ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಕಾಲದಲ್ಲಿ ಸೆಲೆಬ್ರಿಟಿಗಳ ಸಹಾಯಹಸ್ತ

Last Updated 6 ಮೇ 2021, 19:30 IST
ಅಕ್ಷರ ಗಾತ್ರ

ಕಳೆದ ವರ್ಷದ ಲಾಕ್‌ಡೌನ್‌ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಸಹಾಯಕ್ಕೆ ನಿಂತಿದ್ದ ಬಹುಭಾಷಾ ನಟ ಸೋನು ಸೂದ್‌ ಸಿನಿಮಾ ರಂಗಕ್ಕೇ ಮಾದರಿಯಾಗಿದ್ದರು. ಈ ವರ್ಷ ರಾಜ್ಯ ಸರ್ಕಾರ ಹೇರಿದ ಕೊರೊನಾ ಕರ್ಫ್ಯೂ ಕಾರಣದಿಂದಾಗಿ ಚಿತ್ರರಂಗ ಸ್ತಬ್ಧವಾಗಿದೆ. ಚಂದನವನದ ಕೆಲ ನಟ, ನಟಿಯರು ಮಾತ್ರ ಕೊರೊನಾದ ಈ ಸಂಕಷ್ಟದ ಕಾಲದಲ್ಲಿ ಜನರ ನೆರವಿಗೆ ಧಾವಿಸಲು ಮತ್ತಷ್ಟು ಸಕ್ರಿಯರಾಗಿದ್ದಾರೆ. ಸಾಮಾಜಿಕ ಜಾಲತಾಣದ ವೇದಿಕೆಯನ್ನು ಸೂಕ್ತವಾಗಿ ಬಳಸಿಕೊಂಡು, ನೆರವು ಕೇಳಿ ಆಗಮಿಸಿದವರಿಗೆ ತಮ್ಮ ಸ್ನೇಹಿತರು, ಅಭಿಮಾನಿಗಳ ಸಹಾಯದಿಂದ ಸಮಯಕ್ಕೆ ಸರಿಯಾಗಿ ಔಷಧಿ, ಬೆಡ್‌ ಮುಂತಾದ ವ್ಯವಸ್ಥೆ ಕಲ್ಪಿಸಿ ಜನಪರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮ್ಮ ಹತ್ತಿರದ ಸ್ನೇಹಿತರನ್ನು, ಸಹೋದ್ಯೋಗಿಗಳನ್ನು, ಕುಟುಂಬ ಸದಸ್ಯರನ್ನು ಕೋವಿಡ್‌ನಿಂದ ಕಳೆದುಕೊಂಡ ನೋವು ಹಾಗೂ ಕುಟುಂಬದ ಸದಸ್ಯರೇ ಕೋವಿಡ್‌ನಿಂದ ಬಳಲುತ್ತಿರುವುದರ ಸಂಕಷ್ಟದ ನಡುವೆಯೂ ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿ ಅರಿತು ಈ ಕಲಾವಿದರು ಜನಸೇವೆಗೆ ಮುಂದಾಗಿರುವುದಕ್ಕೆ ಅಭಿಮಾನಿಗಳೂ ಮೆಚ್ಚಿಕೊಂಡಿದ್ದಾರೆ.

₹1 ಲಕ್ಷ ನೀಡಿದ ನಟಿ ಪ್ರಣೀತಾ

ಲಾಜಿಕಲ್‌ ಇಂಡಿಯನ್‌ ಸಂಸ್ಥೆಯ ಜೊತೆ ಕೈಜೋಡಿಸಿರುವ ಬಹುಭಾಷಾ ನಟಿ ಪ್ರಣೀತಾ ಸುಭಾಷ್‌ ನಿಧಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಆಮ್ಲಜನಕ ಕಾನ್ಸಂಟ್ರೇಟರ್‌ ಖರೀದಿಸಲು ಮೊದಲಿಗೆ ತಾವೇ ₹ 1ಲಕ್ಷವನ್ನು ನೀಡಿದ್ದಾರೆ. ಈ ಕುರಿತು ‘ಸಿನಿಮಾ ಪುರವಣಿ’ ಜೊತೆಗೆ ಮಾತನಾಡಿದ ಅವರು, ‘ಕೋವಿಡ್‌ ಎರಡನೇ ಅಲೆ ಅತ್ಯಂತ ಗಂಭೀರವಾಗಿದೆ. ಹಲವೆಡೆ ಆಮ್ಲಜನಕದ ಕೊರತೆ ಎದುರಾಗಿದ್ದು, ಈ ಕಾರಣದಿಂದ ನಿಧಿ ಸಂಗ್ರಹ ಮಾಡಿ ಆಮ್ಲಜನಕ ಕಾನ್ಸಂಟ್ರೇಟರ್‌ ಖರೀದಿಗೆ ನಿರ್ಧರಿಸಿದ್ದೇವೆ’ ಎಂದು ಹೇಳಿದರು.

‘ಲಾಜಿಕಲ್‌ ಇಂಡಿಯನ್‌ ಅವರು ನಮಗೆ ನಿಧಿ ಸಂಗ್ರಹಿಸಲು ಅವರ ವೆಬ್‌ಸೈಟ್‌ನಲ್ಲಿ ಅವಕಾಶ ನೀಡಿದ್ದಾರೆ. ಈ ಕುರಿತು ನಾನು ಫೇಸ್‌ಬುಕ್‌ನಲ್ಲಿ ಕೇಳಿಕೊಂಡಾಗ ಜನರು ದೇಣಿಗೆ ನೀಡಲು ಮುಂದೆ ಬಂದಿದ್ದಾರೆ. ಈಗಾಗಲೇ ₹4–5 ಲಕ್ಷ ಸಂಗ್ರಹವಾಗಿದೆ. ಒಂದೊಂದು ಕಾನ್ಸಂಟ್ರೇಟರ್‌ ಯಂತ್ರಕ್ಕೆ ₹50–60 ಸಾವಿರವಾಗುತ್ತದೆ. ಈ ಯಂತ್ರದ ಅವಶ್ಯಕತೆ ಇದೆ ಎಂದು ಉತ್ತರಾಖಂಡದ ಆಸ್ಪತ್ರೆಯಿಂದ ಮೊದಲು ಬೇಡಿಕೆ ಬಂದಿದೆ, ಅಲ್ಲಿಗೆ ಶೀಘ್ರವೇ ಕಳುಹಿಸಲಾಗುವುದು. ಯಾರು ಅರ್ಜಿ ಸಲ್ಲಿಸುತ್ತಾರೋ ಅವರಿಗೆ ಉಚಿತವಾಗಿ ನೀಡುತ್ತೇವೆ’ ಎಂದು ತಿಳಿಸಿದರು.

ಆಮ್ಲಜನಕ ತಲುಪಿಸಿದ ನಟ ಜಗ್ಗೇಶ್‌

ಕೋವಿಡ್‌ನಿಂದಾಗಿ ತಮ್ಮ ಕೋಮಲ್‌ ಆರೋಗ್ಯ ಗಂಭೀರವಾಗಿದ್ದರೂ ಕೋವಿಡ್‌ಗೆ ಬಾಲ್ಯ ಸ್ನೇಹಿತನನ್ನು ಕಳೆದುಕೊಂಡರೂ ಜನಸೇವೆಯನ್ನು ನಟ ಜಗ್ಗೇಶ್‌ ಅವರು ನಿಲ್ಲಿಸಲಿಲ್ಲ. ಇತ್ತೀಚೆಗೆ ಕೋವಿಡ್‌ ಸೋಂಕಿನಿಂದ ಬಳಲುತ್ತಿದ್ದ ನಾಗೇಂದ್ರ ಭಟ್‌ ಎನ್ನುವವರಿಗೆ ಆಮ್ಲಜನಕದ ಅವಶ್ಯಕತೆ ಇತ್ತು. ಈ ಸಂದರ್ಭದಲ್ಲಿ ಅವರ ಮಗಳು ಜಗ್ಗೇಶ್‌ ಅವರಿಗೆ ಕರೆಮಾಡಿ ಮನವಿ ಮಾಡಿದಾಗ, ಕೇವಲ ಅರ್ಧ ಗಂಟೆಯಲ್ಲಿ ನಾರಾಯಣ ಆಸ್ಪತ್ರೆಯಿಂದ ದೇವೇಗೌಡ ಪೆಟ್ರೋಲ್‌ ಬಂಕ್‌ ಬಳಿ ಇರುವ ಅವರ ಮನೆಗೆ ಜಗ್ಗೇಶ್‌ ಇದನ್ನು ತಲುಪಿಸಿದ್ದರು. ‘ಅರ್ಧ ಗಂಟೆ ತಡವಾಗಿದ್ದರೆ ಅವರ ಪ್ರಾಣಕ್ಕೇ ತೊಂದರೆ ಆಗುತ್ತಿತ್ತು. ಅವರ ಪುಟ್ಟ ಮಗಳ ಮನವಿ ದೊಡ್ಡ ವಿಘ್ನ ತಪ್ಪಿಸಿತು’ ಎಂದು ಜಗ್ಗೇಶ್‌ ಟ್ವೀಟ್‌ ಮಾಡಿದ್ದರು. ಹೀಗೆ ಕಳೆದ 20–25 ದಿನದಿಂದ ಖುದ್ದಾಗಿ ಜನಸೇವೆಯಲ್ಲಿ ನಟ ಜಗ್ಗೇಶ್‌ ತೊಡಗಿಸಿಕೊಂಡಿದ್ದಾರೆ.

ಕಾವ್ಯಾ ಶಾಸ್ತ್ರಿ ಪ್ಲಾಸ್ಮಾ ಜಾಗೃತಿ

ಕಳೆದ ನವೆಂಬರ್‌ನಲ್ಲಿ ಕೋವಿಡ್‌ ದೃಢಪಟ್ಟು ನಂತರ ಗುಣಮುಖರಾಗಿದ್ದ ನಟಿ ಕಾವ್ಯಾ ಶಾಸ್ತ್ರಿ ಇದೀಗ ಪ್ಲಾಸ್ಮಾ ದಾನ ಮಾಡುವ ಮುಖಾಂತರ ಇತರರಿಗೆ ಮಾದರಿಯಾಗಿದ್ದಾರೆ. ಜೊತೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮುಖಾಂತರ ಪ್ಲಾಸ್ಮಾ ದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಅವರು, ಕೋವಿಡ್‌ ರೋಗಿಗಳಿಗೆ ಪ್ಲಾಸ್ಮಾದ ಅವಶ್ಯಕತೆ ಇದ್ದಲ್ಲಿ ಈ ಕುರಿತು ತಮ್ಮ ಖಾತೆಯಲ್ಲಿ ಮಾಹಿತಿ ಪೋಸ್ಟ್‌ ಮಾಡುವ ಮುಖಾಂತರ ನೆರವಾಗುತ್ತಿದ್ದಾರೆ. ‘ಸಿನಿಮಾ ಪುರವಣಿ’ ಜೊತೆಗೆ ಮಾತನಾಡಿದ ಕಾವ್ಯಾ, ‘ಕೋವಿಡ್‌ನಿಂದ ಗುಣಮುಖ ಆದ ಕೂಡಲೇ ಪ್ಲಾಸ್ಮಾ ದಾನ ಮಾಡಲು ಸಾಧ್ಯವಾಗಿರಲಿಲ್ಲ. ರಕ್ತದಲ್ಲಿ ಬಿಳಿರಕ್ತಕಣಗಳ ಸಂಖ್ಯೆ ಆಗ ಕಡಿಮೆ ಇತ್ತು. ಇತ್ತೀಚೆಗೆ ಒಂದು ಪೋಸ್ಟ್‌ನಲ್ಲಿ ಪ್ಲಾಸ್ಮಾ ಬೇಕಿದೆ ಎನ್ನುವುದನ್ನು ನೋಡಿದ್ದೆ. ವೈದ್ಯರನ್ನು ಸಂಪರ್ಕಿಸಿ, ನಂತರದಲ್ಲಿ ನಾನು ಪ್ಲಾಸ್ಮಾ ದಾನ ಮಾಡಿದೆ. ಗುಣಮುಖರಾದ ಬಳಿಕ ಹಲವರು ಪ್ಲಾಸ್ಮಾ ದಾನ ಮಾಡಲು ಹಿಂಜರಿಯುತ್ತಿದ್ದಾರೆ. ಒಬ್ಬರಿಗೆ ಒಬ್ಬರು ಸಹಾಯ ಮಾಡಬೇಕು’ ಎಂದರು.

ಸ್ಮಶಾನದಲ್ಲಿ ರಾಗಿಣಿ ನೆರವು

ನಟಿ ರಾಗಿಣಿ ದ್ವಿವೇದಿ ಕಳೆದ ಲಾಕ್‌ಡೌನ್‌ ಸಂದರ್ಭದಲ್ಲಿ ಹಲವು ನಿರಾಶ್ರಿತರಿಗೆ ನೆರವು ನೀಡಿದ್ದರು. ಇದೀಗ ಬೆಂಗಳೂರಿಗೆ ಕಲ್ಲಹಳ್ಳಿ, ಕಾಕ್ಸ್‌ಟೌನ್‌ ಸೇರಿದಂತೆ ಸುತ್ತಮುತ್ತಲಿನ ಕೆಲ ಸ್ಮಶಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ತಮ್ಮ ಜೆನ್‌ಎಕ್ಸ್ಟ್‌ ಚಾರಿಟೇಬರ್‌ ಟ್ರಸ್ಟ್‌ ಸದಸ್ಯರ ಜೊತೆಗೂಡಿ ಆಹಾರ ಪದಾರ್ಥ ಕಿಟ್‌ ಹಂಚಿದ್ದಾರೆ. ‘ಸ್ಮಶಾನದಲ್ಲಿದ್ದ ಸಂದರ್ಭದಲ್ಲಿ ಅಲ್ಲಿಗೆ ಬರುತ್ತಿದ್ದ ಮೃತದೇಹಗಳ ಸಂಖ್ಯೆಯನ್ನು ನೋಡಿ ಹೃದಯ ಕಲಕುವಂತಿತ್ತು. ನನ್ನ ಕುಟುಂಬದ ನಿಕಟ ಸದಸ್ಯರನ್ನೂ ನಾನು ಕಳೆದುಕೊಂಡಿದ್ದೇನೆ. ಅವರನ್ನು ನೋಡುವ ಭಾಗ್ಯವೂ ನನಗಿರಲಿಲ್ಲ. ಇಲ್ಲಿನ ಸಿಬ್ಬಂದಿ ಕೆಲಸ ಶ್ಲಾಘನೀಯ’ ಎಂದಿದ್ದಾರೆ.

ತಂದೆ, ತಾಯಿಗೆ ಕೋವಿಡ್‌ ದೃಢಪಟ್ಟಿದ್ದರೂ ನಟಿ ಸಂಯುಕ್ತಾ ಹೆಗ್ಡೆ ಅವರೂ ಕುಟುಂಬದ ಸದಸ್ಯರ ಕಾಳಜಿಯ ಜೊತೆಗೆ ಜನರ ಸೇವೆಯನ್ನೂ ಮಾಡುತ್ತಿದ್ದಾರೆ. ಕೋವಿಡ್‌ ದೃಢಪಟ್ಟವರ ಆರೈಕೆ ಹೇಗೆ ಎನ್ನುವುದರಿಂದ ಹಿಡಿದು ಎಲ್ಲೆಲ್ಲಿ ಔಷಧಿ, ಆಮ್ಲಜನಕ ಲಭ್ಯವಿದೆ ಎನ್ನುವುದರ ಮಾಹಿತಿ, ಸಂಪರ್ಕ ಸಂಖ್ಯೆಯನ್ನೂ ಜನರಿಗೆ ನೀಡುತ್ತಿದ್ದಾರೆ. ಜನಸಾಮಾನ್ಯರ ನೆರವಿಗೆ ಮುಂದಾಗಿರುವ ನಟ ಅರ್ಜುನ್‌ ಗೌಡ ಆಂಬುಲೆನ್ಸ್‌ ಚಾಲಕರಾಗಿ ತಮ್ಮ ಕೈಲಾದ ನೆರವು ನೀಡುತ್ತಿದ್ದಾರೆ. ನಟಿ ಸಂಯುಕ್ತ ಹೊರನಾಡು ಅವರೂ ಹಲವರಿಗೆ ನೆರವಾಗಿದ್ದಾರೆ. ಇನ್ನೂ ಹಲವು ಕಲಾವಿದರು ಮುಂದಕ್ಕೆ ಕಾಣಿಸಿಕೊಳ್ಳದೆ ಜನರಿಗೆ ಸಹಾಯಹಸ್ತ ಚಾಚುತ್ತಿದ್ದಾರೆ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT