ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಂಬಾಳೆ, ಅಶ್ವಿನಿ, ತಾರಾಗೆ ಚಿತ್ರವಾಣಿ ವಿಶೇಷ ಪ್ರಶಸ್ತಿ

Last Updated 25 ಜನವರಿ 2023, 19:53 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಚಲನಚಿತ್ರ ಪ್ರಚಾರ ಸಂಸ್ಥೆ ಶ್ರೀರಾಘವೇಂದ್ರ ಚಿತ್ರವಾಣಿಯ 25ನೇ ವಾರ್ಷಿಕ ವಿಶೇಷ ಪ್ರಶಸ್ತಿಗಳನ್ನು ಹೊಂಬಾಳೆ ಫಿಲ್ಮ್ಸ್‌, ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಪತ್ನಿ ಅಶ್ವಿನಿ ಮತ್ತು ನಟಿ ತಾರಾ ಅನುರಾಧಾ ಅವರಿಗೆ ಬುಧವಾರ ಪ್ರದಾನ ಮಾಡಲಾಯಿತು.

ಚಾಮರಾಜಪೇಟೆಯ ಕನ್ನಡ ಚಲನಚಿತ್ರ ಕಲಾವಿದರ ಸಂಘದಲ್ಲಿ ಚಿತ್ರವಾಣಿ ಸಂಸ್ಥೆಯ ಸಂಸ್ಥಾಪಕ ದಿವಂಗತ ಡಿ.ವಿ. ಸುಧೀಂದ್ರ ಅವರ ಜನ್ಮದಿನದ ಪ್ರಯುಕ್ತ ನಡೆದ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥ ಸುಧೀಂದ್ರ ವೆಂಕಟೇಶ್‌ ಮತ್ತು ಇತರ ಗಣ್ಯರು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

‘ಕೆಜಿಎಫ್ 2’ ಮತ್ತು ‘ಕಾಂತಾರ’ ಚಿತ್ರಗಳನ್ನು ನಿರ್ಮಿಸಿ, ಕನ್ನಡ ಚಿತ್ರರಂಗಕ್ಕೆ ಕೀರ್ತಿ ತಂದ ನಿರ್ಮಾಣ ಸಂಸ್ಥೆ ಎಂಬ ಕಾರಣಕ್ಕೆ ಹೊಂಬಾಳೆ ಫಿಲ್ಮ್ಸ್‌ಗೆ, ಕಳೆದ ವರ್ಷ ಬಿಡುಗಡೆಯಾದ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌
ಭಾಗಿಯಾದ ‘ಗಂಧದ ಗುಡಿ’ ಡಾಕ್ಯುಚಿತ್ರದ ನಿರ್ಮಾಣಕ್ಕಾಗಿ ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ, ಕನ್ನಡ ಚಿತ್ರರಂಗಕ್ಕೆ ನೀಡಿದ ವಿಶೇಷ ಕೊಡುಗೆಗಾಗಿ ತಾರಾ ಅನುರಾಧಾ ಅವರಿಗೆ ಈ ವಿಶೇಷ ಪ್ರಶಸ್ತಿಗಳು ಸಂದಿವೆ. ಹೊಂಬಾಳೆ ಫಿಲ್ಮ್ಸ್‌ನ ಮುಖ್ಯಸ್ಥ ವಿಜಯ್‌ ಕಿರಗಂದೂರು ಪರವಾಗಿ ಅವರ ಪತ್ನಿ ಶೈಲಜಾ ವಿಜಯ್‌ ಕಿರಗಂದೂರು ಪ್ರಶಸ್ತಿ ಸ್ವೀಕರಿಸಿದರು.

ಇತರ ಪ್ರಶಸ್ತಿ ಪುರಸ್ಕೃತರು: 2021ನೇ ಸಾಲಿನ ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ: ಪಿ. ಧನರಾಜ್ (ಹಿರಿಯ ನಿರ್ಮಾಪಕ ಅವರ ಪರವಾಗಿ ಪುತ್ರ ಶ್ರೀಕಾಂತ್‌ ಪ್ರಶಸ್ತಿ ಸ್ವೀಕರಿಸಿದರು.), ಈಶ್ವರ ದೈತೋಟ (ಹಿರಿಯ ಪತ್ರಕರ್ತ).

2022ನೇ ಸಾಲಿನ ಪ್ರಶಸ್ತಿ: ಕುಮಾರ ಗೋವಿಂದ್‌ (ನಟ, ನಿರ್ಮಾಪಕ), ಸದಾಶಿವ ಶೆಣೈ (ಕರ್ನಾಟಕ
ಮಾಧ್ಯಮ ಅಕಾಡೆಮಿ ಅಧ್ಯಕ್ಷ), ರಾಜೇಶ್ ಕೃಷ್ಣನ್ (ಹಿನ್ನೆಲೆ ಗಾಯಕ–ಡಾ.ರಾಜ್‌ಕುಮಾರ್‌ ಪ್ರಶಸ್ತಿ), ಸಾಯಿಪ್ರಕಾಶ್ ಹಿರಿಯ ನಿರ್ದೇಶಕ, ನಿರ್ಮಾಪಕ (ಆರ್. ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ), ತುಳಸಿ (ಹಿರಿಯ ನಟಿ. ಇವರಿಗೆ ನಟಿ ಡಾ.ಜಯಮಾಲಾ ಎಚ್.ಎಂ.ರಾಮಚಂದ್ರ ಪ್ರಶಸ್ತಿ), ನೋಬಿನ್ ಪಾಲ್ (ಅತ್ಯುತ್ತಮ ಸಂಗೀತ ನಿರ್ದೇಶನ, ‘777 ಚಾರ್ಲಿ’ ಚಿತ್ರಕ್ಕಾಗಿ ಎಂ.ಎಸ್. ರಾಮಯ್ಯ ಮೀಡಿಯಾ ಅಂಡ್ ಎಂಟರ್‌ಟೇನ್‌ಮೆಂಟ್‌ ಪ್ರೈ ಲಿ. ಪ್ರಶಸ್ತಿ), ಮಧುಚಂದ್ರ (ಅತ್ಯುತ್ತಮ ಕಥಾಲೇಖಕರು, ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರಕ್ಕಾಗಿ ನಿರ್ದೇಶಕ-ನಿರ್ಮಾಪಕ ಕೆ.ವಿ.ಜಯರಾಂ ಪ್ರಶಸ್ತಿ), ಎಂ.ಜಿ. ಶ್ರೀನಿವಾಸ್ (ಶ್ರೀನಿ) (ಅತ್ಯುತ್ತಮ ಸಂಭಾಷಣೆ, ‘ಓಲ್ಡ್ ಮಾಂಕ್’ ಚಿತ್ರಕ್ಕಾಗಿ ಚಿತ್ರಸಾಹಿತಿ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ), ಕಿರಣ್ ರಾಜ್ (‘777 ಚಾರ್ಲಿ’ ಚೊಚ್ಚಲ ಚಿತ್ರದ ನಿರ್ದೇಶನಕ್ಕಾಗಿ ಹಿರಿತೆರೆ-ಕಿರುತೆರೆ ನಿರ್ದೇಶಕ ಬಿ. ಸುರೇಶ ಪ್ರಶಸ್ತಿ ಅವರ ಪರವಾಗಿ ಪರಂವಃ ಸ್ಟುಡಿಯೋದ ಶಮಂತ್‌ ಜೈನ್‌ ಪ್ರಶಸ್ತಿ ಸ್ವೀಕರಿಸಿದರು.), ಪ್ರಮೋದ್ ಮರವಂತೆ (‘ಕಾಂತಾರ’ ಚಿತ್ರದ ‘ಸಿಂಗಾರ ಸಿರಿಯೇ ...’ ಗೀತರಚನೆಗಾಗಿ ಹಿರಿಯ ಪತ್ರಕರ್ತ ಪಿ.ಜಿ. ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ), ಶ್ರೀನಿವಾಸಮೂರ್ತಿ (ಹಿರಿಯ ಪೋಷಕ ಕಲಾವಿದರು, ಹಿರಿಯ ಪತ್ರಕರ್ತ ಸಿ. ಸೀತಾರಾಂ ಸ್ಮರಣಾರ್ಥ ಪ್ರಶಸ್ತಿ).

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್‌, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT