ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾಂಗ್‌ ಲೀಡರ್‌ ಆದ ಸುಮನ್‌ ರಂಗನಾಥ್‌

Last Updated 26 ಅಕ್ಟೋಬರ್ 2019, 10:44 IST
ಅಕ್ಷರ ಗಾತ್ರ

ಆರು ವರ್ಷದ ಹಿಂದೆ ದಂಡುಪಾಳ್ಯ ಸಿನಿಮಾ ತೆರೆಕಂಡಾಗ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಕೊನೆಗೆ ಇದರ ಸ್ವೀಕೆಲ್ ‘ಭಾಗ 2’ ಮತ್ತು ‘ಭಾಗ 3’ ಶೀರ್ಷಿಕೆಯಡಿ ತೆರೆಕಂಡಿತ್ತು. ಈಗ ‘ದಂಡುಪಾಳ್ಯಂ 4’ ಹೆಸರಿನ ಸಿನಿಮಾ ಬಿಡುಗಡೆಯಾಗುತ್ತಿದೆ. ದಂಡುಪಾಳ್ಯಂ ಶೀರ್ಷಿಕೆ ಇಡಲಾಗಿದೆಯಾದರೂ ಇದು ಬೇರೆ ಜಾನರ್‌ ಸಿನಿಮಾ ಎನ್ನುವುದು ಚಿತ್ರತಂಡ ಸ್ಪಷ್ಟಪಡಿಸಿದೆ.

ಕೆ.ಟಿ. ನಾಯಕ್‌ ನಿರ್ದೇಶನದ‘ದಂಡುಪಾಳ್ಯಂ 4’ ಚಿತ್ರ ನವೆಂಬರ್‌ ಒಂದರೊಂದು ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು.‌ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಈ ಚಿತ್ರ ನಿರ್ಮಿಸಲಾಗಿದೆ.

ನಟಿ ಸುಮನ್‌ ರಂಗನಾಥ್‌ ಈ ಸಿನಿಮಾದಲ್ಲಿ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ನಾನು ಇಲ್ಲಿಯವರೆಗೂ ಗ್ಲಾಮರಸ್‌ ಆದ ಪಾತ್ರಗಳಲ್ಲಿ ನಟಿಸಿದ್ದೇನೆ. ಮೊದಲ ಬಾರಿಗೆ ರಗಡ್ ಲುಕ್‌ದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ನಕ್ಕರು.

‘ಪ್ರತಿಯೊಬ್ಬ ಕಲಾವಿದರಿಗೂ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಬೇಕು ಎಂಬ ಆಸೆ ಇರುವುದು ಸಹಜ. ಈ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರವನ್ನು ಜನರು ಇಷ್ಟಪಟ್ಟರಷ್ಟೇ ನಟನೆ ಸಾರ್ಥಕವಾಗುತ್ತದೆ’ ಎಂದು ಹೇಳಿಕೊಂಡರು.

ಪೈಶಾಚಿಕ ಕೃತ್ಯ ಎಸಗುವ ಗ್ಯಾಂಗ್‌ ಬಗ್ಗೆ ಎಲ್ಲರಿಗೂ ಕುತೂಹಲ ಇರುವುದು ಸಹಜ. ಈ ಚಿತ್ರದಲ್ಲಿ ಅಂತಹ ಎಂಟು ಮಂದಿ ಇರುತ್ತಾರೆ. ಅದಕ್ಕೆ ಸುಮನ್‌ ರಂಗನಾಥ್‌ ಅವರೇ ಗ್ಯಾಂಗ್‌ ಲೀಡರ್ ಅಂತೆ. ನಾಲ್ಕೈದು ಶೇಡ್‌ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಬಂಡವಾಳ ಹೂಡಿರುವುದು ವೆಂಕಟ್‌. ಜೊತೆಗೆ, ಅವರು ಎಸಿಪಿಯಾಗಿಯೂ ಕಾಣಿಸಿಕೊಂಡಿದ್ದಾರೆ. ‘ಕೋರ್ಟ್‌ ಆದೇಶದಂತೆ ದಂಡುಪಾಳ್ಯಂ ಎಂದು ಹೆಸರಿಡಲಾಗಿದೆ’ ಎಂದು ಮಾಹಿತಿ ನೀಡಿದರು.

ಮನೆಯೊಳಗೆ ಅಪರಿಚಿತರನ್ನು ಬಿಟ್ಟುಕೊಂಡರೆ ಹೇಗೆಲ್ಲಾ ದುರುಪಯೋಗಪಡಿಸಿಕೊಳ್ಳುತ್ತಾರೆ ಎನ್ನುವುದರ ಸುತ್ತ ಕಥೆ ಹೊಸೆಯಲಾಗಿದೆ. ಪೊಲೀಸ್‌ ಇಲಾಖೆಯು ಕಠಿಣ ಕ್ರಮ ಜರುಗಿಸಿದರೆ ಅಪರಾಧ ಚಟುವಟಿಕೆಗಳು ಹತೋಟಿಗೆ ಬರುತ್ತವೆ ಎನ್ನುವ ಬಗ್ಗೆಯೂ ಹೇಳಲಾಗಿದೆಯಂತೆ.ಬೆಂಗಳೂರು ಮತ್ತು ಪಾವಗಡದ ಸುತ್ತಮುತ್ತ ಶೂಟಿಂಗ್‌ ನಡೆಸಲಾಗಿದೆ.

ಆನಂದ್‌ರಾಜ್‌ ವಿಕ್ರಂ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಆರ್. ಗಿರಿ- ಬೆನಕರಾಜು ಅವರದು. ಶಿವಸ್ವಾಮಿ ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ‘ಎ’ ಪ್ರಮಾಣ ಪತ್ರ ನೀಡಿದೆ.

ತೆಲುಗಿನ ಐಟಂ ಡಾನ್ಸ್‌ ಖ್ಯಾತಿಯ ಮುಮೈತ್‌ಖಾನ್‌, ಬಾಲಿವುಡ್‌ನ ಬ್ಯಾನರ್ಜಿ, ಅರುಣ್‌ ಬಚ್ಚನ್, ಸಂಜೀವಕುಮಾರ್, ಬುಲೆಟ್‌ ಸೋಮ, ಜೀವ, ವಿಠಲ್, ರಿಚ್ಚಾ ಶಾಸ್ತ್ರಿ, ಸ್ನೇಹ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT