್ತಿಪರ ಕಲಾವಿದರ ಡೇಟ್ಸ್‌ ಹೊಂದಾಣಿಕೆ ಮಾಡಿಕೊಂಡು ಸಿನಿಮಾ ಮಾಡುವುದು ಕಷ್ಟ ಅನಿಸಿತು. ಅಲ್ಲದೆ ಇದು ನನ್ನ ಮೊದಲ ಸಿನಿಮಾ. ಹಾಗಾಗಿ ನನಗೆ ರಿಸ್ಕ್‌ ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ನನ್ನ ತಂಡದ ಎಲ್ಲರೂ ಹಳ್ಳಿ ಪರಿಸರದಿಂದಲೇ ಬಂದವರು. ಹಾಗಾಗಿ ಹೊಸ ಕಲಾವಿದರನ್ನೇ ಹಾಕಿಕೊಂಡೇ ಚಿತ್ರ ಮಾಡಿದೆ. ಸೌಭಾಗ್ಯ ಎಂಬ ಒಬ್ಬರಿಗೆ ಮಾತ್ರ ನಟನೆಯ ಅನುಭವ ಇದೆ. ನನ್ನ ಇಡೀ ತಂಡ, ನನ್ನ ಪರಿಸರವೇ ನನಗೆ ಕೊಟ್ಟ ಉಡುಗೊರೆ.

*ಕನ್ನಡ ಚಿತ್ರರಂಗದ ಇಂದಿನ ಪರಿಸ್ಥಿತಿ ಮತ್ತು ನಾಳಿನ ಸಾಧ್ಯತೆಗಳ ಬಗ್ಗೆ ಏನು ಹೇಳಬಯಸುತ್ತೀರಿ?

ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟ.

‘ಕನ್ನಡ ಸಿನಿಮಾಗೆ ಪ್ರೇಕ್ಷಕರಿಲ್ಲ; ಭಿನ್ನವಾಗಿ ಮಾಡಿದರೆ ಜನರಿಗೆ ಅರ್ಥ ಆಗಲ್ಲ’ ಎಂಬ ದೂರುಗಳನ್ನು ಕೇಳಿಸಿಕೊಳ್ಳುತ್ತಲೇ ಇದ್ದೆ ನಾನು. ಆದರೆ ‘ತಿಥಿ’ ಬಿಡುಗಡೆಯಾದ ಮೇಲೆ ನನಗೆ ಆಶ್ಚರ್ಯ ಕಾದಿತ್ತು. ತುಂಬ ಜನ ನೋಡಿ ಮೆಚ್ಚಿಕೊಂಡರು. ಉತ್ತರ ಕರ್ನಾಟಕದ ಮೂಲೆಮೂಲೆಗಳಲ್ಲಿಯೂ ಚಿತ್ರವನ್ನು ನೋಡಿ ಮೆಚ್ಚಿಕೊಂಡವರು ಇದ್ದಾರೆ. ಪ್ರೇಕ್ಷಕರು ಇದ್ದಾರೆ, ಆದರೆ ಅವರಿಗೆ ದಿನವೂ ಉಪ್ಸಾರೇ ತಿಂದರೆ ಬೇಜಾರಾಗುತ್ತದೆ. ಕೊಂಚ ಬೇರೆ ಬೇರೆ ತಿಂಡಿಗಳನ್ನು ಕೊಡಬೇಕು.ಬೇರೆ ಬೇರೆ ಕಲೆ, ಕಥೆ, ಪ್ರಕಾರಗಳ ಸಿನಿಮಾ ಮಾಡಿದರೆ ನೋಡುವ ಪ್ರೇಕ್ಷಕರು ಇದ್ದಾರೆ.

*ಬಳೆ ಕಂಪ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಆಲೋಚನೆ ಇದೆಯೇ?

ಒಂದು ಸಿನಿಮಾ ಬಿಡುಗಡೆ ಮಾಡುವಲ್ಲಿ ಇರುವ ಸವಾಲುಗಳು ನಿಮಗೇ ತಿಳಿದಿದೆ. ಯಾರಾದರೂ ಈ ಚಿತ್ರವನ್ನು ಬಿಡುಗಡೆ ಮಾಡಲು ಮುಂದೆ ಬಂದರೆ ನನಗೆ ತುಂಬ ಸಂತೋಷ. ಹಾಗೆ ಯಾರಾದರೂ ಬೆಂಬಲಕ್ಕೆ ಬಂದೇ ಬರುತ್ತಾರೆ ಎಂದು ನಾನೂ ಉತ್ಸಾಹದಿಂದ ಕಾಯುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT