ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನ್‌ ಬತ್ತಳಿಕೆಯಲ್ಲಿ ಸಾಲು ಸಾಲು ಸಿನಿಮಾ

Last Updated 31 ಆಗಸ್ಟ್ 2019, 11:10 IST
ಅಕ್ಷರ ಗಾತ್ರ

ನಟ ದರ್ಶನ್‌ ಚಂದನವನ ಪ್ರವೇಶಿಸಿ ಒಂದೂವರೆ ದಶಕ ಉರುಳಿದೆ. ‘ಮೆಜೆಸ್ಟಿಕ್’ ಅವರ ನಟನೆಯ ಮೊದಲ ಚಿತ್ರ. ‘ಚಾಲೆಂಜಿಂಗ್‌ ಸ್ಟಾರ್‌’ ಮಾಸ್‌ ಸಿನಿಮಾಗಳ ಮೂಲಕವೇ ಜನಪ್ರಿಯರಾದವರು. ಅವರು ವೃತ್ತಿಬದುಕಿನ ಆರಂಭದಲ್ಲಿ ಪ್ರಯೋಗಮುಖಿಯಾಗಿದ್ದು ಉಂಟು. ‘ನನ್ನ ಪ್ರೀತಿಯ ರಾಮು’ ಚಿತ್ರ ಅದಕ್ಕೊಂದು ನಿದರ್ಶನ.

‘ಈ ಸಿನಿಮಾವನ್ನು ಟಿ.ವಿ.ಯಲ್ಲಿ ನೋಡಿದೆವು ಎಂದು ಹೇಳಿದವರೇ ಹೆಚ್ಚು. ಥಿಯೇಟರ್‌ನಲ್ಲಿ ನೋಡಿದವರ ಸಂಖ್ಯೆ ವಿರಳ. ಟಿ.ವಿ.ಯಲ್ಲಿ ನೋಡಲು ನಾನೇಕೆ ಸಿನಿಮಾ ಮಾಡಬೇಕು. ಚಿತ್ರಮಂದಿರದಲ್ಲಿ ಕುಳಿತು ನೋಡುವ ಸಿನಿಮಾ ಮಾಡುವುದೇ ನನ್ನ ಗುರಿ’ ಎಂಬುದು ದರ್ಶನ್ ಅವರ ವ್ಯಾಖ್ಯಾನ.

ದರ್ಶನ್‌ಗೆ ಐತಿಹಾಸಿಕ ಮತ್ತು ಪೌರಾಣಿಕ ಸಿನಿಮಾಗಳಲ್ಲಿ ನಟಿಸುವುದೆಂದರೆ ಬಹುಪ್ರೀತಿ. ಮೊದಲ ಬಾರಿಗೆ ಅವರು ಚಾರಿತ್ರಿಕ ಸಿನಿಮಾಗಳತ್ತ ದೃಷ್ಟಿ ನೆಟ್ಟಿದ್ದು, ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದ ಮೂಲಕ. ಆ ಚಿತ್ರವೂ ಅವರ ಮಾಸ್‌ ಇಮೇಜ್‌ನ ನೆರಳಿಯಲ್ಲಿಯೇ ರೂಪುಗೊಂಡಿದ್ದು ಎಂದು ಬಿಡಿಸಿ ಹೇಳಬೇಕಿಲ್ಲ.

ವರಮಹಾಲಕ್ಷ್ಮಿ ಹಬ್ಬದಂದು ತೆರೆಕಂಡ ಪೌರಾಣಿಕ ಚಿತ್ರ ‘ಮುನಿರತ್ನ ಕುರುಕ್ಷೇತ್ರ’ ಅವರ ವೃತ್ತಿಬದುಕಿನ 50ನೇ ಚಿತ್ರ. ಇದು ಒಳ್ಳೆಯ ಕಲೆಕ್ಷನ್‌ ಮಾಡುತ್ತಿದ್ದು, ಮತ್ತೆ ಪೌರಾಣಿಕ ಸಿನಿಮಾಗಳತ್ತ ನಿರ್ಮಾಪಕರು ಚಿತ್ತ ಹರಿಸಲು ರಹದಾರಿ ಒದಗಿಸಿದೆ.

ದರ್ಶನ್‌ ನಟನೆಯ ಒಂದೋ ಅಥವಾ ಎರಡು ಚಿತ್ರಗಳು ತೆರೆಕಾಣುವ ಕಾಲವೊಂದಿತ್ತು. ಅಭಿಮಾನಿಗಳ ಒತ್ತಾಯದ ಮೇರೆಗೆ ಹೆಚ್ಚಿನ ಚಿತ್ರಗಳಲ್ಲಿ ಅವರು ನಟಿಸಿದ್ದು ಉಂಟು. ಈಗ ಕಾಲ ಸಂಪೂರ್ಣವಾಗಿ ಬದಲಾಗಿದೆ. ವರ್ಷಕ್ಕೆಅವರ ನಟನೆಯ ಮೂರ್ನಾಲ್ಕು ಚಿತ್ರಗಳು ಬಿಡುಗಡೆಯಾಗುತ್ತಿವೆ. ಮತ್ತೊಂದೆಡೆ ಗಲ್ಲಾಪೆಟ್ಟಿಗೆಯ ಯಜಮಾನನ ಮೇಲೆ ಬಂಡವಾಳ ಹೂಡಲು ನಿರ್ಮಾಪಕರು ತುದಿಗಾಲ ಮೇಲೆ ನಿಂತಿದ್ದಾರೆ.

‘ಮುನಿರತ್ನ ಕುರುಕ್ಷೇತ್ರ’ ₹ 100 ಕೋಟಿ ಕ್ಲಬ್‌ ಸೇರಿದೆ. ಇದರ ಬೆನ್ನಲ್ಲೆ ಅವರ ಬತ್ತಳಿಕೆಯಲ್ಲಿ ಹಲವು ಚಿತ್ರಗಳಿವೆ. ‘ಒಡೆಯ’ ಚಿತ್ರದ ಶೂಟಿಂಗ್‌ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ.

ತರುಣ್‌ ಸುಧೀರ್‌ ನಿರ್ದೇಶನದ ‘ರಾಬರ್ಟ್‌’ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಬೆಂಗಳೂರು, ಪಾಂಡಿಚೇರಿ ಸೇರಿದಂತೆ ವಿವಿಧಡೆ ಅದ್ದೂರಿ ಸೆಟ್ ಹಾಕಿ ಪ್ರಥಮ ಹಂತದ ಚಿತ್ರೀಕರಣ ಮುಗಿಸಿಕೊಂಡಿರುವ ‘ರಾಬರ್ಟ್’ ಚಿತ್ರತಂಡ ಎರಡನೇ ಹಂತದ ಶೂಟಿಂಗ್‌ಗೂ ಹೈದರಾಬಾದ್‌ಗೆ ಹಾರಲು ಸಜ್ಜಾಗಿದೆ.

ಸೆ. 5ರಿಂದ 15 ದಿನಗಳ ಕಾಲ ರಾಮೋಜಿ ಫಿ‌ಲ್ಮ್‌ಸಿಟಿಯಲ್ಲಿ ‘ರಾಬರ್ಟ್’ನ ಶೂಟಿಂಗ್‌ ನಡೆಯಲಿದೆಯಂತೆ. ಪಂಜಾಬಿ ಬೆಡಗಿ ಮೆಹರಿನ್ ಫಿರ್ಜಾ ದರ್ಶನ್‌ಗೆ ನಾಯಕಿ. ಹೈದರಾಬಾದ್‌ನಲ್ಲಿ ನಡೆಯುವ ಶೂಟಿಂಗ್‌ನಲ್ಲಿ ಅವರು ಪಾಲ್ಗೊಳ್ಳಲಿದ್ದಾರಂತೆ.

ಈ ಚಿತ್ರದ ಬಳಿಕ ಮತ್ತೆ ದರ್ಶನ್‌ ಐತಿಹಾಸಿಕ ಚಿತ್ರದ ಭಾಗವಾಗಲು ಸಜ್ಜಾಗಿರುವುದು ವಿಶೇಷ. ಎಸ್‌.ವಿ. ರಾಜೇಂದ್ರ ಸಿಂಗ್‌ ನಿರ್ದೇಶನದ ‘ಗಂಡುಗಲಿ ವೀರ ಮದಕರಿ ನಾಯಕ’ ಚಿತ್ರದಲ್ಲಿ ಅವರು ಮದಕರಿ ನಾಯಕನ ಪಾತ್ರದಲ್ಲಿ ನಟಿಸಲಿದ್ದಾರೆ. ಇದಕ್ಕೆ ಬಂಡವಾಳ ಹೂಡುತ್ತಿರುವುದು ರಾಕ್‌ಲೈನ್‌ ವೆಂಕಟೇಶ್‌.

ಮಿಲನ ಪ್ರಕಾಶ್‌ ಮತ್ತು ದರ್ಶನ್‌ ಕಾಂಬಿನೇಷನ್‌ನಡಿ ಮತ್ತೊಂದು ಹೊಸ ಚಿತ್ರ ಮೂಡಿಬರಲಿದೆ. ಈ ಹಿಂದೆ ದರ್ಶನ್‌ಗಾಗಿ ಪ್ರಕಾಶ್‌ ಅವರು ಕೌಟುಂಬಿಕ ಕಥಾವಸ್ತು ಹೊಂದಿದ ‘ತಾರಕ್‌’ ಚಿತ್ರ ನಿರ್ದೇಶಿಸಿದ್ದರು. ಪ್ರಕಾಶ್‌ ಹೇಳಿದ ಒನ್‌ಲೈನ್‌ ಕಥೆ ದಚ್ಚುಗೆ ಇಷ್ಟವಾಗಿದೆಯಂತೆ. ಚಿತ್ರದ ಪ್ರೀಪ್ರೊಡಕ್ಷನ್‌ ಕೆಲಸ ಶುರುವಾಗಿದ್ದು, ‘ಗಂಡುಗಲಿ ವೀರ ಮದಕರಿ ನಾಯಕ’ ಚಿತ್ರದ ಬಳಿಕ ಈ ಸಿನಿಮಾ ಸಟ್ಟೇರಲಿದೆ ಎಂಬ ಹೊಸ ಸುದ್ದಿ ಹೊರಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT