ಶುಕ್ರವಾರ, ನವೆಂಬರ್ 15, 2019
21 °C
ದ್ವಿಶತಕದ ಹೊಸ್ತಿಲಿನಲ್ಲಿ ಚಿಕ್ಕಣ್ಣ

ಹೀರೋ ಆಗಲಿದ್ದಾರೆ ಹಾಸ್ಯ ನಟ ಚಿಕ್ಕಣ್ಣ

Published:
Updated:

ಕನ್ನಡ ಚಿತ್ರರಂಗದಲ್ಲಿ ಸದ್ಯದ ಮುಂಚೂಣಿ ಕಾಮಿಡಿ ನಟರಲ್ಲಿ ಚಿಕ್ಕಣ್ಣ ಕೂಡ ಒಬ್ಬರು. ಸುಮಾರು ಎಂಟು ವರ್ಷಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದ ಈ ಹಾಸ್ಯ ನಟ ಚಿಕ್ಕಣ್ಣ ಈಗ ದ್ವಿಶತಕದ ಹೊಸ್ತಿಲಿನಲ್ಲಿ ಇದ್ದಾರೆ. ಸುಮಾರು 190ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಚಿಕ್ಕಣ್ಣ, ಸಿನಿರಸಿಕರನ್ನು ನಕ್ಕುನಲಿಸಿದ್ದಾರೆ. ಚಿಕ್ಕಣ್ಣನ ಪಾತ್ರ ಇರುವ ಸಿನಿಮಾಗಳಲ್ಲಿ ಹಾಸ್ಯ ರಸಕ್ಕೆ ಬರವಿಲ್ಲವೆನ್ನಬಹುದು. ಅಷ್ಟರಮಟ್ಟಿಗೆ ಹಾಸ್ಯ ನಟನೆ, ಕಾಮಿಡಿ ಡೈಲಾಗ್‌ ಮೂಲಕ ಚಿತ್ರರಸಿಕರ ಮನಸನ್ನು ಈ ‘ಕಾಮಿಡಿ ಕಿಂಗ್‌’  ಆವರಿಸಿದ್ದಾರೆ. ಈಗ ಅವರು ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ಹೊರಹೊಮ್ಮುವ ಹಾದಿಯಲ್ಲಿದ್ದಾರೆ.

ತಮ್ಮ ಸಿನಿ ಜರ್ನಿಯ ಬಗ್ಗೆ ಹಲವು ಸಂಗತಿಗಳನ್ನು ‘ಸಿನಿಮಾ ಪುರವಣಿ’ಯ ಜತೆಗೆ ಹಂಚಿಕೊಂಡಿರುವ ಈ ನಟ, ತಾನೊಬ್ಬ ಸೈನಿಕನಾಗಬೇಕು, ಭಾರತೀಯ ಸೈನ್ಯ ಸೇರಬೇಕೆಂದು ಹಂಬಲವಿಟ್ಟುಕೊಂಡಿದ್ದರಂತೆ. ಹೀಗಾಗಿಯೇ ಸೈನಿಕನಾಗಲು ಬೇಕಾದ ದೇಹದಾರ್ಢ್ಯ ಮತ್ತು ಧೈರ್ಯ ಬೆಳೆಸಿಕೊಳ್ಳಲು ಪಿಯುಸಿಯಲ್ಲಿ ಎನ್‌ಸಿಸಿಗೂ ಸೇರಿದ್ದರಂತೆ. ದುರದೃಷ್ಟವಶಾತ್‌ ಮನೆಯಲ್ಲಿನ ಬಡತನದಿಂದಾಗಿ ಪ್ರಥಮ ಪಿಯುಸಿಯಿಂದ ಮುಂದಕ್ಕೆ ಹೋಗಲು ಆಗಲೇ ಇಲ್ಲ. ದ್ವಿತೀಯ ಪಿಯುಸಿಯಷ್ಟೇ ಅಲ್ಲ, ಸೈನ್ಯ ಸೇರಬೇಕೆಂಬ ಕನಸೂ ಕನಸಾಗಿಯೇ ಉಳಿಯಿತು ಎಂದು ತಮ್ಮೊಳಗಿನ ಸೈನಿಕನ ಆಸೆ ಮುರುಟಿ ಹೋದದನ್ನು ವಿಷಾದದಲ್ಲೇ ಹೇಳಿದರು ಈ ಹಾಸ್ಯ ಕಲಾವಿದ.

ಆನಂತರ ಬದುಕಿಗೆ ಆರಿಸಿಕೊಂಡಿದ್ದು ಹಾಸ್ಯ ಕಲಾವಿದನ ವೇಷ. ತನ್ನೊಳಗಿದ್ದ ಕಲೆಯೇ ಅವರನ್ನು ಚಿತ್ರರಂಗಕ್ಕೆ ಕರೆತಂದಿದೆ. ಚಿಕ್ಕಣ್ಣ ಕಾಮಿಡಿ ಪಾತ್ರಗಳಲ್ಲಿ ನಟಿಸಿರುವ ‘ಕಿಸ್‌’, ‘ಬಿಲ್‌ಗೇಟ್ಸ್‌’, ‘ಮನೆಮಾರಾಟಕ್ಕಿದೆ’ ಬಿಡುಗಡೆಗೆ ಸಜ್ಜಾಗಿವೆ. ಅಲ್ಲದೆ, ‘ಪೊಗರು’, ‘ರಾಬರ್ಟ್‌’, ‘ಕೃಷ್ಣ ಟಾಕೀಸ್‌’, ‘ತ್ರಿವಿಕ್ರಮ’, ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಸಿನಿಮಾಗಳಲ್ಲಿ ಈ ನಟ ಬ್ಯುಸಿಯಾಗಿದ್ದಾರೆ.

ಕುಟುಂಬದ ಬಗ್ಗೆ ಮಾತು ಹೊರಳಿದಾಗ, ಅಪ್ಪ ತೀರಿಕೊಂಡಿದ್ದಾರೆ, ತಾಯಿ ಇದ್ದಾರೆ. ಮೂವರು ಅಕ್ಕಂದಿರು ಮತ್ತು ಒಬ್ಬ ತಂಗಿ ಇರುವ ಕುಟುಂಬ ನನ್ನದು. ನಾಲ್ವರಿಗೂ ಮದುವೆಯಾಗಿದೆ. ಕೃಷಿಯಲ್ಲಿರುವ ಆಸಕ್ತಿಯಿಂದಾಗಿ, ಸಿನಿಮಾ ಕೆಲಸವಿಲ್ಲದೇ ಇದ್ದಾಗ, ನಗರ್ತಹಳ್ಳಿಯಲ್ಲಿರುವ ನಮ್ಮ ಕೃಷಿ ಭೂಮಿಗೆ ಹೋಗುತ್ತೇನೆ. ಅಲ್ಲಿ ಕೃಷಿ ಕೆಲಸ ಮಾಡುತ್ತೇನೆ. ರಾಗಿ, ತರಕಾರಿ ಇನ್ನಿತರ ಬೆಳೆ ಬೆಳೆಯುತ್ತೇವೆ ಎನ್ನುತ್ತಾರೆ ಚಿಕ್ಕಣ್ಣ.

ಬಿಡುವಿನ ವೇಳೆಯಲ್ಲಿ ಸ್ನೇಹಿತರ ಜತೆಗೆ ಸಮಯ ಕಳೆಯಲು ಇಷ್ಟಪಡುವ ಚಿಕ್ಕಣ್ಣ, ‘ಮೈಸೂರು, ಬೆಂಗಳೂರಿನಲ್ಲೂ ನನಗೆ ಸಾಕಷ್ಟು ಸ್ನೇಹಿತರು ಇದ್ದಾರೆ. ಫ್ರೆಂಡ್ಸ್‌ ಜತೆಗೆ ಸೇರಿದಾಗ ತುಂಡು– ಗುಂಡು ಪಾರ್ಟಿ ಮಾಡುವುದು ಇದ್ದೇ ಇರುತ್ತೆ. ನನಗೆ ಹಾಡು ಹೇಳುವುದೆಂದರೆ ಇಷ್ಟ. ಸ್ನೇಹಿತರ ಮುಂದೆ ಹಾಡಿ, ಅವರನ್ನು ರಂಜಿಸುತ್ತೇನೆ. ಹಾಗೆಯೇ ನನಗೆ ಮುದ್ದೆ– ನಾಟಿ ಕೋಳಿ ಸಾರು ಎಂದರೆ ಬಲು ಇಷ್ಟ’ ಎಂದು ಸಂಕೋಚವಿಲ್ಲದೆ ಹೇಳುತ್ತಾರೆ. 

ಕಾಡು ಸುತ್ತುವುದೂ ಅಷ್ಟೇ ಇಷ್ಟ. ಆಗಾಗ ನಾಗರಹೊಳೆಗೆ ಹೋಗುತ್ತೇನೆ. ಫೋಟೊಗ್ರಫಿ ಬಗ್ಗೆಯೂ ಆಸಕ್ತಿ ಇದೆ. ಮುಂದಿನ ದಿನಗಳಲ್ಲಿ ಕ್ಯಾಮೆರಾ ಜತೆಗೆ ಕಾಡು ಸುತ್ತಿ, ಒಳ್ಳೆಯ ಚಿತ್ರಗಳನ್ನು ಸೆರೆ ಹಿಡಿಯುವ ಆಲೋಚನೆಯೂ ಇದೆ ಎಂದು ಮಾತು ಸೇರಿಸಿದರು.

ವರ್ಷಾಂತ್ಯದಲ್ಲಿ ಹೀರೊ

ಮಂಜುಮಾಂಡವ್ಯ ನಿರ್ದೇಶನದ ಹೊಸ ಚಿತ್ರದಲ್ಲಿ ಚಿಕಣ್ಣ ಪೂರ್ಣ ಪ್ರಮಾಣದ ನಾಯಕನಾಗಲಿದ್ದು, ಈ ವರ್ಷದ ಅಂತ್ಯ ಅಥವಾ ಮುಂದಿನ ವರ್ಷಾರಂಭದಲ್ಲಿ ಈ ಸಿನಿಮಾ ಸೆಟ್ಟೇರಲಿದೆ.

ಹೀರೊ ಆಗಲು ಜಿಮ್‌, ಡಾನ್ಸ್‌ ಎಲ್ಲಾ ಕಲಿತಾ ಇದ್ದೀನಿ. ಇಲ್ಲಿಯವರೆಗೆ ನನಗೆ ಟೆನ್ಶನ್‌ ಗೊತ್ತಿರಲಿಲ್ಲ. ಈಗ ನೋಡಿ ಟೆನ್ಶನ್‌ ತಂದ್ಕೊಬಿಟ್ಟಿನಿ. ಕಥೆ, ನಾಯಕಿ ಬಗ್ಗೆ ಮಾತ್ರ ಕೇಳಬೇಡಿ, ಅದು ನನಗೂ ಗೊತ್ತಿಲ್ಲ. ಆದರೆ, ನನ್ನ ಸಿನಿಮಾದಲ್ಲಿ ಹಾಸ್ಯವೇ ಪ್ರಧಾನ. ಹಾಸ್ಯ ಬಿಟ್ಟು, ನಾನೇನು ಆ್ಯಕ್ಷನ್‌ ಮಾಡಲು ಆಗುತ್ತಾ? ಎಂದು ಚಿಕಣ್ಣ ಹಾಸ್ಯ ಚಟಾಕಿ ಹಾರಿಸಿದರು.

ಮದುವೆ ಬಗ್ಗೆ ಕೇಳಿದರೆ, ಮದುವೆ ಆಗಿದ್ರೆ ಟಿ.ವಿ ಮಾಧ್ಯಮಗಳ ಮುಂದೆ ಮುಚ್ಚಿಟ್ಟುಕೊಳ್ಳಲು ಆಗುತ್ತಾ ಹೇಳಿ? ಎನ್ನುವ ಈ ನಟ, ಗರ್ಲ್‌ಫ್ರೆಂಡ್‌ ಬಗ್ಗೆ ಕೇಳಿದಾಗಲೂ, ನಮ್ಮ ಮುಸುಡಿಗೆ ಯಾವ ಗರ್ಲ್‌ಫ್ರೆಂಡ್‌ ಸಿಕ್ತಾರೆ. ಹಾಗೊಂದು ವೇಳೆ ಗರ್ಲ್‌ಫ್ರೆಂಡ್‌ ಇದ್ರೆ ಅವರನ್ನೇ ಮದುವೆಯಾಗಿರುತ್ತಿದ್ದೆ ಎಂದು ನಕ್ಕರು.

ಬಾಲಿವುಡ್‌ ನಟಿ ಅಮಲಾ ಪೌಲ್‌ ‘ಚಿಕ್ಕಣ್ಣ ನನ್ನ ಗಂಡ ಆಗಬೇಕಿತ್ತು ಎಂದಿದ್ರಂತಲ್ಲಾ’ ಎಂದು ಕಾಲೆಳೆದರೆ, ‘ಅಯ್ಯೋ ಬಿಡಿ ಸಾ ಆ ಯಮ್ಮನಾ ಮಾತು ನಂಬಿಬಿಟ್ಟರೆ ನಾನು ಇನ್ನೊಬ್ಬ ಹುಚ್ಚಾ ವೆಂಕಟ್‌ ಆಗಿಬಿಡ್ತೀನಿ ಅಷ್ಟೇ. ಆ ಯಮ್ಮಾ ಇನ್ನೊಂದು ಸಿನಿಮಾ ಮಾಡಲು ಇಲ್ಲಿಗೆ ಬಂದರೆ, ನಾನು ಎದುರಿಗೆ ಸಿಕ್ಕರೂ ನನ್ನ ಮುಖ ಗುರುತು ಹಿಡಿಯಲ್ಲ’ ಎನ್ನುವ ಮಾತು ಸೇರಿಸಿದರು. 

ಹಾಗಾದ್ರೆ ಚಿಕ್ಕಣ್ಣ ಯಾವಾಗ ದಿಬ್ಬಣದ ಊಟ ಹಾಕಿಸುವುದು ಎಂದರೆ, ‘ಮುಂದಿನ ಒಂದು ಗಂಟೆಯಲ್ಲಿ ಏನಾಗುತ್ತೆ, ನಾಳೆ ಏನಾಗುತ್ತೆ ಎನ್ನುವುದು ಯಾವ್‌ ನನ್ಮಗನಿಗೆ ಗೊತ್ತು ಹೇಳಿ. ಈಗ ಸಿನಿಮಾಗಳ ಮೇಲೆ ನನ್ನ ಗಮನ ಅಷ್ಟೇ. ಕಾಲ ಬಂದಾಗ ನೋಡಿಕೊಳ್ಳೋಣ’ ಎಂದರು.  

ಚಿಕಣ್ಣ ನಟ ಅಷ್ಟೇ ಅಲ್ಲ, ಸಿನಿಮಾ ಹಾಡುಗಳಿಗೆ ಲಿರಿಕ್ಸ್‌ ಬರೆಯುವ ಅಭ್ಯಾಸವೂ ಇದೆ. ಆ ಬಗ್ಗೆ ಮಾತು ಹೊರಳಿದಾಗ, ಶಾರ್ಪ್‌ ಶೂಟರ್‌ ಚಿತ್ರದ ಒಂದು ಹಾಡಿಗೆ ಸಾಹಿತ್ಯ ಬರೆದೆ ಅಷ್ಟೇ. ಆಗಾಗ ಸಮಯ ಸಿಕ್ಕಾಗ ಕಥೆ ಬರೀತಾ ಇರ್ತೀನಿ. ಹೆಚ್ಚು ಬರೆಯಬೇಕೆಂದರೆ ಹೆಚ್ಚು ಓದಬೇಕಲ್ಲ, ಓದುವ ಆಸಕ್ತಿಯೂ ಬೇಕಲ್ಲ? ಹೆಚ್ಚು ಓದಬೇಕೆಂಬ ಆಸೆ ಪಿಯುಸಿಯಲ್ಲೇ ಕಮರಿ ಹೋಯಿತಲ್ಲ ಎನ್ನುವಾಗ ಅವರ ಮಾತಿನಲ್ಲಿ ವಿಷಾದದ ಛಾಯೆ ಆವರಿಸಿತು.

ನಟನೆಯಲ್ಲಿ ತೃಪ್ತಿ ಸಿಕ್ಕಿದೆಯಾ ಎಂದಾಗ, ನಿಜವಾದ ಕಲಾವಿದ ನಟನೆಯಲ್ಲಿ ತೃಪ್ತಿ ಸಿಕ್ಕಿದೆ ಎಂದುಕೊಂಡರೆ ಅಲ್ಲಿಗೆ ವೃತ್ತಿ ಬದುಕು ಕೊನೆ ಎಂದರ್ಥ. ಅತೃಪ್ತಿ ಕಾಡುತ್ತಲೇ ಇದ್ದಾಗ ಮಾತ್ರ ಕಲಾವಿದನಾಗಿ ಉಳಿಯಲು, ಉಸಿರಾಡಲು ಸಾಧ್ಯ ಎಂದರು.

ಹಾಸ್ಯ ಪ್ರಜ್ಞೆ ವಿದ್ಯಾರ್ಥಿ ಜೀವನದಿಂದಲೂ ಇತ್ತಾ ಎಂದರೆ, ನಾನು ಈಗ ಮಾಡುತ್ತಿರುವ ಪಾತ್ರಗಳಿಗೂ ಕಾಲೇಜು ದಿನಗಳ ನನ್ನ ವ್ಯಕ್ತಿತ್ವಕ್ಕೂ ಡೆಡ್‌ ಆಪೋಸಿಟ್‌. ತುಂಬಾ ಸೈಲೆಂಟ್‌ ಹುಡುಗ ನಾನು ಎನ್ನುತ್ತಾರೆ ಚಿಕ್ಕಣ್ಣ.

ಸಿನಿಮಾ ಒಪ್ಪಿಕೊಳ್ಳುವ ಮೊದಲು ಯಾವುದಕ್ಕೆ ಆದ್ಯತೆ ಕೊಡ್ತೀರಿ ಎಂದಾಗ, ಕನಿಷ್ಠ ನಾಲ್ಕೈದು ದೃಶ್ಯಗಳಲ್ಲಾದರೂ ನಾನು ಪ್ರೇಕ್ಷಕರನ್ನು ನಗಿಸಲು ಅವಕಾಶವಿದೆಯೇ ಎನ್ನುವುದನ್ನು ಮೊದಲು ನೋಡುತ್ತೇನೆ ಎನ್ನುವ ಚಿಕ್ಕಣ್ಣ ಮಾತಿನಲ್ಲಿ ಪಾತ್ರದ ಆಯ್ಕೆಯಲ್ಲಿ ಚ್ಯೂಸಿಯಾಗಿರುವುದನ್ನು ಎತ್ತಿತೋರಿಸಿತು.

ನಾನು ಈವರೆಗೂ ನಟಿಸಿರುವ ಎಲ್ಲ ಚಿತ್ರಗಳೂ, ಪಾತ್ರಗಳೂ ನನಗೆ ಮಾಸ್ಟರ್‌ ಪೀಸ್‌. ಯಾಕೆಂದರೆ ಎಲ್ಲ ಸಿನಿಮಾದಿಂದಲೂ ಅನ್ನ ತಿಂದಿರುತ್ತೇವೆ ಮತ್ತು ಕಾಸು ಪಡೆದಿರುತ್ತೇವೆ ಎನ್ನುವ ಕೃತಜ್ಞತಾ ಮಾತುಗಳನ್ನು ಹೇಳುವುದನ್ನು ಈ ನಟ ಮರೆಯುವುದಿಲ್ಲ.

ಪ್ರತಿಕ್ರಿಯಿಸಿ (+)