ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಕರ್‌ ಗೆದ್ದ ‘ಪ್ಯಾರಾಸೈಟ್‌’ ಸೇರಿದಂತೆ 225 ಸಿನಿಮಾಗಳ ಪ್ರದರ್ಶನ

ಫೆ. 26ಕ್ಕೆ ಬೆಂಗಳೂರು ಫಿಲ್ಮ್‌ ಫೆಸ್ಟಿವಲ್‌ ಉದ್ಘಾಟನೆ
Last Updated 22 ಫೆಬ್ರವರಿ 2020, 11:36 IST
ಅಕ್ಷರ ಗಾತ್ರ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಹಮ್ಮಿಕೊಂಡಿರುವ 12ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭವು ಫೆ. 26ರಂದು ಸಂಜೆ 6ಗಂಟೆಗೆ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.

‘ಭಾರತೀಯ ಸಾಂಪ್ರದಾಯಿಕ ಸಂಗೀತ ಪರಂಪರೆ ಮತ್ತು ಸಿನಿಮಾ’ –ಈ ಸಿನಿಮೋತ್ಸವದ ಮುಖ್ಯವಸ್ತುವಾಗಿದೆ. ಇದರಲ್ಲಿ ಸಂಗೀತಗಾರರ ಆತ್ಮಕಥೆ ಆಧಾರಿತ ಸಿನಿಮಾಗಳು, ಸಂಗೀತ ಪ್ರಧಾನ ಸಿನಿಮಾಗಳ ಪ್ರದರ್ಶನವಿದೆ. ಇರಾನಿ ನಿರ್ದೇಶಕ ಶಾಹಿದ್‌ ಅಹಮಡೇಲು ನಿರ್ದೇಶನದ ‘ಸಿನಿಮಾ ಖಾರ್‌’ (ಸಿನಿಮಾ ಡಾಂಕಿ) ಉದ್ಘಾಟನಾ ಸಿನಿಮಾವನ್ನಾಗಿ ಪ್ರದರ್ಶಿಸಲಾಗುತ್ತದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ, ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್‌ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್‌, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಶಿವಾಜಿನಗರ ಕ್ಷೇತ್ರದ ಶಾಸಕ ರಿಜ್ವಾನ್‌ ಅರ್ಷದ್‌ ಅಧ್ಯಕ್ಷತೆವಹಿಸುವರು. ನಟ ಯಶ್ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಬಾಲಿವುಡ್‌ ನಟಿ ಜಯಪ್ರದಾ, ನಿರ್ಮಾಪಕ ಬೋನಿ ಕಪೂರ್ ಮತ್ತು ಹಿನ್ನೆಲೆ ಗಾಯಕ ಸೋನು ನಿಗಮ್‌ ಭಾಗವಹಿಸುವರು.

ಮಾರ್ಚ್ 4ರಂದು ವಿಧಾನಸೌಧದ ಬ್ಯಾಕ್ವೆಂಟ್‌ ಹಾಲ್‌ನಲ್ಲಿ ಸಮಾರೋಪ ನಡೆಯಲಿದೆ. ಇಸ್ರೇಲ್‌ನ ಇವೆಗಿನಿ ರುಮಾನ್‌ ನಿರ್ದೇಶನದ ‘ಗೋಲ್ಡನ್‌ ವಾಯ್ಸಸ್‌’ ಸಿನಿಮಾವನ್ನು ಪ್ರದರ್ಶಿಸಲಾಗುತ್ತದೆ. ರಾಜ್ಯ‍ಪಾಲ ವಜುಭಾಯ್‌ ವಾಲಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಪ್ರದರ್ಶನ ಎಲ್ಲೆಲ್ಲಿ?

‘ಕಳೆದ ವರ್ಷದಂತೆ ಈ ಬಾರಿಯೂ 60 ದೇಶಗಳ 225 ಸಿನಿಮಾಗಳ ಪ್ರದರ್ಶನವಿದೆ. ಸುವ್ಯವಸ್ಥಿತವಾಗಿ ಸಿನಿಮೋತ್ಸವ ನಡೆಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಒರಾಯನ್‌ ಮಾಲ್‌ನ ಪಿವಿಆರ್ ಸಿನಿಮಾಸ್‌ನ 11 ಪರದೆಗಳಲ್ಲಿ ಸಿನಿಮಾಗಳ ಪ್ರದರ್ಶನವಿದೆ. ರಾಜಾಜಿನಗರದ ನವರಂಗ್ ಚಿತ್ರಮಂದಿರ, ಚಾಮರಾಜ‍ಪೇಟೆಯ ಕನ್ನಡ ಚಲನಚಿತ್ರ ಕಲಾವಿದರ ಸಂಘ ಮತ್ತು ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರ ಫಿಲಂ ಸೊಸೈಟಿಯಲ್ಲಿಯೂ ಸಿನಿಮಾಗಳ ಪ್ರದರ್ಶನವಿದೆ’ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಎಸ್.ಎನ್‌. ಸಿದ್ದರಾಯಪ್ಪ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್‌ ಪುರಾಣಿಕ್‌ ಮಾತನಾಡಿ, ‘ಈ ಬಾರಿ ಫಿಲಂ ಬಜಾರ್ ತೆರೆಯಲಾಗುತ್ತದೆ. ಕನ್ನಡ ಸಿನಿಮಾಗಳಿಗೆ ವಿಶ್ವ ಮಾನ್ಯತೆ ಕಲ್ಪಿಸಿಕೊಡಲು ಒತ್ತು ನೀಡಲಾಗುವುದು’ ಎಂದು ತಿಳಿಸಿದರು.

ಕಲಾತ್ಮಕ ನಿರ್ದೇಶಕ ಎನ್‌. ವಿದ್ಯಾಶಂಕರ್, ‘ವಿದೇಶಗಳ 40 ಸಿನಿಮಾಗಳ ಪ್ರೀಮಿಯರ್‌ ಪ್ರದರ್ಶನವಿದೆ. ಬರ್ಲಿನ್, ಕಾನ್‌, ವೆನಿಸ್‌, ಟೊರೆಂಟೊ, ಗೋವಾ, ಮುಂಬೈ ಮತ್ತು ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ಸಿನಿಮಾಗಳು ಬೆಂಗಳೂರು ಸಿನಿಮೋತ್ಸವದಲ್ಲಿವೆ’ ಎಂದು ಮಾಹಿತಿ ನೀಡಿದರು.

‘ಕಳೆದ ವರ್ಷ ಸ್ಕ್ರಿಪ್ಟ್‌ ಲ್ಯಾಬ್‌ ಇತ್ತು. ಇದರಲ್ಲಿ ಪಾಲ್ಗೊಂಡಿದ್ದ ಐವರು ಯುವ ನಿರ್ದೇಶಕರು ಸ್ಕ್ರಿಪ್ಟ್‌ ಸಿದ್ಧಪಡಿಸಿದ್ದಾರೆ. ಆ ಸ್ಕ್ರಿಪ್ಟ್‌ಗಳ ಬಗ್ಗೆ ಚರ್ಚಿಸಲಾಗುವುದು. ಆಸ್ಕರ್‌ ಪ್ರಶಸ್ತಿ ಸೇರಿದಂತೆ ಅಂತರರಾಷ್ಟ್ರೀಯಮಟ್ಟದಲ್ಲಿ 160 ಪ್ರಶಸ್ತಿಗಳನ್ನು ಗೆದ್ದಿರುವ ‘ಪ್ಯಾರಾಸೈಟ್‌’ ಸಿನಿಮಾದ ಪ್ರದರ್ಶನವು ಈ ವರ್ಷದ ಆಕರ್ಷಣೆಯಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT