ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೈರಾಗಿ’ ಸ್ಯಾಟಲೈಟ್‌ ಹಕ್ಕು ₹10 ಕೋಟಿಗೂ ಅಧಿಕ ಮೊತ್ತಕ್ಕೆ ಮಾರಾಟ

Last Updated 14 ಜೂನ್ 2022, 11:26 IST
ಅಕ್ಷರ ಗಾತ್ರ

ಎಸ್‌.ಡಿ. ವಿಜಯ್ ಮಿಲ್ಟನ್ ನಿರ್ದೇಶನದ, ನಟ ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ ಜುಲೈ 1ಕ್ಕೆ ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನವೇ ಚಿತ್ರ ಲಾಭದಲ್ಲಿದ್ದು, ಚಿತ್ರದ ಸ್ಯಾಟಲೈಟ್‌ ಹಕ್ಕುಗಳು ₹10 ಕೋಟಿಗೂ ಅಧಿಕ ಮೊತ್ತಕ್ಕೆ ಮಾರಾಟವಾಗಿದೆ.

ಈ ಕುರಿತು ಮಾಹಿತಿ ನೀಡಿದ ನಿರ್ಮಾಪಕ ಕೃಷ್ಣ ಸಾರ್ಥಕ್‌, ‘ಕನ್ನಡ ಟಿ.ವಿ. ಹಕ್ಕು, ₹10 ಕೋಟಿಗೂ ಅಧಿಕ ಮೊತ್ತಕ್ಕೆ ಮಾರಾಟವಾಗಿದೆ. ಈಗಾಗಲೇ ನಾನು ಸೇಫ್‌ ಆಗಿದ್ದೇನೆ. ಚಿತ್ರಮಂದಿರಗಳ ಮಾತುಕತೆ ನಡೆಯುತ್ತಿದ್ದು, ಈ ವಾರ ಅಥವಾ ಮುಂದಿನ ವಾರದಲ್ಲಿ ಲಾಭದಲ್ಲಿರುತ್ತೇನೆ’ ಎಂದಿದ್ದಾರೆ. ಸದ್ಯಕ್ಕೆ ಈ ಸಿನಿಮಾ ಕನ್ನಡದಲ್ಲಷ್ಟೇ ಬಿಡುಗಡೆಯಾಗುತ್ತಿದ್ದು, ಇತರೆ ಭಾಷೆಗಳಿಂದಲೂ ಡಬ್ಬಿಂಗ್‌ಗೆ ಬೇಡಿಕೆ ಬಂದಿದೆ.

ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಶಿವರಾಜ್‌ಕುಮಾರ್‌, ‘ಶಿವಪ್ಪ ಎನ್ನುವುದು ಲೋ ಪ್ರೊಫೈಲ್‌ ‍ಪಾತ್ರ. ಈತ ಹುಲಿವೇಷ ಕಲಾವಿದ. ಆದರೆ ಈತನ ಬಡತನದಲ್ಲೂ ಗತ್ತು ಇದೆ. ಇದೊಂದು ಭಾವನಾತ್ಮಕ ಸಿನಿಮಾ. ಶಿವಪ್ಪನ ವ್ಯಕ್ತಿತ್ವ ಸರಳ. ಹೀಗಾಗಿ ನನಗೂ ಈ ಪಾತ್ರ ಹಿಡಿಸಿತು. ನನ್ನ ಹಾಗೂ ‘ಡಾಲಿ’ ಧನಂಜಯ್‌ ಪಾತ್ರ ಯಾವ ರೀತಿ ಇರಲಿದೆ ಎನ್ನುವುದನ್ನು ಚಿತ್ರಮಂದಿರದಲ್ಲೇ ನೋಡಬೇಕು’ ಎಂದರು.

ಸದ್ಯಕ್ಕೆ ತಮ್ಮದೇ ಬ್ಯಾನರ್‌ನ ‘ವೇದ’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಶಿವರಾಜ್‌ಕುಮಾರ್‌, ಶೀಘ್ರದಲ್ಲೇ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಅವರು ಆ್ಯಕ್ಷನ್‌ ಕಟ್‌ ಹೇಳಲಿರುವ ಸಿನಿಮಾವೊಂದರಲ್ಲೂ ನಟಿಸಲಿದ್ದಾರೆ. ಈ ಕುರಿತು ಮುಂದಿನ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳಲಿದ್ದೇನೆ ಎಂದಿದ್ದಾರೆ ಶಿವರಾಜ್‌ಕುಮಾರ್.

‘ಇದು ಪ್ಯಾನ್‌ ಇಂಡಿಯಾ ಸಿನಿಮಾ ಕಾಲ. ಬೇರೆ ಭಾಷೆ ಸಿನಿಮಾಗಳಲ್ಲೂ ನಟಿಸುತ್ತೇನೆ. ರಜನಿಕಾಂತ್‌ ಅವರ ಜೊತೆ ತೆರೆ ಹಂಚಿಕೊಳ್ಳುವ ಪ್ರಾಜೆಕ್ಟ್‌ ಇನ್ನೂ ಆರಂಭಿಕ ಹಂತದಲ್ಲಿದೆಯಷ್ಟೇ. ಹೀಗಾಗಿ ಹೆಚ್ಚೇನು ಹೇಳುವುದಿಲ್ಲ. ಕಮಲಹಾಸನ್‌ ಅವರ ಜೊತೆ ನಟಿಸಬೇಕು ಎನ್ನುವುದು ನನ್ನ ಆಸೆ’ ಎಂದರು ಶಿವರಾಜ್‌ಕುಮಾರ್‌.

ಚಾಮರಾಜನಗರದಲ್ಲಿ ‘ಬೈರಾಗಿ’ ಚಿತ್ರದ ಪ್ರಿರಿಲೀಸ್‌ ಕಾರ್ಯಕ್ರಮ ಆಯೋಜಿಸಲು ಚಿತ್ರತಂಡ ನಿರ್ಧರಿಸಿದೆ. ಜೂನ್‌ 24ರಂದು ಬೆಂಗಳೂರಿನಿಂದ ರೋಡ್‌ಶೋ ಆರಂಭಿಸಿ, ರಾಮನಗರ, ಚೆನ್ನಪಟ್ಟಣ, ಮದ್ದೂರು, ಮೈಸೂರಿಗೆ ಚಿತ್ರತಂಡ ಭೇಟಿ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT