ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬನಾರಸ್‌ ಪ್ರಚಾರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಸಾಥ್‌

Last Updated 24 ಅಕ್ಟೋಬರ್ 2022, 10:26 IST
ಅಕ್ಷರ ಗಾತ್ರ

ಶಾಸಕ ಜಮೀರ್ ಅಹ್ಮದ್‌ಖಾನ್ ಅವರ ಪುತ್ರ ಝೈದ್‌ ಖಾನ್ ನಾಯಕನಾಗಿ ನಟಿಸಿರುವ ಬನಾರಸ್‌ನ ಚಿತ್ರದ ಪ್ರಚಾರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಸಾಥ್‌ ನೀಡಿದ್ದಾರೆ. ಚಿತ್ರದ ಪೋಸ್ಟರ್‌ ಬಿಡುಗಡೆಯಿಂದಲೇ ಜೊತೆಗಿದ್ದ ದರ್ಶನ್‌, ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಬೆಲ್ ಬಾಟಂ ಖ್ಯಾತಿಯ ಜಯತೀರ್ಥ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮ ಶನಿವಾರ ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ನೆರವೇರಿತು. ಚಾಲೆಂಜಿಂಗ್ ಸ್ಟಾರ್ ದರ್ಶನ್, ವಿನೋದ್ ಪ್ರಭಾಕರ್, ನೆನಪಿರಲಿ ಪ್ರೇಮ್, ವಿ.ನಾಗೇಂದ್ರ ಪ್ರಸಾದ್, ನಿರ್ದೇಶಕ ಜಯತೀರ್ಥ ಸೇರಿದಂತೆ ಚಿತ್ರರಂಗದ ಹಲವಾರು ಪ್ರಮುಖರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ದರ್ಶನ್‌ ‘ನಾನು ಈಗಾಗಲೇ ಚಿತ್ರವನ್ನು ನೋಡಿದ್ದೇನೆ. ಝೈದ್ ನನಗೆ ಮೊದಲೇ ಸಿನಿಮಾ ತೋರಿಸಿದ್ದಾನೆ, ಆರಂಭದಲ್ಲಿ ನಾನೂ ಸಹ ಶ್ರೀಮಂತರ ಮಗ, ಏನೋ ಮಾಡಿರಬಹುದು ಎಂದುಕೊಂಡಿದ್ದೆ. ಆದರೆ ಚಿತ್ರ ನೋಡುತ್ತ ನನಗೇ ಆಶ್ಚರ್ಯವಾಯಿತು. ಅಷ್ಟು ಅದ್ಭುತವಾಗಿ ಅಭಿನಯಿಸಿದ್ದಾನೆ. ಜೊತೆಗೆ ಕಥೆ, ನಿರ್ದೇಶನ ಎಲ್ಲವೂ ಚೆನ್ನಾಗಿದೆ. ಚಿತ್ರ ಖಂಡಿತ ಯಶಸ್ವಿಯಾಗುತ್ತದೆ’ ಎಂದರು.

‘ಇಂದು ನನ್ನ ಜೀವನದಲ್ಲಿ ತುಂಬಾ ದೊಡ್ಡ ದಿನ, ನನ್ನ ಜೀವನದ ಇಬ್ಬರು ದೊಡ್ಡ ಶಕ್ತಿಗಳು ಇಲ್ಲಿ ಬಂದಿದ್ದಾರೆ. ನನಗೆ ಅಣ್ಣನ ಸಮಾನರಾದ ದರ್ಶನ್ ಹಾಗೂ ನನ್ನಪ್ಪ, ಅವರು ಇದೇ ಮೊದಲಬಾರಿಗೆ ನನ್ನ ಸಿನಿಮಾ ಕಾರ್ಯಕ್ರಮಕ್ಕೆ ಬಂದಿದ್ದಾರೆ. ದರ್ಶನಣ್ಣ ನನಗೆ ಮೊದಲಿಂದಲೂ ತುಂಬಾ ಬೆಂಬಲ ನೀಡುತ್ತಿದ್ದಾರೆ’ ಎಂದು ಝೈದ್‌ ಖಾನ್‌ ಹೇಳಿದ್ದಾರೆ.

ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಹೀಗೆ ಏಕಕಾಲದಲ್ಲಿ ಐದು ಭಾಷೆಗಳಲ್ಲಿ ತಯಾರಾಗಿರುವ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ತಿಲಕ್‌ರಾಜ್ ಬಲ್ಲಾಳ್ ಅವರು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಸೋನಲ್ ಮೊಂತೇರೋ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಸುಜಯ್ ಶಾಸ್ತ್ರಿ, ದೇವರಾಜ್, ಅಚ್ಯುತ್ ಕುಮಾರ್, ಸಪ್ನಾ ರಾಜ್, ಬರ್ಖತ್ ಅಲಿ ಮುಂತಾದವರು ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು, ನವೆಂಬರ್ 4ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT