ಸೋಮವಾರ, ಜುಲೈ 26, 2021
24 °C

ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ:ಮೂಕಜ್ಜಿಯ ಕನಸುಗಳು,ಕೆಜಿಎಫ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಿ. ಶೇಷಾದ್ರಿ ನಿರ್ದೇಶನದ ‘ಮೂಕಜ್ಜಿಯ ಕನಸುಗಳು’ ಚಿತ್ರ 11ನೇ ‘ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ’ದ ‘ಕನ್ನಡ ಸಿನಿಮಾ ಸ್ಪರ್ಧೆ’ ವಿಭಾಗದಲ್ಲಿ ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿದೆ.

‘ಕನ್ನಡ ಜನಪ್ರಿಯ ಸಿನಿಮಾ’ ವಿಭಾಗದಲ್ಲಿ ಪ್ರಶಾಂತ್ ನೀಲ್ ನಿರ್ದೇಶನದ, ಯಶ್ ಅಭಿನಯದ ‘ಕೆಜಿಎಫ‌್’ ಚಿತ್ರ ಮೊದಲ ಬಹುಮಾನಕ್ಕೆ ಆಯ್ಕೆಯಾಗಿದೆ. ಮಂಸೋರೆ ನಿರ್ದೇಶನದ, ಶ್ರುತಿ ಹರಿಹರನ್ ಅಭಿನಯದ ‘ನಾತಿಚರಾಮಿ’ ಚಿತ್ರವು ಕನ್ನಡ ಸಿನಿಮಾಕ್ಕೆ ನೀಡುವ ‘ನೆಟ್‌ಪ್ಯಾಕ್‌ ಅಂತರರಾಷ್ಟ್ರೀಯ ಜ್ಯೂರಿ ಪ್ರಶಸ್ತಿ’ಗೆ ಆಯ್ಕೆಯಾಯಿತು.

ವಿಧಾನಸೌಧದಲ್ಲಿ ಗುರುವಾರ ನಡೆದ ಸಿನಿಮೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಘೋಷಣೆ ಮತ್ತು ಪ್ರಶಸ್ತಿ ‍ಪ್ರದಾನ ಮಾಡಲಾಯಿತು.

ಸಮಾರೋಪದಲ್ಲಿ ಮಾತನಾಡಿದ ಸಿನಿಮೋತ್ಸವದ ಕಲಾನಿರ್ದೇಶಕ ಎನ್. ವಿದ್ಯಾಶಂಕ‌ರ್, ‘ಸಿನಿಮಾ ಮಾಡಲು ಉತ್ಸಾಹ ಇರುವ ಯುವಕರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮುಂದಿನ ವರ್ಷಗಳಲ್ಲಿ ಸಿನಿಮೋತ್ಸವದಲ್ಲಿ ಬೌದ್ಧಿಕ ಹಾಗೂ ಅಕಾಡೆಮಿಕ್ ಚಟುವಟಿಕೆಗಳನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶವಿದೆ’ ಎಂದರು.

‘ಈಗ ನಾವು ಬೆಂಗಳೂರು ಸಿನಿಮೋತ್ಸವಕ್ಕೆ ಬರುವಂತೆ ಪ್ರತಿನಿಧಿಗಳಿಗೆ ಆಹ್ವಾನ ನೀಡಬೇಕಾಗಿಲ್ಲ. ಸಿನಿಮೋತ್ಸವದ ದಿನಾಂಕ ಘೋಷಣೆ ಆದ ತಕ್ಷಣ ಆಸಕ್ತರು ತಾವಾಗಿಯೇ ಹೆಸರು ನೋಂದಾಯಿಸಿಕೊಳ್ಳುತ್ತಾರೆ’ ಎಂದು ಬೆಂಗಳೂರು ಸಿನಿಮೋತ್ಸವ ಬೆಳೆದಿರುವ ಬಗ್ಗೆ ಹೇಳಿದರು.

‘ಸಿನಿಮಾ ವೀಕ್ಷಿಸಿದವರಿಗೆ ಆನಂದ ಸಿಗಬೇಕು. ಶಿಕ್ಷಣವೂ ಸಿಗಬೇಕು. ಅಂತಹ ಸಿನಿಮಾ ಮಾಡಬೇಕು’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಸಲಹೆ ನೀಡಿದರು. ‘ಜನರನ್ನು ಚಾರಿತ್ರ್ಯವಂತರನ್ನಾಗಿ ಮಾಡಲು ಅಗತ್ಯವಿರುವಂತಹ ಸಿನಿಮಾಗಳನ್ನು ಮಾಡಬೇಕು’ ಎಂದೂ ಅವರು ಹೇಳಿದರು.

ಪ್ರಶಸ್ತಿ: ಯಾವ ಸಿನಿಮಾಕ್ಕೆ?

ಕನ್ನಡ ಸಿನಿಮಾ ಸ್ಪರ್ಧೆ ವಿಭಾಗ: ಸಾವಿತ್ರಿಬಾಯಿ ಫುಲೆ (ದ್ವಿತೀಯ ಬಹುಮಾನ, ನಿರ್ದೇಶನ: ವಿಶಾಲ್ ರಾಜ್), ರಾಮನ ಸವಾರಿ (ತೃತೀಯ ಬಹುಮಾನ, 
ನಿ: ಕೆ. ಶಿವರುದ್ರಯ್ಯ).

ಕನ್ನಡ ಜನಪ್ರಿಯ ಸಿನಿಮಾ: ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು (ದ್ವಿತೀಯ ಬಹುಮಾನ, ನಿ: ರಿಷಬ್ ಶೆಟ್ಟಿ), ಟಗರು (ತೃತೀಯ ಬಹುಮಾನ, ನಿ: ಸೂರಿ)

ಭಾರತೀಯ ಸಿನಿಮಾ ವಿಭಾಗ: ಘೋಡೆಕೊ ಜಲೇಬಿ ಖಿಲಾನೆ ಲೇ ಜಾ ರಿಯಾ ಹ್ಞೂಂ (ಅತ್ಯುತ್ತಮ ಭಾರತೀಯ ಸಿನಿಮಾ ಬಹುಮಾನ, ನಿ: ಅನಾಮಿಕಾ ಹಸ್ಕರ್), ಆಮೃತ್ಯು (ತೀರ್ಪುಗಾರರ ವಿಶೇಷ ಪ್ರಶಸ್ತಿ, ನಿ: ಅರೂಪ್ ಮನ್ನಾ)

ಏಷ್ಯಾ ಸಿನಿಮಾ ವಿಭಾಗ: ಶಿವರಂಜಿನಿಯುಂ ಇನ್ನುಂ ಸಿಲ ಪೆಂಗಳುಂ (ಏಷ್ಯಾದ ಅತ್ಯುತ್ತಮ ಸಿನಿಮಾ, ನಿ: ವಸಂತ್). ‘ಘೋಡೆಕೊ ಜಲೇಬಿ...’ ಚಿತ್ರ ಅಂತರರಾಷ್ಟ್ರೀಯ ಜ್ಯೂರಿ ಪ್ರಶಸ್ತಿಗೆ ಕೂಡ ಆಯ್ಕೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು