ಶುಕ್ರವಾರ, ನವೆಂಬರ್ 22, 2019
23 °C

ಮಲೈಕಾ ಬೀಚ್‌ ವೆಡ್ಡಿಂಗ್‌!

Published:
Updated:
ಮಲೈಕಾ ಅರೋರಾ

ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್‌ ಖಾನ್‌ ಮಾಜಿ ಪತ್ನಿ ಮಲೈಕಾ ಅರೋರಾ ಮತ್ತು ಆಕೆಯ ಬಾಯ್‌ಫ್ರೆಂಡ್‌ ಅರ್ಜುನ್‌ ಕಪೂರ್‌ ಹೊಸ ವರ್ಷದಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಾಲಿವುಡ್‌ ಅಂಗಳದಲ್ಲಿ ಬಹಳ ದಿನಗಳಿಂದ ಹರದಾಡುತ್ತಿವೆ. ಇಬ್ಬರಿಗೆ ಆಪ್ತರಾದವರು ಈ ಸುದ್ದಿಯನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ನಟಿ ನೇಹಾ ದೂಫಿಯಾ ಅವರ ‘ನೋ ಫಿಲ್ಟರ್‌ ನೇಹಾ’ ಷೋದಲ್ಲಿ ಮಲೈಕಾ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ವೈಟ್‌ಗೌನ್‌ನಲ್ಲಿ ಬೀಚ್‌ ಬಳಿ ಮದುವೆಯಾಗುವ ಆಸೆಯನ್ನು ಮಲೈಕಾ ಬಿಚ್ಚಿಟ್ಟಿದ್ದು, ಕೆಲ ದಿನಗಳಿಂದ ಹರಿದಾಡುತ್ತಿರುವ ಸುದ್ದಿಗೆ ಮತ್ತೆ ರಕ್ಕೆಪುಕ್ಕ ಬಂದಿದೆ. 

ಬುರ್ಜ್‌ ಮೇಲೆ ಎಸ್‌ಆರ್‌ಕೆ ಹೆಸರು

ಬಾಲಿವುಡ್‌ ನಟ ಶಾರುಕ್‌ ಖಾನ್‌ ಇತ್ತೀಚೆಗಷ್ಟೇ 54ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದುಬೈನ ಹೆಗ್ಗುರುತಾದ ಬುರ್ಜ್ ಖಲೀಫಾ ಕಿಂಗ್‌ ಖಾನ್‌ಗೆ ವಿಶೇಷವಾಗಿ ಶುಭಾಷಯ ಕೋರುವ ಮೂಲಕ ಜನ್ಮದಿನವನ್ನು ಬಹಳ ದಿನ ನೆನಪಿನಲ್ಲಿ ಉಳಿಯುವಂತೆ ಮಾಡಿದೆ. 

ವಿಶ್ವ ಪ್ರಸಿದ್ಧ ಬುರ್ಜ್ ಖಲೀಫಾ ಮೇಲೆ ವಿದ್ಯುತ್‌ ದೀಪಗಳಲ್ಲಿ ಶಾರುಖ್ ಖಾನ್‌ ಹೆಸರನ್ನು ಬರೆದು ಶುಭಾಶಯ ಕೋರಿದೆ. ಇದು ಶಾರುಕ್‌ಗೂ ಖುಷಿ ನೀಡಿದೆ.

ದುಬೈನ ಅತಿ ಎತ್ತರದ ಈ ಗೋಪುರದ ಮೇಲೆ ಬಾಲಿವುಡ್‌ ನಟರೊಬ್ಬರ ಹೆಸರು ಮೂಡಿದ್ದು ಇದೇ ಮೊದಲ ಬಾರಿ. ಗಾಂಧಿ ಜಯಂತಿಯಂದು ಮಹಾತ್ಮ ಗಾಂಧೀಜಿ ಅವರ ಚಿತ್ರ ದುಬೈ ನಿವಾಸಿಗಳ ಮನಗೆದ್ದಿತ್ತು. ಅದೇ ರೀತಿ ಭಾರತದ ತ್ರಿವರ್ಣ ಧ್ವಜ ಕೂಡ ಖಲೀಫಾ ಸೌಂದರ್ಯವನ್ನು ಹೆಚ್ಚಿಸಿತ್ತು.

ಕರಿಷ್ಮಾ ಮಾಸದ ಚರಿಷ್ಮಾ

ಸಹೋದರಿ ಕರೀನಾ ಕಪೂರ್‌ ಖಾನ್‌ ಕುಟುಂಬದ ಜತೆ ಈ ಬಾರಿಯ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಿದ ಕರಿಷ್ಮಾ ಕಪೂರ್‌ ಹಬ್ಬದ ಮರುದಿನವೇ ಕೆಲಸಕ್ಕೆ ಮರಳಿದ್ದಾರೆ.

ಮದುವೆಯ ನಂತರ ಮಕ್ಕಳ ಲಾಲನೆ, ಪೋಷಣೆಗಾಗಿ ಬಾಲಿವುಡ್‌ನಿಂದ ಬ್ರೇಕ್‌ ಪಡೆದಿದ್ದ ಕರಿಷ್ಮಾ ಈಗ ತಮ್ಮದೇ ಸ್ವಂತ ಫ್ಯಾಶನ್‌ ಬ್ರ್ಯಾಂಡ್‌ ಹುಟ್ಟು ಹಾಕಿದ್ದಾರೆ. ಸದ್ಯ ಅವರು ಬ್ರ್ಯಾಂಡ್‌ ಮಾರ್ಕೆಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮಾರುಕಟ್ಟೆಯಲ್ಲಿ ಕರಿಷ್ಮಾ ಬ್ರ್ಯಾಂಡ್‌ ಖಂಡಿತ ಮೋಡಿ ಮಾಡಲಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ದೆಹಲಿಯ ಕಾರ್ಯಕ್ರಮವೊಂದರಲ್ಲಿ ಕರಿಷ್ಮಾ ಧರಿಸಿದ್ದ ಕಡುಗಪ್ಪುಮತ್ತು ದಟ್ಟ ನೀಲಿ ಕಾಂಬಿನೇಷನ್‌ ಎಲ್ಲರ ಗಮನ ಸೆಳೆದದ್ದು ಹೊಸ ಟ್ರೆಂಡ್‌ ಹುಟ್ಟು ಹಾಕಿದೆ. ಕಪ‍್ಪು ಮತ್ತು ನೀಲಿ ಬಣ್ಣಗಳು ಪರಸ್ಪರ ಮ್ಯಾಚ್‌ ಆಗದ ಕಾರಣ ಸಾಮಾನ್ಯವಾಗಿ ಮಹಿಳೆಯರು  ಕಾಂಬಿನೇಷನ್‌ ಇಷ್ಟ ಪಡುವುದಿಲ್ಲ.ಆದರೆ, ಕರಿಷ್ಮಾ ಧರಿಸಿದ್ದ ಕಪ್ಪು ಮತ್ತು ನೀಲಿ ಕಾಂಬಿನೇಷನ್‌ ಹೊಸ ಟ್ರೆಂಡ್‌ ಹುಟ್ಟು ಹಾಕಿದೆ.

ಬಾಲಿವುಡ್‌ಗೆ ಹೃತಿಕ್‌ ತಂಗಿ

ನಟ ಹೃತಿಕ್‌ ರೋಶನ್‌ ಸಹೋದರಿ ಪಶಮಿನಾ ಬಾಲಿವುಡ್‌ ಪ್ರವೇಶಿಸಲು ಸಜ್ಜಾಗಿದ್ದಾರೆ. ರಂಗನಟಿಯಾಗಿರುವ ಪಶಮಿನಾ ರೋಶನ್‌,  ಹೃತಿಕ್‌ ಚಿಕ್ಕಪ್ಪ ಹಾಗೂ ಸಂಗೀತ ನಿರ್ದೇಶಕ ರಾಜೇಶ್ ರೋಶನ್‌ ಅವರ ಪುತ್ರಿ. 

ಮುಂಬೈನ ಬ್ಯಾರಿ ಜಾನ್ಸ್‌ ನಟನಾ ಶಾಲೆಯಲ್ಲಿ ತರಬೇತಿ ಮುಗಿಸಿರುವ ಪಶಮಿನಾಗೆ ಹೃತಿಕ್‌ ನಟನೆಯ ಪಟ್ಟು ಕಲಿಸುತ್ತಿದ್ದಾರೆ. ಇನ್ನೂ ಹೆಸರಿಡದ ಚಿತ್ರ 2020ರಲ್ಲಿ ಸೆಟ್ಟೇರಲಿದೆ. ಹೃತಿಕ್‌ ಸ್ವಂತ ಬ್ಯಾನರ್‌ ಅಡಿ ನಿರ್ಮಿಸಲಾದ ‘ಕಹೋ ನಾ ಪ್ಯಾರ್‌ ಹೈ’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಪಶಮಿನಾಗೆ ಆ ಸೌಭಾಗ್ಯ ಇಲ್ಲ. ಬೇರೆ ಬ್ಯಾನರ್‌ ಅಡಿ ತಯಾರಾಗುತ್ತಿರುವ ಚಿತ್ರದ ಮೂಲಕ ಅವರನ್ನು ಬಾಲಿವುಡ್‌ಗೆ ಪರಿಚಯಿಸಲಾಗುತ್ತಿದೆ.

ಪ್ರತಿಕ್ರಿಯಿಸಿ (+)