ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೇ ಸಿನಿಮಾ ಸಂಭಾವನೆಯಿಂದ ಆಗಿದ್ದು ‘ಲವ್‌ ಮಾಕ್ಟೆಲ್‌’: ಡಾರ್ಲಿಂಗ್‌ ಕೃಷ್ಣ

Last Updated 12 ಡಿಸೆಂಬರ್ 2022, 7:46 IST
ಅಕ್ಷರ ಗಾತ್ರ

2020ರಲ್ಲಿ ತೆರೆಕಂಡ ‘ಲವ್‌ ಮಾಕ್ಟೆಲ್‌’ ನಟ ಡಾರ್ಲಿಂಗ್‌ ಕೃಷ್ಣ ಹಾಗೂ ನಟಿ ಮಿಲನ ನಾಗರಾಜ್‌ ಸಿನಿಪಯಣಕ್ಕೆ ದೊಡ್ಡ ತಿರುವು ನೀಡಿದ ಚಿತ್ರ. ಡಾರ್ಲಿಂಗ್‌ ಕೃಷ್ಣ ಸ್ವತಃ ನಿರ್ದೇಶನಕ್ಕಿಳಿದು, ಈ ಚಿತ್ರವನ್ನು ನಿರ್ಮಾಣ ಮಾಡಿದ್ದರ ಹಿಂದೆ ಕಥೆಯೊಂದಿದೆ. ಅದನ್ನು ಇದೀಗ ‘Mr. ಬ್ಯಾಚುಲರ್’ ಆಗಿ ಕೃಷ್ಣ ತೆರೆದಿಟ್ಟಿದ್ದಾರೆ.

‘ಲವ್‌ ಮಾಕ್ಟೆಲ್‌–2’,‘ಲೋಕಲ್‌ ಟ್ರೈನ್‌’, ‘ಲಕ್ಕಿಮ್ಯಾನ್‌’, ‘ದಿಲ್‌ಪಸಂದ್‌’ ಹೀಗೆ ಈ ವರ್ಷ ನಟ ಡಾರ್ಲಿಂಗ್‌ ಕೃಷ್ಣ ಅವರ ಸಾಲು ಸಾಲು ಸಿನಿಮಾಗಳು ತೆರೆಕಂಡಿವೆ. ಇವುಗಳ ಬೆನ್ನಲ್ಲೇ‘Mr. ಬ್ಯಾಚುಲರ್’ ಆಗಿ ತೆರೆ ಮೇಲೆ ಬರಲು ಕೃಷ್ಣ ಸಜ್ಜಾಗಿದ್ದಾರೆ. ಹೊಸ ವರ್ಷದ ಆರಂಭದಲ್ಲೇ, ಅಂದರೆ 2023ರ ಜ.6ರಂದು ಈ ಸಿನಿಮಾ ರಿಲೀಸ್‌ ಆಗಲಿದೆ. ಈ ಚಿತ್ರದ ‘ಮದುವೆ ಯಾವಾಗ’ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಲವ್‌ ಮಾಕ್ಟೆಲ್‌ ಕಥೆಯನ್ನು ಕೃಷ್ಣ ಬಿಚ್ಚಿಟ್ಟರು.

‘ನಾನು ‘ಲವ್ ಮಾಕ್ಟೆಲ್‌’ ಚಿತ್ರ ಆರಂಭಿಸುವುದಕ್ಕೂ ಮುನ್ನ ಆರಂಭವಾದ ಚಿತ್ರವಿದು. ಈ ಚಿತ್ರದ ಸಂಭಾವನೆಯಿಂದಲೇ ನಾನು ‘ಲವ್ ಮಾಕ್ಟೇಲ್’ ಪ್ರಾರಂಭಿಸಿದ್ದು. ಹಾಗಾಗಿ ನನಗೆ ಈ ಚಿತ್ರದ ಮೇಲೆ ವಿಶೇಷ ಪ್ರೀತಿ. ಈ ಚಿತ್ರದಲ್ಲಿ ಮನರಂಜನೆಯ ಜೊತೆಗೆ ಆ್ಯಕ್ಷನ್, ಭಾವನಾತ್ಮಕ ಸನ್ನಿವೇಶಗಳೂ ಇವೆ. ನಿಮಿಕಾ ರತ್ನಾಕರ್ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಮಿಲನ ನಾಗರಾಜ್ ಕೂಡಾ ಇದ್ದಾರೆ’ ಎನ್ನುತ್ತಾರೆ ಡಾರ್ಲಿಂಗ್ ಕೃಷ್ಣ.

‘ಪುರಿ ಜಗನ್ನಾಥ್ ಅವರ ಬಳಿ ಕೆಲಸ ಮಾಡುತ್ತಿದ್ದೆ. ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಮದುವೆ ವಯಸ್ಸಿಗೆ ಬಂದ ಹುಡುಗನನ್ನು ಸಾಮಾನ್ಯವಾಗಿ ಎಲ್ಲರು ಮದುವೆ ಯಾವಾಗ? ಅಂತ ಕೇಳುತ್ತಾರೆ. ಚಿತ್ರದ ಕಥಾಹಂದರವೂ ಇದೇ ಎಳೆಯನ್ನು ಹೊಂದಿದೆ’ ಎಂದರು ನಿರ್ದೇಶಕ ನಾಯ್ಡು.

ಶ್ರೀನಿವಾಸ್, ಹನುಮಂತ ರಾವ್ ಹಾಗೂ ಸ್ವರ್ಣಲತ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಸಾಧುಕೋಕಿಲ, ಅಯ್ಯಪ್ಪ ಶರ್ಮ, ಚಿಕ್ಕಣ್ಣ, ಪವಿತ್ರ ಲೋಕೇಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ‌. ಮಣಿಕಾಂತ್‌ ಕದ್ರಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

‘ಲವ್‌ ಮಾಕ್ಟೆಲ್‌’ ಸಿನಿಮಾ ಬಳಿಕ ಚಂದನವನದಲ್ಲಿ ಹಲವು ಅವಕಾಶಗಳನ್ನು ಗಿಟ್ಟಿಕೊಂಡಿರುವ ಕೃಷ್ಣ ಅವರ ಕೈಯಲ್ಲಿ ಸದ್ಯ ‘ಲವ್‌ ಮಿ OR ಹೇಟ್‌ ಮಿ’ ಸಿನಿಮಾ ಹಾಗೂ ‘ಮೊಗ್ಗಿನ ಮನಸು’ ಖ್ಯಾತಿಯ ನಿರ್ದೇಶಕ ಶಶಾಂಕ್‌ ಅವರ ನಿರ್ದೇಶನದ ‘ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT