ಥಿಯೇಟರ್‌ಗೆ ಬರಲು ‘ಬ್ರಹ್ಮಚಾರಿ’ಯ ಸಿದ್ಧತೆ

ಶುಕ್ರವಾರ, ಜೂಲೈ 19, 2019
24 °C

ಥಿಯೇಟರ್‌ಗೆ ಬರಲು ‘ಬ್ರಹ್ಮಚಾರಿ’ಯ ಸಿದ್ಧತೆ

Published:
Updated:
Prajavani

ನಾನು ‘ನೂರು ಪರ್ಸೆಂಟ್‌ ವರ್ಜಿನ್’ ಎಂಬ ಅಡಿಬರಹದೊಂದಿಗೆ ‘ಬ್ರಹ್ಮಚಾರಿ’ ಜನರ ಮುಂದೆ ಬರಲು ಸಿದ್ಧತೆ ನಡೆಸಿದ್ದಾನೆ. ನಟ ನೀನಾಸಂ ಸತೀಶ್‌ ಮತ್ತು ಅದಿತಿ ಪ್ರಭುದೇವ ನಟಿಸಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. 

ಕೈಯಲ್ಲಿ ಮೈಕ್‌ ಕೈಗೆತ್ತಿಕೊಂಡ ನೀನಾಸಂ ಸತೀಶ್‌, ‘ನಾನು ಮಾಧ್ಯಮದವರ ಪ್ರೋತ್ಸಾಹದಿಂದ ಇಲ್ಲಿಯವರೆಗೂ ಬಂದಿರುವೆ’ ಎಂದರು.

‘ಅಯೋಗ್ಯ ಚಿತ್ರ ಸೂಪರ್‌ ಹಿಟ್ ಆಯಿತು. ಹಾಗಾಗಿ, ಮಾಸ್ ಹೀರೊ ಆಗಿ ಗುರುತಿಸಿಕೊಂಡೆ. ಆ ವೇಳೆ ನಿರ್ದೇಶಕರು ಕಥೆ ಹೇಳಿದರೆ ಅಸಡ್ಡೆಯಿಂದ ಕೇಳಿಸಿಕೊಳ್ಳುತ್ತಿದ್ದೆ. ಬ್ರಹ್ಮಚಾರಿ ಚಿತ್ರದ ನಿರ್ದೇಶಕರು ಕಥೆಯ ಒಂದು ವಾಕ್ಯ ಹೇಳಿದಾಗ ನಗುಬಂತು. ನಂತರ ಒಂದೊಂದು ಸನ್ನಿವೇಶವನ್ನೂ ಹೇಳುವಾಗ ನಗು ಉಕ್ಕಿ ಬರುತ್ತಿತ್ತು. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಪ್ರೇಕ್ಷಕರಿಗೂ ಇಷ್ಟವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪೋಷಕ ನಟ ದತ್ತಣ್ಣ ಅವರದು ಚಿತ್ರದಲ್ಲಿ ಮನೋವೈದ್ಯರ ಪಾತ್ರವಂತೆ. ‘ಸಿನಿಮಾಕ್ಕೆ ಬಂಡವಾಳ ಹೂಡುವವರು ಉದಯ್ ಬಳಿ ಸಲಹೆ ಪಡೆಯುವುದು ಉತ್ತಮ. ನಿರ್ದೇಶಕರು ಕಾಮಿಡಿ ಸನ್ನಿವೇಶಗಳನ್ನು ಚೆನ್ನಾಗಿ ಸೃಷ್ಟಿಸುತ್ತಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕಥೆಯ ಒಂದು ಎಳೆ ಹೊಳೆದಾಕ್ಷಣವೇ ಇದಕ್ಕೆ ನೀನಾಸಂ ಸತೀಶ್‍ ಅವರೇ ನಾಯಕ ನಟನಾಗಬೇಕು ಎಂದು ನಿರ್ಧರಿಸಿದೆ. ನೂರು ಪರ್ಸೆಂಟ್ ವರ್ಜಿನ್ ಎಂಬ ಅಡಿಬರಹಕ್ಕೆ ಥಿಯೇಟರ್‌ನಲ್ಲಿ ಉತ್ತರ ಸಿಗಲಿದೆ’ ಎಂದರು ನಿರ್ದೇಶಕ ಚಂದ್ರಮೋಹನ್.

‘ನಾನು ಸಿನಿಮಾ ರಂಗಕ್ಕೆ ಬಂದು ದಶಕ ಪೂರೈಸಿದ್ದೇ ಗೊತ್ತಾಗಲಿಲ್ಲ’ ಎಂದು ಸಂತಸ ಹಂಚಿಕೊಂಡರು ನಿರ್ಮಾಪಕ ಉದಯ್‌ ಕೆ. ಮೆಹ್ತಾ.

ಸಂಗೀತ ನಿರ್ದೇಶಕ ಧರ್ಮವಿಶ್ ಮತ್ತು ಹಾಸ್ಯ ನಟ ಶಿವರಾಜ್‌ ಕೆ.ಆರ್. ಪೇಟೆ ಅನುಭವ ಹಂಚಿಕೊಂಡರು. ರವಿ ವಿ. ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Post Comments (+)