ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿತೋಟದ ಚೆಲುವೆ 'ಶ್ರೀ ಭರತ ಬಾಹುಬಲಿ'ಗೆ ನಾಯಕಿ

Last Updated 17 ಜನವರಿ 2020, 5:37 IST
ಅಕ್ಷರ ಗಾತ್ರ

ಸಾರಾ ಹರೀಶ್‌ ಕೊಡಗಿನವರು. ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡಿರುವ ಅವರಿಗೆ ಬಣ್ಣದಲೋಕ ಹೊಸತು. ಮೊದಲ ಬಾರಿಗೆ ನಾಯಕಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ‘ಶ್ರೀಭರತ ಬಾಹುಬಲಿ’ ಚಿತ್ರ ಇದೇ ಶುಕ್ರವಾರ ತೆರೆ ಕಾಣುತ್ತಿದೆ. ಇದರಲ್ಲಿ ಅವರದು ಎನ್‌ಆರ್‌ಐ ಹುಡುಗಿಯ ಪಾತ್ರ.

ಅಪ್ಪ ಉದ್ಯಮಿ. ಅಮ್ಮ ಖಾಸಗಿ ಕಂಪನಿಯ ಉದ್ಯೋಗಿ. ಕೊಡಗಿನಲ್ಲಿ ಕಾಫಿತೋಟದ ಒಡೆತನದ ಕುಟುಂಬ ಇದು. ಮಗಳು ಒಳ್ಳೆಯ ಶಿಕ್ಷಣ ಪಡೆದು ಉನ್ನತ ಉದ್ಯೋಗಕ್ಕೆ ಹೋಗಬೇಕೆಂಬುದು ಅಪ್ಪ–ಅಮ್ಮನ ಆಸೆ. ಕಾಫಿ ಗಿಡಗಳ ನಡುವೆಯೇ ಬೆಳೆದ ಈ ಹುಡುಗಿಯ ಮನದಲ್ಲಿ ಚಿಗುರೊಡೆದಿದ್ದು ಬೇರೆಯದೆ ಕನಸು. ಪರದೆ ಮೇಲೆ ಮಿಂಚುವ, ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸುವ ಕನಸು ಅದು.

ಬೆಳ್ಳಿತೆರೆಯಲ್ಲಿ ನಟಿಸಬೇಕೆಂಬ ಕನಸು ಅಷ್ಟು ಸುಲಭವಾಗಿ ಈಡೇರುವುದಿಲ್ಲ ಎಂಬುದು ಆಕೆಗೂ ಗೊತ್ತಿತ್ತು. ಹೈಸ್ಕೂಲ್‌ ದಿನಗಳಲ್ಲಿಯೇ ಮಾಡೆಲಿಂಗ್‌ನ ಸೆಳೆತಕ್ಕೆ ಸಿಲುಕಿದ ಈ ಹುಡುಗಿ ಕಾಲೇಜು ಮೆಟ್ಟಿಲು ಹತ್ತಿದಾಗ ಮಾಡೆಲಿಂಗ್‌ ತಂಡದ ಜೊತೆಗೂಡಿದರು.

ಕಳೆದ ಒಂಬತ್ತು ವರ್ಷಗಳಿಂದ ಮಾಡೆಲಿಂಗ್‌ ಮಾಡುತ್ತಾ ಹಲವು ಜಾಹೀರಾತುಗಳಲ್ಲಿ ಮಿಂಚತೊಡಗಿದರು. ‘ಶ್ರೀಭರತ ಬಾಹುಬಲಿ’ ಚಿತ್ರತಂಡ ಹೊಸ ಮುಖದ ಹುಡುಕಾಟದಲ್ಲಿತ್ತು. ಫೇಸ್‌ಬುಕ್‌ನಲ್ಲಿ ಆಕೆಯ ಫೋಟೊ ನೋಡಿ ಆಡಿಶನ್‌ಗೆ ಬರಲು ಇಷ್ಟವೇ? ಎಂದು ಸಂದೇಶ ಕಳುಹಿಸಿತು. ಕೊನೆಗೆ, ಆ ಹುಡುಗಿಯೇ ಚಿತ್ರದ ನಾಯಕಿಯಾಗಿ ಆಯ್ಕೆಯಾದಳು.

ಕೊಡಗಿನ ಬೆಡಗಿ ಸಾರಾ ಹರೀಶ್‌ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಹೀಗೆ. ಮಂಜು ಮಾಂಡವ್ಯ ನಿರ್ದೇಶನದ ‘ಶ್ರೀಭರತ ಬಾಹುಬಲಿ’ ಸಿನಿಮಾ ಇದೇ ಶುಕ್ರವಾರ ತೆರೆ ಕಾಣುತ್ತಿದೆ.

ಸಾರಾ ಬೆಂಗಳೂರಿನ ಸಂತ ಜೋಸೆಫ್‌ ಕಾಲೇಜಿನಲ್ಲಿ ಬಿಬಿಎಂ ಪದವಿ ಪೂರೈಸಿದ್ದಾರೆ. ಬಳಿಕ ದೂರಶಿಕ್ಷಣದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಓದಿನ ನಡುವೆಯೇ ಮಾಡೆಲಿಂಗ್‌ ಮಾಡುತ್ತಿದ್ದ ಅವರಿಗೆ ಸಿನಿಮಾದಲ್ಲಿನ ನಟನೆ ಬಗ್ಗೆ ಮೊದಲಿಗೆ ಅಷ್ಟೊಂದು ಆಸಕ್ತಿ ಇರಲಿಲ್ಲವಂತೆ.

‘ಸಿನಿಮಾಗಳಲ್ಲಿ ನಟನೆಗೆ ಅವಕಾಶ ಸಿಗುವುದು ಸುಲಭವಲ್ಲ. ಆದರೆ, ಮಾಡೆಲಿಂಗ್‌ನಲ್ಲಿ ತೊಡಗಿಸಿಕೊಂಡ ಬಳಿಕ ಸಿನಿಮಾದಲ್ಲಿ ನಟಿಸುವ ಆಸೆ ಬೆಳೆಯಿತು. ನಾನು ನಟಿಸಿದ್ದ ಟಿ.ವಿ. ಜಾಹೀರಾತು ನೋಡಿ ಚಿತ್ರತಂಡ ಫೇಸ್‌ಬುಕ್‌ನಲ್ಲಿ ಮೆಸೇಜ್‌ ಕಳುಹಿಸಿತ್ತು. ಹಾಗಾಗಿ, ಆಡಿಶನ್‌ಗೆ ಹೋದೆ. ಎರಡು ದಿನಗಳಲ್ಲಿಯೇ ನನ್ನನ್ನು ನಾಯಕಿಯಾಗಿ ಆಯ್ಕೆ ಮಾಡಿರುವುದಾಗಿ ಹೇಳಿದರು. ಆಗ ನನಗಾದ ಖುಷಿ ಅಷ್ಟಿಷ್ಟಲ್ಲ’ ಎಂದು ನೆನಪಿಸಿಕೊಳ್ಳುತ್ತಾರೆ.

‘ಶ್ರೀಭರತ ಬಾಹುಬಲಿ’ ಚಿತ್ರದಲ್ಲಿ ಅವರದು ‘ಶ್ರೀ’ ಹೆಸರಿನ ಪಾತ್ರವಂತೆ. ‘ಚಿತ್ರದಲ್ಲಿ ಎನ್‌ಆರ್‌ಐ ಹುಡುಗಿಯಾಗಿ ನಟಿಸಿದ್ದೇನೆ. ವಿದೇಶದಿಂದ ಹಳೆಯ ನೆನಪು ಹೊತ್ತುಕೊಂಡು ಸ್ವದೇಶಕ್ಕೆ ಬರುತ್ತೇನೆ. ನನ್ನ ಹುಡುಕಾಟಕ್ಕೆ ಭರತ ಮತ್ತು ಬಾಹುಬಲಿ ನೆರವಾಗುತ್ತಾರೆ’ ಎಂದು ತಮ್ಮ ಪಾತ್ರದ ಬಗ್ಗೆ ವಿವರಿಸುತ್ತಾರೆ. ಸಾರಾ ಬದುಕು ಕೂಡ ಎನ್‌ಆರ್‌ಐ ಹುಡುಗಿಯ ಜೀವನಶೈಲಿಯಂತೆಯೇ ಇದೆಯಂತೆ. ಹಾಗಾಗಿ, ನಟನೆಗೆ ಕಷ್ಟವಾಗಲಿಲ್ಲವಂತೆ. ‘ಚಿತ್ರರಂಗಕ್ಕೆ ಬರುವ ಹೊಸಬರಿಗೆ ಸಿನಿಮಾದಲ್ಲಿ ನಟನೆಗೆ ಹೆಚ್ಚಿನ ಅವಕಾಶ ಸಿಗುವುದು ಕಷ್ಟ. ಆದರೆ, ನಾಯಕನಿಗೆ ನೀಡಿರುವಷ್ಟೇ ಪಾಮುಖ್ಯತೆಯನ್ನು ನನ್ನ ಪಾತ್ರಕ್ಕೂ ನೀಡಲಾಗಿದೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.

‘ಹಾಸ್ಯನಟ ಚಿಕ್ಕಣ್ಣ ಅವರನ್ನು ಹೊರತುಪಡಿಸಿದರೆ ಇಡೀ ಚಿತ್ರತಂಡ ಹೊಸದು. ನನ್ನ ಡೈಲಾಗ್‌ನಲ್ಲಿ ತಪ್ಪಾದರೆ ತಕ್ಷಣವೇ ಸರಿಪಡಿಸುತ್ತಿದ್ದರು. ಮೊದಲ ಹಂತದ ಶೂಟಿಂಗ್‌ನಲ್ಲಿ ನಟನೆ ಕೊಂಚ ಕಷ್ಟ ಎನಿಸಿದ್ದು ನಿಜ. ಚಿಕ್ಕಣ್ಣನಂತಹ ಕಲಾವಿದರ ಎದುರು ನಟಿಸುವಾಗ ಭಯ ಕಾಡುತ್ತಿತ್ತು. ಆದರೆ, ಎರಡನೇ ಹಂತದ ಶೂಟಿಂಗ್‌ನಲ್ಲಿ ಎಲ್ಲವನ್ನೂ ಸರಿಪಡಿಸಿಕೊಂಡು ನಟಿಸಿದ ತೃಪ್ತಿಯಿದೆ’ ಎಂದು ಚಿತ್ರೀಕರಣದ ಅನುಭವವನ್ನು ಬಿಚ್ಚಿಡುತ್ತಾರೆ.

ಮಾಡೆಲಿಂಗ್‌ ಮತ್ತು ಸಿನಿಮಾದಲ್ಲಿನ ನಟನೆ ನಡುವೆ ಸಾಕಷ್ಟು ವ್ಯತ್ಯಾಸವಿದೆ ಎಂದು ಅವರು ಒಪ್ಪಿಕೊಳ್ಳುತ್ತಾರೆ. ‘ಮಾಡೆಲಿಂಗ್‌ನಲ್ಲೂ ಕ್ಯಾಮೆರಾ ಎದುರಿಸುವುದು ಸಹಜ. ಆದರೆ, ಜಾಹೀರಾತುಗಳಲ್ಲಿನ ನಟನೆ ಕೆಲವು ಸೆಕೆಂಡ್‌ಗಳಷ್ಟೆ. ಅಲ್ಲಿ ನಮ್ಮ ಪ್ರತಿಭೆಯ ಸಾಬೀತಿಗೆ ಅವಕಾಶ ಕಡಿಮೆ. ಸಿನಿಮಾದಲ್ಲಿ ನಟನೆಗೆ ಹೆಚ್ಚು ಅವಕಾಶ ಸಿಗುತ್ತದೆ. ಇಲ್ಲಿ ಸಾಕಷ್ಟು ಕಲಿಯಬಹುದು. ಪಾತ್ರಕ್ಕೆ ಜೀವ ತುಂಬಲು ತಾಳ್ಮೆಯೂ ಬೇಕು’ ಎನ್ನುತ್ತಾರೆ.

ಸಮಾಜದ ಬಗ್ಗೆ ಕಾಳಜಿ ಪ್ರದರ್ಶಿಸುವಂತಹ, ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ನಟಿಸಲು ಅವರಿಗೆ ಇಷ್ಟವಂತೆ. ‘ನನ್ನ ನಟನೆಯನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎಂಬ ಭಯವಿದೆ. ಸಿನಿಮಾಗಳಲ್ಲಿ ಅವಕಾಶ ಸಿಕ್ಕಿದರೆ ಚಿತ್ರರಂಗದಲ್ಲಿಯೇ ನನ್ನ ಪಯಣ ಸಾಗಲಿದೆ’ ಎನ್ನುವ ಅವರು, ಅಂತಹ ಒಳ್ಳೆಯ ಅವಕಾಶಗಳಿಗೆ ಎದುರು ನೋಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT