ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಜಾಗೃತಿಗೆ ಮೊಳಗಿದ ಸಿನಿ ದನಿ

Last Updated 22 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಕೊರೊನಾ ಸೋಂಕು ಹರಡದಂತೆ ಜಾಗೃತಿಯಲ್ಲಿ ತೊಡಗಿದ್ದಾರೆ ಚಂದನವನದ ತಾರೆಯರು. ಸದ್ಯ ಕರ್ಫ್ಯೂ, ಕಠಿಣ ನಿಯಮಗಳ ಕಾರಣ ಚಿತ್ರೋದ್ಯಮದ ಚಟುವಟಿಕೆಗಳೂ ಬಹುತೇಕ ಮಂದಗತಿಗೆ ಸರಿದಿವೆ. ಈ ನಡುವೆ ಚಿತ್ರರಂಗದ ಕೆಲವರೂ ಕೋವಿಡ್‌ಗೆ ಬಲಿಯಾಗಿದ್ದಾರೆ. ನಿರ್ಮಾಪಕ ಡಾ.ಡಿ.ಎಸ್‌. ಮಂಜುನಾಥ್‌, ಪೋಸ್ಟರ್‌ ವಿನ್ಯಾಸಕ ಮಸ್ತಾನ್‌ ಅವರನ್ನು ಕೊರೊನಾ ಬಲಿ ಪಡೆದಿದ್ದೂ ಆಗಿದೆ.

ನಟಿ ಅನು ಪ್ರಭಾಕರ್‌, ಸಮೀರಾ ರೆಡ್ಡಿ, ಸಂಜನಾ ಗಲ್ರಾನಿ, ನಟ–ರಾಜಕಾರಣಿ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಸೋಂಕು ತಗುಲಿದೆ. ಮೇಘನಾ ಚಿರಂಜೀವಿ ಸರ್ಜಾ ಅವರು ಕೋವಿಡ್‌ ಸೋಂಕಿತರೊಬ್ಬರ ಸಂಪರ್ಕಕ್ಕೆ ಬಂದು ಕೆಲಕಾಲ ಆತಂಕ ಎದುರಿಸಿದ್ದೂ ಆಯಿತು. ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರ ಅಣ್ಣನ ಮಗನಿಗೆ ಸೋಂಕು ತಗುಲಿತ್ತು. ‘ಅವರಿಗೆ ಆಕ್ಸಿಜನ್‌ ವ್ಯವಸ್ಥೆ ಮಾಡಲು ಕಷ್ಟಪಡಬೇಕಾಯಿತು. ಹಾಗಾಗಿ ಯಾರೂ ಸೋಂಕಿನ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ’ ಎಂದು ಸಾಧು ಮನವಿ ಮಾಡಿದರು.

ನಟಿಯರಾದ ಅನು, ಸಮೀರಾ, ಮೇಘನಾ ಅವರು ಜಾಲತಾಣಗಳಲ್ಲಿ ಕಾಣಿಸಿಕೊಂಡು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಕೆಲವು ಕಂಪನಿಗಳೂ ಕೂಡಾ ನಟನಟಿಯರ ಮೂಲಕ ಕೋವಿಡ್‌ ಜಾಗೃತಿ ಸಂದೇಶಗಳನ್ನು ಪ್ರಾಯೋಜಿಸಿ ಪ್ರಸಾರ ಮಾಡುತ್ತಿವೆ.

ಒಂದೆಡೆ ಕೋವಿಡ್‌ ಜಾಗೃತಿ ಮೂಡಿಸಿದಂತೆಯೂ ಆಯಿತು. ತಾವು ಜನರನ್ನು ತಲುಪಿದಂತೆಯೂ ಆಯಿತು ಎಂಬುದು ಸಿನಿಗಣ್ಯರ ಲೆಕ್ಕಾಚಾರ.

ನಟ ರಮೇಶ್‌ ಅರವಿಂದ್‌ ಅವರು ಬಿಬಿಎಂಪಿ ವತಿಯಿಂದ ಕೊರೊನಾ ಜಾಗೃತಿ ಮೂಡಿಸುವ ರಾಯಭಾರಿಯಾಗಿಯೂ ಕಾಣಿಸಿಕೊಂಡಿದ್ದು ಹಳೆಯ ಸುದ್ದಿ. ಈಗ ಅವರು ಟ್ವಿಟರ್‌, ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದು, ನ‘ಮಾಸ್ಕಾ’ರಂ ಎಂದು ಹೇಳುತ್ತಾ ಮಾಸ್ಕ್‌ ಧರಿಸುವ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹರಿಯಬಿಟ್ಟು ಜಾಗೃತಿ ಮೂಡಿಸಿದರು.

ಈ ನಡುವೆ ನಟ ಉಪೇಂದ್ರ ಅವರು ಸರ್ಕಾರದ ವಿರುದ್ಧ ಸ್ವಲ್ಪ ಗರಂ ಆಗಿದ್ದೂ ನಡೆಯಿತು. ‘ಲಗಾಮ್‌’ ಚಿತ್ರದ ಸಂದರ್ಭದಲ್ಲಿ ಉಪೇಂದ್ರ, ‘ರಾಜಕಾರಣಿಗಳೇ ನಮ್ಮನ್ನು ಗೊಂದಲಕ್ಕೆ ತಳ್ಳುತ್ತಿದ್ದಾರೆ. ರಾಜಕಾರಣಿಗಳು ಸಭೆ, ಸಮಾರಂಭ ನಡೆಸುತ್ತಾರೆ. ಅಲ್ಲಿ ಲಕ್ಷಾಂತರ ಜನರು ಇರುತ್ತಾರೆ. ಇದನ್ನು ಟಿವಿಯಲ್ಲಿ ನೋಡಿ, ಜನರು ಗೊಂದಲಕ್ಕೆ ಈಡಾಗುತ್ತಿದ್ದಾರೆ. ನಾಯಕರು ಮೊದಲು ಜನರಿಗೆ ಮಾದರಿಯಾಗಬೇಕು’ ಎಂದು ಕಿಡಿಕಾರಿದರು.

‘ಸೋಂಕಿಗೆ ತುತ್ತಾದವರು ಮನಸ್ಸು ಗಟ್ಟಿಯಾಗಿಟ್ಟುಕೊಳ್ಳಿ. ಮನಸ್ಸಿಗೆ ಮೊದಲು ಕಾಯಿಲೆ ಬರುತ್ತದೆ, ನಂತರ ದೇಹಕ್ಕೆ. ಜನರು ಧೈರ್ಯವಾಗಿರಬೇಕು. ಹೀಗೆಂದ ಮಾತ್ರಕ್ಕೆ ಎಲ್ಲೆಂದರಲ್ಲಿ ಓಡಾಡಬೇಡಿ. ಮಾಸ್ಕ್‌ ಹಾಕಿಕೊಳ್ಳಿ, ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು’ ಎಂಬ ಕಿವಿಮಾತನ್ನೂ ಉಪೇಂದ್ರ ಹೇಳಿದರು.

ಹೀಗೆ ಸಿನಿಕ್ಷೇತ್ರದ ಪ್ರಮುಖರು ಸ್ಕ್ರಿಪ್ಟ್‌ನ ಆಚೆ ನಿಜ ಬದುಕಿನ ಕತೆಗೆ ಧ್ವನಿಯಾಗಿದ್ದಾರೆ ಎನ್ನುತ್ತಿದ್ದಾರೆ ಚಿತ್ರಾಭಿಮಾನಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT