ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡಹಗಲೇ ಚಿನ್ನಾಭರಣ ದೋಚಲು ಯತ್ನ

ವಾಲ್‌ಮನ್‌ ಸಮಯಪ್ರಜ್ಞೆಯಿಂದ ತಪ್ಪಿದ ಅಪರಾಧ ಕೃತ್ಯ
Last Updated 29 ಮಾರ್ಚ್ 2018, 13:05 IST
ಅಕ್ಷರ ಗಾತ್ರ

ಕೋಲಾರ: ನಗರದ ಪಾಲಸಂದ್ರ ಲೇಔಟ್‌ನಲ್ಲಿ ದುಷ್ಕರ್ಮಿಗಳು ಬುಧವಾರ ಹಾಡಹಗಲೇ ಮಹಿಳೆಯ ಚಿನ್ನಾಭರಣ ದೋಚಲು ಯತ್ನಿಸಿದ್ದು, ವಾಲ್‌ಮನ್‌ ಸಮಯಪ್ರಜ್ಞೆಯಿಂದ ಅಪರಾಧ ಕೃತ್ಯ ತಪ್ಪಿದೆ.

ಪಾಲಸಂದ್ರ ಲೇಔಟ್‌ ನಿವಾಸಿಯಾದ ವಕೀಲ ಟಿ.ಜಿ.ಮನ್ಮಥರೆಡ್ಡಿ ಮತ್ತು ಸುವರ್ಣ ದಂಪತಿಯು ಕರ್ಣಾಟಕ ಬ್ಯಾಂಕ್‌ನ ಭದ್ರತಾ ಕಪಾಟಿನಲ್ಲಿಟ್ಟಿದ್ದ (ಸೇಫ್ ಲಾಕರ್‌) ಸುಮಾರು ₹ 6 ಲಕ್ಷ ಮೌಲ್ಯದ ಆಭರಣ ತೆಗೆದುಕೊಂಡು ಕಾರಿನಲ್ಲಿ ಮಧ್ಯಾಹ್ನ 3.45ರ ಸುಮಾರಿಗೆ ಮನೆಯ ಬಳಿ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ಯಾಂಕ್‌ನ ಬಳಿಯಿಂದಲೇ ದಂಪತಿಯ ವಾಹನವನ್ನು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಮನೆಯ ಬಳಿ ಬಂದಿರುವ ಇಬ್ಬರು ದುಷ್ಕರ್ಮಿಗಳು ವಿಳಾಸ ಕೇಳುವ ನೆಪದಲ್ಲಿ ಸುವರ್ಣ ಅವರನ್ನು ಮಾತನಾಡಿಸಿ ಆಭರಣಗಳಿದ್ದ ಕೈಚೀಲ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಮನೆಯ ಬೀಗ ತೆಗೆಯುತ್ತಿದ್ದ ಮನ್ಮಥರೆಡ್ಡಿ ಕಳ್ಳರು ಎಂದು ಕೂಗಿಕೊಂಡು ದುಷ್ಕರ್ಮಿಗಳನ್ನು ಬೆನ್ನಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಘಟನಾ ಸಂದರ್ಭದಲ್ಲಿ ದಂಪತಿಯ ಮನೆ ಸಮೀಪವೇ ನೀರಿನ ಪೈಪ್‌ಲೈನ್‌ ದುರಸ್ತಿ ಮಾಡುತ್ತಿದ್ದ ನಗರಸಭೆಯ ವಾಲ್‌ಮನ್‌ ದೇವರಾಜ್‌, ಮನ್ಮಥರೆಡ್ಡಿ ಅವರು ಕಳ್ಳರೆಂದು ಕೂಗುತ್ತಿರುವುದನ್ನು ಕೇಳಿ ಅನುಮಾನಗೊಂಡು ದುಷ್ಕರ್ಮಿಗಳ ಬೈಕ್‌ಗೆ ಕಾಲಿನಿಂದ ಒದ್ದು ಬಿಳಿಸಿದ್ದಾರೆ. ನಂತರ ದುಷ್ಕರ್ಮಿಗಳು ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಮಿಳು ಭಾಷಿಕರು: ಸಂಬಂಧಿಕರ ಮದುವೆಗೆ ಹೋಗುವ ಕಾರಣಕ್ಕೆ ಮನ್ಮಥರೆಡ್ಡಿ ದಂಪತಿಯು ಬ್ಯಾಂಕ್‌ನಿಂದ ಆಭರಣ ತೆಗೆದುಕೊಂಡು ಬಂದಿದ್ದರು. ಆರೋಪಿಗಳು ತಮಿಳು ಭಾಷೆ ಮಾತನಾಡುತ್ತಿದ್ದರು ಎಂದು ದಂಪತಿ ಹೇಳಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿರುವ ಬೈಕ್‌ ತಮಿಳುನಾಡು ನೊಂದಣಿ ಸಂಖ್ಯೆ ಹೊಂದಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ರಾಜೀವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬ್ಯಾಂಕ್‌ನ ಬಳಿ ಅಳವಡಿಸಿರುವ ಸಿ.ಸಿ ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿ ಪರಿಶೀಲಿಸಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕುವ ಪ್ರಯತ್ನ ನಡೆದಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ವಾಲ್‌ಮನ್‌ ದೇವರಾಜ್‌ ಸಮಯಪ್ರಜ್ಞೆಯಿಂದಾಗಿ ದುಷ್ಕರ್ಮಿಗಳ ದುಷ್ಕೃತ್ಯ ವಿಫಲವಾಗಿದೆ. ದೇವರಾಜ್‌ ಅವರಿಗೆ ಇಲಾಖೆಯಿಂದ ಸನ್ಮಾನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT