ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಸಿವೆಯಷ್ಟು ಗೆಲುವು; ಸಾಗರದಷ್ಟು ಸೋಲು

2018ರ ಹಿನ್ನೋಟ
Last Updated 27 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಉಬ್ಬರದಲ್ಲಿ ಭೋರ್ಗರೆಯುತ್ತ ದಡಕ್ಕಪ್ಪಳಿಸುತ್ತಿರುವ ಸಮುದ್ರ. ಸಂಜೆ ಕಳೆದು ರಾತ್ರಿಯಾಗಿದೆ. ಕೈಯಲ್ಲಿ ಮಿಣುಕು ದೀಪ ಹಿಡಿದುಕೊಂಡು ಹಣೆಗೆ ಕೈ ಹಚ್ಚಿ ಶರಧಿಯನ್ನೇ ದಿಟ್ಟಿಸುತ್ತಿದ್ದಾನೆ ಹಣ್ಣು ಹಣ್ಣು ಮುದುಕ. ದೂರದ ದ್ವೀಪದಿಂದ ಮುತ್ತು ಹೊತ್ತು ಬರುತ್ತೇವೆ ಎಂದು ಹೊರಟ ಊರಿನ ಇನ್ನೂರಿಪ್ಪತ್ತೈದು ಮಕ್ಕಳು ಮರಳಿಲ್ಲ. ಅವರು ಹೊತ್ತು ತಂದ ಮುತ್ತುಗಳಲ್ಲಿ ಹೊಸವರ್ಷದ ಹಬ್ಬಕ್ಕೆ ಸಾಗರತೀರವನ್ನು ಅಲಂಕರಿಸುವ ಕನಸು ಅವನ ಕಣ್ಣುಗಳಲ್ಲಿ ನಿಧಾನ ಕಳೆಗುಂದುತ್ತಿದೆ.

ಕತ್ತಲು ಕವಿಯುವಷ್ಟರಲ್ಲಿ ಒಂದೆರಡು ನಾವೆಗಳು ಅವುಗಳ ಹಿಂದೆ ಮತ್ತೊಂದಿಷ್ಟು ಪುಟ್ಟ ದೋಣಿಗಳು ಬಂದು ದಡ ತಾಕಿದವು. ಅದರಿಂದ ಇಳಿದವರ ಮುಖದಲ್ಲಿ ಗೆಲುವಿನ ಸಂಭ್ರಮಕ್ಕಿಂತ, ಅಂತೂ ‘ದಡ ಮುಟ್ಟಿದ’ ಆಯಾಸವೇ ಎದ್ದು ಕಾಣುತ್ತಿದೆ. ಕೈಯಲ್ಲಿ ಒಂದೆರಡು ಹೊಳೆವ ಮುತ್ತುಗಳು. ಮೂರು ಮತ್ತೊಂದು ಮುತ್ತನ್ನಿಟ್ಟುಕೊಂಡು ಸಾಗರ ತೀರವನ್ನು ಬೆಳಗಲಾದೀತೇ? ಮುದುಕನ ಕಣ್ಣು ಮತ್ತೆ ಸಾಗರದ ಕಡೆ ನೆಟ್ಟಿತು. ಇನ್ನೂರಿಪ್ಪತ್ತೈದರಲ್ಲಿ ಬಂದವರು ಬೆರಳೆಣಿಕೆಯಷ್ಟು. ಉಳಿದವರೆಲ್ಲಿ? ಸೋತು ಕಡಲ ಒಡಲ ಸೇರಿದರೆ? ಅಥವಾ ಗೆದ್ದು ಮುತ್ತ ರಾಶಿ ಹೊತ್ತು ಬರಬಹುದೇ?

ಮನಸು ತನ್ನ ಪ್ರಾಯದ ಕಾಲವನ್ನು ನೆನೆಸಿಕೊಳ್ಳುತ್ತಿದೆ. ಆ ದಿನಗಳ ಗೆಲುವಿನ ದೀಪಾವಳಿ, ಅತ್ಯಮೂಲ್ಯ ಮುತ್ತುಗಳ ಪ್ರಭಾವಳಿ ಈಗೆಲ್ಲಿ ಹೋಯ್ತು? ಸಾಗರವೇ ಹದ ತಪ್ಪಿದೆಯೇ? ಮುತ್ತು ತರಲು ಹೋದ ತನ್ನೂರಿನ ಹುಡುಗರೇ ದಾರಿ ತಪ್ಪಿದರೇ? ಗಡಿಯಾರ ನಡುರಾತ್ರಿ ಹನ್ನೆರಡನ್ನು ಸಮೀಪಿಸುತ್ತಿದೆ. ಗಾಳಿ ಜೋರಾಗುತ್ತಿದೆ. ಮುದುಕನ ಕೈಯ ದೀಪ ಹೊಯ್ದಾಡುತ್ತಿದೆ. ಮನಸಿನಲ್ಲಿನ ಗೆಲುವಿನ ನಂಬಿಕೆಯೂ...

ಇದೆಂಥ ಕಥೆ ಎನ್ನುತ್ತೀರಾ? ಸಾಗರವನ್ನು ಕನ್ನಡ ಚಿತ್ರರಂಗ ಅಂದುಕೊಳ್ಳಿ. ಮುತ್ತು ತರಲು ಹೋದ ಇನ್ನೂರಿಪ್ಪತ್ತೈದಕ್ಕೂ ಅಧಿಕ ಮಕ್ಕಳನ್ನು 2018ರಲ್ಲಿ ಬಿಡುಗಡೆಯಾದ ಚಿತ್ರಗಳ ನಿರ್ದೇಶಕರು ಅಂದುಕೊಳ್ಳಿ. ಅವರು ತರುವ ಒಂದೊಂದು ಮುತ್ತೂ ಸಿನಿಮಾ ಗೆಲುವಿನ ಸಂಕೇತ. ಮುದುಕನನ್ನು ಚಿತ್ರರಂಗವನ್ನು ಹಲವು ದಶಕಗಳಿಂದ ನೋಡಿಕೊಂಡು ಬರುತ್ತಿರುವ ಸಾಕ್ಷಿಪ್ರಜ್ಞೆ ಎಂದೂ ಅಂದುಕೊಳ್ಳಬಹುದು. ಈಗ ಮೇಲಿನ ಕಥೆ ಬೇರೆಯದೇ ಅರ್ಥ–ಆಯಾಮದಲ್ಲಿ ಹೊಳೆಯತೊಡಗುತ್ತದೆ ನೋಡಿ.

ಇನ್ನು ಮೂರು ದಿನಕ್ಕೆ ಈ ವರ್ಷ ಮುಗಿಯುತ್ತದೆ. ಕನ್ನಡ ಚಿತ್ರರಂಗದ ಇತಿಹಾಸಕ್ಕೆ ಇನ್ನೊಂದು ವರ್ಷ ಸೇರ್ಪಡೆಯಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ಪ್ರತಿವರ್ಷವೂ ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಈ ವರ್ಷ ಹಿಂದೆಂದಿಗಿಂತಲೂ ಹೆಚ್ಚು ಅಂದರೆ ಸುಮಾರು 225ಕ್ಕೂ ಅಧಿಕ ಸಿನಿಮಾ ಬಿಡುಗಡೆಯಾಗಿವೆ. ಗಲ್ಲಾಪೆಟ್ಟಿಗೆಯಲ್ಲಿ ಗೆದ್ದ ಸಿನಿಮಾಗಳೆಷ್ಟು ಎಂದು ಲೆಕ್ಕಹಾಕಹೋದರೆ ಒಂದು ಕೈಯ ಐದು ಬೆರಳುಗಳು ಹೆಚ್ಚಾಗುತ್ತವೆ. ತಯಾರಾಗುತ್ತಿರುವ ಚಿತ್ರಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ವೇಗದಲ್ಲಿಯೇ ಗೆಲುವಿನ ದರ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಗೆಲುವಿನ ಪ್ರಮಾಣ ಕುಸಿತದ ಲೆಕ್ಕಾಚಾರದಲ್ಲಿಯೂ ಈ ವರ್ಷ ದಾಖಲೆ ಬರೆದಿರುವಂತಿದೆ.

ಸಿನಿಮಾಗಳ ಸೋಲು ಗೆಲುವು ಅಷ್ಟೇ ಅಲ್ಲ, ಅದರಾಚೆಗಿನ ಚಿತ್ರರಂಗದಲ್ಲಿನ ಬೆಳವಣಿಗೆಗಳನ್ನು ಗಮನಿಸಿದರೂ ಈ ವರ್ಷ ಕೊಂಚ ಕಳವಳಕಾರಿಯೇ ಆಗಿದೆ.

2018 ಆರಂಭವಾಗಿದ್ದು ರವಿಚಂದ್ರನ್‌ ಮಗ ಮನೋರಂಜನ್ ನಟನೆಯ, ನಂದಕಿಶೋರ್ ನಿರ್ದೇಶನದ ‘ಬೃಹಸ್ಪತಿ’ ಚಿತ್ರದ ಮೂಲಕ. ಈ ಚಿತ್ರದ ಜತೆಗೆ ಇನ್ನೂ ಮೂರು ಚಿತ್ರಗಳು ಬಿಡುಗಡೆಯಾದವಾದರೂ ‘ಬೃಹಸ್ಪತಿ’ಯ ಕುರಿತೇ ಹೆಚ್ಚು ನಿರೀಕ್ಷೆ ಇತ್ತು. ಆದರೆ ವರ್ಷಾರಂಭವನ್ನು ಗೆಲುವಿನ ಸಿಹಿಯಲ್ಲಿ ಅರಳಿಸಲು ಬೃಹಸ್ಪತಿಗೆ ಸಾಧ್ಯವಾಗಲಿಲ್ಲ.

ಜನವರಿಯಲ್ಲಿ ಹನ್ನೆರಡು ಸಿನಿಮಾಗಳು ತೆರೆಕಂಡವು. ಅವುಗಳಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಕೊಂಚವಾದರೂ ಕೊಸರಾಡಿದ್ದು ‘ಹಂಬಲ್ ಪೊಲಿಟಿಷಿಯನ್ ನೋಗ್ರಾಜ್‌’ ಮಾತ್ರ. ಸಾದ್‌ ಖಾನ್ ನಿರ್ದೇಶನದ ಡಾನಿಶ್ ಸೇಟ್‌ ಅಭಿನಯದ ಈ ಚಿತ್ರ ಬಿಡುಗಡೆಗೂ ಮುನ್ನ ಮಾಡಿದ ಸೌಂಡನ್ನು ತೆರೆಯ ಮೇಲೆ ಮಾಡಲು ಸಾಧ್ಯವಾಗಲಿಲ್ಲ. ಬ್ರೇನ್‌ಲೆಸ್‌ ಚೇಷ್ಟೆಗಳನ್ನೇ ಬಂಡವಾಳವಾಗಿರಿಸಿಕೊಂಡಿದ್ದ ‘ನೋಗ್ರಾಜ್‌’ ಮಲ್ಟಿಪ್ಲೆಕ್ಸ್‌ ಪ್ರೇಕ್ಷಕನ ಕೃಪಾಶೀರ್ವಾದದಿಂದ ಒಂದಿಷ್ಟು ದಿನ ತೆರೆಯ ಮೇಲೆ ನಿಂತುಕೊಂಡಿದ್ದ.ತಿಂಗಳ ಅಂತ್ಯಕ್ಕೆ ದುನಿಯಾ ವಿಜಯ್‌ ಅಭಿನಯದ ‘ಕನಕ’ ಸಿನಿಮಾ ಬಂದಷ್ಟೇ ಅರ್ಜೆಂಟಲ್ಲಿ ತೆರೆಯನ್ನು ಮುಟ್ಟಿ ಮರೆಯೂ ಆದ.

ಫೆಬ್ರುವರಿಯ 28 ದಿನಗಳಲ್ಲಿ 23 ಸಿನಿಮಾಗಳು ತೆರೆಕಂಡವು. ಅರ್ಜುನ್‌ ಸರ್ಜಾ ತಮ್ಮ ಮಗಳು ಐಶ್ವರ್ಯಾ ಅರ್ಜುನ್‌ ಅವರನ್ನು ಲಾಂಚ್‌ ಮಾಡಲು ನಿರ್ದೇಶಿಸಿದ ‘ಪ್ರೇಮ ಬರಹ’ ಓಡಿದ್ದಕ್ಕಿಂತ ಪ್ರಯಾಸಪಟ್ಟು ಓಡಿಸಿದ್ದೇ ಹೆಚ್ಚು. ಗೀತರಚನೆಕಾರ ವಿ. ನಾಗೇಂದ್ರಪ್ರಸಾದ್‌ ನಿರ್ದೇಶನದ ಟೋಪಿ ಧರಿಸಿ ರೂಪಿಸಿದ ‘ಗೂಗಲ್‌’ನಲ್ಲಿ ಪ್ರೇಕ್ಷಕ ಏನನ್ನಾದರೂ ಹುಡುಕುವ ಪ್ರಯತ್ನವನ್ನೇ ಮಾಡಲಿಲ್ಲ.

ಆದರೆ 2018ರಲ್ಲಿ ಸೂಪರ್‌ಹಿಟ್‌ ಆದ ‘ಟಗರು’ ಸಿನಿಮಾ ಬಿಡುಗಡೆಯಾಗಿದ್ದು ಫೆಬ್ರುವರಿ ಅಂತ್ಯಕ್ಕೆ. ಸೂರಿ ಅವರ ವಿಭಿನ್ನ ನಿರೂಪಣೆ, ಶಿವರಾಜ್‌ಕುಮಾರ್, ಧನಂಜಯ್‌, ವಸಿಷ್ಠ ಸಿಂಹ, ಮಾನ್ವಿತಾ ಹರೀಶ್‌, ಭಾವನಾ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರದ ಸಂಗೀತ (ಚರಣ್‌ ರಾಜ್‌) ಮತ್ತು ಛಾಯಾಗ್ರಹಣ (ಮಹೇಂದ್ರ ಸಿಂಹ)ವೂ ಸಾಕಷ್ಟು ಸುದ್ದಿ ಮಾಡಿತು. ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದ ಸಂಭಾಷಣೆಕಾರ ಮಾಸ್ತಿ ಅವರ ಮೇಲೆ ಪ್ರಖರ ಬೆಳಕು ಹರಿಸಿದ್ದೂ ‘ಟಗರು’ ಸಿನಿಮಾವೇ. ಕೆ.ಪಿ. ಶ್ರೀಕಾಂತ್‌ ನಿರ್ಮಾಣದ ಈ ಚಿತ್ರ ಮಾಸ್‌ ಪ್ರೇಕ್ಷಕರು ಮತ್ತು ಸಿನಿವಿಶ್ಲೇಷಕರಿಬ್ಬರ ಮೆಚ್ಚುಗೆಯನ್ನೂ ಗಳಿಸಿತು. 2018ರ ಸೂಪರ್‌ಹಿಟ್‌ ಸಿನಿಮಾಗಳ ಪಟ್ಟಿಯಲ್ಲಿ ಅಗ್ರದಲ್ಲಿ ನಿಲ್ಲುವುದು ‘ಟಗರು’ ಎಂದು ನಿಸ್ಸಂಶಯವಾಗಿ ಹೇಳಬಹುದು.

‘ರಂಗಿತರಂಗ’ ಸಿನಿಮಾದಿಂದ ಅಪಾರ ನಿರೀಕ್ಷೆ ಹುಟ್ಟಿಸಿದ್ದ ಭಂಡಾರಿ ಸಹೋದರರ ಕಾಂಬಿನೇಷನ್‌ನ ‘ರಾಜರಥ’‍ ಸಿನಿಮಾ ತೆರೆಕಂಡಿದ್ದು ಮಾರ್ಚ್‌ ತಿಂಗಳಲ್ಲಿ. ಬಿಡುಗಡೆಗೂ ಮುನ್ನವೇ ಪ್ರೇಕ್ಷಕರನ್ನು ಹೀಗಳೆದು ವಿವಾದ ಮೈಗೆಳೆದುಕೊಂಡ ಭಂಡಾರಿ ಸಹೋದರರ ರಾಜರಥ ತೆರೆಯ ಮೇಲೂ ಪಂಕ್ಚರ್‌ ಆಗಿ ಗ್ಯಾರೇಜ್‌ ಸೇರಿತು.

ಅಷ್ಟೇನೂ ಸುದ್ದಿಯಿಲ್ಲದೆ ತೆರೆಗೆ ಬಂದ ಹೊಸ ಹುಡುಗರ ಪ್ರಯತ್ನ ‘ಗುಲ್ಟೂ’ ಭಿನ್ನ ಕಥಾವಸ್ತುವಿನ ಕಾರಣಕ್ಕೆ ಪ್ರೇಕ್ಷಕರಿಗೆ ಇಷ್ಟವಾಯ್ತು. ಜನಾರ್ದನ್‌ ಚಿಕ್ಕಣ್ಣ ನಿರ್ದೇಶನದ ಈ ಚಿತ್ರದಲ್ಲಿ ಸೋನು ಗೌಡ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು. ಸೈಬರ್‌ ಲೋಕದ ಪಾತಕದ ಈ ಕಥನ ತೆರೆಗೆ ತಂದ ಹುಡುಗರಿಗೆ ಕನ್ನಡದ ಪ್ರೇಕ್ಷಕ ಗೆಲುವಿನ ಉಡುಗೊರೆಯನ್ನೇ ನೀಡಿದ.

ಏಪ್ರಿಲ್‌ನಲ್ಲಿ ತೆರೆಗೆ ಬಂದ ಸಿನಿಮಾಗಳೆಲ್ಲವನ್ನೂ ಪ್ರೇಕ್ಷಕ ‘ಏಪ್ರಿಲ್‌ ಫೂಲ್‌’ ಎಂದು ಬಂದಹಾಗೆಯೇ ತಿರುಗಿ ಕಳಿಸಿದ. ರಾಜ್ಯಪ್ರಶಸ್ತಿ ಬಾಚಿಕೊಂಡ ‘ಹೆಬ್ಬೆಟ್‌ ರಾಮಕ್ಕ’ ಮತ್ತು ಟಿ.ಎಸ್‌. ನಾಗಾಭರಣ ಅವರ ‘ಕಾನೂರಾಯಣ’ ಸಿನಿಮಾಗಳನ್ನು ಹಿರಿಯ ನಿರ್ದೇಶಕರ ಪ್ರತಿಭೆ ಕುಂದಿದ ಕುರುಹಾಗಿ ನೆನಪಿಸಿಕೊಳ್ಳಬೇಕಷ್ಟೆ.

ಮೇ, ಜೂನ್‌ ತಿಂಗಳಿನಲ್ಲಿ ಚಂದನವನಕ್ಕೆ ಕವಿದಿದ್ದ ಸೋಲಿನ ಸೂತಕವನ್ನು ತೊಡೆಯುವ ದಾಖಲೆಯ ಯಶಸ್ಸೇನೂ ಸಿಕ್ಕಲಿಲ್ಲ. ಆದರೆ ಶರಣ್ ಅಭಿನಯದ ‘ರ‍್ಯಾಂಬೋ 2’ ಸಿನಿಮಾ ಪ್ರೇಕ್ಷಕನ ಮುಖದಲ್ಲಿ ಒಂದಿಷ್ಟು ನಗುವುಕ್ಕಿಸಿ ಗಲ್ಲಾಪೆಟ್ಟಿಗೆಯನ್ನು ಕೊಂಚ ಗಲಗಲಿಸಿತು. ಮತ್ತೆ ಜೂನ್‌ ತಿಂಗಳಲ್ಲಿ ಗೆಲುವಿನ ಮಳೆಯಿಲ್ಲದೆ ಚಿತ್ರರಂಗದ ನೆಲ ಬಿರುಕು ಬಿಡಲು ಶುರುವಾಗಿತ್ತು. ಜುಲೈನಲ್ಲಿ ಹಿರಿಯ ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿ ನಿರ್ದೇಶನದ ‘ಹಸಿರು ರಿಬ್ಬನ್’ ಚಿತ್ರ ತೆರೆಕಂಡಿದ್ದನ್ನು ಸ್ಮರಿಸಿಕೊಳ್ಳಬಹುದು. ಹಾಗೆಯೇ ದಯಾಳ್ ಪದ್ಮನಾಭನ್ ನಿರ್ದೇಶನದ ‘ಆ ಕರಾಳ ರಾತ್ರಿ’ ತನಗೆ ಹೂಡಿದ್ದ ಕಿರು ಬಜೆಟ್‌ ಅನ್ನು ನಿರ್ಮಾಪಕನ ಜೇಬಿಗೆ ಮರಳಿಸಿದ್ದಲ್ಲದೇ ತುಸು ಲಾಭವನ್ನೂ ತಂದುಕೊಟ್ಟಿತು. ವಿಮರ್ಶಕರಿಂದಲೂ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

ಹಾಗೆ ನೋಡಿದರೆ ಆಗಸ್ಟ್‌ ತಿಂಗಳೇ 2018ರ ಹೆಚ್ಚು ಚೇತೋಹಾರಿ ತಿಂಗಳು ಎನ್ನಬಹುದು.

ಆಗಸ್ಟ್‌ ಆರಂಭದಲ್ಲಿ ಬಿಡುಗಡೆಯಾದ ‘ಕಥೆಯೊಂದು ಶುರುವಾಗಿದೆ’ ಶುರುವಾಗುವ ಮುನ್ನವೇ ಮುಗಿದೂ ಹೋಯಿತು. ನಿರ್ಮಾಪಕರ ಬೆಂಬಲದಿಂದ ಆ ಸಿನಿಮಾವನ್ನು ಕೆಲಕಾಲ ಚಿತ್ರಮಂದಿರದಲ್ಲಿ ಉಳಿಸಿಕೊಂಡರೂ ಅದರಿಂದ ನಷ್ಟ ಇನ್ನಷ್ಟು ಹೆಚ್ಚಾಯಿತೇ ಹೊರತು ಕಚ್ಚಿಕೊಂಡು ನಿಲ್ಲಲಿಲ್ಲ.

ಆದರೆ ಎಸ್‌. ಮಹೇಶ್‌ ಕುಮಾರ್ ನಿರ್ದೇಶನದ ‘ಅಯೋಗ್ಯ’ ಸಿನಿಮಾವನ್ನು ಪ್ರೇಕ್ಷಕ ನಿರೀಕ್ಷೆ ಮೀರಿ ಗೆಲ್ಲಿಸಿದ. ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ನಟಿಸಿದ್ದ ಈ ಚಿತ್ರದಲ್ಲಿ ಉಕ್ಕಿದ ಹಾಸ್ಯದ ಹೊನಲಿಗೆ ಗಲ್ಲಾಪೆಟ್ಟಿಗೆಯ ಎದೆಮಟ್ಟಕ್ಕೆ ತುಂಬಿದ್ದು ನಿಜ. ಅಯೋಗ್ಯನನ್ನೂ 2018ರ ಹಿಟ್‌ಲಿಸ್ಟ್‌ನಲ್ಲಿ ಸೇರಿಸಿದ್ದಾನೆ ಪ್ರೇಕ್ಷಕ ಮಹಾಪ್ರಭು.

ಆಗಸ್ಟ್‌ 24ರಂದು ಎರಡು ಬಹುನಿರೀಕ್ಷೆಯ ಸಿನಿಮಾಗಳು ತೆರೆಕಂಡವು. ‘ರಾಮಾ ರಾಮಾ ರೇ’ ಚಿತ್ರದ ನಿರ್ದೇಶಕ ಡಿ. ಸತ್ಯಪ್ರಕಾಶ್ ನಿರ್ದೇಶನದ ‘ಒಂದಲ್ಲಾ ಎರಡಲ್ಲಾ’ ಮತ್ತು ರಿಷಭ್‌ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು, ಕೊಡುಗೆ ರಾಮಣ್ಣ ರೈ’.

ಒಳ್ಳೆಯ ಕಥಾವಸ್ತು, ಉತ್ತಮ ನಿರೂಪಣೆ ಹೊಂದಿದ್ದರೂ ‘ಒಂದಲ್ಲಾ ಎರಡಲ್ಲಾ’ ಸಿನಿಮಾದತ್ತ ಪ್ರೇಕ್ಷಕ ಹೊರಳಿಯೂ ನೋಡಲಿಲ್ಲ. ಕಾಸರಗೋಡಿನ ಸರ್ಕಾರಿ ಶಾಲೆಗಳ ಸಮಸ್ಯೆಯನ್ನು ತೆಳುಗೊಳಿಸಿ ಹಾಸ್ಯರೂಪದಲ್ಲಿ ಇಟ್ಟುಕೊಟ್ಟ ‘ಸರ್ಕಾರಿ..’ ಜೋರಾಗಿಯೇ ಸದ್ದು ಮಾಡಿತು. ಒಂದು ಅಂದಾಜಿನ ಪ್ರಕಾರ ಈ ಚಿತ್ರ ಸುಮಾರು ₹ 10ಕೋಟಿ ಗಳಿಕೆ ಮಾಡಿದೆ.

ಅಕ್ಟೋಬರ್ ತಿಂಗಳಿಡೀ ಸುದ್ದಿ ಮಾಡಿದ್ದು ಪ್ರೇಮ್‌ ನಿರ್ದೇಶನದ, ಶಿವರಾಜ್‌ಕುಮಾರ್ ಮತ್ತು ಸುದೀಪ್‌ ಅಭಿನಯದ ‘ದಿ ವಿಲನ್‌’ ಸಿನಿಮಾ. ಬಹುದೊಡ್ಡ ಬಜೆಟ್‌, ಚಂದನವನದ ಇಬ್ಬರು ಸೂಪರ್‌ಸ್ಟಾರ್‌ಗಳು ಒಟ್ಟಾಗಿ ನಟಿಸಿರುವುದು, ಆ್ಯಮಿ ಜಾಕ್ಸನ್‌ ನಾಯಕಿ... ಹೀಗೆ ಈ ಸಿನಿಮಾ ಸುದ್ದಿಯಾಗಲು, ನಿರೀಕ್ಷೆ ಉತ್ತುಂಗಕ್ಕೇರಲು ಕಾರಣಗಳು ಹಲವಿದ್ದವು. ಆದರೆ ಈ ನಿರೀಕ್ಷೆಯನ್ನು ಮನಸಲ್ಲಿಟ್ಟುಕೊಂಡು ಚಿತ್ರಮಂದಿರಕ್ಕೆ ಹೋದವರಿಗೆ ಭ್ರಮನಿರಸನವಾಗಿದ್ದೇ ಹೆಚ್ಚು. ಆದರೂ ನಿರ್ಮಾಪಕರ ಬೆಂಬಲದಿಂದ ಖಾಲಿ ಖಾಲಿ ಚಿತ್ರಮಂದಿರಗಳಲ್ಲಿಯೂ ‘ದಿ ವಿಲನ್‌’ ಐವತ್ತು ದಿನಗಳ ಗಡಿಯನ್ನು ತೆವಳುತ್ತ ತಲುಪಿದೆ.

ಪ್ರಮಾಣವನ್ನಷ್ಟೇ ನೋಡಿದರೆ ನವೆಂಬರ್ ತಿಂಗಳಲ್ಲಿ ನಡೆದಿದ್ದು ಚಿತ್ರಸುಗ್ಗಿಯೇ. ಒಟ್ಟು 27 ಸಿನಿಮಾಗಳು ಬಿಡುಗಡೆಯಾದವು. ಅವುಗಳಲ್ಲಿ ‘ವಿಕ್ಟರಿ 2’ ಸಿನಿಮಾ ಬಿಟ್ಟರೆ ಉಳಿದವೆಲ್ಲ ರ‍್ಯಾಂಪ್‌ವಾಕ್‌ ಮಾಡಿದಂತೆ ಬಂದಷ್ಟೇ ವೇಗವಾಗಿ ಮರಳಿದವು. ಶರಣ್‌ ಅಭಿನಯದ ‘ವಿಕ್ಟರಿ 2’ ದೊಡ್ಡ ಮೊತ್ತದ ಗಳಿಕೆಯನ್ನು ಮಾಡದಿದ್ದರೂ ನಿರ್ಮಾಪಕರ ಜೋಬಿಗೆ ಒಂದಿಷ್ಟು ಲಾಭವನ್ನಂತೂ ತಂದಿಟ್ಟಿತು.ತುಂಬ ವರ್ಷಗಳ ನಂತರ ಅಂಬರೀಷ್‌ ನಟಿಸಿದ್ದಾರೆ ಮತ್ತು ಸುದೀಪ್‌ ಕೂಡ ಮುಖ್ಯಭೂಮಿಕೆಯಲ್ಲಿದ್ದಾರೆ ಎಂಬ ಕಾರಣಕ್ಕೆ ‘ಅಂಬಿ ನಿಂಗ್‌ ವಯಸ್ಸಾಯ್ತೋ’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿಯೇ ಇತ್ತು. ನವೆಂಬರ್‌ ತಿಂಗಳಲ್ಲಿ ಈ ಚಿತ್ರ ತೆರೆಕಂಡಿತು. ಆದರೆ ಈ ಸಿನಿಮಾಕ್ಕೆ ಪ್ರೇಕ್ಷಕರು ಬಹುಪರಾಕ್‌ ಎನ್ನಲಿಲ್ಲ. ಇದು ಅಂಬರೀಷ್‌ ನಟನೆಯ ಕೊನೆಯ ಸಿನಿಮಾ. ಜಗ್ಗೇಶ್‌ ನಾಯಕನಾಗಿ ನಟಿಸಿದ್ದ ‘8ಎಂಎಂ’ ರಿಮೇಕ್‌ ಸಿನಿಮಾ ಕೂಡ ಹೇಳಹೆಸರಿಲ್ಲದೇ ಹೋಯ್ತು.

ಡಿಸೆಂಬರ್‌ ಮೊದಲವಾರದಲ್ಲಿ ತೆರೆಗೆ ಬಂದ ಧನಂಜಯ್‌ ಅಭಿನಯದ ‘ಭೈರವಗೀತ’ ಮತ್ತು ಗಣೇಶ್ ನಟನೆಯ ‘ಆರೆಂಜ್‌’ ಸಿನಿಮಾಗಳನ್ನೂ ಪ್ರೇಕ್ಷಕ ಎತ್ತಿ ಮೆರೆಸುತ್ತಿಲ್ಲ.

ಡಿ. 21ಕ್ಕೆ ತೆರೆಕಂಡ ‘ಕೆಜಿಎಫ್‌’, ಸಿನಿಮಾ ಬರಡಾಗಿರುವ ನೆಲಕ್ಕೆ ಅಮೃತವಾಹಿನಿಯಂತೆ ಗೋಚರಿಸುತ್ತಿದೆ. ಈ ಚಿತ್ರಕ್ಕೆ ಜನರಿಂದ ಸಿಗುತ್ತಿರುವ ಪ್ರತಿಸ್ಪಂದನ, ವರ್ಷದುದ್ದಕ್ಕೂ ಅನುಭವಿಸಿದ ಸೂತಕದ ವಾತಾವರಣವನ್ನು ಮರೆಸುವಂತಿದೆ. ಹಾಗೆಯೇ ಈ ವರ್ಷದ ಕೊನೆಯ ವಾರ (ಡಿ. 28) ನಿರೀಕ್ಷೆ ಹುಟ್ಟಿಸಿರುವ ಇನ್ನೆರಡು ಚಿತ್ರಗಳು ಬಿಡುಗಡೆಯಾಗುತ್ತಿವೆ. ಮಂಸೋರೆ ನಿರ್ದೇಶನದ ‘ನಾತಿಚರಾಮಿ’ ಮತ್ತು ವಿನಯ ರಾಘವೇಂದ್ರ ನಟನೆಯ ‘ಅನಂತು ವರ್ಸಸ್‌ ನಸ್ರುತ್‌’. ಮಾಮಿ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಗಳಿಸಿರುವ ‘ನಾತಿಚರಾಮಿ’ ಹೆಣ್ಣಿನ ಮನೋಲೋಕವನ್ನು ಅನಾವರಣಗೊಳಿಸುವ ಚಿತ್ರ. ‘ಮೀ ಟೂ’ ಗದ್ದಲದಲ್ಲಿ ತಮ್ಮ ಜಡ್ಡುತನವನ್ನು ಸಾಬೀತುಗೊಳಿಸಿಕೊಂಡಿರುವ ಚಿತ್ರರಂಗಕ್ಕೆ ಈ ಚಿತ್ರ ‘ಹಿತ್ತಿಲ ಗಿಡ’ವಾಗಿ ಕಾಣಿಸಿದರೆ ಅಚ್ಚರಿಯಿಲ್ಲ.

ಒಟ್ಟಾರೆ ಚಿತ್ರರಂಗದ ಈ ಹನ್ನೆರಡು ತಿಂಗಳ ದಾರಿಯನ್ನೊಮ್ಮೆ ತಿರುಗಿ ನೋಡಿದರೆ ಕುಸಿದ ಹೆಜ್ಜೆಗಳೇ ಹೆಚ್ಚು ಕಾಣುತ್ತಿವೆ. ನಡುವೆ ಗೆಲುವಿನ ನಗೆ ಅಲ್ಲಲ್ಲಿ ಅರೆಕಾಸಿನ ಮಜ್ಜಿಗೆಯಂತೆ ಸುರಿದಿದೆಯಷ್ಟೆ. ವರ್ಷಾಂತ್ಯಕ್ಕೆ ತೆರೆಕಂಡ ಕೆಜಿಎಫ್‌, ಮುಂದಿನ ವರ್ಷ ತೆರೆಗೆ ಬರಲು ಸಿದ್ಧವಾಗಿರುವ ಸ್ಟಾರ್‌ನಟರ ಸಿನಿಮಾಗಳ ಪಟ್ಟಿಯನ್ನು ಗಮನಿಸಿ ಸಮಾಧಾನ ಮಾಡಿಕೊಳ್ಳಬೇಕಷ್ಟೆ. ‘ನಾಳೆ ಒಳ್ಳೆಯದಾಗುತ್ತದೆ’ ಎಂಬ ನಂಬಿಕೆಯನ್ನು ಉಳಿಸಿಕೊಳ್ಳುವುದನ್ನು ಬಿಟ್ಟರೆ ಬೇರೆ ದಾರಿ ಇಲ್ಲ.

ದಡದಲ್ಲಿ ಕಾದಿರುವ ಹಣ್ಣು ಹಣ್ಣು ಮುದುಕನ ಕಂಗಳಲ್ಲಿ ಮೂಡುತ್ತಿರುವ ನಿರಾಸೆಯ ನೋವು ಅಲ್ಲೆಲ್ಲೋ ಸಮುದ್ರದಲ್ಲಿ ತೊಳಲಾಡುತ್ತಿರುವ ಊರ ಮಕ್ಕಳಿಗೆ ಕೇಳಿಸಲಿ. ಅವರು ಇನ್ನಷ್ಟು ಕಸುವು ತುಂಬಿಕೊಂಡು ಹುಟ್ಟುಹಾಕಿ ದೋಣಿಯನ್ನು ಗೆಲುವಿನ ದಡಕ್ಕೆ ತಾಗಿಸಲಿ.

ಸೂಪರ್‌ ಹಿಟ್‌: ಟಗರು, ಕೆಜಿಎಫ್‌ (ಇನ್ನೂ ಪ್ರದರ್ಶನ ಕಾಣುತ್ತಿದೆ)

ಗೆದ್ದಿದ್ದಂತೂ ನಿಜ: ಗುಳ್ಟು , ರ‍್ಯಾಂಬೋ 2, ಅಯೋಗ್ಯ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ.

ಅಂತೂ ಇಂತೂ: ಹಂಬಲ್‌ ಪೊಲಿಟಿಷಿಯನ್‌ ನೋಗ್ರಾಜ್‌, ಆ ಕರಾಳ ರಾತ್ರಿ, ಟ್ರಂಕ್‌, ಭೈರವಗೀತ, ಆರೆಂಜ್‌

ಭಿನ್ನ ಯತ್ನಗಳು: ಒಂದಲ್ಲಾ ಎರಡಲ್ಲಾ, ಒಂಥರ ಬಣ್ಣಗಳು, ಕಥೆಯೊಂದು ಶುರುವಾಗಿದೆ, ಅಮ್ಮಚ್ಚಿಯೆಂಬ ನೆನಪು, ಪಡ್ಡಾಯಿ, ನಾತಿಚರಾಮಿ, ಹಸಿರು ರಿಬ್ಬನ್‌, ಇದೀಗ ಬಂದ ಸುದ್ದಿ

ವರ್ಷದ ಬಿಗ್‌ ಬಜೆಟ್‌ ಸಿನಿಮಾಗಳು

* ಒಟ್ಟು ಚಿತ್ರಗಳ ಸಂಖ್ಯೆ: 225

* ದಿ ವಿಲನ್‌ – ₹ 45 ಕೋಟಿ

* ಕೆಜಿಎಫ್‌– ₹ 60 ಕೋಟಿ

ಅತಿ ಹೆಚ್ಚು ಸಿನಿಮಾ ಬಿಡುಗಡೆಯಾದ ತಿಂಗಳು: ನವೆಂಬರ್‌ 27

ಮತ್ತೆ ಭುಸುಗುಟ್ಟಿದ ನಾಗರಹಾವು

ಪುಟ್ಟಣ್ಣ ಕಣಗಾಲ್ ನಿರ್ದೇಶನದ ವಿಷ್ಣುವರ್ಧನ್‌ ಮತ್ತು ಅಂಬರೀಷ್‌ಗೆ ಚಿತ್ರರಂಗದಲ್ಲಿ ಗಟ್ಟಿ ನೆಲೆಯೂರಲು ಕಾರಣವಾದ ಚಿತ್ರ ನಾಗರಹಾವು. ಈ ಚಿತ್ರವನ್ನು ಹೊಸ ತಂತ್ರಜ್ಞಾನಕ್ಕೆ ಒಗ್ಗಿಸಿ ಇದೇ ವರ್ಷ ಜುಲೈ 20ಕ್ಕೆ ಬಿಡುಗಡೆ ಮಾಡಲಾಯಿತು. ಹೊಸ ರೂಪದೊಂದಿಗೆ ತೆರೆಗೆ ಬಂದ ನಾಗರಹಾವು ಭುಸುಗುಟ್ಟಿ ಒಂದಿಷ್ಟು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಿತು.

ಸ್ಟಾರ್‌ ನಟರ ಗೈರು ಹಾಜರಿ

2018 ಚಿತ್ರರಂಗ ಮಂಕಾಗಲು ಸ್ಟಾರ್‌ ನಟರ ಗೈರು ಹಾಜರಿಯೂ ಮುಖ್ಯ ಕಾರಣ. ಪುನೀತ್‌, ದರ್ಶನ್‌, ಧ್ರುವ ಸರ್ಜಾ ಅವರಂಥ ನಟರ ಒಂದು ಸಿನಿಮಾವೂ ಈ ವರ್ಷ ತೆರೆಕಂಡಿಲ್ಲ. ಶಿವರಾಜ್‌ಕುಮಾರ್‌ ಟಗರು ಒಂದೇ ಗರ್ಜಿಸಿದ್ದು. ಸುದೀಪ್‌ ಎರಡು ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಸುದೀಪ್‌ ಮತ್ತು ಶಿವರಾಜ್‌ಕುಮಾರ್‌ ಒಟ್ಟಾಗಿ ನಟಿಸಿದ ‘ದಿ ವಿಲನ್‌’ ಚಿತ್ರಮಂದಿರದಲ್ಲಿ ಹೀರೊ ಆಗಲಿಲ್ಲ. ಗಣೇಶ್‌ ಅಭಿನಯದ ‘ಆರೆಂಜ್’ ವರ್ಷಾಂತ್ಯಕ್ಕೆ ಬಿಡುಗಡೆಯಾದರೂ ಬಂದ ಹಾಗೆಯೇ ಮಾಯವಾಯ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT