ದರ್ಶನ್‌ ಅಸಮಾಧಾನ ಯಾರ ಮೇಲೆ?

ಶುಕ್ರವಾರ, ಮಾರ್ಚ್ 22, 2019
27 °C

ದರ್ಶನ್‌ ಅಸಮಾಧಾನ ಯಾರ ಮೇಲೆ?

Published:
Updated:

ನಟ ದರ್ಶನ್‌ ನಟನೆಯ ‘ಯಜಮಾನ’ ಚಿತ್ರಕ್ಕೆ ಮೊದಲ ವಾರವೇ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು. ದರ್ಶನ್‌ ಮೊಗದಲ್ಲೂ ಖುಷಿಯಿತ್ತು. ಅವರು ಮೈಕ್‌ ಎತ್ತಿಕೊಂಡಾಗ ಮುಖ ಕೊಂಚ ಬಿಗಿಯಾಯಿತು. ಇದಕ್ಕೆ ಕಾರಣವೂ ಇತ್ತು.

‘ನಾನು ನಟಿಸಿದ ಯಾವುದೇ ಸಿನಿಮಾಗಳ ಸಕ್ಸಸ್‌ ಮೀಟ್‌ ಮಾಡಿಲ್ಲ. ಆ ಚಿತ್ರಗಳ ಪ್ರದರ್ಶನ ಸಾಧಾರಣವಾಗಿತ್ತೇ? ಎನ್ನುವುದೂ ನನಗೆ ಗೊತ್ತಿಲ್ಲ. ನಿರ್ಮಾಪಕರು ಚಿತ್ರ ನಿರ್ಮಿಸುತ್ತಾರೆ. ಬಳಿಕ ನಿರ್ಮಾಣಕ್ಕೆ ಹೆಚ್ಚು ಖರ್ಚು ಮಾಡಿದೆವು. ಅಯ್ಯೋ ಏನೂ ಲಾಭವೇ ಬಂದಿಲ್ಲ ಎಂದು ನನಗೆ ಹೇಳಿದವರೇ ಹೆಚ್ಚು. ಇಂತಹ ಮಾತುಗಳನ್ನು ನನ್ನ ವೃತ್ತಿಬದುಕಿನಲ್ಲಿ ಸಾಕಷ್ಟು ಕೇಳಿದ್ದೇನೆ’ ಎಂದು ಅಸಮಾಧಾನ ತೋಡಿಕೊಂಡರು ದರ್ಶನ್.

‘ಆದರೆ, ಯಜಮಾನ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್‌ ಮೇಡಂ ಇದಕ್ಕೆ ಅಪವಾದ. ಚಿತ್ರ ಬಿಡುಗಡೆಗೂ ಎರಡು ದಿನ ಮೊದಲೇ ತಮಗೆ ಬಂದಿರುವ ಲಾಭದ ಬಗ್ಗೆ ನನಗೆ ಹೇಳಿದ ನಿರ್ಮಾಪಕರು ಅವರೊಬ್ಬರೇ. ಅವರಿಗೆ ನಾನು ಹೃತ್ಪೂರ್ವಕವಾಗಿ ಧನ್ಯವಾದ ಸಲ್ಲಿಸುತ್ತೇನೆ’ ಎಂದರು.

‘ಸಿನಿಮಾ ತಂಡದ ಎಲ್ಲರೂ ಇದ್ದಾಗಲೇ ಸಕ್ಸಸ್‌ ಮೀಟ್‌ಗೆ ಅರ್ಥವಿರುತ್ತದೆ. ಯಜಮಾನ ಚಿತ್ರಕ್ಕೆ ದುಡಿದ ಎಲ್ಲರೂ ಇಲ್ಲಿದ್ದಾರೆ. ಅವರೆಲ್ಲ ಶ್ರಮದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಎಂದು ಸಂತಸ ಹಂಚಿಕೊಂಡರು.  

ನಿರ್ಮಾಪಕ ಬಿ. ಸುರೇಶ, ‘ಯಜಮಾನನ ಚಿತ್ರಕಥೆ 300 ಪುಟದಷ್ಟಿತ್ತು. ಅದನ್ನು ದೃಶ್ಯರೂಪಕ್ಕೆ ಹೇಗೆ ಇಳಿಸಬೇಕೆಂಬುದು ಸವಾಲಾಗಿತ್ತು. ಚಿತ್ರದೊಂದಿಗೆ ನಮ್ಮದು ಅತಿದೊಡ್ಡ ‍ಪಯಣ’ ಎಂದು ಹೇಳಿದರು. ಮೈಸೂರು ಮತ್ತು ಮುಂಬೈನಲ್ಲಿ ಶೂಟಿಂಗ್‌ ನಡೆಯುತ್ತಿದ್ದ ವೇಳೆ ಘಟಿಸಿದ ನೈಸರ್ಗಿಕ ಅವಘಡಗಳ ಬಗ್ಗೆಯೂ ಮೆಲುಕು ಹಾಕಿದರು.

ನಟ ದೇವರಾಜ್, ‘ನೂರು ದಿನಗಳ ಕಾಲ ಕೆಲಸ ಮಾಡಿದರೂ ಶೈಲಜಾ ಮತ್ತು ಸುರೇಶ ಅವರ ಒಮ್ಮೆಯೂ ಸಿಟ್ಟು, ಸೆಡವು ತೋರಿಸಿಕೊಳ್ಳಲಿಲ್ಲ. ಇದೇ ಚಿತ್ರ ಯಶಸ್ವಿಯಾಗಿ ಮೂಡಿಬರಲು ಕಾರಣ’ ಎಂದು ಗುಟ್ಟು ಬಿಚ್ಚಿಟ್ಟರು.

ನಟಿ ತಾನ್ಯಾ ಹೋಪ್‌, ‘ದರ್ಶನ್‌ ಸರ್ ಅವರ ಸಿನಿಮಾಗಳೆಂದರೆ ಹಬ್ಬವಿದ್ದಂತೆ. ನಾನು ಅದರ ಭಾಗವಾಗಿರುವುದು ಖುಷಿಕೊಟ್ಟಿದೆ’ ಎಂದರು.

ನಿರ್ದೇಶಕ ವಿ. ಹರಿಕೃಷ್ಣ, ದತ್ತಣ್ಣ, ಶಶಿಧರ ಅಡಪ, ಸಂಜೂ ಬಸಯ್ಯ, ಹಿತೇಶ್‌, ವಿನೋದ್‌, ಶಿವರಾಜ್‌ ಕೆ.ಆರ್‌. ಪೇಟೆ ಅನುಭವ ಹಂಚಿಕೊಂಡರು.

ಬರಹ ಇಷ್ಟವಾಯಿತೆ?

 • 47

  Happy
 • 2

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !