ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾತ್ರಕ್ಕಾಗಿ ಪಲ್ಲಂಗ’ವೆಂಬ ಉರಿಯ ನಾಲಿಗೆ!

Last Updated 20 ಅಕ್ಟೋಬರ್ 2018, 7:22 IST
ಅಕ್ಷರ ಗಾತ್ರ

ಮೊದಲಿನಿಂದಲೂ ಲೈಂಗಿಕ ಶೋಷಣೆಯ ವಿರುದ್ಧ ಮಾತನಾಡುತ್ತಲೇ ಬಂದಿದ್ದ ನಟಿ ಶ್ರುತಿ ಹರಿಹರನ್ ದೊಡ್ಡ ಬಾಂಬ್ ಸಿಡಿಸಿದ್ದಾರೆ. ಚಿತ್ರರಂಗದ ಪಡಸಾಲೆಯಲ್ಲಿಯೇ ನಿಂತು ಖ್ಯಾತ ನಟನೊಬ್ಬನ ಮೇಲೆ ಹೆಸರು ಹಿಡಿದು ಆರೋಪ ಮಾಡುವುದು ಸಣ್ಣ ವಿಷಯವೇನಲ್ಲ. ಅದರ ಪರಿಣಾಮಗಳ ಅರಿವೂ ಅವರಿಗೆ ಇಲ್ಲದಿಲ್ಲ. ಆದರೆ ‘ನಾನಲ್ಲದಿದ್ದರೆ ಇನ್ಯಾರೂ ಮಾತನಾಡಲಾರರು’ ಎಂಬ ಕಾರಣಕ್ಕೆ, ‘ನನ್ನೊಂದಿಗೆ ಹಲವರು ಇಂಥ ಕಥೆಗಳನ್ನು ಹಂಚಿಕೊಳ್ಳಲು ಮುಂದೆ ಬರುತ್ತಾರೆ’ ಎಂಬ ನಂಬಿಕೆಯೊಂದಿಗೆ ಅವರು ದಿಟ್ಟವಾಗಿ ಮಾತನಾಡಿದ್ದಾರೆ. ‘ಪ್ರಜಾವಾಣಿ’ ಬಳಗದ ಸುಧಾ ವಾರಪತ್ರಿಕೆಗೆ ಬರೆದಿರುವ ಲೇಖನದಲ್ಲಿ ಅವರು ‘ವಿಸ್ಮಯ’ ಚಿತ್ರೀಕರಣದ ವೇಳೆ ಅನುಭವಿಸಿದ ಅಹಿತರಕ ಅನುಭವ ಹಂಚಿಕೊಂಡಿದ್ದಾರೆ. ಹಿರಿಯ ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಆರೋಪವನ್ನೂ ಮಾಡಿದ್ದಾರೆ.

ಶ್ರುತಿ ಸಿಡಿಸಿರುವ ಕಿಡಿಯ ಬೆಂಕಿ ಎಲ್ಲೆಲ್ಲಿ ಚಾಚಿಕೊಳ್ಳುತ್ತದೆ ಎನ್ನುವುದನ್ನು ಈಗಲೇ ಹೇಳಾಗದು. ಆದರೆ ಗಾಂಧಿನಗರದ ದೊಡ್ಡ ಬಂಗಲೆಯ ಆಧಾರಸ್ತಂಬಗಳು ಕಂಪಿಸತೊಡಗಿರುವುದರಂತೂ ಸುಳ್ಳಲ್ಲ. ಇತ್ತೀಚೆಗೆ ನಟಿ ಸಂಗೀತಾ ಭಟ್ ಚಿತ್ರರಂಗದಲ್ಲಿ ತಮ್ಮ ಮೇಲೆ ಆದ ಲೈಂಗಿಕ ಶೋಷಣೆಯನ್ನು ಹೆಸರು ಹೇಳದೆಯೇ ಹಂಚಿಕೊಂಡಿದ್ದರು. ಅದನ್ನು ಓದಿದ ಕೆಲವರು ತಮ್ಮಷ್ಟಕ್ಕೆ ತಾವೇ ‘ಹೆಸರು ಹೇಳುವ ಧೈರ್ಯ ಯಾರಿಗಿದೆ?’ ಎಂದು ಕುಹುಕದ ನಗೆಯನ್ನೂ ನಕ್ಕಿದ್ದರು. ಆದರೆ ಇದೀಗ ಅದೇ ಹಾದಿಯಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಶ್ರುತಿ ನೇರವಾಗಿ ಹೆಸರು ಹೇಳಿಯೇ ಆರೋಪ ಮಾಡುವ ದಿಟ್ಟತನ ತೋರಿದ್ದಾರೆ. ಇದು ಗಾಂಧಿನಗರದ ದೊಡ್ಡ ದೊಡ್ಡ ಸ್ಟಾರ್‌ ನಟರು, ನಿರ್ದೇಶಕರ ಎದೆಯಲ್ಲಿ ನಡುಕ ಹುಟ್ಟಿಸಿದೆಯಂತೆ.

ಇದುವರೆಗೆ ಕನ್ನಡ ಚಿತ್ರರಂಗದಲ್ಲಿ ಆಗೀಗ ಕೇಳಿಬರುತ್ತಿದ್ದ ಲೈಂಗಿಕ ಶೋಷಣೆಯ ಆರೋಪಗಳಿಗೆ ಚಿತ್ರರಂಗದ ಹಿರಿಯರಾಗಲಿ, ವಾಣಿಜ್ಯಮಂಡಳಿಯಾಗಲಿ ಸ್ಪಂದಿಸಿದ ರೀತಿ ಆರೋಗ್ಯಕರವೇನೂ ಆಗಿರಲಿಲ್ಲ. ಚೇತನ್ ಹೊರತುಪಡಿಸಿ ಇದುವರೆಗೆ ಯಾವೊಬ್ಬ ನಟನೂ ಲೈಂಗಿಕ ಶೋಷಣೆಯ ವಿರುದ್ಧವಾಗಲಿ, ‘ಮೀ ಟೂ’ ಅಭಿಯಾನವನ್ನು ಬೆಂಬಲಿಸಿಯಾಗಲಿ ಮಾತನಾಡಿದ ಉದಾಹರಣೆಗಳು ಸಿಗುವುದೇ ಇಲ್ಲ. ಹಿಂದೊಮ್ಮೆ (ಪಾತ್ರಕ್ಕಾಗಿ ಪಲ್ಲಂಗ) ಕ್ಯಾಸ್ಟಿಂಗ್ ಕೌಚ್ ವಿರುದ್ಧ ಮಾತನಾಡಿದ್ದಕ್ಕಾಗಿ ಚಿತ್ರರಂಗದ ಸಂಸ್ಥೆಯೊಂದು ನೋಟಿಸ್‌ ನೀಡಿದ ಕಥೆಯೂ ಗಾಂಧಿನಗರದಲ್ಲಿ ಹೆಚ್ಚು ಸುದ್ದಿಮಾಡದೆ ಮರೆತುಹೋಯ್ತು.

ಮಾಧ್ಯಮಗಳಲ್ಲಿ ಶ್ರುತಿ ಹೇಳಿದ ಲೈಂಗಿಕ ಶೋಷಣೆಯ ಕಥೆ ಪ್ರಸಾರವಾಗುತ್ತಿದ್ದ ಹಾಗೆ ಚಂದನವನದಲ್ಲಿ ತಲ್ಲಣ ಹುಟ್ಟಿಕೊಂಡಿದೆ. ಈ ಘಟನೆ ಖಂಡಿತ ಇನ್ನೊಂದಿಷ್ಟು ಜನರಿಗೆ ತಮ್ಮ ‘ಮೀ ಟೂ’ ಕಥೆಯನ್ನು ಹಂಚಿಕೊಳ್ಳಲು ಸ್ಫೂರ್ತಿಯನ್ನು ನೀಡುತ್ತದೆ. ಹಾಗೆಯೇ ಇನ್ನೊಂದಿಷ್ಟು ಜನಪ್ರಿಯ ಮುಖವಾಡಗಳು ತಮ್ಮ ಅಸಲೀಮುಖ ಬಯಲಾಗದ ಹಾಗೆ ‘ಬುಡ ಭದ್ರ’ ಮಾಡಿಕೊಳ್ಳುವ ಪ್ರಯತ್ನದಲ್ಲಿಯೂ ತೊಡಗಿಕೊಳ್ಳುತ್ತಾರೆ. ಈ ಘರ್ಷಣೆ ಇನ್ನೆಷ್ಟು ಅನಾಹುತಗಳಿಗೆ ಎಡೆ ಮಾಡಿಕೊಡುತ್ತದೆ ಎನ್ನುವುದನ್ನು ಈಗಲೇ ಹೇಳಲಾಗದು. ಶ್ರುತಿ ಹರಿಹರನ್ ಜತೆಗೆ ಒಂದಿಷ್ಟು ಸಂವೇದನಾಶೀಲ ವ್ಯಕ್ತಿಗಳು ನಿಂತರೆ ಅದು ಚಿತ್ರರಂಗದ ಜೀವಂತಿಕೆಯನ್ನು ಸೂಚಿಸುತ್ತದೆ. ಹಿಂದಿನ ಎಲ್ಲ ಪ್ರಕರಣಗಳ ಹಾಗೆ ಈ ಪ್ರಕರಣವೂ ಹತ್ತರಲ್ಲಿ ಹನ್ನೊಂದಾಗಿ ಮುಚ್ಚಿಹೋದರೆ ಕೊಳೆಯುತ್ತಿರುವ ಗಂಧದ ಮರದ ಬುಡಕ್ಕೆ ಇನ್ನಷ್ಟು ಹುಳ ಬೀಳುತ್ತದೆ.

‘ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ಶೋಷಣೆ ಇಲ್ಲವೇ ಇಲ್ಲ’ ಎನ್ನುವವರ ಜತೆಗೆ ಒಂದಿಷ್ಟು ಅನಾಮಿಕ ಕಥೆಗಳನ್ನೂ ಆ ಕರಾಳ ಕಥೆಗಳು ಕೈ ಮಾಡಿ ತೋರಿಸುವ ಸತ್ಯಗಳನ್ನೂ ಕಂಡುಕೊಳ್ಳಲು ಸಾಧ್ಯವೇ ಎಂಬುದನ್ನು ಪ್ರಯತ್ನಿಸೋಣ ಬನ್ನಿ.

ಘಟನೆ 1

ಅದೊಂದು ಸಿನಿಮಾದ ಪತ್ರಿಕಾಗೋಷ್ಠಿ. ಕಣ್ಣಿನಲ್ಲೇ ಕೆಂಡ ಕಾರುವ ಆ ನಟ ಸೂಪರ್ ಸ್ಟಾರ್. ಪತ್ರಿಕಾಗೋಷ್ಠಿ ಮುಗಿದಿದ್ದೇ ಪಾನಗೋಷ್ಠಿ ಆರಂಭವಾಯ್ತು. ಮತ್ತು ಏರುತ್ತಿದ್ದಂತೆಯೇ ಗ್ಲಾಸ್‌ ಬಿಟ್ಟ ಅವನ ಕೈ ಹಿಡಿದಿದ್ದು ತನ್ನ ಸಹನಟಿಯ ತೋಳನ್ನು! ಸುತ್ತ ಕೂತಿದ್ದ ಎಲ್ಲರೂ ನೋಡುತ್ತಿರುವ ಹಾಗೆಯೇ ಅವನು ಆ ನಟಿಯನ್ನು ಎಳೆದುಕೊಂಡು ಹೋಟೆಲ್ ರೂಮು ಸೇರಿಯಾಗಿತ್ತು. ಹೊರಗೆ ಕೂತಿದ್ದವರ ಮುಸಿಮುಸಿ ನಗು...

ಘಟನೆ 2

ಇನ್ನೊಂದು ಸಿನಿಮಾದ ಪತ್ರಿಕಾಗೋಷ್ಠಿ. ಆ ಚಿತ್ರದ ನಾಯಕ ನಟ ಹುಲಿಯಂತೆ ಗರ್ಜಿಸಲು ಫೇಮಸ್ಸು. ಪತ್ರಿಕಾಗೋಷ್ಠಿ ಮುಗಿದ ಹಾಗೆಯೇ ಅವನ ದೃಷ್ಟಿ ಆ ಸಿನಿಮಾದ ನಾಯಕಿಯ ಮೇಲೆ ಬಿತ್ತು. ಮರುಕ್ಷಣದಲ್ಲಿ ಅವನ ಕೈ ಅವಳ ತೋಳನ್ನು ಬಿಗಿದು ಹಿಡಿದಿತ್ತು. ಸುತ್ತ ಕೂತಿದ್ದವರು ಮುಂದಾಗುವುದನ್ನು ಊಹಿಸಿ ಮುಸಿಮುಸಿ ನಗುತ್ತಿದ್ದರು. ಆ ನಟಿಯ ಮುಖದಲ್ಲಿ ಸಂತೆಯಲ್ಲಿ ಬೆತ್ತಲೆ ನಿಂತಷ್ಟು ಅವಮಾನ ಮಡುಗಟ್ಟಿತ್ತು. ಅವಳ ಕೊಸರಾಟ ಹುಲಿಗೆ ಕತ್ತುಕೊಟ್ಟ ಜಿಂಕೆಯ ಹಾಗೆ ವ್ಯರ್ಥವಾಗುತ್ತಿತ್ತು. ಆ ನಾಯಕ ಅವಳನ್ನು ಎಳೆದುಕೊಂಡು ಹೋಗಿ ರೂಮಿನ ಬಾಗಿಲು ಹಾಕಿಕೊಂಡ. ಮತ್ತೆ ಬಾಗಿಲು ತುಸುವೇ ತೆರೆದು ಹೊರಗಿಣುಕಿ, ಕ್ರೂರವಾಗಿ ನಕ್ಕು ‘ಬಾಯ್’ ಎಂದು ಕೈ ಮಾಡಿ ಒಳಗೆ ಸೇರಿಕೊಂಡ.

ಘಟನೆ 3

ಆ ಚಿತ್ರದ ಚಿತ್ರೀಕರಣ ಮುಗಿದಿತ್ತು. ನಾಯಕಿಗೆ ಸಂಭಾವನೆ ಕೊಡುವುದು ಬಾಕಿ ಇತ್ತು. ಆದರೆ ಅದನ್ನು ಕೊಡದೇ ಸತಾಯಿಸುತ್ತಿದ್ದರು. ಆ ನಾಯಕಿಯ ತಾಯಿ ತೀವ್ರವಾದ ಕಾಯಿಲೆಯಿಂದ ಆಸ್ಪತ್ರೆಯಲ್ಲಿ ಮಲಗಿದ್ದಾರೆ. ಅವರನ್ನು ನೋಡಲು ಹೋಗುವ ಧಾವಂತ. ಯಾಕೆ ಸಂಭಾವನೆ ಕೊಟ್ಟಿಲ್ಲ; ಸ್ವಲ್ಪ ಹೊತ್ತಿಗೇ ತಿಳಿಯಿತು. ಚಿತ್ರದ ನಾಯಕನಿಗೆ ಚಿತ್ರೀಕರಣದುದ್ದಕ್ಕೂ ಅವಳು ‘ಕೈಗೆ ಸಿಗದೆ’ ತಪ್ಪಿಸಿಕೊಂಡಿದ್ದಳು. ಸಂಭಾವನೆ ಸಿಕ್ಕುಬಿಟ್ಟರೆ ಮತ್ತೆಂದೂ ಸಿಗಲಾರಳು ಎಂಬುದನ್ನು ತಿಳಿದಿದ್ದ ನಾಯಕ ತನ್ನ ಪ್ರಭಾವ ಬಳಸಿ ಹಣವನ್ನು ತಡೆಹಿಡಿದಿದ್ದ. ಅವಳು ಚಡಪಡಿಸುತ್ತಿರುವಾಗಲೇ ಆ ನಟ ಅಲ್ಲಿಗೆ ಬಂದುಮುಟ್ಟಿದ್ದ. ತಾಯಿಯ ಕಾಯಿಲೆಯ ವಿಷಯ ತಿಳಿಸಿ ಅಂಗಲಾಚಿದಳು, ಕೈ ಮುಗಿದಳು... ಊಹೂಂ, ಏನು ಪ್ರಯೋಜನವಾಗಲಿಲ್ಲ. ನಾಯಕನಟನ ನಿಜಜೀವನದ ಅಟ್ಟಹಾಸ ಯಾವ ಸಿನಿಮಾ ಖಳನನ್ನೂ ಬೆಚ್ಚಿಬೀಳಿಸುವ ಹಾಗಿತ್ತು.

ಘಟನೆ 4

ಕನ್ನಡ ಚಿತ್ರರಂಗದೊಂದಿಗೆ ಹಲವು ವರ್ಷಗಳ ಒಡನಾಟ ಹೊಂದಿರುವ ಹಿರಿಯರನ್ನು ಸುಮ್ಮನೆ ಮಾತಿಗೆಳೆದರೆ ನಟಿಯರನ್ನು ಕೆಟ್ಟದಾಗಿ ನಡೆಸಿಕೊಂಡ, ಶೋಷಿಸಿದ ಹಲವು ದಾರುಣ ಕಥೆಗಳು ಬಿಚ್ಚಿಕೊಳ್ಳುತ್ತವೆ. ಲೈಂಗಿಕ ಶೋಷಣೆಯ ವಿರುದ್ಧ ಬೇರೆ ಬೇರೆ ಕ್ಷೇತ್ರದಲ್ಲಿನ ಮಹಿಳೆಯರು ಪ್ರತಿಭಟನೆಯ ಸ್ವರ ಎತ್ತುತ್ತಿರುವ; ಈ ಅಭಿವ್ಯಕ್ತಿ ‘ಮೀ ಟೂ’ ಎಂಬ ಹೆಸರಿನಲ್ಲಿ ಅಭಿಯಾನವೇ ಆಗಿರುವ ಸಂದರ್ಭದಲ್ಲಿ ಕನ್ನಡ ಚಿತ್ರರಂಗವೂ ಇದಕ್ಕೆ ಹೊರತಲ್ಲ ಎಂಬುದನ್ನು ಈ ಮೇಲಿನ ಸನ್ನಿವೇಶಗಳು ಸಾರಿ ಹೇಳುವಂತಿವೆ.

ಈಗ ಎಲ್ಲ ಸರಿಯಿದೆಯೇ?

ಚಿತ್ರರಂಗದಲ್ಲಿನ ಲೈಂಗಿಕ ಶೋಷಣೆಯ ಕುರಿತು ಪ್ರಶ್ನಿಸಿದರೆ ‘ಹಿಂದೆಲ್ಲ ಚಿತ್ರರಂಗ ಹಾಗಿತ್ತು. ಈಗ ಸಾಕಷ್ಟು ವಿದ್ಯಾವಂತರು, ವಿವೇಕ ಇರುವವರು ಚಿತ್ರರಂಗಕ್ಕೆ ಬಂದಿದ್ದಾರೆ. ಈಗ ಯಾರೂ ಹಾಗೆಲ್ಲ ಮಾಡುವುದಿಲ್ಲ’ ಎಂಬ ಒಕ್ಕೊರಲಿನ ಧ್ವನಿಯೊಂದು ಎದುರಾಗುತ್ತದೆ. ಈ ಧ್ವನಿಯಲ್ಲಿಯೇ ‘ಎಲ್ಲಿ ಎಲ್ಲ ಬಯಲಾಗುತ್ತದೆಯೋ’ ಎಂಬ ಆತಂಕದ ಒಂದು ಎಳೆಯೂ ಇರುವುದನ್ನು ಗುರ್ತಿಸಬಹುದು. ‘ಪೋಷಾಕು ಬದಲಾಗಿರಬಹುದು; ಆದರೆ ಒಳಗಿನ ಪಾತ್ರ ಬದಲಾಗಿಲ್ಲ’ ಎಂಬುದು ಇಂದು ಚಿತ್ರರಂಗದ ಜಗಮಗ ಬೆಳಕಿನ ಆಚೆಗೆ ಇಣುಕಿದ ಯಾರಿಗಾದರೂ ತಿಳಿದಿರುವ ಸಂಗತಿಯೇ.

ತನ್ನ ಚಿತ್ರಕ್ಕೆ ನಾಯಕಿಯರಾಗುವ ಎಲ್ಲರೂ ತನ್ನ ಜತೆ ಸಹಕರಿಸಲೇಬೇಕು ಎಂಬ ಷರತ್ತು ಹಾಕುವ ಬಂಡೆಗಲ್ಲಿನಂಥ ನಟ, ತನ್ನ ಜತೆ ಸಹಕರಿಸಿದರೆ ಮಾತ್ರ ಪುಷ್ಕಳ ಅವಕಾಶ ಕೊಡುತ್ತೇನೆ ಎನ್ನುವ ನಿರ್ಮಾಪಕ, ‘ಸಂಜೆ ಮೇಲೆ ಸಿಗಲು ಒಪ್ಪಿಲ್ಲ’ ಎಂದು ಇಲ್ಲದ ನೆಪ ಹೇಳಿ ಸಿನಿಮಾದಿಂದ ಕಿತ್ತು ಹಾಕುವ ನಿರ್ದೇಶಕರು, ‘ಮಜಾ ಮಾಡಿ’ ಬರಲೆಂದೇ ಫಾರಿನ್ ಶೂಟಿಂಗ್‌ಗೆ ಹೋಗುವ ಸ್ಟಾರ್‌ಗಳು, ಹೆಣ್ಣಿನ ನೆರಳು ಕಂಡರೆ ಜೊಲ್ಲು ಸುರಿಸುವ ಜನಪ್ರಿಯ ಕಾಮಿಡಿ ನಟರು... ಹೀಗೆ ಈಗಲೂ ಕ್ಯಾಸ್ಟಿಂಗ್ ಕೌಚ್‌ನ ಸುಡುವ ಉರಿಯ ನಾಲಿಗೆ ಹಲವು ಸುಳಿಗಳು ಕಾಣಿಸುತ್ತವೆ. ಒಬ್ಬ ನಿರ್ದೇಶಕನಂತೂ ‘ಆ ನಟಿಯ ಜತೆ ಮೊದಲು ಮಲಗಿದವನು ನಾನೇ’ ಎಂದು ಈಗಲೂ ಹೆಮ್ಮೆಯಿಂದ ಹೇಳಿಕೊಂಡು ಅಡ್ಡಾಡುತ್ತಾರೆ. ಇನ್ನೊಬ್ಬ ಹಿರಿಯ ನಟ ಸಾರ್ವಜನಿಕರ ಮುಂದೆಯೇ ‘ಲೇಯ್... ಮುಚ್ಕೊಂಡು ಹೇಳಿದಷ್ಟು ಮಾಡಲೇ’ ಎನ್ನುತ್ತಾನೆ. ಮತ್ತು ಅದನ್ನೇ ಆ ನಟನ ‘ಗಂಡಸುತನ’ ಎಂದು ಪರಾಕುಪಂಪನ್ನೊತ್ತುವವರ ದೊಡ್ಡ ಪಡೆಯೂ ಇದೆ. ನಟಿಯೊಬ್ಬಳು ತನಗಾದ ಕ್ಯಾಸ್ಟಿಂಗ್ ಕೌಚ್ ಅನುಭವದ ಕುರಿತು ಮಾತನಾಡಿದಾಗ ‘ಇಂಥದ್ದನ್ನೆಲ್ಲ ಮಾತಾಡಿದರೆ ಚೆನ್ನಾಗಿರಲ್ಲ, ನಿನ್ನ ಪಾಡಿಗೆ ನೀನು ಇದ್ದುಬಿಡು’ ಎಂದು ದೊಡ್ಡ ನಿರ್ಮಾಪಕರೊಬ್ಬರು ಅವಾಜ್ ಅನ್ನೂ ಹಾಕಿದ್ದರಂತೆ.

ಹೇಳಲು ಯಾಕೆ ಹಿಂಜರಿಕೆ?

ಇಂದಿಗೂ ಚಿತ್ರರಂಗದ ಹಲವರಿಗೆ ಹೆಣ್ಣು ‘ಬಳಕೆ’ಯ ವಸ್ತುವೇ. ಅದನ್ನು ಬಳಸಿಕೊಳ್ಳಲೂ ಅವರು ಸದಾ ಪ್ರಯತ್ನಿಸುತ್ತಲೇ ಇರುತ್ತಾರೆ. ಆದರೆ ಈ ವಾಸ್ತವದ ಕುರಿತು ಯಾಕೆ ಯಾರೂ ತುಟಿ ಬಿಚ್ಚುತ್ತಿಲ್ಲ? ಈ ಕುರಿತು ಮಾತು ಬಂದಾಗೆಲ್ಲ ಯಾಕೆ ‘ನನಗೆ ಅಂಥ ಅನುಭವ ಆಗಿಲ್ಲ. ಅದೃಷ್ಟಕ್ಕೆ ನಮ್ಮ ಚಿತ್ರರಂಗ ತುಂಬ ಚೆನ್ನಾಗಿದೆ. ಎಲ್ಲರೂ ಒಳ್ಳೆಯವ್ರು’, ‘ನಾವು ಸರಿಯಾಗಿದ್ದರೆ ನಮ್ಮ ಜತೆಗೂ ಎಲ್ಲರೂ ಸರಿಯಾಗಿರುತ್ತಾರೆ’ ಎಂಬ ಸಿದ್ಧ ಉತ್ತರಗಳ ತೇಪೆ ಹಚ್ಚುವ ಪ್ರಯತ್ನವನ್ನೇ ಎಲ್ಲರೂ ಮಾಡುತ್ತಾರೆ. ತನಗೆ ಶೋಷಣೆಯ ಅನುಭವ ಆಗದಿದ್ದರೆ ಅದರ ಕುರಿತು ಮಾತನಾಡಬೇಕಿಲ್ಲ ಎಂಬ ಧೋರಣೆಯೇ ವಿಚಿತ್ರವಾಗಿದೆ.

‘ಹೇಳುವುದು ಬಿಡುವುದು ಅವರಿಷ್ಟ. ಅವರಿಗೇ ಕಷ್ಟ ಇಲ್ಲ ಎಂದಾದರೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು’ ಎಂದು ಸುಮ್ಮನಿರುವುದು ಸುಲಭ. ಆದರೆ ಈ ಎಲ್ಲ ಮೇಲ್ನೋಟದ ಪ್ರತಿಕ್ರಿಯೆಗಳನ್ನು ಪಕ್ಕಕ್ಕಿಟ್ಟು ಕೊಂಚ ತೆರೆಮರೆಯತ್ತಲೂ ದೃಷ್ಟಿಹರಿಸಿದರೆ ಈ ಪ್ರತಿಕ್ರಿಯೆಗಳನ್ನು ನಿಯಂತ್ರಿಸುವ ಹಲವು ಮುಖಗಳ ಒಂದು ವ್ಯವಸ್ಥೆಯ ಪರಿಚಯವಾಗುತ್ತದೆ.

ಮೇಲ್ನೋಟಕ್ಕೆ ವಿಸ್ತಾರವಾಗಿರುವಂತೆ, ಉದಾರವಾಗಿರುವಂತೆ ಕಾಣುವ ಈ ಚಿತ್ರರಂಗವನ್ನು ತೆರೆಹಿಂದೆ ಕೆಲವೇ ಕೆಲವು ವ್ಯಕ್ತಿಗಳು ನಿಯಂತ್ರಿಸುತ್ತಿರುವುದು ಗುಪ್ತಸಂಗತಿಯೇನಲ್ಲ. ಹೀಗೆ ‘ನಿಯಂತ್ರಿಸುವ ವ್ಯಕ್ತಿ’ಗಳಿಗೆ ಕ್ಯಾಸ್ಟಿಂಗ್ ಕೌಚ್‌ನಂಥ ಸಮಸ್ಯೆಗಳು ಸಮಸ್ಯೆಗಳಾಗಿಯೇ ಕಾಣಿಸುತ್ತಿರುವುದಿಲ್ಲ. ಅಥವಾ ಅವರೂ ಆ ದುಷ್ಟ ವ್ಯವಸ್ಥೆಯ ಫಲಾನುಭವಿಗಳೇ ಆಗಿರುತ್ತಾರೆ. ಅಂಥವರನ್ನು ಎದುರು ಹಾಕಿಕೊಂಡು ಸಾಮಾನ್ಯದವರು ಇಂಡಸ್ಟ್ರಿಯಲ್ಲಿ ಬದುಕಲಿಕ್ಕಾಗುವುದಿಲ್ಲ. ನಟಿಯರಿಗಂತೂ ಪರಿಸ್ಥಿತಿ ಇನ್ನಷ್ಟು ಕಠಿಣವಾಗಿರುತ್ತದೆ. ಹಾಗಾಗಿಯೇ ಇಂಥ ಶೋಷಣೆಯ ವಿರುದ್ಧ ದಿಟ್ಟವಾಗಿ ಮಾತನಾಡುವವರು ವೃತ್ತಿಬದುಕಿನ ಅವಕಾಶ– ಆಕಾಂಕ್ಷೆಗಳನ್ನು ಬಿಡಬೇಕಾದ ಪರಿಸ್ಥಿತಿ ಇದೆ. ಕನ್ನಡ ಚಿತ್ರರಂಗಕ್ಕಷ್ಟೇ ಅಲ್ಲ, ಇಂಥ ಹಲವು ಪ್ರಾದೇಶಿಕ ಭಾಷಾ ಚಿತ್ರರಂಗಗಳಲ್ಲಿಯೂ ಪರಿಸ್ಥಿತಿ ಹೀಗೆಯೇ ಇದೆ.

ತುಂಬುತ್ತಿದೆ ಕುದಿಹಬೆ

ಈಗ ದೊಡ್ಡ ಪ್ರಮಾಣದಲ್ಲಿ ಪ್ರತಿರೋಧದ ಧ್ವನಿ ಕೇಳಿಬರುತ್ತಿರುವ ಹಾಲಿವುಡ್, ಬಾಲಿವುಡ್‌ಗಳಲ್ಲಿಯೂ ಪರಿಸ್ಥಿತಿ ತುಂಬ ಅನುಕೂಲಕರವೇನೂ ಆಗಿರಲಿಲ್ಲ. ಆದರೆ ಬೆಳಕಿಗೆ ಮುಖವೊಡ್ಡುವ ಒಂದು ಸಣ್ಣ ಅವಕಾಶಕ್ಕಾಗಿ ಕಾದಿದ್ದ ಕತ್ತಲೆ ಕೋಣೆಯ ಕೈದಿಗಳಂತೆ ಒಬ್ಬರಾದ ನಂತರ ಒಬ್ಬರು ‘ಮೀ ಟೂ’ ಅನುಭವಗಳನ್ನು ಹರಿಬಿಡುತ್ತಿದ್ದಾರೆ. ಇದುವರೆಗೆ ಗಣ್ಯರಾಗಿದ್ದ, ಪ್ರತಿಷ್ಠಿತರಾಗಿದ್ದವರ ಮುಖವಾಡಗಳೆಲ್ಲ ಕಳಚಿ ಬೀಳುತ್ತಿವೆ. ಅದು ದಕ್ಷಿಣಭಾರತಕ್ಕೂ ನಿಧಾನಕ್ಕೆ ವ್ಯಾಪಿಸುತ್ತಿದೆ. ಇತ್ತೀಚೆಗೆ ನಟಿ ಸಂಗೀತಾ ಭಟ್ ಅವರು ತಾವು ಲೈಂಗಿಕ ಶೋಷಣೆಗೆ ಒಳಗಾದ ಪ್ರಸಂಗವನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿವರವಾಗಿ ಬರೆದುಕೊಂಡಿದ್ದರು. ಆದರೆ ಅವರು ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಆದರೆ ಶ್ರುತಿ ಹರಿಹರನ್ ಒಬ್ಬರ ಹೆಸರನ್ನು ಉಲ್ಲೇಖಿಸಿ ಆರೋಪಿಸಿದ್ದಾರೆ. ಬಯಲಾಗಬೇಕಾದ ಕಥೆಗಳ ಪಟ್ಟಿ ಇನ್ನೂ ದೊಡ್ಡದಿವೆ.

ಒಳಗೊಳಗೆ ಕಾಯುತ್ತ ಕುದಿಯುಸಿರು ತುಂಬಿಕೊಳ್ಳುತ್ತಿರುವ ಕುಕ್ಕರು ಒಮ್ಮೆಲೇ ಪೂತ್ಕರಿಸುವ ಹಾಗೆ, ಇಂಥ ಹಲವು ವೇದನೆಯ ಕಥೆಗಳು ವ್ಯಕ್ತಗೊಳ್ಳುವ ಗಳಿಗೆಗಾಗಿ ಕಾಯುತ್ತ ಗಾಂಧಿನಗರದ ಗಲ್ಲಿಗಳಲ್ಲಿ ಗುಪ್ತವಾಗಿ ಸಂಚರಿಸುತ್ತಿವೆ.ಕುಕ್ಕರು ಕೂಗುವುದು ಒಳಗಿನ ಅಕ್ಕಿ ಅನ್ನವಾಗಿರುವ ಸೂಚನೆಯೂ ಹೌದು. ಹೀಗೆ ಕುದಿಹಬೆಯನ್ನು ಹೊರಹಾಕಿ ಶುದ್ಧ ಅನ್ನವಾಗಲಿಕ್ಕಾದರೂಕನ್ನಡ ಚಿತ್ರರಂಗಕ್ಕೆ ಇಂಥದ್ದೊಂದು ಪ್ರತಿರೋಧದ ಅಭಿಯಾನದ ಅಗತ್ಯ ಖಂಡಿತ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT