ಸೋಮವಾರ, ಮಾರ್ಚ್ 27, 2023
32 °C

ಮನೆಯಲ್ಲೇ ತರಕಾರಿಗಳನ್ನು ಬೆಳೆಯಿರಿ: ನಟಿ ಸಮಂತಾ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಕ್‌ಡೌನ್ ಆರಂಭವಾದಾಗಿನಿಂದ ನಟಿ ಸಮಂತಾ ಅಕ್ಕಿನೇನಿ ಗಾರ್ಡನಿಂಗ್ ಮೇಲೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಇತ್ತೀಚೆಗೆ ಮಾವ ನಾಗಾರ್ಜುನ ಜೊತೆ ಸೇರಿ ಗಿಡ ನೆಡುವ ಮೂಲಕ ಇತರ ನಟಿಯರಿಗೂ ‘ಗ್ರೋ ಗ್ರೀನ್’ ಚಾಲೆಂಜ್ ವರ್ಗಾಯಿಸಿದ್ದರು.

ಈಗ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗಾರ್ಡನಿಂಗ್ ಕುರಿತು ವಿವರವಾಗಿ ಬರೆದುಕೊಂಡಿದ್ದಾರೆ. ಅಲ್ಲದೇ ಬೀಜಗಳನ್ನು ನೆಡುವುದರಿಂದ ಬದಲಾವಣೆಯನ್ನು ತರಬಹುದು ಎಂದಿದ್ದಾರೆ. ಜೊತೆಗೆ ಮನೆಯಲ್ಲೇ ಉದ್ಯಾನ ಬೆಳೆಸುವುದು ಭವಿಷ್ಯದ ದೃಷ್ಟಿಯಿಂದ ಎಷ್ಟು ಮುಖ್ಯ ಎಂಬುದನ್ನು ತಮ್ಮ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

‘ಗಾರ್ಡನಿಂಗ್ ಮಾಡುವುದರಿಂದ ನಮ್ಮ ಜೀವನಶೈಲಿ ಬದಲಾಗುತ್ತದೆ. ಬೀಜವನ್ನು ನೆಲದಲ್ಲಿ ಊರಿ ಗಿಡ ಬೆಳೆಸುವುದರಿಂದ ಅನೇಕ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಆರೋಗ್ಯಕರ ಆಹಾರ ಸೇವಿಸಿ ಎನ್ನುವುದನ್ನು ನೀವು ಅನೇಕ ಬಾರಿ ಕೇಳಿರಬಹುದು. ಆದರೆ ನಾನು ಹೇಳುತ್ತೇನೆ ‘‘ಆರೋಗ್ಯಕರವಾದುದ್ದನ್ನು ಬೆಳೆಯಿರಿ’’ ಇದು ನಿಜಕ್ಕೂ ತುಂಬಾ ಸರಳ’ ಎಂದು ತಮ್ಮ ಟಿಪ್ಪಣಿಯನ್ನು ಆರಂಭಿಸಿದ್ದಾರೆ.

‘ಗಿಡಗಳನ್ನು ಬೆಳೆಸಲು ಕಡಿಮೆ ಸಮಯ ಹಾಗೂ ಶ್ರಮ ಸಾಕು. 2020ರ ಆರಂಭದ ದಿನಗಳಿಂದ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎಂಬುದನ್ನು ನಾವು ಪಾಲಿಸುತ್ತಿದ್ದೇವೆ. ಅದಕ್ಕೆ ನಾವು ಒಗ್ಗಿಕೊಂಡಿದ್ದೇವೆ. ನಿಮ್ಮ ಮನೆಯಲ್ಲಿ ಖಾಲಿ ಇರುವ ಯಾವುದೇ ಜಾಗವನ್ನು ಉದ್ಯಾನವನ್ನಾಗಿ ಬದಲಿಸಿ. ಅದು ಟೆರೆಸ್‌, ಬಾಲ್ಕನಿ, ಕಿಟಕಿಯ ಕಂಬಿಗಳು ಹೀಗೆ ಖಾಲಿ ಇರುವ ಕಡೆ ಗಿಡಗಳನ್ನು ನೆಡಿ. ಮುಂದಿನ ಕೆಲ ವಾರಗಳವರೆಗೂ ಜೊತೆಯಾಗಿ ಗಿಡಗಳನ್ನು ಬೆಳೆಸೋಣ, ನಂತರ ನಿಮ್ಮ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ. ತಪ್ಪುಗಳಿಂದ ಕಲಿಯೋಣ, ಕೊನೆಗೆ ನಮಗೆ ಬೇಕಾಗಿದ್ದನ್ನು ನಾವೇ ಬೆಳೆದುಕೊಂಡ ಬಗ್ಗೆ ನಮ್ಮಲ್ಲಿ ಹೆಮ್ಮೆ ಮೂಡುತ್ತದೆ. ಮುಂದೆ ವೇಳೆ ಇನ್ನೊಂದು ಲಾಕ್‌ಡೌನ್‌ ಇದ್ದರೆ ಭಯ ಭೀತಿಯಿಂದ ಅಂಗಡಿ ಮುಂದೆ ಸಾಲು ನಿಲ್ಲುವುದು ತಪ್ಪುತ್ತದೆ. ಯಾಕೆಂದರೆ ರಾನ್‌ ಫಿನ್ಲೆ ಅವರ ಮಾತಿನಂತೆ ನಾವು ಆಗ ಗ್ಯಾಂಗ್‌ಸ್ಟಾ ಗಾರ್ಡನರ್ ಆಗಿರುತ್ತೇವೆ. ನನ್ನೊಂದಿಗೆ ಯಾರು ಕೈ ಜೋಡಿಸುತ್ತೀರಿ.. ’’ಗ್ರೋ ವಿತ್ ಮಿ’’.’ ಎಂದು ಬರೆದುಕೊಂಡಿದ್ದಾರೆ.

ಕಳೆದ ಕೆಲ ದಿನಗಳಿಂದ ಸಮಂತಾ ತಮಗೆ ಬೇಕಾದ ಆರೋಗ್ಯಕರ ತರಕಾರಿಗಳನ್ನು ಮನೆಯಲ್ಲೇ ಬೆಳೆದುಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಸಮಂತಾ ಸ್ವ–ಆರೈಕೆಯ ಬಗ್ಗೆಯೂ ಸಲಹೆಗಳನ್ನು ನೀಡಿದ್ದರು. ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದ ಸಮಂತಾ ‘ನಾವು ಬೆಳಿಗ್ಗೆ ಬೇಗನೇ ಏಳುತ್ತೇವೆ. ಧ್ಯಾನ ಮಾಡುತ್ತೇನೆ. ಸಕಾರಾತ್ಮಕ ಯೋಚನೆಗಳನ್ನು ಮಾಡುತ್ತೇವೆ. ಆ್ಯಪಲ್‌ ಸೈಡರ್ ವಿನೆಗರ್ ಸೇವಿಸುತ್ತೇವೆ. ದೇಹ ಹಾಗೂ ಮನಸ್ಸು ಎರಡನ್ನು ಶುದ್ಧ ಮಾಡಿಕೊಳ್ಳುತ್ತೇವೆ. ತ್ವಚೆಯ ದಿನಚರಿಯನ್ನು ಪಾಲಿಸುತ್ತೇವೆ. ವ್ಯಾಯಾಮ, ಹೆಚ್ಚು ಹೆಚ್ಚು ನೀರು ಕುಡಿಯವುದು ಮುಂತಾದ ಕ್ರಮಗಳನ್ನು ಪಾಲಿಸುತ್ತೇವೆ’ ಎಂದು ಕಪ್ಪು–ಬಿಳುಪಿನ ಚಿತ್ರವನ್ನು ಹಂಚಿಕೊಂಡು ಬರೆದುಕೊಂಡಿದ್ದರು.

ಸದ್ಯ ವಿಜಯ್‌ ಸೇತುಪತಿ ಅಭಿಯನದ ‘ಕಾಥವಾಕುಲ ರೆಂಡು ಕಾದಲ್’‌ ಸಿನಿಮಾದಲ್ಲಿ ಸಮಂತಾ ಬಣ್ಣ ಹಚ್ಚಲಿದ್ದಾರೆ. ಈ ಸಿನಿಮಾದಲ್ಲಿ ನಯನತಾರಾ ಕೂಡ ನಟಿಸಲಿದ್ದಾರೆ. ವಿಗ್ನೇಶ್ ಶಿವನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು