ಶನಿವಾರ, ಆಗಸ್ಟ್ 24, 2019
28 °C

ಎಲ್ಲರಿಗೊಂದು ಪಾಠ ಬ್ಲೂವೇಲ್‌ನ ‘ಮನಸಿನಾಟ’

Published:
Updated:
Prajavani

ಮೊಬೈಲ್‌ ಮತ್ತು ಕಂಪ್ಯೂಟರ್‌ ಗೇಮ್‌ಗಳಿಗೆ ದಾಸರಾಗುವುದರಿಂದ ಮಕ್ಕಳ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎನ್ನುವುದು ಬಹಳಷ್ಟು ಪಾಲಕರ ಅರಿವಿಗೆ ಬಂದಿರಬಹುದು. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ನಿರ್ಮಿಸಿರುವ ಚಿತ್ರ ಬ್ಲೂವೇಲ್‌ನ ‘ಮನಸಿನಾಟ’ ಇದೇ 16ರಂದು ತೆರೆ ಕಾಣಲಿದೆ. 

ಪ್ರಮುಖ ಪಾತ್ರದಲ್ಲಿ ಕಾಣಿಸಿರುವ ಹಿರಿಯ ನಟ ದತ್ತಣ್ಣ, ‘ಒಂದು ಸಿನಿಮಾ‌ ಮಾಡಬೇಕಾದರೆ ಗೈಡಿಂಗ್ ಲೈಟ್ (ತೋರು ಬೆಳಕು) ಕಾಣಿಸಿಬಿಡುತ್ತದೆ. ಈ ಸಿನಿಮಾ ಯಶಸ್ಸು ಆಗುತ್ತದೆಯೋ ಇಲ್ಲವೋ ಎನ್ನುವುದು ಮೊದಲೇ ಗೊತ್ತಾಗಿ ಬಿಡುತ್ತದೆ. ಚಿತ್ರದ ಕಥೆಯೂ ಚೆನ್ನಾಗಿತ್ತು. ಈ ಚಿತ್ರ ಎಲ್ಲರಿಗೂ ತಲುಪುತ್ತದೆ ಎನ್ನುವ ವಿಶ್ವಾಸವೂ ಇದೆ’ ಎಂದು ಮಾತಿಗಾರಂಭಿಸಿದರು.

ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಈ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರ ಕೊಟ್ಟಾಗ ಕೊಂಚ ಗಾಬರಿಯಾಯಿತು. ಮರುಪರಿಶೀಲನಾ ಸಮಿತಿ ಮುಂದೆ ಚಿತ್ರದ ನಿರ್ಮಾಪಕರು ತಮ್ಮ ವಾದವನ್ನು ಸಮರ್ಥವಾಗಿ ಮಂಡಿಸಿ, ಯಾವುದೇ ಕತ್ತರಿ ಪ್ರಯೋಗಕ್ಕೆ ಆಸ್ಪದ ಮಾಡಿಕೊಡದೆ ‘ಯು’ ಸರ್ಟಿಫಿಕೇಟ್ ಪಡೆದಿದ್ದಾರೆ. ಇಂತಹ ಸಿನಿಮಾಗಳು ಒಂದರ ಹಿಂದೆ ಒಂದು ಬರುತ್ತಲೇ ಇರಬೇಕು ಎನ್ನುವ ಮಾತು ಸೇರಿಸಿದರು ದತ್ತಣ್ಣ.

ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಾಲ ಕಲಾವಿದ ಹರ್ಷಿತ್, ಮೊದಲು ಕ್ಯಾಮೆರಾ ಮುಂದೆ ನಟಿಸುವಾಗ ತುಂಬಾ ಅಳುಕು ಇತ್ತು ಎಂದು ನಟನೆಯ ಅನುಭವ ಹಂಚಿಕೊಂಡರು.

ನಟಿ ಪ್ರೀತಿಕಾ ‘ನನ್ನದು ನೆಗೆಟಿವ್‌ ಶೇಡ್‌ ಇರುವ ಪಾತ್ರ. ಮಾದಕವಸ್ತು ವ್ಯಸನಿ ಹುಡುಗಿಯೊಬ್ಬಳು ಮಾದಕವಸ್ತುವಿಗಾಗಿ ಏನೆಲ್ಲ ಮಾಡುತ್ತಾಳೆ ಎನ್ನುವುದನ್ನು ನನ್ನ ಪಾತ್ರ ಹೇಳುತ್ತದೆ. ಸಮಾಜದಲ್ಲಿ ಜಾಗೃತಿ ಮೂಡಿಸಲು ಇಂತಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು.

ಗೀತ ರಚನೆಕಾರ ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿರುವ ‘ಎಲ್ಲಿ ದೂರವಾದೆಯೋ ಯಾಕೆ ಬಿಟ್ಟು ಹೋದೆಯೋ.. ಗೆಳೆಯ’ ಹಾಡನ್ನು ಗಾಯಕ ರಾಜೇಶ್ ಕೃಷ್ಣನ್ ಹಾಡಿದ್ದು, ಭಾವ ಪರವಶಗೊಳಿಸುವಂತಿದೆ.

ನಿರ್ಮಾಪಕ ಮತ್ತು ಈ ಚಿತ್ರಕ್ಕೆ ಕಥೆ ಹೆಣೆದಿರುವ ಮಂಜುನಾಥ್, ‘ಇದು ಕಮರ್ಷಿಯಲ್ ಸಿನಿಮಾ ಅಲ್ಲ, ಇದೊಂದು ವಿಶಿಷ್ಟ ಪ್ರಯೋಗಾತ್ಮಕ ಸಿನಿಮಾ. ಸೈಕಾಲಜಿಕಲ್ ಗೇಮ್ ಮತ್ತು ಸಮಾಜದಲ್ಲಿ ನಿತ್ಯ ಕಾಣುತ್ತಿರುವ ಸನ್ನಿವೇಶ ಗಮನದಲ್ಲಿಟ್ಟುಕೊಂಡು ಕಥೆ ಹೆಣೆದಿದ್ದೇನೆ. ಈ ಸಿನಿಮಾದಿಂದ ಬರುವ ಲಾಭದಲ್ಲಿ ಶೇ. 25ರಷ್ಟನ್ನು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ಕೊಡುತ್ತೇವೇ’ ಎನ್ನುವ ಮಾತು ಸೇರಿಸಿದರು.

ನಿರ್ದೇಶಕ ಆರ್‌.ರವೀಂದ್ರ ‘ಈ ಸಿನಿಮಾವನ್ನು ಪ್ರಶಸ್ತಿ ಗಮನದಲ್ಲಿಟ್ಟುಕೊಂಡೇ ಮಾಡಿದ್ದೆವು. ರಾಷ್ಟ್ರಪ್ರಶಸ್ತಿ ಪಡೆದುಕೊಳ್ಳುವ ಎಲ್ಲ ಅರ್ಹತೆ ಚಿತ್ರಕ್ಕೆ ಇತ್ತು. ಆದರೆ, ಯಾಕೆ ಪ್ರಶಸ್ತಿ ಬರಲಿಲ್ಲ ಎನ್ನುವುದು ಗೊತ್ತಿಲ್ಲ. ಪ್ರಶಸ್ತಿ ಬಂದಿದ್ದರೆ ಹೆಚ್ಚು ಜನರಿಗೆ ಈ ಸಿನಿಮಾ ತೋರಿಸಲು ಮತ್ತು ಮಕ್ಕಳ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಲು ಮಾರ್ಗಗಳು ಸಿಗುತ್ತಿದ್ದವು’ ಎಂದು ನೋವು ತೋಡಿಕೊಂಡರು. 

ನಿರ್ಮಾಪಕ ಹನುಮೇಶ್ ಪಾಟೀಲ್ ‘ನೂರಕ್ಕೂ ಹೆಚ್ಚು ಶಾಲೆಗಳಲ್ಲಿ ಸಿನಿಮಾ ಪ್ರದರ್ಶಿಸಿದ್ದು, ಈಗಾಗಲೇ ಸಿನಿಮಾ ಬಿಡುಗಡೆಯಾಗಿದೆ ಎನ್ನಬಹುದು. ಹಲವು ಚಲನಚಿತ್ರೋತ್ಸವಗಳಿಗೆ ಮತ್ತು ಪ್ರಶಸ್ತಿಗಳಿಗೆ ಈ ಸಿನಿಮಾ ನಾಮನಿರ್ದೇಶನಗೊಂಡಿದೆ’ ಎಂದರು.

ಛಾಯಾಗ್ರಹಣ ಮಂಜುನಾಥ್ ಬಿ. ನಾಯಕ್ ಅವರದ್ದು. ಸಚಿನ್‌ ಮತ್ತು ಹನುಮೇಶ್‌ ಸಂಗೀತ ಸಂಯೋಜಿಸಿದ್ದಾರೆ. ತಾರಾಗಣದಲ್ಲಿ ಯಮುನಾ ಶ್ರೀನಿಧಿ, ರಾಮಸ್ವಾಮಿ, ಚಂದನ್‌, ಮಂಜುನಾಥ್‌ ಹೆಗ್ಡೆ, ರಮೇಶ್ ಪಂಡಿತ್, ಹನುಮೇಶ್‌ ಪಾಟೀಲ್, ಡಿ. ಮಂಜುನಾಥ್‌, ಸ್ವಪ್ನಾ, ಮಾಸ್ಟರ್ ಮಂಜು ಇದ್ದಾರೆ.

Post Comments (+)