ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈಟಲ್‌ ಕೇಳಿ ಶಾಕ್‌ ಆದ ನಟಿ ಹರಿಪ್ರಿಯಾ!

‘ಡಾಟರ್‌ ಆಫ್‌ ಪಾರ್ವತಮ್ಮ’ ಹರಿಪ್ರಿಯಾ ನಟನೆಯ 25ನೇ ಕನ್ನಡ ಚಿತ್ರ
Last Updated 6 ಅಕ್ಟೋಬರ್ 2018, 11:30 IST
ಅಕ್ಷರ ಗಾತ್ರ

‘ಎಷ್ಟೇ ಪ್ರೆಸ್‌ಮೀಟ್‌ ಮಾಡಿದ್ರೂ ಟೆನ್ಷನ್‌ ಹೋಗಲ್ಲ’

ಹೀಗೆಂದು ಹೇಳಿ ಕ್ಷಣಕಾಲ ಮೌನಕ್ಕೆ ಜಾರಿದರು ನಟಿ ಹರಿಪ್ರಿಯಾ. ಬಳಿಕ ಮುಖದಲ್ಲಿ ನಗು ಉಕ್ಕಿಸಿಕೊಂಡು ಮಾತಿಗಿಳಿದರು. ವೃತ್ತಿ ಬದುಕಿನಲ್ಲಿ ಹೊಸ ಪಾತ್ರ ನಿರ್ವಹಿಸುತ್ತಿರುವ ಖುಷಿ ಅವರಲ್ಲಿತ್ತು. ಜನರು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಆತಂಕದ ಗೆರೆಗಳೂ ಅವರ ಮೊಗದಲ್ಲಿ ಕಾಣಿಸಿಕೊಂಡವು.

ಹರಿಪ್ರಿಯಾ ಬಣ್ಣದಲೋಕ ಪ್ರವೇಶಿಸಿ ಹನ್ನೊಂದು ವರ್ಷ ಸಂದಿವೆ. ‘ಡಾಟರ್‌ ಆಫ್‌ ಪಾರ್ವತಮ್ಮ’ ಕನ್ನಡದಲ್ಲಿ ಅವರ ನಟನೆಯ ಇಪ್ಪತ್ತೈದನೇ ಚಿತ್ರ. ನಟಿಯೊಬ್ಬಳು ತನ್ನ ವೃತ್ತಿ ಬದುಕಿನಲ್ಲಿ ಇಷ್ಟು ಚಿತ್ರಗಳಲ್ಲಿ ನಟಿಸುವುದು ದೊಡ್ಡ ಸಾಧನೆಯೇ. ‘ನನಗೆ ನಿಜಕ್ಕೂ ನಂಬಲು ಆಗುತ್ತಿಲ್ಲ. ನಾನು ಇನ್ನೂ ಕಲಿಯುತ್ತಿದ್ದೇನೆ’ ಎಂದು ವಿಧೇಯ ವಿದ್ಯಾರ್ಥಿನಿಯಂತೆ ಹೇಳಿದರು.

ಚಿತ್ರದಲ್ಲಿ ಅವರದು ತನಿಖಾಧಿಕಾರಿಯ ಪಾತ್ರ. ಈ ಸಿನಿಮಾದ ಟೈಟಲ್‌ ಕೇಳಿದ ತಕ್ಷಣ ಅವರಿಗೆ ಶಾಕ್‌ ಆಯಿತಂತೆ. ‘ಚಿತ್ರದ ಟೈಟಲ್‌ನಲ್ಲಿ ಪಾರ್ವತಮ್ಮ ಅವರ ಹೆಸರು ಇರುವುದನ್ನು ಕೇಳಿ ನನಗೆ ಕುತೂಹಲವಾಯಿತು. ಪಾರ್ವತಮ್ಮ ರಾಜ್‌ಕುಮಾರ್‌ ದೊಡ್ಡ ಶಕ್ತಿ. ಆದರೆ, ಅವರ ಬದುಕಿಗೂ, ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನಾನು ಚಿತ್ರರಂಗ‍ಪ್ರವೇಶಿಸುವ ಮೊದಲು ಪಾರ್ವತಮ್ಮ ರಾಜ್‌ಕುಮಾರ್‌ ಅವರ ಆಶೀರ್ವಾದ ಪಡೆದಿದ್ದೆ. ಇದೇ ನಾನು ಇಷ್ಟು ವರ್ಷಕಾಲ ಚಿತ್ರರಂಗದಲ್ಲಿ ಉಳಿಯಲು ಶ್ರೀರಕ್ಷೆಯಾಗಿದೆ’ ಎಂದರು.

‘ಪ್ರತಿ ಚಿತ್ರದಲ್ಲಿ ನಟಿಸುವಾಗಲೂ ನನಗೆ ಭಯ ಕಾಡುತ್ತದೆ. ಈ ಚಿತ್ರದ ಶೂಟಿಂಗ್‌ ವೇಳೆ ಕ್ಯಾಮೆರಾ ಮುಂದೆ ನಿಂತಾಗ ಭಯವಿತ್ತು. ನಿಜಕ್ಕೂ ಪಾತ್ರಕ್ಕೆ ನಾನು ನ್ಯಾಯ ಒದಗಿಸುತ್ತೇನೆಯೇ ಎಂಬ ಭಯ ಕಾಡಿತು. ಕಥೆ ಕೇಳಿದ ತಕ್ಷಣವೇ ಒಪ್ಪಿಕೊಂಡೆ. ಕಥೆಯೇ ಚಿತ್ರದ ಹೀರೊ. ಸಿನಿಮಾದಲ್ಲಿ ಪಾರ್ವತಮ್ಮ ಅವರ ಪಾತ್ರ ಮಹತ್ವದ್ದು. ಸುಮಲತಾ ಅವರು ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ’ ಎಂದು ವಿವರಿಸಿದರು.

‘ನಾನು ಯಾವುದೇ ಫ್ಲಾನ್ ಇಲ್ಲದೆ ಚಿತ್ರರಂಗ ಪ್ರವೇಶಿಸಿದೆ. ಅಭಿಮಾನಿಗಳ ಪ್ರೋತ್ಸಾಹದಿಂದ ಇಷ್ಟು ಚಿತ್ರಗಳಲ್ಲಿ ನಟಿಸಿದ್ದೇನೆ’ ಎಂದರು.

‘ರಣ ವಿಕ್ರಮ’ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಶಂಕರ್‌ ಜೆ. ಈ ಚಿತ್ರದ ನಿರ್ದೇಶಕ. ‘ಈ ಕಥೆಗೆ ಹರಿಪ್ರಿಯಾ ಅವರೇ ಸೂಕ್ತವೆಂದು ನಿರ್ಧರಿಸಿದೆವು. ಅವರು ಒಪ್ಪಿದ್ದರಿಂದ ಸಿನಿಮಾ ನಿರ್ಮಾಣವಾಗಿದೆ’ ಎಂದು ಹೇಳಿದರು.

‘ಒಂದು ವರ್ಷದ ಹಿಂದೆ ಬೆಂಗಳೂರಿನಲ್ಲಿ ನಡೆದ ನೈಜ ಘಟನೆ ಆಧರಿಸಿ ಕಥೆ ಹೆಣೆಯಲಾಗಿದೆ. ಹರಿಪ್ರಿಯಾ ತನಿಖೆಯಲ್ಲಿ ಮುಳುಗಿರುತ್ತಾರೆ. ಆದರೆ, ಅವರ ಅಮ್ಮನಿಗೆ ಮಗಳಿಗೆ ಮದುವೆ ಮಾಡಬೇಕು ಎನ್ನುವುದೇ ಚಿಂತೆ. ಇದರ ಸುತ್ತ ಚಿತ್ರಕಥೆ ಸಾಗಲಿದೆ’ ಎಂದು ವಿವರಿಸಿದರು.

ನಟರಾದ ಪ್ರಭು ಮತ್ತು ಸೂರಜ್‌ ಗೌಡ ಚಿತ್ರದಲ್ಲಿ ನಟಿಸಿದ್ದಾರೆ. ಕೆ.ಎಂ. ಶಶಿಧರ, ವಿಜಯಲಕ್ಷ್ಮಿ ಕೃಷ್ಣೇಗೌಡ, ಸಂದೀಪ್‌ ಶಿವಮೊಗ್ಗ, ಶ್ವೇತಾ ಮಧುಸೂದನ್ ಬಂಡವಾಳ ಹೂಡಿದ್ದಾರೆ. ಮಿಧುನ್‌ ಮುಕುಂದನ್‌ ಸಂಗೀತ ಸಂಯೋಜಿಸಿದ್ದಾರೆ. ಅರುಳ್‌ ಕೆ. ಸೋಮಸುಂದರಂ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಇದೇ ವೇಳೆ ಚಿತ್ರದ ಟೀಸರ್‌ ಅನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT