ಭಾನುವಾರ, ಆಗಸ್ಟ್ 25, 2019
28 °C

ಮತ್ತೆ ಹಾಸ್ಯದ ಕೊಯಿಲು

Published:
Updated:
Prajavani

ಹಾಸ್ಯ ಪ್ರಧಾನ ಚಿತ್ರಗಳ ನಿರ್ಮಾಣ ಮಲಯಾಳ ಚಿತ್ರರಂಗಕ್ಕೆ ಹೊಸದೇನಲ್ಲ. ಹಿಂದಿನಿಂದಲೂ ಕಾಮಿಡಿ ಸಿನಿಮಾಗಳಿಗೆ ಕೇರಳದ ಪ್ರೇಕ್ಷಕರಿಂದ‌ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಳಪೆ, ದ್ವಂದ್ವಾರ್ಥದ ಸಂಭಾಷಣೆಗಳಿಗೆ ಹೊರತಾದ, ಎಲ್ಲಾ ವರ್ಗದ ಪ್ರೇಕ್ಷಕರು ಇಷ್ಟಪಡುವ ಸದಭಿರುಚಿಯ ಹಾಸ್ಯ ಸಿನಿಮಾ ಮಾಲಿವುಡ್‌ ಗಲ್ಲಾಪೆಟ್ಟಿಗೆಯಲ್ಲಿ ಜೋರಾಗಿಯೇ ಸದ್ದು ಮಾಡಿವೆ.

ಮಲಯಾಳದ ಕಾಮಿಡಿ ಚಿತ್ರಗಳು ಕನ್ನಡ ಸೇರಿದಂತೆ ಇತರೇ ಭಾಷೆಗಳಿಗೆ ರಿಮೇಕ್ ಆಗಿರುವುದು ಉಂಟು. ಕೆಲವು ವರ್ಷಗಳಿಂದ ಮಲಯಾಳ ಚಿತ್ರರಂಗ ಹಾಸ್ಯಪ್ರಧಾನ ಚಿತ್ರಗಳ ಬರ ಎದುರಿಸಿದ್ದು ಸತ್ಯ. ಗಟ್ಟಿಯಾದ ಚಿತ್ರಕಥೆ ಮತ್ತು ಕಾಮಿಡಿ ನಟರ ಕೊರತೆಯೇ ಇದಕ್ಕೆ ಕಾರಣ. ಈಗ ಕಾಮಿಡಿಯಲ್ಲಿ ಭರವಸೆ ಮೂಡಿಸುವ ಯುವನಟರ ದಂಡೇ ಮಾಲಿವುಡ್‌ ಅಂಗಳಕ್ಕೆ ಕಾಲಿಟ್ಟಿರುವುದು ಶುಭ ಸುದ್ದಿ. ಹಾಗಾಗಿ, ಮತ್ತೆ ಇಂತಹ ಚಿತ್ರಗಳ ನಿರ್ಮಾಣ ಚಟುವಟಿಕೆಗಳು ಗರಿಗೆದರಿವೆ.

ಜಗದಿ ಶ್ರೀಕುಮಾರ್, ಜಗದೀಶ್, ಇನ್ನಸೆಂಟ್, ಕೊಚ್ಚಿನ್ ಹನೀಫ್‌, ಕುದುರವಟ್ಟಂ ಪಪ್ಪು, ಇಂದ್ರನ್ಸ್, ಹರಿಶ್ರೀ ಅಶೋಕನ್, ಮಾಮುಕೋಯ, ಕಲಾಭವನ್ ಮಣಿ, ಸಲೀಂ ಕುಮಾರ್, ಸುರಾಜ್ ವೆಂಞಾರಮೂಲ ಈ ಎಲ್ಲರೂ ಒಂದು ಕಾಲದಲ್ಲಿ ಮಾಲಿವುಡ್‌ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದ ಹಾಸ್ಯ ನಟರು.

ಇವರೊಟ್ಟಿಗೆ ಮಿಮಿಕ್ರಿ ಹಾಗೂ ಹಾಸ್ಯ ಪಾತ್ರಗಳ ಮೂಲಕ ಚಿತ್ರರಂಗ ಪ್ರವೇಶಿಸಿ ನಟರಾಗಿ ಬೆಳೆದವರ ಪಟ್ಟಿಯೂ ದೊಡ್ಡದಿದೆ. ಶ್ರೀನಿವಾಸನ್, ಜಯರಾಮ್, ದಿಲೀಪ್, ಜಯಸೂರ್ಯ ಈ ಹಾದಿಯಲ್ಲಿಯೇ ಬಂದವರು.

ಕೊಚ್ಚಿನ್ ಹನೀಫ್‌, ಕಲಾಭವನ್ ಮಣಿ, ಕುದುರವಟ್ಟಂ ಪಪ್ಪು ನಿಧನರಾದ ಬಳಿಕ ನಿರ್ವಾತ ಆವರಿಸಿತ್ತು. ಇದರಿಂದ ಹಾಸ್ಯ ಚಿತ್ರಗಳ ಸಂಖ್ಯೆಗಳು ಗಣನೀಯವಾಗಿ ಕಡಿಮೆಯಾಗಿದ್ದು ದಿಟ. ಕಲಾಭವನ್ ಮಣಿ ನಾಯಕ ಹಾಗೂ ಗಂಭೀರ ಪಾತ್ರದಲ್ಲೂ ನಟಿಸಿದ್ದರು.

ಮಲಯಾಳದ ‘ಹಾಸ್ಯ ಚಕ್ರವರ್ತಿ’ ಜಗದಿ ಶ್ರೀಕುಮಾರ್ ಕೆಲ ವರ್ಷಗಳ ಹಿಂದೆ ಅಪಘಾತಕ್ಕೆ ಒಳಗಾಗಿ ನಟನೆಯಿಂದ ದೂರ ಉಳಿಯುವಂತಾಯಿತು. ಇದು ಕೂಡ ಕಾಮಿಡಿ ಚಿತ್ರಗಳಿಗೆ ದೊಡ್ಡ ಹೊಡೆತ ನೀಡಿತು ಎನ್ನಬಹುದು. ಇದರಿಂದ ಕಾಮಿಡಿ ಚಿತ್ರಗಳ ನಿರ್ಮಾಣ ಕಡಿಮೆಯಾಯಿತು.

ನಾಯಕ ನಟನಾಗಿಯೂ ಹಾಸ್ಯದ ಮೂಲಕ ಪ್ರೇಕ್ಷಕರಿಗೆ ಮೋಡಿ ಮಾಡುತ್ತಿದ್ದ ನಟನೆಂದರೆ ದಿಲೀಪ್‌. ನಟಿಗೆ ಕಿರುಕುಳ ನೀಡಿದ ಆರೋಪಕ್ಕೆ ತುತ್ತಾದ ಬಳಿಕ ದಿಲೀಪ್ ನಟನೆಯ ಚಿತ್ರಗಳ ಸಂಖ್ಯೆ ಕಡಿಮೆಯಾಗಿದೆ. ಅವರು ಅಭಿನಯಿಸಿದ ‘ಸಿಐಡಿ ಮೂಸಾ’ ಹಾಸ್ಯ ಚಿತ್ರ ಮಾಲಿವುಡ್‌ನಲ್ಲಿ ದೊಡ್ಡ ಹವಾ ಸೃಷ್ಟಿಸಿತ್ತು.

ಹರಿಶ್ರೀ ಅಶೋಕನ್, ಸಲೀಂ ಕುಮಾರ್ , ಇಂದ್ರನ್ಸ್ ಕೂಡ ಒಂದು ಕಾಲದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಹಾಸ್ಯ ನಟರು. ಇವರ ಚಿತ್ರಗಳೂ ಕಡಿಮೆಯಾಗಿವೆ. ಸಲೀಂ ಕುಮಾರ್ ಹಾಗೂ ಇಂದ್ರನ್ಸ್ ಇತ್ತೀಚೆಗೆ ಗಂಭೀರ ಪಾತ್ರಗಳತ್ತ ಹೊರಳಿದ್ದಾರೆ.

ಯುವ ಹಾಸ್ಯನಟರಲ್ಲಿ ಒಬ್ಬರಾದ ಸುರಾಜ್ ವೆಂಞಾರಮೂಲ‌ ಕೂಡ ಹಾಸ್ಯ ಪಾತ್ರಗಳಿಂದ ವಿಮುಖರಾಗುತ್ತಿದ್ದಾರೆ.

ಯುವ ಹಾಸ್ಯ ಪ್ರತಿಭೆಗಳು ಮಾಲಿವುಡ್‌ನಲ್ಲಿ ಮತ್ತೆ ಮಿಂಚು ಹರಿಸುತ್ತಿರುವುದು ಹೊಸ ಭರವಸೆ ಮೂಡಿಸಿದೆ. ಈ ವರ್ಷ ಬಿಡುಗಡೆಯಾಗಿರುವ ಹಾಸ್ಯ ಚಿತ್ರಗಳೇ ಇದಕ್ಕೆ ಸಾಕ್ಷಿ. ಧರ್ಮಜನ್, ಅಜು ವರ್ಗೀಸ್, ಹರೀಶ್ ಪೆರುಮಣ್ಣ, ಸಜು ನವೋದಯ, ವಿನಯ್ ಫೋರ್ಟ್ ಮಾಲಿವುಡ್‌ ನ ಹೊಸ ತಲೆಮಾರಿನ ಹಾಸ್ಯ ನಟರು.

ಈ ವರ್ಷ ತೆರೆಕಂಡ ‘ಕುಂಬಳಂಗಿ ನೈಟ್ಸ್’, ‘ವಿಜಯ ಸೂಪರುಂ ಪೌರ್ಣಮಿಯುಂ’, ‘ಕಕ್ಷಿ ಅಮ್ಮಿಣಿ ಪಿಳ್ಳ’, ‘ತಣ್ಣೀರ್ ಮತ್ತನ್ ದಿನಂಙಳ್’, ‘ತಮಾಷಾ’, ‘ಒರು ಯಮಂಡನ್ ಪ್ರೇಮ ಕಥಾ’, ‘ಗ್ರ್ಯಾಂಡ್ ಫಾದರ್’, ‘ಮೇರಾ ನಾಮ್ ಶಾಜಿ’, ‘ಮಿಸ್ಟರ್ ಅಂಡ್ ಮಿಸ್ಸೆಸ್ ರೌಡಿ’, ‘ಮಾರ್ಕೋನಿ ಮತ್ತಾಯಿ’, ‘ಕುಟ್ಟಿ ಮಾಮ’, ‘ಅಲ್ಲು ರಾಮೇಂದ್ರನ್’, ‘ಗ್ರಾಮವಾಸಿಸ್’ ಹಾಸ್ಯ ಚಿತ್ರಗಳು ಜನರಲ್ಲಿ ನಗೆಯ ಬುಗ್ಗೆ ಉಕ್ಕಿಸಿವೆ. ಜೊತೆಗೆ, ಬಾಕ್ಸ್ಆಫೀಸ್‌ನಲ್ಲೂ ಸದ್ದು ಮಾಡಿವೆ. ಈ ಪೈಕಿ ಜಯರಾಮ್, ಬಿಜು ಮೆನನ್‌ರಂತಹ ದಿಗ್ಗಜರು ನಟಿಸಿರುವ ಸಿನಿಮಾಗಳೂ ಸೇರಿರುವುದು ವಿಶೇಷ.

Post Comments (+)