ಶನಿವಾರ, ಫೆಬ್ರವರಿ 29, 2020
19 °C
ಕೇರಳ, ತಮಿಳುನಾಡು ಸೂತ್ರ ಜಾರಿಗೆ ನಿರ್ಧಾರ

ಸಿನಿಮಾ ಥಿಯೇಟರ್‌ ಬಾಡಿಗೆ ಪದ್ಧತಿಗೆ ತಿಲಾಂಜಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಿತ್ರಮಂದಿರಗಳ ಬಾಡಿಗೆ ಪದ್ಧತಿಗೆ ತಿಲಾಂಜಲಿ ನೀಡಿ ಶೇಕಡವಾರು ಪದ್ಧತಿಯ ಜಾರಿಗೆ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ನಿರ್ಧರಿಸಿದೆ. ಈ ಹೊಸ ಪದ್ಧತಿಯು ಏಪ್ರಿಲ್‌ 2ರಿಂದ ರಾಜ್ಯದಲ್ಲಿ ಜಾರಿಗೆ ಬರಲಿದೆ. ಇದರ ಅನುಷ್ಠಾನ ಸಂಬಂಧ ಅಂತಿಮ ತೀರ್ಮಾನಕೈಗೊಳ್ಳಲು ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರನ್ನು ಒಳಗೊಂಡ ಸಮಿತಿ ರಚಿಸಲಾಗುತ್ತಿದೆ. 

ಚಿತ್ರಮಂದಿರಗಳ ದುಬಾರಿ ಬಾಡಿಗೆ ದರ ಭರಿಸಲಾಗದೆ ಬಹಳಷ್ಟು ನಿರ್ಮಾಪಕರು ನಷ್ಟ ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ ಕಡಿಮೆ ಬಜೆಟ್‌ನಲ್ಲಿ ಸಿನಿಮಾ ನಿರ್ಮಿಸುವ ಹೊಸಬರು ಕೂಡ ಪರದಾಡುತ್ತಿದ್ದಾರೆ. ಶೇಕಡವಾರು ಪದ್ಧತಿ ಜಾರಿಯಾದರೆ ಕನ್ನಡ ಚಿತ್ರೋದ್ಯಮದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂಬುದು ನಿರ್ಮಾಪಕರ ಸಂಘದ ನಿಲುವು. 

ಲಾಭ ಹಂಚಿಕೆ ಹೇಗೆ?

ಪ್ರಸ್ತುತ ಕೇರಳ ಮತ್ತು ತಮಿಳುನಾಡಿನಲ್ಲಿ ಶೇಕಡವಾರು ಪದ್ಧತಿ ಜಾರಿಯಲ್ಲಿದೆ. ಅಲ್ಲಿ ನಿರ್ಮಾಪಕರು ಮತ್ತು ಮಲ್ಟಿಫ್ಲೆಕ್ಸ್‌ಗಳ ನಡುವೆ 55:45 ಅನುಪಾತದಡಿ ಲಾಭ ಹಂಚಿಕೆ ಮಾಡಲಾಗುತ್ತದೆ. ಸ್ಟಾರ್‌ ನಟರ ಸಿನಿಮಾಗಳಿಗೆ ಈ ಹಂಚಿಕೆಯು 60:40 ಅನುಪಾತದಲ್ಲಿರುತ್ತದೆ. ಇಲ್ಲಿಯೂ ಇದೇ ಮಾದರಿಯ ಜಾರಿಗೆ ತೀರ್ಮಾನಿಸಲಾಗಿದೆ. 

ಹೊಸ ಪದ್ಧತಿ ಅನ್ವಯ ಚಿತ್ರಮಂದಿರಗಳನ್ನು ‘ಎ’, ‘ಬಿ’ ಮತ್ತು ‘ಸಿ’ ದರ್ಜೆಗಳಾಗಿ ವಿಂಗಡಿಸಲಾಗುತ್ತದೆ. ಈ ಮಾನದಂಡ ನಟರ ಸಿನಿಮಾಗಳಿಗೂ ಅನ್ವಯಿಸಲಿದೆ. ನಿರ್ಮಾಣಕ್ಕೂ ಮೊದಲು ನಿರ್ದೇಶಕರು ಸಿನಿಮಾದ ಬಜೆಟ್‌ ಬಗ್ಗೆ ನಿರ್ಮಾಪಕರೊಟ್ಟಿಗೆ ಒಡಂಬಡಿಕೆ ಮಾಡಿಕೊಳ್ಳುವ ಪದ್ಧತಿಯ ಜಾರಿಗೂ ತೀರ್ಮಾನಿಸಲಾಗಿದೆ. 

‘ಪ್ರಸ್ತುತ ವರ್ಷಕ್ಕೆ ಕನ್ನಡದಲ್ಲಿ 250ಕ್ಕೂ ಹೆಚ್ಚು ಸಿನಿಮಾಗಳು ನಿರ್ಮಾಣವಾಗುತ್ತಿವೆ. ಈ ಪೈಕಿ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಲಾಭಗಳಿಸುತ್ತವೆ. ನಿರ್ಮಾಪಕರ ಹಲವು ವರ್ಷದ ಒತ್ತಾಯದ ಪರಿಣಾಮ ಶೇಕಡವಾರು ಪದ್ಧತಿ ಜಾರಿಗೆ ಮುಂದಾಗಿದ್ದೇವೆ. ಎಲ್ಲಾ ನಟರ ಸಿನಿಮಾಗಳಿಗೂ ಒಂದೇ ಸೂತ್ರ ಪಾಲಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಈ ಸಂಬಂಧ ಸಮಿತಿಯ ಕೈಗೊಳ್ಳುವ ತೀರ್ಮಾನವೇ ಅಂತಿಮವಾದುದು’ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಡಿ.ಕೆ. ರಾಮಕೃಷ್ಣ ತಿಳಿಸಿದ್ದಾರೆ.

ಎಲ್ಲಾ ಚಿತ್ರಮಂದಿರಗಳು ಗಣಕೀಕೃತವಾಗಬೇಕು. ಪ್ರೇಕ್ಷಕರಿಗೆ ಅನುಕೂಲಕ್ಕಾಗಿ ಚಿತ್ರಮಂದಿರಗಳ ನಿರ್ವಹಣೆಯಲ್ಲಿ ಪ್ರದರ್ಶಕರು ಮತ್ತು ಮಾಲೀಕರು ಬದ್ಧತೆ ಪ್ರದರ್ಶಿಸಬೇಕು ಎಂದು ಸಲಹೆ ನೀಡಿದ್ದಾರೆ.

‘ಸ್ಟಾರ್‌ ನಟರು ವರ್ಷಕ್ಕೊಂದು ಸಿನಿಮಾದಲ್ಲಿ ನಟಿಸಿದರೆ ಚಿತ್ರಮಂದಿರಗಳನ್ನು ನಡೆಸುವುದು ಕಷ್ಟ. ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸುವಂತೆ ಅವರೊಟ್ಟಿಗೆ ಚರ್ಚಿಸಲಾಗುವುದು’ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು