ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನ್‌ ಸಿನಿಮಾ ವಿಶ್ಲೇಷಣೆ

Last Updated 20 ನವೆಂಬರ್ 2018, 10:54 IST
ಅಕ್ಷರ ಗಾತ್ರ

ನಟ ದರ್ಶನ್‌ ಮಾಸ್‌ ಸಿನಿಮಾಗಳಿಂದಲೇ ಜನಪ್ರಿಯರಾದವರು. ವೃತ್ತಿಬದುಕಿನ ಆರಂಭದಲ್ಲಿ ಕೆಲವು ಸಿನಿಮಾಗಳಲ್ಲಿ ಪ್ರಯೋಗಮುಖಿಯಾಗುವ ಪ್ರಯತ್ನ ಮಾಡಿದ್ದರೂ ನಂತರದ ದಿನಗಳಲ್ಲಿ ಅವರು ಪ್ರಯೋಗಾತ್ಮಕ ಚಿತ್ರಗಳಲ್ಲಿ ನಟಿಸಿದ್ದು ಇಲ್ಲವೇ ಇಲ್ಲ. ‘ಸಂಗೊಳ್ಳಿ ರಾಯಣ್ಣ’ದಂಥ ಸಿನಿಮಾಗಳು ಕೂಡ ಅವರ ಇಮೇಜ್‌ಗೆ ಹೊಂದಿಕೊಳ್ಳುವ ಮಾಸ್‌ ಸಿನಿಮಾಗಳ ಮಾದರಿಯಲ್ಲಿಯೇ ರೂಪುಗೊಂಡಿತ್ತು.

ಹಾಗಾದರೆ ಅಭಿಮಾನಿಗಳ ಮನಸ್ಸಿನ ಸುಲ್ತಾನ್‌ ದರ್ಶನ್‌ಗೆ ಪ್ರಯೋಗಾತ್ಮಕ ಸಿನಿಮಾಗಳ ಬಗ್ಗೆ ಒಲವು ಇಲ್ಲವೇ? ಖಂಡಿತ ಇದೆ. ಆ ಒಲವಿನ ಸುಳಿವನ್ನು ಅವರು ಇತ್ತೀಚೆಗೆ ಬಿಟ್ಟುಕೊಟ್ಟಿದ್ದಾರೆ.

ಇತ್ತೀಚೆಗೆ ದರ್ಶನ್‌ ಹೊಸ ಹುಡುಗರ ಸಿನಿಮಾ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಂಡು ಬೆನ್ನು ತಟ್ಟುತ್ತಿದ್ದಾರೆ. ಹಾಗೆಯೇ ‘ಅನುಕ್ತ’ ಎಂಬ ಸಿನಿಮಾ ಧ್ವನಿಸುರಳಿಯಲ್ಲಿ ಭಾಗವಹಿಸಿ ಮಾತನಾಡುತ್ತ ಅವರು, ಕನ್ನಡದಲ್ಲಿ ಹಲವರು ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡುತ್ತಿರುವುದರ ಕುರಿತು ಸಂತೋಷ ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕರ ಆಯ್ಕೆಯಲ್ಲಿ ಕನ್ನಡ ಸಿನಿಮಾಗಳು ಕೊನೆಯಲ್ಲಿ ಇರುವುದಕ್ಕೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.

‘ನಾವು ಕನ್ನಡಿಗರು ಎಲ್ಲ ಭಾಷೆಗಳನ್ನೂ ಮಾತನಾಡುತ್ತೇವೆ. ಯಾರು ನಮ್ಮ ಬಳಿಗೆ ಬಂದರೂ ಅವರ ಭಾಷೆಯಲ್ಲಿಯೇ ಮಾತನಾಡುತ್ತೇವೆಯೇ ಹೊರತು ನಮ್ಮ ಭಾಷೆಯನ್ನು ಅವರಿಗೆ ಕಲಿಸಲಿಕ್ಕೆ ಹೋಗುವುದೇ ಇಲ್ಲ. ಹಾಗೆಯೇ ಬೇರೆ ಭಾಷೆಯ ಸಿನಿಮಾಗಳನ್ನೇ ಜಾಸ್ತಿ ನೋಡುತ್ತೇವೆ’

ಸಾಮಾನ್ಯವಾಗಿ ಒಬ್ಬ ಕನ್ನಡ ಪ್ರೇಕ್ಷಕ ತುಂಬ ಪ್ರಯೋಗಾತ್ಮಕ ಸಿನಿಮಾ ನೋಡಬೇಕು ಅನಿಸಿದಾಗ ತಮಿಳು ಸಿನಿಮಾಗೆ ಹೋಗುತ್ತಾನೆ. ಡಮಾರ್ ಡಿಮಾರ್ ಅನಿಸುವಂಥ, ತೊಡೆ ತಟ್ಟಿದರೆ ಟ್ರೇನ್‌ ನಿಲ್ಲುವಂಥ ಬಿಲ್ಡಪ್‌ ಸಿನಿಮಾಗಳನ್ನು ನೋಡಬೇಕು ಎಂದರೆ ತೆಲುಗು ಸಿನಿಮಾಗೆ ಓಡಿ ಹೋಗಿ ನೋಡುತ್ತಾನೆ. ಸ್ಟೋರಿಯೇ ಇಲ್ಲದೆ ಇಡೀ ಸಿನಿಮಾದಲ್ಲಿ ಹೊರದೇಶವನ್ನು ನೋಡಬೇಕು ಎಂದು ಅನಿಸಿದಾಗ ಹಿಂದಿ ಸಿನಿಮಾಗೆ ಹೋಗುತ್ತಾನೆ. ಓ... ನೋಡೋಣ.. ಅಂತ ಕನ್ನಡ ಸಿನಿಮಾಗೆ ಬರುತ್ತಾನೆ. ಹಾಗಿದೆ ನಮ್ಮ ಪರಿಸ್ಥಿತಿ ಇದೆ’ ಎಂದು ದರ್ಶನ್‌ ಬೇಸರ ವ್ಯಕ್ತಪಡಿಸಿದರು.

ಆದರೆ ಈಗ ಈ ಪರಿಸ್ಥಿತಿ ಬದಲಾಗುತ್ತಿದೆ ಎಂಬ ವಿಶ್ವಾಸವೂ ಅವರಲ್ಲಿದೆ. ‘ಈಗ ಟ್ರೆಂಡ್ ಬದಲಾಗುತ್ತಿದೆ. ಹಲವು ಪ್ರಯೋಗಾತ್ಮಕ ಸಿನಿಮಾಗಳು ಬರುತ್ತಿವೆ. ನಾನು ನೆಮ್ಮದಿಯಾಗಿ ಒಂದು ಒಳ್ಳೆಯ ಸಿನಿಮಾ ನೋಡುತ್ತೇನೆ ಎನ್ನುವ ಪ್ರೇಕ್ಷಕರಿಗೆ ಈ ರೀತಿಯ ಪ್ರಯೋಗಾತ್ಮಕ ಚಿತ್ರಗಳು ತುಂಬ ಇಷ್ಟವಾಗುತ್ತವೆ. ಅಂಥ ಸಿನಿಮಾಗಳ ನಿರ್ಮಾಣದಲ್ಲಿ ಇಂದಿನ ಹೊಸ ಪೀಳಿಗೆಯ ಹಲವರು ತೊಡಗಿಕೊಂಡಿರುವುದು ಸ್ವಾಗತಾರ್ಹ’ ಎಂದು ದರ್ಶನ್‌ ಚಿತ್ರರಂಗದ ನಾಳೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಯೋಗಾತ್ಮಕ ಸಿನಿಮಾಗಳಲ್ಲಿ ಆಸಕ್ತರಾಗಿರುವ ದರ್ಶನ್‌ ತಾವು ಅಂಥ ಸಿನಿಮಾ ನಿರ್ಮಾಣ, ನಟನೆಯಲ್ಲಿ ತೊಡಗಿಕೊಳ್ಳುತ್ತಾರಾ ಎನ್ನುವ ಕುರಿತು ಕಾಲವೇ ಉತ್ತರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT